ಕನ್ನಡಪ್ರಭ ವಾರ್ತೆ ಮಂಡ್ಯ
ಕಲಬೆರಕೆ ಹಾಲಿನಪುಡಿ ಪ್ರಕರಣದ ಎಫ್‌ಐಆರ್ ದಾಖಲಾಗಿ ಸರಿ ಸುಮಾರು ಎಂಟು ತಿಂಗಳಾಗಿದೆ. ಮನ್‌ಮುಲ್ ಅಧಿಕಾರಿ ಪ್ರದೀಪ್‌ಕುಮಾರ್ ಜಾಧವ್ ಮತ್ತು ನಿರ್ದೇಶಕ ಡಾಲು ರವಿ ಅವರ ಸಂಭಾಷಣೆಯ ಆಡಿಯೋ ಬಿಡುಗಡೆಯಾದ ನಂತರದಲ್ಲಿ ಈ ಪ್ರಕರಣ ಹೊಸ ತಿರುವನ್ನು ಪಡೆದುಕೊಂಡಿತ್ತು. ಪ್ರದೀಪ್‌ಕುಮಾರ್ ಜಾಧವ್ ಕಲಬೆರಕೆ ಹಾಲಿನಪುಡಿ ಹಗರಣಕ್ಕೆ ಸಂಬಂಧಿಸಿದಂತೆ ನನ್ನ ಬಳಿ ಎಲ್ಲಾ ಸಾಕ್ಷ್ಯಗಳಿವೆ. ಇದರಲ್ಲಿ ಶಾಮೀಲಾಗಿರುವವರ ಬಗ್ಗೆ ಓಪನ್ ಸ್ಟೇಟ್‌ಮೆಂಟ್ ನೀಡುವುದಕ್ಕೂ ಸಿದ್ಧನಿದ್ದೇನೆ. ತಪ್ಪು ಮಾಡಿದ ಯಾರನ್ನೂ ನಾನು ಸುಮ್ಮನೆ ಬಿಡುವುದಿಲ್ಲ ಎಂದು ಆಡಿಯೋದಲ್ಲಿ ಆಕ್ರೋಶ ಹೊರಹಾಕಿದ್ದರು. ಆದರೂ, ತನಿಖೆ ಮಾತ್ರ ಆಮೆಗತಿಯಲ್ಲಿ ಸಾಗುತ್ತಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಆಡಿಯೋದಲ್ಲಿ ಜಾಧವ್ ಮಾಜಿ ಅಧ್ಯಕ್ಷ ಯು.ಸಿ.ಶಿವಕುಮಾರ್ ಬಗ್ಗೆ ಹೆಸರನ್ನು ಹೇಳಿದ್ದರೆಂಬ ಕಾರಣಕ್ಕೆ ಅವರನ್ನು ಬಂಧಿಸಲಾಯಿತು. ಇನ್ನುಳಿದಂತೆ ಪ್ರಕರಣ ಸಂಬಂಧ ಜಾಧವ್ ಅವರ ಬಳಿ ಇರುವ ಸಾಕ್ಷ್ಯಗಳೇನು, ಇನ್ನೂ ಯಾರ್‍ಯಾರು ಈ ಹಗರಣದಲ್ಲಿ ಭಾಗಿಯಾಗಿದ್ದಾರೆ. ಪೊಲೀಸರ ಮುಂದೆ ಯು.ಸಿ.ಶಿವಕುಮಾರ್ ಕೊಟ್ಟ ಹೇಳಿಕೆಗಳೇನು ಎಂಬ ಬಗ್ಗೆ ಇದುವರೆಗೂ ಮಾಹಿತಿಯನ್ನು ಬಹಿರಂಗಪಡಿಸಿಲ್ಲ. ಪೊಲೀಸರು ತನಿಖೆ ಹೆಸರಿನಲ್ಲಿ ಕಾಲವನ್ನು ದೂಡುತ್ತಲೇ ಇದ್ದಾರೆಂಬ ಆರೋಪಗಳು ಕೇಳಿಬರುತ್ತಿವೆ. ಪ್ರಕರಣದಲ್ಲಿ ಗೌಪ್ಯತೆಯನ್ನು ಕಾಯ್ದುಕೊಳ್ಳುತ್ತಿರುವುದನ್ನು ನೋಡಿದಾಗ ತನಿಖೆ ಹಾದಿ ತಪ್ಪಿರುವ ಶಂಕೆ ಸಾರ್ವಜನಿಕರಲ್ಲಿ ಮೂಡಿದೆ.