ಕನ್ನಡಪ್ರಭ ವಾರ್ತೆ ಹಾಸನ
ಶ್ರೀ ಹಾಸನಾಂಬ ದೇವಾಲಯದ ಬಾಗಿಲನ್ನು ಬುಧವಾರ ಮಧ್ಯಾಹ್ನ 12.23ಕ್ಕೆ ಸಹಕಾರ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಎನ್.ರಾಜಣ್ಣ, ಶಾಸಕರಾದ ಸ್ವರೂಪ್ ಪ್ರಕಾಶ್, ಜಿಲ್ಲಾಧಿಕಾರಿ ಸತ್ಯಭಾಮ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜಿತಾ, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಕ ಅಧಿಕಾರಿ ಬಿ.ಆರ್.ಪೂರ್ಣಿಮಾ, ಅಪರ ಜಿಲ್ಲಾಧಿಕಾರಿ ಕೆ.ಟಿ.ಶಾಂತಲಾ, ಉಪ ವಿಭಾಗಾಧಿಕಾರಿ ಹಾಗೂ ಆಡಳಿತಾಧಿಕಾರಿ ಮಾರುತಿ ಅವರ ಸಮ್ಮುಖದಲ್ಲಿ ಬಾಗಿಲು ಮುಚ್ಚಲಾಯಿತು.ಪ್ರಧಾನ ಅರ್ಚಕ ಮಾಗರಾಜ್ ಗರ್ಭಗುಡಿಯ ಬಾಗಿಲಿಗೆ ಬೀಗ ಹಾಕಿದರು. ಮುಂದಿನ ವರ್ಷ 24-10-2024 ರಿಂದ 3-11-2024ರವರೆಗೆ ಹಾಸನಾಂಬೆ ದೇವಿ ಗರ್ಭಗುಡಿ ಬಾಗಿಲು ತೆರೆಯಲಿದೆ ಎಂದು ಮೂಲಗಳು ತಿಳಿಸಿವೆ. ನಂತರ ಉಸ್ತುವಾರಿ ಸಚಿವರಾದ ಕೆ.ಎನ್.ರಾಜಣ್ಣ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ಎಲ್ಲರ ಸಹಕಾರದಿಂದ ಅತ್ಯಂತ ಯಶಸ್ವಿಯಾಗಿ ಹಾಸನಾಂಬ ದೇವಿ ಜಾತ್ರಾ ಮಹೋತ್ಸವ ಸಂಪನ್ನಗೊಂಡಿದೆ. ನ.೨ರಂದು ಹಾಸನಾಂಬ ದೇವಾಲಯದ ಬಾಗಿಲು ತೆರೆಯಲಾಗಿತ್ತು. ಸಾರ್ವಜನಿಕರಿಗೆ ನ.೩ರಿಂದ ದೇವಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಒಟ್ಟು ೧೪,೨೦,೦೦೦ ಜನರು ಈ ಬಾರಿ ದೇವಿ ದರ್ಶನ ಮಾಡಿದ್ದಾರೆ. ಕಳೆದ ವರ್ಷ ೬,೦೦,೦೦೦ ಜನರು ದೇವಿ ದರ್ಶನ ಮಾಡಿದ್ದರು ಎಂದು ತಿಳಿಸಿದರು. ಮುಂದಿನ ವರ್ಷ ಅಕ್ಟೋಬರ್ ೨೪ರಂದು ಹಾಸನಾಂಬ ದೇವಾಲಯದ ಬಾಗಿಲನ್ನು ತೆರೆಯಲಾಗುವುದು ಎಂದು ಸಚಿವರು ತಿಳಿಸಿದರು. ಸರ್ವಕಾಲಿಕ ದಾಖಲೆಯ ಹಣ ಸಂಗ್ರಹ: ಈ ಬಾರಿ ರು. ೧೦೦೦. ೩೦೦ ರು. ಟಿಕೆಟ್ ಹಾಗೂ ಲಾಡು ಪ್ರಸಾದ ಮಾರಾಟದಿಂದ ಒಟ್ಟು ೬,೧೫,೧೭.೧೬೦ ರು.ಗಳು ಸಂಗ್ರಹವಾಗಿದೆ. ದೇವರ ಹುಂಡಿಯನ್ನು ನ.೧೬ರಂದು ಎಣಿಕೆ ಮಾಡಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು. ಕಳೆದ ವರ್ಷದ ಒಟ್ಟು ಆದಾಯ ಹುಂಡಿ ಸೇರಿದಂತೆ ಎಲ್ಲಾ ಮೂಲಗಳಿಂದ ೩,೬೩,೨೩,೫೪೫ ರು. ಗಳು ಎಂದು ತಿಳಿಸಿದರು.