ಕನ್ನಡಪ್ರಭ ವಾರ್ತೆ ಉಡುಪಿಇಲ್ಲಿನ ನೇಜಾರು ಗ್ರಾಮದಲ್ಲಿ ಭಾನುವಾರ ನಡೆದ ತಾಯಿ ಮತ್ತು ಮೂವರ ಮಕ್ಕಳ ಕೊಲೆಯ ಆರೋಪಿಯನ್ನು ಉಡುಪಿ ಪೊಲೀಸರು ಬೆಳಗಾವಿಯಲ್ಲಿ ಬಂಧಿಸಿದ್ದಾರೆ. ಆರೋಪಿಯನ್ನು ಮಹರಾಷ್ಟ್ರದ ಸಾಂಗ್ಲಿಯ ನಿವಾಸಿ ಪ್ರವೀಣ್ ಅರುಣ್ ಚೌಗುಲೆ (39) ಎಂದು ಗುರುತಿಸಲಾಗಿದೆ. ಈತನನ್ನು ಬೆಳಗಾವಿಯ ಕುಡುಚಿಯಲ್ಲಿ ಬಂಧಿಸಿ ಉಡುಪಿಗೆ ಕರೆ ತರಲಾಗಿದೆ.
ಈತ ಕೊಲೆಯಾದ ಹಸೀನಾರ ಹಿರಿಯ ಮಗಳು ಅಯ್ನಾಝ್ (21)ಳನ್ನು ಕೊಲೆ ಮಾಡುವ ಉದ್ದೇಶದಿಂದ ಬಂದಿದ್ದು, ಕೊಲೆಯ ಸಾಕ್ಷಗಳಾದ ಇತರ ಮೂವರನ್ನು ಬರ್ಬರವಾಗಿ ಇರಿದು ಕೊಲೆ ಮಾಡಿದ್ದಾನೆ. ವಿವಾಹಿತನಾಗಿದ್ದ ಆರೋಪಿ, ಅಝ್ನಾಝ್ ಳನ್ನು ಕೊಲೆ ಮಾಡುವುದಕ್ಕೆ ಕಾರಣ ಏನು ಎಂಬುದು ಇನ್ನೂ ಖಚಿತವಾಗಿಲ್ಲ, ಆದರೆ ಆಕೆ ಮತ್ತು ಆರೋಪಿ ನಡುವಿನ ಸಂಬಂಧ - ವ್ಯವಹಾರಗಳ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.ಮೃತ ಅಝ್ನಾಝ್ ಮಂಗಳೂರು ವಿಮಾನ ನಿಲ್ದಾಣದ ಮೂಲಕ ಏರ್ ಇಂಡಿಯಾದದಲ್ಲಿ ಗಗನಸಖಿಯಾಗಿ ಕೆಲಸ ಮಾಡುತ್ತಿದ್ದಳು. ಆರೋಪಿ ಪ್ರವೀಣ್ ಕೂಡಾ ಏರ್ ಇಂಡಿಯಾದಲ್ಲಿ ಕ್ಯಾಬಿನೆಟ್ ಕ್ರ್ಯೂ ಆಗಿ ಕೆಲಸ ಮಾಡುತ್ತಿದ್ದು ಪರಸ್ವರ ಪರಿಚಿತರಾಗಿದ್ದರು.ಭಾನುವಾರ ಬೆಳಗ್ಗೆ 8.45ಕ್ಕೆ ಏಕಾಏಕಿ ನೇಜಾರಿನಲ್ಲಿರುವ ಆಕೆಯ ಮನೆಗೆ ಬಂದು ಬಾಗಿಲು ತಟ್ಟಿದ್ದಾನೆ. ಬಾಗಿಲು ತೆರೆದ ತಾಯಿ ಹಸೀನಾರೊಂದಿಗೆ ಜಗಳವಾಡಿದ್ದಾನೆ. ನಂತರ ಅಝ್ನಾಝ್ ಅವರಿಗೆ ತಾನು ತಂದಿದ್ದ ಚೂರಿಯಿಂದ ಯದ್ವಾತದ್ವಾ ಇರಿದಿದ್ದಾನೆ. ತಡೆಯಲು ಬಂದ ತಾಯಿ ಹಸೀನಾ (45) ಮತ್ತು ಅಕ್ಕ ಅಫ್ನಾನ್ (23) ಅವರನ್ನೂ ಕೂಡ ಚೂರಿಯಿಂದ ಇರಿದು ಕೊಲೆ ಮಾಡಿದ್ದಾರೆ. ಆಗ ಹೊರಗೆ ಬಂದ ಅಜ್ಜಿ ಹಾಜೀರಾ ಅವರ ಮೇಲೂ ಹಲ್ಲೆ ಮಾಡಿದ್ದಾನೆ, ಅವರು ತಕ್ಷಣ ಒಳಗೆ ಹೋಗಿದ್ದರಿಂದ ಗಾಯಗೊಂಡು ಬದುಕುಳಿದಿದ್ದಾರೆ. ಅಷ್ಟರಲ್ಲಿ ಹೊರಗೆ ಆಡಲು ಹೋಗಿದ್ದ ಅಸೀಮ್ (14) ಮನೆಗೆ ಬಂದ, ಆತನಿಗೂ ಚೂರಿಯಿಂದ ಇರಿದು ಆರೋಪಿ ಪರಾರಿಯಾಗಿದ್ದಾನೆ. ಈ ಎಲ್ಲಾ ವಿಷಯಗಳನ್ನು ಸ್ವತಃ ಆತನೇ ವಿಚಾರಣೆಯಲ್ಲಿ ಒಪ್ಪಿಕೊಂಡಿದ್ದಾನೆ.
