ಯುವಜನರು ಸಹಕಾರಿ ವಲಯ ಸೇವೆಗೆ ಬರಬೇಕು

KannadaprabhaNewsNetwork | Updated : Nov 16 2023, 01:18 AM IST

ಸಾರಾಂಶ

ಸರ್ಕಾರ ಮಾಡದ ಸಾಕಷ್ಟು ಕೆಲಸಗಳನ್ನು ಸಹಕಾರಿ ವಲಯ ಮಾಡುತ್ತದೆ. ಸಹಕಾರ ಕ್ಷೇತ್ರ ಎಂದರೆ ರೈತರಿಗೆ ಜೀವಕೋಶ ಇದ್ದಂತೆ. ಇದನ್ನು ಮತ್ತಷ್ಟು ಬಲಪಡಿಸಬೇಕು. ಸಹಕಾರ ಕ್ಷೇತ್ರದ ಅನೇಕ ಸಮಸ್ಯೆಗಳನ್ನು ನಾವೆಲ್ಲರೂ ಸೇರಿ ಬಗೆಹರಿಸೋಣ. ರೈತರು ಸಹಕಾರ ಕ್ಷೇತ್ರವನ್ನೇ ನಂಬಿಕೊಂಡಿದ್ದಾರೆ. ರೈತರನ್ನು ಮೇಲೆತ್ತುವ ಕೆಲಸ ಸಹಕಾರ ಸಂಸ್ಥೆಗಳಿಂದ ಆಗಬೇಕು

ಕನ್ನಡಪ್ರಭ ವಾರ್ತೆ ಶಿವಮೊಗ್ಗ ವಿಶ್ವದಲ್ಲಿಯೇ ದೇಶವು ಆರ್ಥಿಕ ಸದೃಢತೆ ಕಾಣುವ 5 ಟ್ರಿಲಿಯನ್ ಡಾಲರ್ ಆರ್ಥಿಕ ಅಭಿವೃದ್ಧಿ ಕನಸು ಕಂಡಿರುವ ದೇಶದ ಪ್ರಧಾನಿ, ಕೇಂದ್ರ ಸಹಕಾರಿ ಸಚಿವರ ಆಶಯದ ಈ ಗುರಿ ತಲುಪಿಸುವ ಪ್ರಯತ್ನವನ್ನು ಸಹಕಾರಿ ವಲಯ ಕೂಡ ಮಾಡಬೇಕು ಎಂದು ಸಹಕಾರ ಸಚಿವ ಕೆ.ಎನ್‌. ರಾಜಣ್ಣ ಹೇಳಿದರು.

ನಗರದ ಕುವೆಂಪು ರಂಗಮಂದಿರದಲ್ಲಿ ರಾಜ್ಯ ಸಹಕಾರ ಮಂಡಳ, ಅಪೆಕ್ಸ್ ಬ್ಯಾಂಕ್, ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಜಿಲ್ಲೆಗಳ ಸಹಕಾರ ಬ್ಯಾಂಕ್ ಮತ್ತು ಇತರ ಸಹಕಾರ ಸಂಘಗಳ ಆಶ್ರಯದಲ್ಲಿ ಆಯೋಜಿಸಿದ್ದ 70ನೇ ಅಖಿಲ ಭಾರತ ಸಹಕಾರ ಸಪ್ತಾಹದ ರಾಜ್ಯಮಟ್ಟದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಈ ಬಾರಿಯ ಸಪ್ತಾಹದ ಮುಖ್ಯ ಉದ್ದೇಶವೇ 5 ಟ್ರಿಲಿಯನ್ ಡಾಲರ್ ಆರ್ಥಿಕತೆ ಸಾಧನೆಯಲ್ಲಿ ಸಹಕಾರ ಸಂಸ್ಥೆಗಳ ಪಾತ್ರ ಮತ್ತು ಸುಸ್ಥಿರ ಅಭಿವೃದ್ಧಿ ಗುರಿಯೇ ಆಗಿದೆ. ಈ ಮೂಲಕ ರಾಜ್ಯವೂ ಸೇರಿದಂತೆ ಇಡೀ ದೇಶದಲ್ಲಿ ಸಹಕಾರ ಕ್ರಾಂತಿ ಆಗಲಿದೆ ಎಂದರು.

ಸಹಕಾರ ಕ್ಷೇತ್ರ ಜನರ ಆಂದೋಲನವಾಗಬೇಕು. ಧ್ವನಿ ಇಲ್ಲದವರಿಗೆ ಧ್ವನಿಯಾಗಬೇಕು. ಈ ಹಿನ್ನೆಲೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದದವರಿಗೆ ಅವರ ಷೇರು ಹಣವನ್ನು ಸರ್ಕಾರವೇ ತುಂಬುತ್ತದೆ. ಇದರ ಲಾಭ ಪಡೆದುಕೊಳ್ಳಬೇಕು ಎಂದರು.

