ಕನ್ನಡಪ್ರಭ ವಾರ್ತೆ ಮಡಿಕೇರಿ
ಸುಗ್ಗಿಯ ಹಬ್ಬ ಸಂಕ್ರಾಂತಿ ಸಡಗರ ಕೊಡಗು ಜಿಲ್ಲೆಯ ವಿವಿಧ ಕಡೆ ಸೋಮವಾರ ಕಂಡುಬಂತು. ಮಹಿಳೆಯರು, ಮಕ್ಕಳು ಹೊಸ ಉಡುಪುಗಳನ್ನು ತೊಟ್ಟು ಸ್ನೇಹಿತರ ಮನೆಗಳಿಗೆ ತೆರಳಿ ಎಳ್ಳು ಬೆಲ್ಲ ಬೀರಿದರೆ, ತಮಿಳು ಸಮುದಾಯ ಬಾಂಧವರು ಸೂರ್ಯನ ಪೂಜೆಯೊಂದಿಗೆ ಹೊಸ ದವಸ ಧಾನ್ಯಗಳನ್ನಿಟ್ಟು ವಿಶೇಷ ಪ್ರಾರ್ಥನೆಯೊಂದಿಗೆ ಹಾಲುಕ್ಕಿಸಿ, ಪೊಂಗಲ್ ಸಿಹಿಯೂಟ ತಯಾರಿಸಿ, ಸೇವಿಸುವ ಮೂಲಕ ಸಂಕ್ರಾಂತಿ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಿದರು.ಜಿಲ್ಲೆಯ ಸುಂಟಿಕೊಪ್ಪ, ಸಿದ್ದಾಪುರ, ಸೋಮವಾರಪೇಟೆ ಸೇರಿದಂತೆ ವಿವಿಧ ಕಡೆ ಕಳಸ ಹೊತ್ತು ಮೆರವಣಿಗಯೊಂದಿಗೆ ಪೊಂಗಲ್ ವಿಶೇಷ ಕಾರ್ಯಕ್ರಮಗಳು ಜರುಗಿದವು. ಕಾರ್ಯಕ್ರಮಕ್ಕೆ ಆಗಮಿಸಿದ್ದವರಿಗೆ ಮಧ್ಯಾಹ್ನದ ಊಟೋಪಚಾರ ವ್ಯವಸ್ಥೆ ಮಾಡಲಾಗಿತ್ತು.ಬೆಳಗ್ಗೆ ಜನ ಅಂಗಡಿಗಳಿಂದ ತೆರಳಿ ಎಳ್ಳು-ಬೆಲ್ಲ ಖರೀದಿಸಿ, ಮನೆಗಳಲ್ಲಿ ತಳಿರು ತೋರಣಗಳಿಂದ ಸಿಂಗರಿಸಿ ಮನೆಯ ಮುಂದೆ ವಿಶೇಷ ರಂಗೋಲಿಯನ್ನು ಬಿಡಿಸಿ ವಿಶೇಷ ಪೂಜೆ ಪ್ರಾರ್ಥನೆಯೊಂದಿಗೆ ನೈವೇದ್ಯ ಮಾಡಿ ಎಳ್ಳು-ಬೆಲ್ಲ ಸವಿದರು. ಜಿಲ್ಲೆಯ ಜನ ವಿವಿಧ ದೇವಾಲಯಗಳಿಗೆ ತೆರಳಿ ಧಾರ್ಮಿಕ ಕೈಂಕರ್ಯಗಳು ನೆರವೇರಿಸಿ ಪೂಜೆ ಸಲ್ಲಿಸಿದರು.ಸಂಜೆ ಸ್ನೇಹಿತರು, ಸಂಬಂಧಿಕರ ಮನೆಗಳಿಗೆ ತೆರಳಿ ಎಳ್ಳು-ಬೆಲ್ಲ ಹಣ್ಣು, ಕಬ್ಬನ್ನು ಬೀರಿದರು.ಗ್ರಾಮೀಣ ಪ್ರದೇಶದಲ್ಲೂ ಜನ ಸಿಹಿ ಪೊಂಗಲ್ ತಯಾರಿಸಿ ಸಂಕ್ರಾಂತಿ ಆಚರಣೆ ಮಾಡಿ ಎಳ್ಳು-ಬೆಲ್ಲದ ರುಚಿ ಸವಿದರು.ಸುಂಟಿಕೊಪ್ಪ ತಮಿಳು ಸಂಘದ ವತಿಯಿಂದ ಇಲ್ಲಿನ ಚಾಮುಂಡೇಶ್ವರಿ ದೇವಾಲಯ ಆವರಣದಲ್ಲಿ ನಡೆದ ಪೊಂಗಲ್ ಕಾರ್ಯಕ್ರಮದಲ್ಲಿ ನೂರಾರು ಮಂದಿ ಪಾಲ್ಗೊಂದಿದ್ದರು, ಮಧ್ಯಾಹ್ನ ಅನ್ನ ಸಂತರ್ಪಣೆ ನಡೆಯಿತು.