ಬ್ಯಾಡಗಿ ಕ್ಷೇತ್ರದ ಏತ ನೀರಾವರಿ ಯೋಜನೆಗೆ ರಾಜ್ಯ ಬಜೆಟನಲ್ಲಿ ಅನುದಾನ ದೊರಕಿತೇ?

KannadaprabhaNewsNetwork |  
Published : Mar 07, 2025, 12:49 AM IST
m | Kannada Prabha

ಸಾರಾಂಶ

ಗುಡ್ಡದಮಲ್ಲಾಪುರ ಏತ ನೀರಾವರಿ ಯೋಜನೆಗೆ ಅನುದಾನದ ದಾಹ ಮಾತ್ರ ತೀರಿಲ್ಲ. ಯೋಜನೆಗೆ ವರದಾ ನದಿ ನೀರು ಮೂಲವಾಗಿದ್ದು, ಕಾಲುವೆ ಮೂಲಕ ಕೃಷಿ ಭೂಮಿಗೆ ನೀರು ಹರಿಸುವಲ್ಲಿ ವಿಫಲವಾಗಿದೆ.

ಶಿವಾನಂದ ಮಲ್ಲನಗೌಡ್ರಬ್ಯಾಡಗಿ: ಪಟ್ಟಣದಲ್ಲಿ ಅಂತಾರಾಷ್ಟ್ರೀಯ ಖ್ಯಾತಿಯ ಮೆಣಸಿನಕಾಯಿ ಮಾರುಕಟ್ಟೆ ಹೊಂದಿದ್ದರೂ ಅಭಿವೃದ್ಧಿ ವಿಚಾರದಲ್ಲಿ ತಾಲೂಕು ಸಾಕಷ್ಟು ಹಿಂದುಳಿದಿದ್ದು, ಈ ಬಾರಿಯ ರಾಜ್ಯ ಸರ್ಕಾರದ ಬಜೆಟ್‌ ಮೇಲೆ ತಾಲೂಕಿನ ಜನತೆ ಭಾರಿ ನಿರೀಕ್ಷೆ ಇಟ್ಟಿದ್ದಾರೆ.ಬ್ಯಾಡಗಿ ಮತಕ್ಷೇತ್ರದಲ್ಲಿ ನದಿಗಳು ಹರಿಯದೇ ಇರುವುದರಿಂದ ಇಲ್ಲಿನ ಕೃಷಿ ಭೂಮಿಗಳಿಗೆ ನೀರಾವರಿ ಸೌಲಭ್ಯ ಒದಗಿಸುವುದೇ ದೊಡ್ಡ ಕಗ್ಗಂಟು. ಕ್ಷೇತ್ರದ ಶೇ. 7ರಷ್ಟು ಕೃಷಿಭೂಮಿ ನೀರಾವರಿ ಸೌಲಭ್ಯ (ಕೊಳವೆ ಬಾವಿ) ಹೊಂದಿದ್ದು, ಇನ್ನುಳಿದಂತೆ ಮಳೆಯಾಶ್ರಿತವಾಗಿವೆ.ಗುಡ್ಡದಮಲ್ಲಾಪುರ ಏತ ನೀರಾವರಿ ಯೋಜನೆಗೆ ಅನುದಾನದ ದಾಹ ಮಾತ್ರ ತೀರಿಲ್ಲ. ಯೋಜನೆಗೆ ವರದಾ ನದಿ ನೀರು ಮೂಲವಾಗಿದ್ದು, ಕಾಲುವೆ ಮೂಲಕ ಕೃಷಿ ಭೂಮಿಗೆ ನೀರು ಹರಿಸುವಲ್ಲಿ ವಿಫಲವಾಗಿದೆ. ತಜ್ಞರ ಅಭಿಪ್ರಾಯದಂತೆ ಪೈಪ್‌ಲೈನ್ ಮೂಲಕ ನೀರು ಹರಿಸಬೇಕಾಗಿದ್ದು, ಬ್ಯಾತನಾಳ (ಹಾನಗಲ್ಲ ತಾಲೂಕು) ಬಳಿ ವರದಾ ನದಿಗೆ ಅಡ್ಡಲಾಗಿ ತಡೆಗೋಡೆ (ಬ್ಯಾರೇಜ್) ನಿರ್ಮಾಣವಾಗಬೇಕಾಗಿದ್ದು, ₹110 ಕೋಟಿ ವೆಚ್ಚದ ಡಿಪಿಆರ್ ಸಿದ್ಧವಾಗಿದೆ. ಆಡಳಿತಾತ್ಮಕ, ತಾಂತ್ರಿಕ ಅನುಮೋದನೆಯೊಂದಿಗೆ ಪ್ರಸಕ್ತ ಬಜೆಟ್‌ನಲ್ಲಿ ಅನುದಾನ ನಿರೀಕ್ಷಿಸಲಾಗಿದೆ.