ನನೆಗುದಿಗೆ ಬಿದ್ದ ಯೋಜನೆಗಳಿಗೆ ಸಿಕ್ಕಿತೆ ಕಾಯಕಲ್ಪ?

KannadaprabhaNewsNetwork |  
Published : Mar 07, 2025, 12:49 AM IST
6ಕೆಪಿಎಲ್22 ಸಿಂಗಟಾಲೂರು ಏತನೀರಾವರಿ ಯೋಜನೆ ತುಂಬಿತುಳಿಕುತ್ತಿದ್ದರೂ ನೀರು ಬಳಕೆ ಮಾಡಿಕೊಳ್ಳಲು ಕೊಪ್ಪಳ ತಾಲೂಕಿನಲ್ಲಿ ಕಾಲುವೆಗಳು ಇಲ್ಲ.6ಕೆಪಿಎಲ್23 ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟ್ ಮುರಿದಿರುವುದು | Kannada Prabha

ಸಾರಾಂಶ

14 ವರ್ಷದ ಹಿಂದೆ ಜಾರಿಗೊಂಡು ಸಿಂಗಟಾಲೂರು ಏತನೀರಾವರಿ ಯೋಜನೆಯಿಂದ ಜಿಲ್ಲೆಗೆ ಹನಿ ನೀರು ಬಂದಿಲ್ಲ. ಈ ಯೋಜನೆಗೆ ಸರ್ಕಾರ ಕಾಲುವೆ ನಿರ್ಮಿಸದೆ ತುಂತುರು ನೀರಾವರಿ ಮಾಡುವ ಯೋಜನೆ ಕೈಗೊಂಡಿದೆ. ಇದು ಸಹ ಈಡೇರಿಲ್ಲ. ಈಗ ಮಹಾರಾಷ್ಟ್ರ ಮಾದರಿಯಲ್ಲಿ ಸಿಂಗಟಾಲೂರು ಏತನೀರಾವರಿ ಯೋಜನೆ ಕೈಗೊಳ್ಳಲು ಮುಂದಾಗಿದೆಯಾದರೂ ಯಾರೂ ಟೆಂಡರ್‌ ಹಾಕಲು ಬರಲಿಲ್ಲ ಎಂದು ಕೈಚೆಲ್ಲಲಾಗಿದೆ.

ಸೋಮರಡ್ಡಿ ಅಳವಂಡಿ

ಕೊಪ್ಪಳ:

ನನೆಗುದಿಗೆ ಬಿದ್ದಿರುವ ಸಾಲು ಸಾಲು ಯೋಜನಗಳ ಕಾಯಕಲ್ಪಕ್ಕೆ ಪ್ರಸಕ್ತ ಬಜೆಟ್‌ನಲ್ಲಿಯಾದರೂ ಅನುದಾನ ಸಿಕ್ಕಿತೆ ಎನ್ನುವುದು ಜಿಲ್ಲೆಯ ಜನತೆಯ ಬಹು ದೊಡ್ಡ ನಿರೀಕ್ಷೆಯಾಗಿದೆ.

ಕಳೆದ ವರ್ಷ ಘೋಷಣೆಯಾಗಿದ್ದ ಯೋಜನೆಗಳ ಪೈಕಿ ಶೇ. 30ರಷ್ಟು ಯೋಜನೆಗಳಿಗೆ ಕಾರ್ಯಗತವಾಗುತ್ತಿವೆ. ಉಳಿದ ಶೇ. 70ರಷ್ಟು ಯೋಜನೆಗಳ ಜಾರಿಯ ಸುಳಿವು ಈ ವರೆಗೂ ಸಿಕ್ಕಿಲ್ಲ. ಕೊಪ್ಪಳ ಜಿಲ್ಲೆಗೆ ರಾಜ್ಯ ಬಜೆಟ್‌ನಲ್ಲಿ ಆದ್ಯತೆ ಸಿಗುವುದು ಅಷ್ಟಕಷ್ಟೇ ಎನ್ನುವಂತೆ ಆಗಿದೆ. ಘೋಷಣೆಯಾಗುವ ಯೋಜನೆಗಳು ಜಾರಿಯಾಗುವುದಿಲ್ಲ ಎನ್ನುವ ಆಕ್ರೋಶವನ್ನು ಜಿಲ್ಲೆಯ ವ್ಯಕ್ತಪಡಿಸುತ್ತಿದ್ದಾರೆ.

ಜತೆಗೆ ಹೊಸ ಯೋಜನೆಗಳೇನಾದರೂ ದಕ್ಕುವವೇ? ಸಾಲು ಸಾಲು ಕನಸುಗಳು ಭಗ್ನವಾಗಿದ್ದರೂ ಸಹ ಮತ್ತೆ ಕನಸುಗಳ ಕನವರಿಕೆಗೇನು ಕೊರತೆ ಇಲ್ಲ ಎನ್ನುವಂತಾಗಿದೆ.