ವಿಶೇಷ ಪೂಜೆ:ಮಕರ ಸಂಕ್ರಾಂತಿ ಪ್ರಯುಕ್ತ ಜಿಲ್ಲೆಯ ವಿವಿಧ ಅಯ್ಯಪ್ಪ ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆಯಿತು.ಮಡಿಕೇರಿ,ವಿರಾಜಪೇಟೆ, ಸಿದ್ದಾಪುರ, ಕುಶಾಲನಗರ ಸೇರಿದಂತೆ ವಿವಿಧೆಡೆಗಳಲ್ಲಿ ಅಯ್ಯಪ್ಪ ಸ್ವಾಮಿಗೆ ತುಪ್ಪಾಭಿಷೇಕ, ಕ್ಷೀರಾಭಿಷೇಕ, ಭಸ್ಮಾಭಿಷೇಕ, ಎಳನೀರಭಿಷೇಕ, ಪುಷ್ಪಾರ್ಚನೆ ಸೇವೆ ಸೇರಿದಂತೆ ಪೂಜೆ ಸಲ್ಲಿಸಲಾಯಿತು.ಮಡಿಕೇರಿಯ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ಶ್ರದ್ಧಾಭಕ್ತಿಯಿಂದ ಜರುಗಿದ ಮಕರ ಸಂಕ್ರಾಂತಿ ಮಹೋತ್ಸವನಗರದ ಶ್ರೀ ಮುತ್ತಪ್ಪ ದೇವಾಲಯದ ಆವರಣದಲ್ಲಿರುವ ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ 34ನೇ ಮಕರ ಸಂಕ್ರಾಂತಿ ಮಹೋತ್ಸವವು ಶ್ರದ್ಧಾಭಕ್ತಿಯಿಂದ ಜರುಗಿತು. ಮುಂಜಾನೆಯಿಂದಲೇ ನಿರ್ಮಾಲ್ಯ ವಿಸರ್ಜನೆ, ಉಷಾ ಪೂಜೆ, ಶ್ರೀ ಮುತ್ತಪ್ಪ ಹಾಗೂ ಶ್ರೀ ಸುಬ್ರಹ್ಮಣ್ಯ ದೇವರ ಪೂಜೆ ಹಾಗೂ ಪಂಚಾಮೃತಾಭಿಷೇಕ, ತುಪ್ಪಾಭಿಷೇಕ, ಕ್ಷೀರಾಭಿಷೇಕ, ಭಸ್ಮಾಭಿಷೇಕ, ಎಳನೀರಭಿಷೇಕ, ಪುಷ್ಪಾರ್ಚನೆ ಸೇವೆ ನಡೆಯಿತು. ನಂತರ ಶ್ರಿ ಕುಟ್ಟಿಚಾತನ್ ದೇವರ ವೆಳ್ಳಾಟಂ, ಶ್ರೀ ಮುತ್ತಪ್ಪ ದೇವರ ವೆಳ್ಳಾಟಂ, ಶ್ರೀ ಗುಳಿಗ ದೇವರ ವೆಳ್ಳಾಟಂ ಬಳಿಕ, ಶ್ರೀ ಅಯ್ಯಪ್ಪ ದೇವರ ಅಲಂಕಾರ ಪೂಜೆ ನಡೆಯಿತು. ನಂತರ ಶ್ರೀ ಅಯ್ಯಪ್ಪ ದೇವರ ಉತ್ಸವ ಮೂರ್ತಿಯ ಕ್ಷೇತ್ರ ಪ್ರದಕ್ಷಿಣೆ ಜರುಗಿತು.ಮಧ್ಯಾಹ್ನ ಮಹಾಮಂಗಳಾರತಿ, ಪ್ರಸಾದ ವಿತರಣೆ ನೆರವೇರಿತು. ಸಂಜೆ ಭಜನೆ ಕಾರ್ಯಕ್ರಮ ನಡೆಯಿತು ಬಳಿಕ ಅಲಂಕಾರ ಪೂಜೆ, ಪಡಿಪೂಜೆ, ರಾತ್ರಿ ದೀಪಾರಾಧನೆ ನಂತರ ಪ್ರಸಾದ ವಿನಿಯೋಗ ಮಾಡಲಾಯಿತು. ವಿವಿಧ ಕಡೆಗಳಿಂದ ಆಗಮಿಸಿದ್ದ ನೂರಾರು ಸಂಖ್ಯೆಯ ಭಕ್ತರು ದೇವರ ದರ್ಶನ ಪಡೆದು ಸರತಿ ಸಾಲಿನಲ್ಲಿ ನಿಂತು ದೇವರ ಪ್ರಸಾದ ಸ್ವೀಕರಿಸಿದರು.