ಬೆಟ್ಟದಷ್ಟು ಬೇಡಿಕೆ, ಅಪಾರ ನಿರೀಕ್ಷೆ ಈಡೇರಿಸಿತೇ ಬಜೆಟ್?

KannadaprabhaNewsNetwork |  
Published : Mar 07, 2025, 12:47 AM IST
ಸ | Kannada Prabha

ಸಾರಾಂಶ

ಇಂದು ರಾಜ್ಯ ಬಜೆಟ್. ಬೇಡಿಕೆಗಳು ಬೆಟ್ಟದಷ್ಟಿವೆ.

ವಸಂತಕುಮಾರ ಕತಗಾಲಕಾರವಾರ: ಇಂದು ರಾಜ್ಯ ಬಜೆಟ್. ಬೇಡಿಕೆಗಳು ಬೆಟ್ಟದಷ್ಟಿವೆ. ಬಜೆಟ್ ಬಂತೆಂದರೆ ಪ್ರತಿ ಬಾರಿಯ ಬೇಡಿಕೆಯ ಜೊತೆಯಲ್ಲಿ ಹೊಸ ಬೇಡಿಕೆಗಳು ಸೇರ್ಪಡೆಯಾಗುತ್ತಿವೆ. ಜ್ವಲಂತ ಸಮಸ್ಯೆಗಳಿಗೆ ಈ ಬಜೆಟ್‌ನಲ್ಲಾದರೂ ಪರಿಹಾರ ಸಿಕ್ಕಿತೇ ಎಂದು ಜಿಲ್ಲೆಯ ಜನತೆ ಕಾತರದಿಂದ ಕಾಯುತ್ತಿದ್ದಾರೆ.

ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಉತ್ತರ ಕನ್ನಡ ಜಿಲ್ಲೆಯ ಬಹುಕಾಲದ ಕನಸು. ಹಿಂದೆ ಬಿಜೆಪಿ ಸರ್ಕಾರ ಇರುವಾಗ ಕುಮಟಾದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಂಜೂರಾಗಿತ್ತು. ಬಜೆಟ್ ನಲ್ಲಿ ಘೋಷಣೆ ಸಹ ಮಾಡಲಾಗಿತ್ತು. ಇದರ ಜೊತೆ ಕಾರವಾರ ಮೆಡಿಕಲ್ ಕಾಲೇಜಿನಲ್ಲಿ ಸೂಪರ್ ಸ್ಪೆಷಾಲಿಟಿ ಸೌಲಭ್ಯ ಕೊಡುವ ಭರವಸೆಯನ್ನೂ ನೀಡಲಾಗಿತ್ತು. ನಂತರ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದಾಗ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಆದಲ್ಲಿ ಅದರ ಕ್ರೆಡಿಟ್ ಬಿಜೆಪಿಗೆ ಹೋಗಲಿದೆ ಎಂದು ಆಸ್ಪತ್ರೆ ನಿರ್ಮಾಣವನ್ನೇ ಕೈಬಿಟ್ಟಿತು. ಈಗ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕಾಗಿ ಹೊಸದಾಗಿ ಅರ್ಜಿ ಸಲ್ಲಿಸುವ ನಾಟಕ ನಡೆಯುತ್ತಿದೆ. ಈ ರಾಜಕೀಯ ಲಾಭದ ಲೆಕ್ಕಾಚಾರದಲ್ಲಿ ಉತ್ತರ ಕನ್ನಡ ಜಿಲ್ಲೆಯ ಜನತೆ ಬೇಸತ್ತಿದ್ದಾರೆ. ಹೋಗಲಿ, ಇಂದು ಮಂಡನೆಯಾಗಲಿರುವ ಬಜೆಟ್ ನಲ್ಲಾದರೂ ಜಿಲ್ಲೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಘೋಷಣೆಯಾಗಲಿದೆಯೇ ಎನ್ನುವುದನ್ನು ಜಿಲ್ಲೆಯ ಜನತೆ ಎದುರು ನೋಡುತ್ತಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಗ್ರಾಮೀಣ ಪ್ರದೇಶಗಳ ಜನತೆ ಮೂಲಭೂತ ಸೌಲಭ್ಯಗಳ ಕೊರತೆಯಿಂದ ಬಳಲುತ್ತಿದ್ದಾರೆ. ರಸ್ತೆ, ಸೇತುವೆ, ಸಮರ್ಪಕ ವಿದ್ಯುತ್ ಪೂರೈಕೆ, ಆರೋಗ್ಯ ಸೇವೆ ಮತ್ತಿತರ ಸೇವೆಗಳು ಇನ್ನೂ ಜನತೆಗೆ ಸಿಗಬೇಕಾಗಿದೆ. ಇದಕ್ಕಾಗಿ ಜಿಲ್ಲೆಗೆ ವಿಶೇಷ ಪ್ಯಾಕೇಜ್‌ ನೀಡಬೇಕೆಂಬ ಕೂಗು ಹಲವು ವರ್ಷಗಳಿಂದ ಕೇಳಿಬರುತ್ತಿದೆ.

