ಕಾಂಗ್ರೆಸ್ ಸರ್ಕಾರಕ್ಕೆ ಗ್ರಾಮ ಆಡಳಿತಾಧಿಕಾರಿಗಳ ಸಮಸ್ಯೆಗಳು ಕಾಣದಾಯಿತೇ : ರೇಷ್ಮಾ ಉದಯ ಶೆಟ್ಟಿ

KannadaprabhaNewsNetwork | Published : Feb 18, 2025 12:32 AM

ಸಾರಾಂಶ

ರಾಜ್ಯ ಸರ್ಕಾರಕ್ಕೆ ಕಳೆದ ಒಂದು ವಾರದಿಂದ ವಿವಿಧ ತುರ್ತು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಜ್ಯಾದ್ಯಂತ ಪ್ರತೀ ತಾಲೂಕು ಕೇಂದ್ರಗಳಲ್ಲಿ ನಡೆಯುತ್ತಿರುವ ಗ್ರಾಮ ಆಡಳಿತ ಅಧಿಕಾರಿಗಳ ಮುಷ್ಕರ ಕಾಣದಾಯಿತೇ ಎಂದು ಜಿ.ಪಂ. ಮಾಜಿ ಸದಸ್ಯೆ, ಬಿಜೆಪಿ ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರೇಷ್ಮಾ ಉದಯ ಶೆಟ್ಟಿ ಪ್ರಶ್ನಿಸಿದ್ದಾರೆ.

ಕನ್ನಡಪ್ರಭ ವಾರ್ತೆ, ಉಡುಪಿ

ಕೋಟ್ಯಾಂತರ ಆಸ್ತಿಕ ಹಿಂದೂಗಳ ಭಾವನೆಗಳಿಗೆ ಘಾಸಿಯಂನ್ನುಟುಮಾಡಿದ್ದ ಎಐಸಿಸಿ ಅಧ್ಯಕ್ಷ ಖರ್ಗೆ ಉವಾಚದ ನಡುವೆಯೇ, ರಾಜ್ಯದ ಕಾಂಗ್ರೆಸ್ ಸರ್ಕಾರ ಸದನದ ವಸತಿ ಸಮಿತಿ ಸದಸ್ಯರಿಗೆ, ಅದರಲ್ಲೂ ಗರಿಷ್ಠ ಸಂಖ್ಯೆಯ ಕಾಂಗ್ರೆಸ್ ಶಾಸಕರಿಗೆ ಕುಂಭಮೇಳ ಅಧ್ಯಯನ ಪ್ರವಾಸಕ್ಕೆ 50 ಲಕ್ಷ ರು.ಗೂ ಹೆಚ್ಚು ವ್ಯಯಿಸಲು ಮುಂದಾಗಿದೆ. ಆದರೆ ರಾಜ್ಯ ಸರ್ಕಾರಕ್ಕೆ ಕಳೆದ ಒಂದು ವಾರದಿಂದ ವಿವಿಧ ತುರ್ತು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಜ್ಯಾದ್ಯಂತ ಪ್ರತೀ ತಾಲೂಕು ಕೇಂದ್ರಗಳಲ್ಲಿ ನಡೆಯುತ್ತಿರುವ ಗ್ರಾಮ ಆಡಳಿತ ಅಧಿಕಾರಿಗಳ ಮುಷ್ಕರ ಕಾಣದಾಯಿತೇ ಎಂದು ಜಿ.ಪಂ. ಮಾಜಿ ಸದಸ್ಯೆ, ಬಿಜೆಪಿ ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರೇಷ್ಮಾ ಉದಯ ಶೆಟ್ಟಿ ಪ್ರಶ್ನಿಸಿದ್ದಾರೆ.

ಗ್ರಾಮ ಆಡಳಿತಾಧಿಕಾರಿಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರಿದ್ದು ಕಚೇರಿಯಲ್ಲಿ ಶೌಚಾಲಯದಂತಹ ಕನಿಷ್ಠ ಮುಲಭೂತ ವ್ಯವಸ್ಥೆಗಳನ್ನೂ ಒದಗಿಸಲು ಅಸಮರ್ಥವಾಗಿರುವ ರಾಜ್ಯ ಸರ್ಕಾರ ಕಾಂಗ್ರೆಸ್ ಶಾಸಕರ ಓಲೈಕೆಗಾಗಿ 42 ಮಂದಿ ಶಾಸಕರನ್ನು ನಿಗಮ ಮಂಡಳಿಗಳ ಅಧ್ಯಕ್ಷರನ್ನಾಗಿ ನೇಮಕ ಮಾಡಿ ಅವರಿಗೆ ಸಂಪುಟ ದರ್ಜೆಯ ಸ್ಥಾನಮಾನವನ್ನು ನೀಡಿದೆ.