ನೀರಾವರಿ ಯೋಜನೆ:

ಹಲವು ನೀರಾವರಿ ಯೋಜನೆಗಳು ಪೂರ್ಣವಾಗಿಲ್ಲ. 14 ವರ್ಷದ ಹಿಂದೆ ಜಾರಿಗೊಂಡು ಸಿಂಗಟಾಲೂರು ಏತನೀರಾವರಿ ಯೋಜನೆಯಿಂದ ಜಿಲ್ಲೆಗೆ ಹನಿ ನೀರು ಬಂದಿಲ್ಲ. ಈ ಯೋಜನೆಗೆ ಸರ್ಕಾರ ಕಾಲುವೆ ನಿರ್ಮಿಸದೆ ತುಂತುರು ನೀರಾವರಿ ಮಾಡುವ ಯೋಜನೆ ಕೈಗೊಂಡಿದೆ. ಇದು ಸಹ ಈಡೇರಿಲ್ಲ. ಈಗ ಮಹಾರಾಷ್ಟ್ರ ಮಾದರಿಯಲ್ಲಿ ಸಿಂಗಟಾಲೂರು ಏತನೀರಾವರಿ ಯೋಜನೆ ಕೈಗೊಳ್ಳಲು ಮುಂದಾಗಿದೆಯಾದರೂ ಯಾರೂ ಟೆಂಡರ್‌ ಹಾಕಲು ಬರಲಿಲ್ಲ ಎಂದು ಕೈಚೆಲ್ಲಲಾಗಿದೆ. ಪ್ರತಿ ವರ್ಷ 10ರಿಂದ 15 ಟಿಎಂಸಿ ನೀರು ಪೋಲಾಗುತ್ತದೆ. ಈ ವರ್ಷವಾದರೂ ಇರುವ ಯೋಜನೆಗೆ ಕಾಲುವೆ ನಿರ್ಮಿಸಲು ಬಜೆಟ್‌ನಲ್ಲಿ ಅನುದಾನ ಸಿಗಬಹುದೇ ಎಂಬುದು ಜನರ ನಿರೀಕ್ಷೆ. ಅಳವಂಡಿ, ಬೆಟಗೇರಿ ಏತನೀರಾವರಿ ಯೋಜನೆ 4 ವರ್ಷಗಳಿಂದ ನನೆಗುದಿಗೆ ಬಿದ್ದಿದೆ. ಹಿರೇಹಳ್ಳ ಜಲಾಶಯ ಎತ್ತರ ಹೆಚ್ಚಳ ಬಗ್ಗೆ ನಿರೀಕ್ಷೆ ಇದೆಯಾದರೂ ರಾಜ್ಯ ಸರ್ಕಾರ ಮನಸ್ಸು ಮಾಡುತ್ತಿಲ್ಲ. ನವಲಿ ಸಮಾನಾಂತರ ಜಲಾಶಯ ನಿರ್ಮಾಣಕ್ಕೆ ಈ ಹಿಂದಿನ ಸರ್ಕಾರ ಡಿಪಿಆರ್ ಮಾಡಲು ಘೋಷಿಸಿದೆಯಾದರೂ ಕಾರ್ಯಗತವಾಗಿಲ್ಲ. ತುಂಗಭದ್ರಾ ಜಲಾಶಯದಿಂದ ಮಳೆಗಾಲದಲ್ಲಿ ಹರಿದು ಹೋಗುವ ನೀರನ್ನು ಬಳಸಿಕೊಳ್ಳಲು ಈ ಯೋಜನೆ ಅವಶ್ಯಕವಾಗಿದೆ. ಇದರಿಂದ ಜಲಾಶಯದ ಅಚ್ಚುಕಟ್ಟು ಪ್ರದೇಶದಲ್ಲಿ ಬೇಸಿಗೆ ಬೆಳೆಗೆ ನೀರಿನ ಸಮಸ್ಯೆಯಾಗುವುದಿಲ್ಲ. 50 ವರ್ಷಗಳಿಂದ ತುಂಗಭದ್ರಾ ನದಿಗೆ ಸಮಾನಾಂತರ ಜಲಾಶಯ ನಿರ್ಮಿಸುವ ಯೋಜನೆಗಳು ಹಣಕಾಸಿನ ಕೊರತೆಯಿಂದ ನನೆಗುದಿಗೆ ಬಿದ್ದಿವೆ. ಕೊಪ್ಪಳ ಏತನೀರಾವರಿ ಯೋಜನೆ, ಕೆರೆ ತುಂಬಿಸುವ ಯೋಜನೆ ಸೇರಿದಂತೆ ಅನೇಕ ನೀರಾವರಿ ಯೋಜನೆಗಳು ಜಿಲ್ಲೆಯಲ್ಲಿದ್ದು, ಅವುಗಳನ್ನು ಪೂರ್ಣಗೊಳಿಸಲು ರಾಜ್ಯ ಸರ್ಕಾರ ದಿಟ್ಟ ನಿರ್ಧಾರ ಕೈಗೊಳ್ಳುತ್ತಿಲ್ಲ.