ಜಿಲ್ಲೆಯಲ್ಲಿ ಧಾರ್ಮಿಕ, ನೈಸರ್ಗಿಕ, ಮಾನವ ನಿರ್ಮಿತ ಹೀಗೆ ಎಲ್ಲ ಬಗೆಯ ಪ್ರವಾಸಿ ತಾಣಗಳಿವೆ. ಆದರೆ ಪ್ರವಾಸಿ ತಾಣಗಳಲ್ಲಿ ಸೌಲಭ್ಯ ಇಲ್ಲ. ಸೌಲಭ್ಯಗಳನ್ನು ಕಲ್ಪಿಸಿದಲ್ಲಿ ಪ್ರವಾಸೋದ್ಯಮ ಸಹ ಬೆಳವಣಿಗೆಯಾಗಿ ಉದ್ಯೋಗಾವಕಾಶ, ಆರ್ಥಿಕ ಚಟುವಟಿಕೆ ಹೆಚ್ಚುವುದು ಸಹಜ. ಹೀಗಾಗಿ ಜನತೆ ಪ್ರವಾಸೋದ್ಯಮ ಬೆಳವಣಿಗೆಗೆ ಕೊಡುಗೆ ನೀಡಬೇಕೆಂದು ಬಯಸುತ್ತಿದ್ದಾರೆ.

ಉತ್ತರ ಕನ್ನಡದ ಯುವ ಜನತೆ ಉದ್ಯೋಗಕ್ಕಾಗಿ ಬೆಂಗಳೂರು, ಮುಂಬಯಿ, ಗೋವಾ, ಮಂಗಳೂರುಗಳನ್ನೇ ಅವಲಂಬಿಸಿದ್ದಾರೆ. ಜಿಲ್ಲೆಯಲ್ಲಿ ಉದ್ಯೋಗ ನೀಡುವ ಕೈಗಾರಿಕೆಗಳಿಲ್ಲ. ಉದ್ಯಮಗಳ ಸ್ಥಾಪನೆಗೆ ಸರ್ಕಾರ ಮುಂದಾದಲ್ಲಿ ಯುವ ಜನತೆಯ ಕೈಗೆ ಉದ್ಯೋಗ ಸಿಕ್ಕೀತು ಎನ್ನುವುದು ಯುವ ಜನತೆಯ ನಿರೀಕ್ಷೆಯಾಗಿದೆ.

ಕೃಷಿ ಕ್ಷೇತ್ರಕ್ಕೆ ಪೂರಕವಾದ ಬೃಹತ್ ನೀರಾವರಿ ಯೋಜನೆಗಳು ಅನುಷ್ಠಾನಗೊಂಡಿಲ್ಲ. ಜಿಲ್ಲೆಯ ಕೃಷಿಕರು ಇನ್ನೂ ಮಳೆಯನ್ನೇ ಅವಲಂಬಿಸಿದ್ದಾರೆ. ಅದರಲ್ಲೂ ಕರಾವಳಿ ಕೃಷಿಕರಿಗೆ ಅನುಕೂಲವಾಗುವಂತೆ ನೀರಾವರಿ ಯೋಜನೆಗಳನ್ನು ಜಾರಿಗೊಳಿಸಲಿ ಎನ್ನುವುದು ರೈತರ ಆಶಯವಾಗಿದೆ.

ಕೃಷಿ, ತೋಟಗಾರಿಕೆ, ಮೀನುಗಾರಿಕೆ ಕ್ಷೇತ್ರ ಹಲವು ಸಮಸ್ಯೆಗಳನ್ನು ಎದುರಿಸುತ್ತಿವೆ. ಈ ಬಜೆಟ್ ನಲ್ಲಿ ಅವುಗಳಿಗೆ ಪರಿಹಾರ ಸಿಕ್ಕೀತು ಎಂಬ ನಿರೀಕ್ಷೆ ಉಂಟಾಗಿದೆ.

ಜಿಲ್ಲೆಗೆ ಬೇಡದ ಯೋಜನೆಗಳು ಬರುತ್ತಿವೆ. ಬೇಕು ಎಂದು ಹತ್ತಾರು ವರ್ಷಗಳಿಂದ ಬೇಡಿಕೆ ಮಂಡಿಸುತ್ತಿದ್ದರೂ ಆ ಯೋಜನೆಗಳು ಬರುತ್ತಿಲ್ಲ ಎಂಬ ಕೊರಗು ಜಿಲ್ಲೆಯ ಜನತೆಯದ್ದಾಗಿದೆ. ಈ ಬಾರಿಯಾದರೂ ಬಜೆಟ್ ಜನತೆಗೆ ಸಮಾಧಾನ ತರಲಿದೆಯೇ ಎನ್ನುವ ಪ್ರಶ್ನೆಗೆ ಶುಕ್ರವಾರ ಉತ್ತರ ದೊರೆಯಲಿದೆ.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...