2 -3 ಕಾರಣಗಳಿರುವಂತಿದೆ:ಆದರೆ, ಕೊಲೆಗೆ ಕಾರಣವನ್ನು ಸ್ವಷ್ಟವಾಗಿ ಹೇಳಿಲ್ಲ, 2 -3 ಕಾರಣಗಳಿರುವಂತಿದೆ, ವಿವರವಾಗಿ ತನಿಖೆ ಆಗಬೇಕಾಗಿರುವುದರಿಂದ ಆತನನ್ನು ಪೊಲೀಸ್ ಕಸ್ಟಡಿಗೆ ಕೇಳಲಾಗುತ್ತದೆ ಎಂದು ಎಸ್ಪಿ ಡಾ.ಅರುಣ್ ತಿಳಿಸಿದ್ದಾರೆ.
ತನಿಖೆಗೆ ಸಂಬಂಧಿಸಿದಂತೆ ಕೊಲೆಯಾದ ಹಸೀನಾ ಅವರ ಪತಿ ನೂರ್ ಮಹಮ್ಮದ್ ಮತ್ತವರ ಸಂಬಂಧಿಕರು ಸಂಪೂರ್ಣ ಸಹಕಾರ ನೀಡಿದ್ದಾರೆ. ಅಗತ್ಯ ದಾಖಲೆಗಳನ್ನು ಮತ್ತು ಪತ್ನಿ ಮತ್ತು ಮಕ್ಕಳ ಮೊಬೈಲ್ ಗಳನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ಎಸ್ಪಿ ಹೇಳಿದ್ದಾರೆ.ಆರೋಪಿಯನ್ನು ಸಂಜೆ ಜಿಲ್ಲಾ ಒಂದನೇ ಹೆಚ್ಚುವರಿ ನ್ಯಾಯಾಯಲಯ ನ್ಯಾಯಾಧೀಶ ಶ್ಯಾಮ್ ಪ್ರಕಾಶ್ ಮುಂದೆ ಹಾಜರುಪಡಿಸಿದ ಪೊಲೀಸರು, ಹೆಚ್ಚಿನ ವಿಚಾರಣೆಗಾಗಿ 14 ದಿನದ ಪೊಲೀಸ್ ಕಸ್ಟಡಿ ಪಡೆದುಕೊಂಡಿದ್ದಾರೆ
ಪೂನಾದಲ್ಲಿ ಕೆಲವು ತಿಂಗಳು ಕಾಲ ಪೊಲೀಸ್ ಇಲಾಖೆಯಲ್ಲಿಯೂ ಕೆಲಸ ಮಾಡಿದ್ದ ಪ್ರವೀಣ್ ಕೊಲೆಗೆ ಸಾಕಷ್ಟು ಪೂರ್ವತಯಾರಿಗಳನ್ನು ಮಾಡಿಕೊಂಡು ಬಂದಿದ್ದ. ಕೊಲೆ ಮಾಡುವ ಉದ್ದೇಶದಿಂದಲೇ ತನ್ನ ಜೊತೆಯಲ್ಲಿ ಚೂರಿಯನ್ನೂ ತಂದಿದ್ದ.ಮುಂಜಾನೆ ಮಂಗಳೂರಿನಿಂದ ಇಲ್ಲಿನ ಸಂತೆಕಟ್ಟೆ ಎಂಬಲ್ಲಿಗೆ ಬಂದಿದ್ದ ಪ್ರವೀಣ್ ಮುಖಕ್ಕೆ ಬಿಳಿ ಮಾಸ್ಕ್ ಧರಿಸಿದ್ದ. ಆಟೋದಲ್ಲಿ ತೃಪ್ತಿನಗರಕ್ಕೆ ತೆರಳಿ, ಅಮಾನುಷವಾಗಿ 4 ಕೊಲೆಗಳನ್ನು ಮಾಡಿ ಹೊರಗೆ ಬಂದು, ದಾರಿ ಮಧ್ಯೆ ಬೈಕು ಸವಾರನನ್ನು