ಸಹಕಾರಿಗಳಲ್ಲಿ ಸಮಾಜಮುಖಿ ಭಾವನೆ ಇರಬೇಕು. ಮುಖ್ಯವಾಗಿ ಯುವಕರು ಸಹಕಾರಿ ಕ್ಷೇತ್ರದಲ್ಲಿ ಭಾಗಿ ಆಗಬೇಕು. ಸಧ್ಯ ಅವರು ಸಹಕಾರಿ ಕ್ಷೇತ್ರದಿಂದ ದೂರ ಇದ್ದಾರೆ. ಅವರನ್ನು ಕರೆ ತರುವ ಮತ್ತು ಅವರಲ್ಲಿ ಸಹಕಾರಿ ಕುರಿತು ಮಾಹಿತಿ ನೀಡುವ ಕೆಲಸ ನಡೆಯಬೇಕು ಎಂದರು.

ಸಹಕಾರಿ ಆಂದೋಲನ ಸೀಮಿತ ವಲಯಕ್ಕೆ ಉಳಿದುಕೊಳ್ಳದೇ, ಎಲ್ಲರನ್ನೂ ಒಳಗೊಳ್ಳಬೇಕು. ಕೃಷಿಗೆ ಸಂಬಂಧಿಸಿದಂತೆ ಹೈನುಗಾರಿಕೆಯಂತಹ ಉಪ ಕಸುಬುಗಳು ಅಭಿವೃದ್ಧಿಗೆ ಪ್ರೇರಕ ಆಗುತ್ತವೆ. ಈ ನಿಟ್ಟಿನಲ್ಲಿ ಕೃಷಿಕರು ಸಹಕಾರ ಕ್ಷೇತ್ರಕ್ಕೆ ಬರಬೇಕು ಎಂದು ಹೇಳಿದರು.

ಸಹಕಾರ ಸಂಸ್ಥೆಗಳಿಂದ ಪಡೆದ ಸಾಲ ಸರ್ಕಾರದ ಹಣವಲ್ಲ, ಅದು ಜನರ ಠೇವಣಿ ಹಣ. ಇನ್ನು ಜನ ಅರ್ಥ ಮಾಡಿಕೊಂಡು ಮರುಪಾವತಿಯಲ್ಲಿ ವಿಳಂಬ ಮಾಡಬಾರದು ಎಂದರು.

ಸಹಕಾರ ಕ್ಷೇತ್ರ ರೈತರ ಜೀವಕೋಶ:

ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಾತನಾಡಿ, ಸರ್ಕಾರ ಮಾಡದ ಸಾಕಷ್ಟು ಕೆಲಸಗಳನ್ನು ಸಹಕಾರಿ ವಲಯ ಮಾಡುತ್ತದೆ. ಸಹಕಾರ ಕ್ಷೇತ್ರ ಎಂದರೆ ರೈತರಿಗೆ ಜೀವಕೋಶ ಇದ್ದಂತೆ. ಇದನ್ನು ಮತ್ತಷ್ಟು ಬಲಪಡಿಸಬೇಕು. ಸಹಕಾರ ಕ್ಷೇತ್ರದ ಅನೇಕ ಸಮಸ್ಯೆಗಳನ್ನು ನಾವೆಲ್ಲರೂ ಸೇರಿ ಬಗೆಹರಿಸೋಣ. ರೈತರು ಸಹಕಾರ ಕ್ಷೇತ್ರವನ್ನೇ ನಂಬಿಕೊಂಡಿದ್ದಾರೆ. ರೈತರನ್ನು ಮೇಲೆತ್ತುವ ಕೆಲಸ ಸಹಕಾರ ಸಂಸ್ಥೆಗಳಿಂದ ಆಗಬೇಕು ಎಂದರು.

ಕರ್ನಾಟಕ ಸಹಕಾರ ಮಹಾಮಂಡಳ ಅಧ್ಯಕ್ಷ ಹಾಗೂ ಶಾಸಕ ಜಿ.ಟಿ. ದೇವೇಗೌಡ ಮಾತನಾಡಿ, ಭಾರತದ ಆರ್ಥಿಕತೆಗೆ ಸಹಕಾರ ಕ್ಷೇತ್ರವೇ ಹೆಬ್ಬಾಗಿಲಾಗಿದೆ. ಪಕ್ಷಾತೀತ, ಜಾತ್ಯತೀತವಾಗಿ ಸಹಕಾರಿ ಸಂಸ್ಥೆಗಳು ಬೆಳೆಯಬೇಕು ಎಂದು ಆಶಿಸಿದರು.

