ಯಡೂರು ಗ್ರಾಮದ ಶ್ರೀ ಸಬ್ಬಮ್ಮ ದೇವಿಯ ಸುಗ್ಗಿ ಉತ್ಸವ ಸಂಪನ್ನ

KannadaprabhaNewsNetwork | Published : Apr 21, 2025 12:56 AM

ಸಾರಾಂಶ

ಯಡೂರು ಗ್ರಾಮದ ಶ್ರೀ ಸಬಮ್ಮ ದೇವಿಯ ಸುಗ್ಗಿ ಉತ್ಸವ ಭಕ್ತಾದಿಗಳ ಸಮ್ಮುಖದಲ್ಲಿ ಶ್ರದ್ಧಾ ಭಕ್ತಿಯಿಂದ ನಡೆಯಿತು.

ಕನ್ನಡಪ್ರಭವಾರ್ತೆ ಸೋಮವಾರಪೇಟೆ

ಯಡೂರು ಗ್ರಾಮದ ಶ್ರೀ ಸಬ್ಬಮ್ಮ ದೇವಿಯ ಸುಗ್ಗಿ ಉತ್ಸವ ಶುಕ್ರವಾರ ರಾತ್ರಿ ಹಾಗು ಶನಿವಾರ ಹಗಲು ಭಕ್ತಾದಿಗಳ ಸಮ್ಮುಖದಲ್ಲಿ ಶ್ರದ್ಧಾಭಕ್ತಿಯಿಂದ ನೆರವೇರಿತು.

ಯಡೂರು ಗ್ರಾಮದ ಐತಿಹಾಸಿಕ ಹಿನ್ನೆಲೆಯುಳ್ಳ ಸುಗ್ಗಿಕಟ್ಟೆಯಲ್ಲಿ ಮಲೆನಾಡಿನ ಜನರ ಗ್ರಾಮೀಣ ಸಂಸ್ಕೃತಿಯನ್ನು ಬಿಂಬಿಸುವ ಸಾಂಪ್ರದಾಯಿಕ ಪೂಜಾ ಕಾರ್ಯಗಳು ನಡೆದವು. ಶುಕ್ರವಾರ ರಾತ್ರಿ ಸುಗ್ಗಿಕಟ್ಟೆಯಲ್ಲಿ ದೇವಿಗೆ ಮಡೆ ಇಟ್ಟ ಗ್ರಾಮಸ್ಥರು ಊರಿನ ಸಮೃದ್ಧಿಗಾಗಿ ಸಾಮೂಹಿಕ ಪೂಜೆ ಸಲ್ಲಿಸಿದರು. ವಿವಿಧ ಬಗೆಯ ಮಾಂಸಾಹಾರ, ಮದ್ಯವನ್ನು ಇಟ್ಟು ಪೂಜೆ ಸಲ್ಲಿಸಿದರು. ನಂತರ ಎಡೆಯಲ್ಲಿರುವ ಆಹಾರ ಪದಾರ್ಥವನ್ನು ಗ್ರಾಮಸ್ಥರಿಗೆ ಹಂಚಿದರು.

ಸುಗ್ಗಿಕಟ್ಟೆಯಲ್ಲಿ ಮಹಿಳೆಯರು ಹರಕೆ ಮಾಡಿಕೊಂಡರು. ಇನ್ನು ಕೆಲವರು ತಮ್ಮ ಹರಕೆ ತೀರಿಸಿದರು. ಪಟಾಕಿ ಸಿಡಿಸುತ್ತ, ವಾದ್ಯಗೋಷ್ಠಿಯಲ್ಲಿ ಗ್ರಾಮಸ್ಥರು ಸುಗ್ಗಿಕಟ್ಟೆ ಪ್ರದಕ್ಷಿಣೆ ಹಾಕಿದರು. ಪ್ರಸಾದ ವಿನಿಯೋಗದೊಂದಿಗೆ ದೊಡ್ಡಸುಗ್ಗಿ ಮುಕ್ತಾಯವಾಯಿತು.