ಹೆಚ್ಚಿನ ಗ್ರಾಮ ಆಡಳಿತ ಅಧಿಕಾರಿಗಳ ಕಛೇರಿಗಳು ಸ್ವಂತ ಕಟ್ಟಡವೂ ಇಲ್ಲದೆ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದೆ. ಹುಟ್ಟಿನಿಂದ ಸಾವಿನವರೆಗೆ, ಸರಕಾರದ ಯೋಜನೆಗಳನ್ನು ಜನತೆಗೆ ತಲುಪಿಸುವ ಜವಾಬ್ದಾರಿ ಹೊಂದಿರುವ ಗ್ರಾಮಾಡಳಿತ ಅಧಿಕಾರಿಗಳಿಗೆ ಸರಕಾರ ಇಂದಿನ ತಾಂತ್ರಿಕ ಯುಗದಲ್ಲೂ ಮೊಬೈಲ್ ವ್ಯವಸ್ಥೆಯನ್ನೂ ಮಾಡದಿರುವುದು ಶೋಚನೀಯವಾಗಿದೆ ಎಂದು ಅವರು ಹೇಳಿದ್ದಾರೆ.

ಸಮಸ್ಯೆಗಳ ಆಗರವಾಗಿರುವ ಗ್ರಾಮ ಆಡಳಿತ ಅಧಿಕಾರಿಗಳ ಕಚೇರಿಯಲ್ಲಿ ದೈನಂದಿನ ಕೆಲಸ ಕಾರ್ಯಗಳು ಓಬಿರಾಯನ ಕಾಲದ ಮಾದರಿಯಲ್ಲೇ ಸಾಗುತ್ತಿರುವುದು ವಿಪರ್ಯಾಸ. ದೈನಂದಿನ ಪ್ರಮುಖ ದಾಖಲೀಕರಣ ಕೇಂದ್ರವಾಗಿರುವ ಈ ಕಚೇರಿಯಲ್ಲಿ ಅಗತ್ಯವೆನಿಸಿರುವ ಕಂಪ್ಯೂಟರ್, ಪ್ರಿಂಟರ್ ಹಾಗೂ ಇಂಟರ್ನೆಟ್ ಸಂಪರ್ಕವೇ ಇಲ್ಲದಿರುವುದು ಆಶ್ಚರ್ಯಕರ. ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ವೃದ್ದಾಪ್ಯ ವೇತನ, ವಿಧವಾ ಮಾಸಾಶನ, ವಿಕಲಚೇತನ ಮಾಸಾಶನ, ರಾಷ್ಟ್ರೀಯ ಕುಟುಂಬ ಸಹಾಯಧನ, ಭಾಷಾ ಪ್ರಮಾಣ ಪತ್ರ, ರೈತರ ಪ್ರಮಾಣ ಪತ್ರ, ಕೃಷಿ ಕೂಲಿ ಕಾರ್ಮಿಕ ಪ್ರಮಾಣ ಪತ್ರ, ಕೃಷಿ ಬೆಳೆಹಾನಿ ವರದಿ, ಪ್ರಾಕೃತಿಕ ವಿಕೋಪ ವರದಿ, ಭೂಪರಿವರ್ತನಾ ವರದಿ, ಬೆಳೆ ಸಮೀಕ್ಷೆ, ಬೆಳೆ ಕಟಾವು, ಸರ್ಕಾರಿ ಜಮೀನು ಸಂರಕ್ಷಣೆ ಮತ್ತು ಅತಿಕ್ರಮಣ ತಡೆ, ಕೆರೆ ಒತ್ತುವರಿ ತಡೆ ಸಹಿತ ಹಲವಾರು ಪ್ರಮುಖ ಕೆಲಸಕಾರ್ಯಗಳ ರೂವಾರಿಗಳಾಗಿರುವ ಗ್ರಾಮ ಆಡಳಿತ ಅಧಿಕಾರಿಗಳ ಬೇಡಿಕೆಗಳಿಗೆ ಸರ್ಕಾರ ತಕ್ಷಣ ಸ್ಪಂದಿಸಿ ಕನಿಷ್ಠ ಮೂಲಭೂತ ಸೌಕರ್ಯಗಳನ್ನು ಆದ್ಯತೆ ಮೇರೆಗೆ ಒದಗಿಸುವ ಮೂಲಕ ಗ್ರಾಮಾಭಿವೃದ್ಧಿಯೊಂದಿಗೆ ಮಹಾತ್ಮ ಗಾಂಧೀಜಿಯವರ ರಾಮರಾಜ್ಯದ ಕನಸು ನನಸಾಗಿಸುವ ದಿಕ್ಕಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವುದು ಇಂದಿನ ಅಗತ್ಯತೆಯಾಗಿದೆ ಎಂದು ಅವರು ಹೇಳಿದ್ದಾರೆ.

ಇನ್ನಾದರೂ ರಾಜ್ಯಾದ್ಯಂತ ತಾಲೂಕು ಕಚೇರಿಗಳ ಮುಂಭಾಗದಲ್ಲಿ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಧರಣಿ ನಿರತ ಗ್ರಾಮ ಅಧಿಕಾರಿಗಳ ಮನವಿ ಪುರಸ್ಕರಿಸಿ ಅವರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಸರಕಾರ ಗಮನ ಹರಿಸಬೇಕು ಎಂದು ರೇಷ್ಮಾ ಉದಯ ಶೆಟ್ಟಿ ಪತ್ರಿಕಾ ಪ್ರಕಟಣೆಯ ಮೂಲಕ ಆಗ್ರಹಿಸಿದ್ದಾರೆ.

Share this article