ಮನ್‌ಮುಲ್‌ನಲ್ಲಿ ೧೧೦ ಟನ್ ಹಾಲಿನಪುಡಿ ಮಾರಾಟದಿಂದ ಬಂದ ಒಟ್ಟು ಹಣವೆಷ್ಟು. ಅದು ಯಾರಿಗೆಲ್ಲಾ ಹಂಚಿಕೆಯಾಗಿದೆ ಎನ್ನುವುದಕ್ಕೆ ಇದುವರೆಗೂ ಉತ್ತರ ಸಿಕ್ಕಿಲ್ಲ. ಮತ್ತೊಬ್ಬ ಮನ್‌ಮುಲ್ ಅಧಿಕಾರಿ ರಾಮಕೃಷ್ಣ ಅವರನ್ನು ಇದುವರೆಗೂ ಪೊಲೀಸರು ಬಂಧಿಸಿಲ್ಲ. ಪ್ರಕರಣ ಬಯಲಿಗೆ ಬಂದ ದಿನದಿಂದಲೂ ಆತ ನಾಪತ್ತೆಯಾಗಿದ್ದಾನೆ. ಪೊಲೀಸರು ಇನ್ನೂ ಆತನಿಗಾಗಿ ಶೋಧ ಕಾರ್ಯ ನಡೆಸುತ್ತಲೇ ಇದ್ದಾರೆ. ಹಾಗಾದರೆ ಪೊಲೀಸ್ ಇಲಾಖೆ ಒಬ್ಬ ಸಾಮಾನ್ಯ ಅಧಿಕಾರಿಯನ್ನು ಬಂಧಿಸಲು ಸಾಧ್ಯವಾಗದಷ್ಟು ಅಸಮರ್ಥವಾಗಿದೆಯೇ ಅಥವಾ ರಾಜಕೀಯ ಪ್ರಭಾವ ಪೊಲೀಸರ ಕೈಯ್ಯನ್ನು ಕಟ್ಟಿಹಾಕಿದೆಯೇ ಎಂದು ಪ್ರಶ್ನಿಸುವಂತಾಗಿದೆ.
ಕಲಬೆರಕೆ ಹಾಲಿನಪುಡಿ ಹಗರಣವನ್ನು ಸಿಬಿಐ ತನಿಖೆಗೆ ಒಪ್ಪಿಸುವಂತೆ ವಿವಿಧ ರಾಜಕೀಯ ಪಕ್ಷಗಳು, ಸಂಘಟನೆಗಳು ಒತ್ತಾಯಿಸಿವೆ. ಸಿಬಿಐಗೆ ಕೊಡಲೊಪ್ಪದ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರು, ನಮ್ಮ ಪೊಲೀಸರು ತನಿಖೆ ನಡೆಸುವುದಕ್ಕೆ ಶಕ್ತರಿದ್ದಾರೆ. ಅವರ ಮೇಲೆ ನನಗೆ ಸಂಪೂರ್ಣ ವಿಶ್ವಾಸವಿದೆ. ಇದರಲ್ಲಿ ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲವೆಂದು ಗುಡುಗುತ್ತಾರೆ.
ಮನ್‌ಮುಲ್ ನೀರು-ಹಾಲು ಹಗರಣದ ತನಿಖೆಯನ್ನೂ ಸಿಐಡಿಗೆ ವಹಿಸಿ ನಾಲ್ಕೈದು ವರ್ಷಗಳೇ ಕಳೆಯಿತು. ಪ್ರಕರಣದ ತನಿಖೆ ಏನಾಯಿತು ಒಬ್ಬರಿಗೂ ಗೊತ್ತಿಲ್ಲ. ಅದು ಸಾರ್ವಜನಿಕವಾಗಿ ಮಾಸಿಹೋದ ಪ್ರಕರಣವಾಗಿದೆ. ಅದೇ ರೀತಿ ಜನಮಾನಸದಿಂದ ಮಾಸಿ ಹೋಗುವವರೆಗೆ ಈ ಪ್ರಕರಣವನ್ನೂ ತನಿಖೆ ಹೆಸರಿನಲ್ಲಿ ಮುಂದೂಡುವುದು ತಂತ್ರಗಾರಿಕೆಯೇ ಎನ್ನುವುದು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿರುವ ಪ್ರಶ್ನೆಯಾಗಿದೆ.ಕಲಬೆರಕೆ ಹಾಲಿನ ಪುಡಿ ಪ್ರಕರಣದಲ್ಲಿ ಯಾರನ್ನೂ ರಕ್ಷಿಸುವ ಮಾತೇ ಇಲ್ಲ. ಇದರಲ್ಲಿ ರಾಜಿ ಆಗುವುದೂ ಇಲ್ಲ. ಸರಿಯಾದ ಮಾರ್ಗದಲ್ಲಿ ತನಿಖೆ ನಡೆಯುತ್ತಿದೆ. ಗಣೇಶ ವಿಸರ್ಜನೆ, ದಸರಾ ಬಂದೋಬಸ್ತ್ ಸೇರಿದಂತೆ ಪೊಲೀಸರ ಮೇಲೆ ಕಾರ್ಯದ ಒತ್ತಡ ಹೆಚ್ಚಿರುವುದರಿಂದ ತನಿಖೆ ಸ್ವಲ್ಪ ವಿಳಂಬವಾಗಿರುವುದು ಬಿಟ್ಟರೆ ಯಾವ ಕಾರಣಕ್ಕೂ ಪ್ರಕರಣ ಹಳ್ಳ ಹಿಡಿಯಲು ಬಿಡುವುದಿಲ್ಲ.