ಏತ ನೀರಾವರಿಗೆ 18 ಕೋಟಿ: ತಾಲೂಕಿನಲ್ಲಿ ಮೂರು ಏತ ನೀರಾವರಿ ಯೋಜನೆಗಳು ಚಾಲ್ತಿಯಲ್ಲಿದ್ದು, ಆಣೂರು ಮತ್ತು ಬುಡಪನಹಳ್ಳಿ ಏತ ನೀರಾವರಿ ಯೋಜನೆಗಳು ತುಂಗಭದ್ರಾ ನದಿ ಮೂಲಕ ಕೆರೆಗಳನ್ನು ತುಂಬಿಸುವುದಕ್ಕಾಗಿ ಅನುಷ್ಠಾನಗೊಂಡಿವೆ. ಆಣೂರು ಮತ್ತು ಬುಡಪನಹಳ್ಳಿ ಏತ ನೀರಾವರಿ ಮೂಲಕ ಕೆರೆ ತುಂಬಿಸುವ ಯೋಜನೆಯ ಸಂಪೂರ್ಣ ಅನುಷ್ಠಾನಕ್ಕಾಗಿ ₹18 ಕೋಟಿ ಅನುದಾನದ ಅವಶ್ಯವಿದೆ.ರಿಂಗ್ ರಸ್ತೆಗೆ ಅನುದಾನ: ಮುಖ್ಯ ರಸ್ತೆ ಅಗಲೀಕರಣ ಕಾಮಗಾರಿ ನ್ಯಾಯಾಲಯದ ಮೆಟ್ಟಿಲನ್ನೇರಿದ್ದು, ಕಳೆದ 15 ವರ್ಷಗಳ ಹೋರಾಟಕ್ಕೆ ಇಂದಿಗೂ ಮನ್ನಣೆ ಸಿಕ್ಕಿಲ್ಲ. ಹೀಗಾಗಿ ಬ್ಯಾಡಗಿ ಪಟ್ಟಣಕ್ಕೆ ದ್ವಿಪಥ ಸಂಚಾರವಿರುವ ರಿಂಗ್ ರಸ್ತೆಗೆ ಅನುದಾನಕ್ಕಾಗಿ ಪ್ರಸಕ್ತ ಬಜೆಟ್‌ನಲ್ಲಿ ಹಸಿರು ನಿಶಾನೆ ಸಿಗಬೇಕಿದೆ.ದೇವರಗುಡ್ಡ ಅಭಿವೃದ್ಧಿ ಪ್ರಾಧಿಕಾರ: ದೇವರಗುಡ್ಡ (ಮಾಲತೇಶ) ಪ್ರಸಿದ್ಧ ಧಾರ್ಮಿಕ ಪುಣ್ಯಕ್ಷೇತ್ರವಾಗಿದ್ದು, ಇದರ ಸಂಪೂರ್ಣ ಅಭಿವೃದ್ಧಿಗೆ ಹಣದ ಅವಶ್ಯವಿದೆ. ಬ್ಯಾಡಗಿ ಹೊರವಲಯದಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಾಣಕ್ಕಾಗಿ ಈಗಾಗಲೇ 10 ಎಕರೆ ಪ್ರದೇಶ ಮೀಸಲಿಡಲಾಗಿದೆ. ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣದ ಉದ್ದೇಶದಿಂದಲೂ ಅನುದಾನಕ್ಕೆ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿಕೊಳ್ಳಲಾಗಿದೆ.