ಶನಿವಾರ ಬೆಳಗ್ಗೆ ಗ್ರಾಮದ ದೇವರಬಾವಿಯಲ್ಲಿ ಬಸವಣ್ಣ ದೇವರ ಗಂಗಾಸ್ನಾನ ನಡೆಯಿತು. ಮೈಮೇಲೆ ದೇವರು ಬಂದವರ ನೃತ್ಯ ಭಕ್ತರನ್ನು ಆಕರ್ಷಿಸಿತು. 13 ದಿನದ ಸುಗ್ಗಿ ಉತ್ಸವದಲ್ಲಿ ಗ್ರಾಮ ದೇವತೆಗೆ ಅರ್ಪಿಸಿದ ಪೂಜಾ ಕಾರ್ಯಗಳು ಸಂತೃಪ್ತಿ ಕೊಟ್ಟ ಬಗ್ಗೆ ಗ್ರಾಮಸ್ಥರು ಕೇಳಿ ತಿಳಿದುಕೊಂಡರು. ಏನಾದರೂ ತಪ್ಪಾಗಿದ್ದರೆ ತಮ್ಮ ಮಕ್ಕಳಂತೆ ಕ್ಷಮಿಸುವಂತೆ ದೇವಿಯಲ್ಲಿ ಬೇಡಿಕೊಂಡರು. ಉತ್ತಮ ಮಳೆಗಾಗಿ ಸುರಿಸುವಂತೆ ಗ್ರಾಮಸ್ಥರು, ಮೈಮೇಲೆ ದೇವರು ಬಂದವರಲ್ಲಿ ಬೇಡಿಕೊಂಡರು. ಮಳೆ ಸುರಿಸುವ ಭರವಸೆ ಸಿಕ್ಕಿದ ನಂತರ ಗ್ರಾಮಸ್ಥರು ಸಂತೋಷಗೊಂಡರು.

ನಂತರ ಬಸವಣ್ಣ ದೇವರನ್ನು ಅಡ್ಡಪಲ್ಲಕ್ಕಿಯಲ್ಲಿ ಕುಳ್ಳಿರಿಸಿ, ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಪ್ರತಿ ಮನೆಯವರು ಈಡುಗಾಯಿಯೊಂದಿಗೆ ಪೂಜೆ ಸಲ್ಲಿಸಿದರು. ಅಡ್ಡೆಹೊತ್ತವರ ಕುಣಿತವನ್ನು ಜನರು ವೀಕ್ಷಿಸಿ ಚಪ್ಪಾಳೆಯೊಂದಿಗೆ ಪ್ರೋತ್ಸಾಹಿಸಿದರು. ಸುಗ್ಗಿಕಟ್ಟೆಯಲ್ಲಿ ಗ್ರಾಮಸ್ಥರ ಸಾಮೂಹಿಕ ಕುಣಿತದೊಂದಿಗೆ, ದೇವತಕ್ಕರ ಮೆರವಣಿಗೆ ನಡೆಯಿತು. ಭಾನುವಾರ ಮಲ್ಲಸುಗ್ಗಿ, ಸೋಮವಾರ ಹಗಲು ಸುಗ್ಗಿ, ಮಂಗಳವಾರ ಮಾರಿ ಕಳುಹಿಸುವ ಕಾರ್ಯದೊಂದಿಗೆ 13 ದಿನಗಳ ಸುಗ್ಗಿ ಉತ್ಸವ ಮುಕ್ತಾಯಗೊಳ್ಳಲಿದೆ.

ಯಡೂರು ಗ್ರಾಮಾಭಿವೃದ್ಧಿ ಮಂಡಳಿ ಅಧ್ಯಕ್ಷ ಎ.ಈ.ಮಲ್ಲಪ್ಪ, ಕಾರ್ಯದರ್ಶಿ ಹರ್ಷ, ದೇವರ ಒಡೆಕಾರರಾದ ವೈ.ಡಿ.ನಾಗೇಶ್, ಎ.ಯು.ಕಾರ್ತಿಕ್, ಎ.ಟಿ.ಉತ್ತಯ್ಯ, ಎ.ಬಿ.ಶಿವರಾಮ್, ಸಿ.ಎಂ.ದಿನೇಶ್, ಡಿ.ಡಿ.ಬೆಳಿಯಪ್ಪ, ಚಂದ್ರು, ಧನುಂಜಯ, ಜೆ.ಎನ್.ಸೋಮಶೇಖರ್ ಸುಗ್ಗಿ ಉತ್ಸವದ ಜವಾಬ್ದಾರಿ ವಹಿಸಿದ್ದರು.

Share this article