ಶೈಕ್ಷಣಿಕ ಸವಾಲು:

ಕೊಪ್ಪಳ ವಿಶ್ವವಿದ್ಯಾಲಯ ಮುಚ್ಚುವ ಕುರಿತು ರಾಜ್ಯ ಸರ್ಕಾರ ಚಿಂತಿಸಿರುವುದು ಜಿಲ್ಲೆಯ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಉನ್ನತ ಶಿಕ್ಷಣದ ಕೊರತೆ ಜಿಲ್ಲೆಯಲ್ಲಿ ಸಾಕಷ್ಟಿದ್ದು ಇದನ್ನು ನೀಗಿಸಲು ಬೇಕಾಗಿರುವಷ್ಟು ಕಾಲೇಜುಗಳಿಲ್ಲ. ಸ್ನಾತಕೋತ್ತರ ಶಿಕ್ಷಣ ಜಿಲ್ಲಾ ಕೇಂದ್ರದಲ್ಲಿಯೇ ಇಲ್ಲ. ಕೊಪ್ಪಳ ವಿವಿಯನ್ನು ಜಿಲ್ಲಾ ಕೇಂದ್ರದಲ್ಲಿ ಸ್ಥಾಪಿಸಬೇಕು ಎನ್ನುವ ಬೇಡಿಕೆಗೆ ಪೂರಕವಾಗಿ ನಿವೇಶನವಿಲ್ಲ. ಹೀಗಾಗಿ ಬಜೆಟ್‌ನಲ್ಲಿ ಇದಕ್ಕೂ ಪರಿಹಾರ ಸಿಗಬಹುದೇ ಎಂಬು ನಿರೀಕ್ಷೆ ಮೂಡಿದೆ. ಜಿಲ್ಲಾ ಕೇಂದ್ರದಲ್ಲಿರುವ ಸರ್ಕಾರಿ ಪದವಿ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ತಕ್ಕಷ್ಟು ಕೊಠಡಿಗಳಿಲ್ಲ. ನೂತನ ಪದವಿ ಕಾಲೇಜು ಸ್ಥಾಪಿಸಿದರೂ ಮೂಲಭೂತ ಸೌಕರ್ಯ ಒದಗಿಸಿಲ್ಲ. ಮಹಿಳಾ ಪದವಿ ಕಾಲೇಜು ಇದ್ದರೂ ಅದರದ್ದು ಅದೇ ವ್ಯಥೆ. ನಗರದಲ್ಲಿ ಮೆಡಿಕಲ್ ಕಾಲೇಜು ಇದ್ದರೂ ಅದಕ್ಕೆ ಪೂರಕವಾಗಿ 450 ಹಾಸಿಗೆ ಆಸ್ಪತ್ರೆ ಪೂರ್ಣಗೊಂಡಿಲ್ಲ. ಹೀಗಾಗಿ, ಜಿಲ್ಲಾಸ್ಪತ್ರೆಯಲ್ಲಿಯೇ ಮೆಡಿಕಲ್ ಕಾಲೇಜು ಆಸ್ಪತ್ರೆ ನಡೆಸಲಾಗುತ್ತದೆ.

ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ:

ಕೊಪ್ಪಳದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಅಗತ್ಯವಿದ್ದು ಪ್ರಸಕ್ತ ಬಜೆಟ್‌ನಲ್ಲಿ ಘೋಷಣೆಯಾಗುವ ಸಾಧ್ಯತೆ ದಟ್ಟವಾಗಿದೆ. ಜಿಲ್ಲೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸಿದ ವೇಳೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನೀಡುವುದಾಗಿ ಹೇಳಿದ್ದರು. ಹೀಗಾಗಿ, ನಿರೀಕ್ಷೆ ಹೆಚ್ಚಿದೆ. ಗ್ರಾಮೀಣ ಪ್ರದೇಶದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸಂಖ್ಯೆ ಹೆಚ್ಚಳದೊಂದಿಗೆ ಈಗಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ವೈದ್ಯರನ್ನು ನಿಯೋಜಿಸುವ ಅಗತ್ಯವಿದೆ.