ಅಡ್ಡ ಹಾಕಿ ಕೇವಲ 20 ನಿಮಿಷಗಳಲ್ಲಿ ಮತ್ತೆ ಸಂತೆಕಟ್ಟೆ ವಾಪಾಸು ಬಂದಿದ್ದ. ಅಲ್ಲಿಂದ ಮತ್ತೆ ಆಟೋದಲ್ಲಿ ಉಡುಪಿ ಕಡೆಗೆ ತೆರಳಿದ್ದಾನೆ. ತನ್ನ ಜಾಡು ಪತ್ತೆಯಾಗಬಾರದು ಎಂದು ಮೊಬೈಲ್ ಸ್ವಿಚ್ ಆಫ್ ಮಾಡಿದ್ದ. ಉಡುಪಿಯಿಂದ ನೇರವಾಗಿ ಬೆಳಗಾವಿಗೆ ಹೋಗಿದ್ದು, ಅಲ್ಲಿ ಕುಡುಚಿಯಲ್ಲಿರುವ ಸಂಬಂಧಿಕರ ಮನೆಗೆ ಹೋಗಿ ಸಂಭಾವಿತನಂತೆ ಅಲ್ಲಿ ಉಳಿದುಕೊಂಡಿದ್ದ.
ಮೊಬೈಲ್ ಆನ್ ಮಾಡಿ ಸಿಕ್ಕಿಬಿದ್ದ:ಅಝ್ನಾಝ್ ಳ ಕೊಲೆಗೆಂದು ಬಂದಿದ್ದ ಪ್ರವೀಣ್, ಕೃತ್ಯಕ್ಕೆ ಪ್ರತ್ಯಕ್ಷದರ್ಶಿಗಳನ್ನೆಲ್ಲಾ ಕೊಲೆ ಮಾಡಿ ಸಾಕ್ಷ್ಯ ನಾಶ ಮಾಡಿದ್ದ. ತನ್ನ ಜಾಡು ಪತ್ತೆಯಾಗದಂತೆ ಮೊಬೈಲ್ ಸ್ವಿಚ್ ಆಫ್ ಮಾಡಿದ್ದ.
ಕೊಲೆಯಾದ ಅಝ್ನಾಝ್ ಅವರ ಮೊಬೈಲಿನಲ್ಲಿದ್ದವರ ಕಾಂಟಾಕ್ಟ್ ಗಳ ಜಾಡು ಅರಸುತ್ತಿದ್ದ ಉಡುಪಿ ಪೊಲೀಸರಿಗೆ ಪ್ರವೀಣ್ ಚೌಗುಲೆಯ ಮೊಬೈಲ್ ನಿರಂತರವಾಗಿ ಸ್ವಿಚ್ ಆಫ್ ಬರುತಿತ್ತು, ಇದರಿಂದ ಸಂಶಯಗೊಂಡ ಪೊಲೀಸರು ಆತನ ಮೊಬೈಲ್ ಮೇಲೆ ಸತತ ನಿಗಾ ಇರಿಸಿದ್ದರು. 2 ದಿನಗಳ ನಂತರ ಆತ ಒಮ್ಮೆ ಮೊಬೈಲ್ ಸ್ವಿಚ್ ಆನ್ ಮಾಡುತ್ತಿದ್ದಂತೆ ಆತ ಕುಡುಚಿಯಲ್ಲಿರುವುದು ಪತ್ತೆಯಾಗಿದೆ. ತಕ್ಷಣ ಬೆಳಗಾವಿಯ ಪೊಲೀಸರಿಗೆ ಮಾಹಿತಿ ನೀಡಿ ಆತನಿದ್ದ ಮನೆಗೆ ರಾತ್ರಿಯಿಡೀ ಕಾವಲು ಹಾಕಿಸಿದರು. ನಂತರ ಮಂಗಳವಾರ ಬೆಳಗಾವಿಗೆ ತೆರಳಿ ಆರೋಪಿಯನ್ನು ವಶಕ್ಕೆ ತೆಗೆದುಕೊಂಡು, ಬುಧವಾರ ಬೆಳಗ್ಗೆ ಉಡುಪಿಗೆ ಕರೆ ತಂದು ಬಾಯಿ ಬಿಡಿಸಿದ್ದಾರೆ.