ಬಜೆಟ್‌ನಲ್ಲಿ ಮನ್ನಣೆ: ಬ್ಯಾಡಗಿ ಮತಕ್ಷೇತ್ರ ಸೇರಿದಂತೆ ಹಾವೇರಿ ಜಿಲ್ಲೆಗೆ ಅವಶ್ಯವಿರುವ ಅನುದಾನಗಳಿಗೆ ಮುಖ್ಯಮಂತ್ರಿಗಳ ಬೇಡಿಕೆಯನ್ನಿಟ್ಟಿದ್ದೇನೆ ಅದರಲ್ಲಿ ನೀರಾವರಿಗೆ ಪ್ರಮುಖ ಆದ್ಯತೆಯನ್ನಿಟ್ಟಿದ್ದು, ಶೇ. 75ರಷ್ಟು ನಮ್ಮ ಬೇಡಿಕೆಗಳಿಗೆ ಬಜೆಟ್‌ನಲ್ಲಿ ಮನ್ನಣೆ ಸಿಗುವ ಸಾಧ್ಯತೆಯಿದೆ ಎಂದು ಶಾಸಕ ಬಸವರಾಜ ಶಿವಣ್ಣನವರ ತಿಳಿಸಿದರು.

ಪ್ರತಿಭಟನೆ ಎಚ್ಚರಿಕೆ: ಪ್ರಸ್ತಕ ಬಜೆಟ್ ನಲ್ಲಿ ಹಾವೇರಿ ವಿಶ್ವವಿದ್ಯಾಲಯ ಸ್ಥಗಿತ ನಿರ್ಧಾರ ಕೈಬಿಡುವುದೂ ಸೇರಿದಂತೆ ವಿವಿ ಅಭಿವೃದ್ಧಿಗೆ ಅಗತ್ಯವಿರುವ ಅನುದಾನ ಬಿಡುಗಡೆಗೊಳಿಸದಿದ್ದರೆ ಹಾವೇರಿ ಬಂದ್ ಮಾಡಿ ಪ್ರತಿಭಟನೆ ಮಾಡಲಾಗುವುದು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ತಿಳಿಸಿದರು.

ಅನುಕೂಲ ಕಲ್ಪಿಸಿ: ಕಳೆದ ಸರ್ಕಾರದಲ್ಲಿ ಅಪೂರ್ಣಗೊಂಡಿರುವ ತಾಲೂಕು ಕ್ರೀಡಾಂಗಣದಲ್ಲಿನ ಒಳಾಂಗಣ ಕ್ರೀಡಾಂಗಣವನ್ನು ಪ್ರಸಕ್ತ ಬಜೆಟ್‌ನಲ್ಲಿ ಅನುದಾನ ಬಿಡುಗಡೆಗೊಳಿಸುವ ಮೂಲಕ ಪೂರ್ಣಗೊಳಿಸಿ ಕ್ರೀಡಾಪಟುಗಳಿಗೆ ಅನುಕೂಲ ಕಲ್ಪಿಸಿಕೊಡಬೇಕು ಎಂದು ಹಾವೇರಿ ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಶನ್‌ನ ಗೌರವಾಧ್ಯಕ್ಷ ಗಂಗಣ್ಣ ಎಲಿ ತಿಳಿಸಿದರು.

ಕಳೆದ ಬಜೆಟ್‌ನಲ್ಲಿ ಜಿಲ್ಲೆಗೆ ಸಿಕ್ಕಿದ್ದು...- ರಾಣಿಬೆನ್ನೂರಿನಲ್ಲಿ ₹112 ಕೋಟಿ ವೆಚ್ಚದಲ್ಲಿ ನಿರ್ಮಿಸುತ್ತಿರುವ 222 ಎಕರೆ ಮೆಗಾ ಮಾರುಕಟ್ಟೆ ಪ್ರಾಂಗಣದಲ್ಲಿ ಒಣಮೆಣಸಿನಕಾಯಿ ಮಾರುಕಟ್ಟೆ ಪ್ರಾರಂಭಿಸುವುದು.- ತ್ರಿಪದಿಗಳ ಮೂಲಕ ಜೀವನಸಾರ ಹೇಳಿದ ವಚನಕಾರ ಸರ್ವಜ್ಞ ಸ್ಮಾರಕದ ಅಭಿವೃದ್ಧಿಗೆ ಕ್ರಮ- ಹಾವೇರಿ ವಿಜ್ಞಾನ ಕೇಂದ್ರದ ಕಾಮಗಾರಿ ಪ್ರಗತಿಯಲ್ಲಿದ್ದು, ಪೂರ್ಣಗೊಳಿಸುವುದು- ರಾಣಿಬೆನ್ನೂರು ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಕೋಲ್ಡ್ ಸ್ಟೋರೇಜ್ ನಿರ್ಮಾಣಅನುಷ್ಠಾನ ಆಗಿದ್ದು ಶೂನ್ಯ- ರಾಣಿಬೆನ್ನೂರು ಮೆಗಾ ಮಾರುಕಟ್ಟೆಯಲ್ಲಿ ಒಣಮೆಣಸಿನಕಾಯಿ ಮಾರುಕಟ್ಟೆ ಆರಂಭವಾಗಿಲ್ಲ- ಸರ್ವಜ್ಞ ಸ್ಮಾರಕದ ಅಭಿವೃದ್ಧಿಗೆ ಯಾವುದೇ ಕ್ರಮವಾಗಿಲ್ಲ, ಅನುದಾನವೂ ಬಿಡುಗಡೆಯಾಗಿಲ್ಲ- ಹಾವೇರಿ ವಿಜ್ಞಾನ ಕೇಂದ್ರದ ಕಾಮಗಾರಿ ಪೂರ್ಣಗೊಂಡು ಉದ್ಘಾಟನೆಯೂ ಆಗಿದೆ- ರಾಣಿಬೆನ್ನೂರು ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಕೋಲ್ಡ್‌ ಸ್ಟೋರೇಜ್‌ ನಿರ್ಮಾಣವಾಗಿಲ್ಲ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