ಪ್ರವಾಸೋದ್ಯಮ:

ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶ ಇದ್ದರೂ ಸರ್ಕಾರ ಈ ದಿಸೆಯಲ್ಲಿ ಅಭಿವೃದ್ಧಿ ಕೈಗೊಂಡಿಲ್ಲ. ಅಂಜನಾದ್ರಿಗೆ ಪ್ರತಿ ವರ್ಷವೂ 50 ಲಕ್ಷಕ್ಕೂ ಅಧಿಕ ಪ್ರವಾಸಿಗರು ಭೇಟಿ ನೀಡುತ್ತಾರೆ. ಅಲ್ಲಿ ಪ್ರವಾಸಿಗರಿಗೆ ಮೂಲಸೌಕರ್ಯವೇ ಇಲ್ಲ. ಈ ಕಾರಣಕ್ಕಾಗಿಯೇ ಕಳೆದ ಎರಡು ಬಜೆಟ್‌ನಲ್ಲಿ ₹ 100 ಕೋಟಿ ಘೋಷಿಸಿದರೂ ಶೇ. 10ರಷ್ಟು ಕಾರ್ಯಗತವಾಗಿಲ್ಲ. ಹುಲಿಗೆಮ್ಮಾ ದೇವಸ್ಥಾನಕ್ಕೂ ಪ್ರತಿ ವರ್ಷ 50 ಲಕ್ಷ ಭಕ್ತರು ಬರುತ್ತಿದ್ದರೂ ಮಾಸ್ಟರ್ ಪ್ಲಾನ್ ಅಡಿ ಅಭಿವೃದ್ಧಿಗೆ ಸರ್ಕಾರ ಅನುದಾನ ನೀಡುತ್ತಿಲ್ಲ. ಈ ಬಜೆಟ್ ನಲ್ಲಿಯಾದರೂ ಸಿಕ್ಕಿತೆ ಎನ್ನುವುದು ನಿರೀಕ್ಷೆಯಾಗಿದೆ. ಜಿಂಕೆ ವನ ಸ್ಥಾಪನೆ, ಕರಡಿ ಧಾಮ ಪ್ರಸ್ತಾವನೆ ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದು ಜಾರಿಯಾಗಿಲ್ಲ. ತೋಳ ಸಂರಕ್ಷಿತ ಪ್ರದೇಶವೆಂದು ಘೋಷಿಸಿದ್ದು ಬಯಲು ಸೀಮೆಯ ಪ್ರಾಣಿ ಸಂಕುಲ ಸಂರಕ್ಷಿಸಲು ವಿಶೇಷ ಯೋಜನೆಯನ್ನು ಸರ್ಕಾರ ಪ್ರಕಟಿಸಬೇಕಾಗಿದೆ.ಆಪತ್ತಿನಲ್ಲಿ ತುಂಗಭದ್ರಾ ಜಲಾಶಯ

ತುಂಗಭದ್ರಾ ಜಲಾಶಯ ಈಗ ಆಪತ್ತಿನಲ್ಲಿದೆ. ಜಲಾಶಯ ನಿರ್ಮಿಸಿ 75 ವರ್ಷವಾಗಿದೆ. ನಿರ್ಮಾಣ ಹಂತದಲ್ಲಿಯೇ ಮಾಡಿರುವ ಶಿಫಾರಸಿನಂತೆ 33 ಕ್ರಸ್ಟ್‌ಗೇಟ್ ಸಂಪೂರ್ಣ ಬದಲಾಯಿಸಬೇಕಾಗಿದೆ. 2024 ಆಗಸ್ಟ್‌ನಲ್ಲಿ ಕ್ರಸ್ಟ್‌ಗೇಟ್‌ವೊಂದು ಮುರಿದು ಸಂಕಷ್ಟ ತಂದೊಡ್ಡಿತ್ತು. ಅದಕ್ಕೂ ಇದೀಗ ತಾತ್ಕಾಲಿಕ ಗೇಟ್ ಅಳವಡಿಸವಾಗಿದೆ. ಅದಕ್ಕೆ ಪರ್ಯಾಯ ಕ್ರಸ್ಟ್‌ಗೇಟ್‌ ಅಳವಡಿಸುವುದು ಸೇರಿದಂತೆ ಎಲ್ಲ ಗೇಟ್ ಬದಲಾಯಿಸಲು ಸರ್ಕಾರ ಬಜೆಟ್‌ನಲ್ಲಿ ವಿಶೇಷ ಅನುದಾನ ನೀಡುವುದೇ ಎಂಬ ಕುತೂಹಲ ಮೂಡಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