ಕನ್ನಡಪ್ರಭವಾರ್ತೆ, ಹಾಸನ
ಮಧ್ಯಾಹ್ನ 12 ಗಂಟೆ ನಂತರ ಅರಸು ವಂಶಸ್ಥರು ಬನ್ನಿ ಕಡಿದ ಬಳಿಕ ಶಾಸ್ತ್ರೋಕ್ತವಾಗಿ ಹಾಸನಾಂಬ ದೇವಾಲಯದ ಗರ್ಭಗುಡಿಯ ಬಾಗಿಲು ತೆರೆಯಲಿದೆ. ಅ.23ರಂದು ದೇವಾಲಯದ ಬಾಗಿಲನ್ನು ಮುಚ್ಚಲಾಗುತ್ತದೆ. ಮೊದಲ ದಿನ ಸಾರ್ವಜನಿಕರಿಗೆ ದೇವಿ ದರ್ಶನಕ್ಕೆ ಅವಕಾಶ ಇರುವುದಿಲ್ಲ. ಬಾಗಿಲು ತೆರೆದ ನಂತರ ಗರ್ಭಗುಡಿಯ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಗುವುದು.
ಸಾರ್ವಜನಿಕರಿಗೆ ಅ.10 ರಂದು ಬೆಳಗ್ಗೆ 5 ಗಂಟೆಯಿಂದ ಅ.22 ರವರೆಗೆ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಅ.10 ರಿಂದ ಅ.17ರವರೆಗೆ ಬೆ.10 ರಿಂದ ಮ.1 ಗಂಟೆಯವರೆಗೆ ಮಾತ್ರ ಶಿಷ್ಟಾಚಾರ ದರ್ಶನಕ್ಕೆ ಅವಕಾಶವಿರುತ್ತದೆ. ಅ.18 ರಿಂದ ಅ.22 ರವರೆಗೆ ಯಾವುದೇ ರೀತಿಯ ಶಿಷ್ಟಾಚಾರ ದರ್ಶನಕ್ಕೆ ಅವಕಾಶ ಇರುವುದಿಲ್ಲ.ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಪರಮಪೂಜ್ಯ ಡಾ.ನಿರ್ಮಲಾನಂದನಾಥ ಸ್ವಾಮೀಜಿ, ತುಮಕೂರು ಸಿದ್ಧಗಂಗಾ ಮಠದ ಸಿದ್ಧಲಿಂಗ ಮಹಾಸ್ವಾಮೀಜಿಯವರು ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಸಿಎಂ ಸಿದ್ಧರಾಮಯ್ಯ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಡಿಸಿಎಂ ಡಿ.ಕೆ.ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ, ಸಾರಿಗೆ ಸಚಿವ ರಾಮಲಿಂಗರೆಡ್ಡಿ ಮತ್ತಿತರ ಗಣ್ಯರು ಪಾಲ್ಗೊಳ್ಳಲಿದ್ದಾರೆ.
ವಿಶೇಷ ದರ್ಶನಕ್ಕೆ ಬರುವಂತಹ ಭಕ್ತರಿಗೆ ₹300 ಹಾಗೂ ₹1,000ದ ಪಾಸ್ ವ್ಯವಸ್ಥೆ ಮಾಡಲಾಗಿದೆ. ಇದೇ ಮೊದಲ ಬಾರಿಗೆ ವಿಐಪಿ, ವಿವಿಐಪಿ ಪಾಸ್‌ಗಳನ್ನು ರದ್ದು ಮಾಡಿದ್ದು, ಗೋಲ್ಡ್ ಪಾಸ್ ಜಾರಿಗೆ ತರಲಾಗಿದೆ.