ಮಾರುತಿ ಶಿಡ್ಲಾಪುರ
ಹಾವೇರಿಯಿಂದ ಹಾವೇರಿ ಜಿಲ್ಲೆಯ ಕಬ್ಬೂರ, ತಿಮ್ಮಾಪುರ, ಅಕ್ಕಿಆಲೂರು, ಸಾವಿಕೇರಿ, ಲಕ್ಷ್ಮೀಪುರ ಹಾಗೂ ಉತ್ತರ ಕನ್ನಡ ಜಿಲ್ಲೆಯ ದಾಸನಕೊಪ್ಪ, ಬಿಸಲಕೊಪ್ಪ, ಇಸಳೂರು ಮಾರ್ಗವಾಗಿ ಶಿರಸಿ ತಲುಪಲಿದೆ. ಈ ಪ್ರದೇಶಗಳಿಗೆ ರಾಷ್ಟ್ರೀಯ ಹೆದ್ದಾರಿಯ ಸಂಪರ್ಕವೂ ಇಲ್ಲ. ಆರ್ಥಿಕವಾಗಿ ಹಿಂದುಳಿದ ಪ್ರದೇಶಗಳೂ ಆಗಿವೆ. ಈ ಭಾಗದ ೧೦ ಲಕ್ಷ ಜನರ ಸಂಪರ್ಕಕ್ಕೆ ಇದು ಸಾಧನವಾಗಲಿದೆ. ಅಲ್ಲದೆ ಬೆಂಗಳೂರಿಗೆ ಸಂಪರ್ಕ ಮಾರ್ಗವೂ ಆಗಲಿದೆ. ಅಡಕೆ, ಬತ್ತ, ಮೆಣಸಿನಕಾಯಿ, ಕರಿಮೆಣಸು, ಸಾಂಬಾರ ಪದಾರ್ಥಗಳು, ಮಾವು, ತೆಂಗು ಹೇರಳವಾಗಿ ಬೆಳೆಯುವ ಪ್ರದೇಶವಾಗಿದೆ. ಇವುಗಳ ವಹಿವಾಟಿಗೂ ಇದು ಅನುಕೂಲ.
ಐತಿಹಾಸಿಕ ಬನವಾಸಿ, ಸೋಂದಾ ಮಠ, ಸ್ವರ್ಣವಲ್ಲಿ ಮಠ, ಟಿಬೇಟಿಯನ್ ಕಾಲನಿ, ಮಾರಿಕಾಂಬಾ ದೇವಸ್ಥಾನ, ತಾರಕೇಶ್ವರ ಮಂದಿರ, ಮಂಜುಗುಣಿ ಮಠ, ಕುಮಾರೇಶ್ವರ ಮಠ, ಪಂಡಿತ್ ಪಂಚಾಕ್ಷರಿ ಹಾಗೂ ಪುಟ್ಟರಾಜ ಕವಿ ಗವಾಯಿಗಳವರ ಸುಕ್ಷೇತ್ರ, ಯಾಣ, ಸಾತೊಡ್ಡಿ, ಮಾಗೋಡಿ, ಉಂಚಳ್ಳಿ ಫಾಲ್ಸ್, ಸಹಸ್ರಲಿಂಗದಂತಹ ಪ್ರಸಿದ್ಧ ಪ್ರವಾಸಿ ತಾಣಗಳಿಗೆ ಈ ರೈಲು ಮಾರ್ಗ ಸಂಪರ್ಕ ಕಲ್ಪಿಸಲಿದೆ. ಕರ್ನಾಟಕದ ಕಾಶ್ಮೀರ ಎಂದು ಕರೆಯುವ ಉತ್ತರ ಕನ್ನಡದ ಪ್ರವಾಸಕ್ಕೆ ಹೆಚ್ಚು ಮೆರುಗು ತರಲಿದೆ. ಪ್ರವಾಸೋದ್ಯಮ ಕೈಗಾರಿಕೆ ವ್ಯಾಪಾರೋದ್ಯಮವನ್ನು ಪ್ರೋತ್ಸಾಹಿಸಲು ಅನುಕೂಲಕರವಾದ ಹಾವೇರಿ ಶಿರಸಿ ರೈಲು ಮಾರ್ಗ ಈ ಭಾಗದ ಜನರ ಬಹು ದಿನಗಳ ಕನಸು ನನಸಾಗಿಸಿದಂತಾಗುತ್ತದೆ. ಈ ರೈಲ್ವೆ ಯೋಜನೆ ಆರೇಳು ವರ್ಷಗಳ ಹಿಂದೆಯೇ ಕನಸನ್ನು ಬಿತ್ತಿದೆ. ಆದರೆ ಇನ್ನೂ ಕಾರ್ಯ ಯೋಜನೆ ರೂಪುಗೊಂಡಿಲ್ಲ. ಈ ಭಾಗದ ಜನರ ಹಿತಾಸಕ್ತಿಗಾಗಿ ಈ ಯೋಜನೆ ಶೀಘ್ರ ಆರಂಭವಾಗಬೇಕು. ಅತಿ ಕಡಿಮೆ ಖರ್ಚಿನಲ್ಲಿ ಹೆಚ್ಚು ಲಾಭ ನೀಡುವ, ಜನರಿಗೆ ಸದುಪಯೋಗವಾಗುವ ಯೋಜನೆ ಇದಾಗಿದೆ. ಎಲ್ಲವನ್ನೂ ಹೋರಾಟದಿಂದಲೇ ಪಡೆಯಬೇಕೆಂಬ ಸ್ಥಿತಿ ನಿಜಕ್ಕೂ ವಿಷಾದನೀಯ. ತಾಳಗುಪ್ಪ ಹುಬ್ಬಳ್ಳಿ ಹಾಗೂ ಹಾವೇರಿ ಶಿರಸಿ ರೈಲು ಮಾರ್ಗಗಳು ಅಭಿವೃದ್ಧಿಯ ಸಂಕೇತಗಳಾಗಬೇಕು ಎಂದು ಉತ್ತರ ಕರ್ನಾಟಕ ಹೋರಾಟ ವೇದಿಕೆ ಅಧ್ಯಕ್ಷ ಸೋಮಶೇಖರ ಕೋತಂಬರಿ ಹೇಳಿದರು.ಹಾವೇರಿ ಶಿರಸಿ ಮಾರ್ಗದಲ್ಲಿ ಬರುವ ನಮ್ಮ ಹಳ್ಳಿಗಳ ಆರ್ಥಿಕ ಬೆಳವಣಿಗೆಗೆ ಈ ರೈಲ್ವೆ ಯೋಜನೆ ಸಹಕಾರಿಯಾಗಲಿದೆ. ಇಲ್ಲಿನ ಕೃಷಿ ಬದುಕಿಗೆ ಪುಷ್ಟಿ ನೀಡಲು ಸಾಧ್ಯ. ಇಂಥ ಯೋಜನೆಗಳು ವಿಳಂಬವಿಲ್ಲದೆ ಕಾರ್ಯ ರೂಪಕ್ಕೆ ಬರಬೇಕು. ಜನಪ್ರತಿನಿಧಿಗಳು ತಮ್ಮ ಇಚ್ಛಾಶಕ್ತಿಯನ್ನು ಇಂತಹ ಅಭಿವೃದ್ಧಿಗೆ ವಿನಿಯೋಗಿಸಬೇಕು. ಹಾವೇರಿ ಶಿರಸಿ ರೈಲ್ವೆ ಮಾರ್ಗದ ಅತ್ಯಂತ ನಿರೀಕ್ಷೆಯಲ್ಲಿದ್ದೇವೆ ಯುವ ಮುಖಂಡ ಮಾರುತಿ ಪುರ್ಲಿ ಹೇಳಿದರು.