ಶಾಸಕ ಬಿ.ಕೆ. ಸಂಗಮೇಶ್ ಮಾತನಾಡಿದರು. ಸಾಂಖ್ಯಿಕ ಸಚಿವ ಡಿ.ಸುಧಾಕರ್ ಸಹಕಾರ ಪತ್ರಿಕೆ ವಿಶೇಷ ಸಂಚಿಕೆ ಬಿಡುಗಡೆ ಮಾಡಿ ಮಾತನಾಡಿದರು. ಶಾಸಕ ಎಸ್.ಎನ್. ಚನ್ನಬಸಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಪ್ರಮುಖರಾದ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ರತ್ನಾಕರ್, ನಿರ್ದೇಶಕ ಗಂಗಣ್ಣ, ಆರ್.ರಾಮರೆಡ್ಡಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್. ಸುಂದರೇಶ್, ಮುಖಂಡರಾದ ಎಂ.ಶ್ರೀಕಾಂತ್, ಎಸ್.ಕೆ. ಮರಿಯಪ್ಪ, ಜಿಲ್ಲಾಧಿಕಾರಿ ಡಾ.ಸೆಲ್ವಮಣಿ, ಜಿಲ್ಲಾ ಪೊಲೀಸ್ ಅಧೀಕ್ಷಕ ಮಿಥುನ್‌ಕುಮಾರ್, ಸಿಇಒ ಸ್ನೇಹಲ್ ಸುಧಾಕರ್ ಲೋಖಂಡೆ, ಸಹಕಾರ ಇಲಾಖೆ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ ಪ್ರಸಾದ್, ಸಹಕಾರ ಸಂಘಗಳ ನಿಬಂಧಕ ಡಾ. ಕೆ.ರಾಜೇಂದ್ರ, ಸಹಕಾರ ಸಂಘಗಳ ನೋಡಲ್ ಅಧಿಕಾರಿ ಆಶಾ, ಮಹಾಮಂಡಳದ ವ್ಯವಸ್ಥಾಪಕ ನಿರ್ದೇಶಕ ನವೀನ್, ಸತೀಶ್, ಅಪೆಕ್ಸ್ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಸಿ.ಎನ್. ದೇವರಾಜ್, ಅಶ್ವತ್ಥನಾರಾಯಣ, ಎಸ್.ಜಿ. ಶೇಖರ್, ಜಿ.ವಾಸುದೇವ್ ಮೊದಲಾದವರಿದ್ದರು.

ಶಿಮುಲ್ ಅಧ್ಯಕ್ಷ ಶ್ರೀಪಾದ ರಾವ್ ಸ್ವಾಗತಿಸಿದರು. ಇದೇ ಸಂದರ್ಭದಲ್ಲಿ ಸಹಕಾರಿಗಳನ್ನು ಸನ್ಮಾನಿಸಲಾಯಿತು.

- - - ಬಾಕ್ಸ್-1

ದಾವಣಗೆರೆ, ಚಿತ್ರದುರ್ಗಕ್ಕೆ ಪ್ರತ್ಯೇಕ ಒಕ್ಕೂಟ ಬೇಕು: ಆರ್‌ಎಂಎಂ

ಶಿವಮೊಗ್ಗ: ಸಹಕಾರಿ ವಲಯ ಆತ್ಮಾವಲೋಕನ ಮಾಡಿಕೊಳ್ಳುವ ಕಾಲ ಇದಾಗಿದೆ. ಸಹಕಾರಿ ವಲಯ ಸುಖವಾಗಿಯೇನೂ ಇಲ್ಲ. ಅದರದೇ ಆದ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಇವುಗಳಿಗೆ ಪರಿಹಾರ ಒದಗಿಸಬೇಕಿದೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷರೂ, ಸಮಾವೇಶದ ಆಯೋಜಕರೂ ಆದ ಆರ್.ಎಂ. ಮಂಜುನಾಥಗೌಡ ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಅವರು ಇಂತಹ ಸಮಸ್ಯೆಗಳ ನಡುವೆಯೂ ಅನೇಕ ಸಾಧನೆಗಳನ್ನು ಸಹಕಾರಿ ವಲಯ ಮಾಡಿದೆ. ಸಹಕಾರ ಕ್ಷೇತ್ರದ ಅಭಿವೃದ್ಧಿಗೆ ಪೂರಕ ಕೆಲಸ ಮಾಡಿದ್ದೇವೆ. ಆದರೆ, ಇದುವರೆಗೂ ಡಿಸಿಸಿ ಬ್ಯಾಂಕ್ ಗೆ ನಬಾರ್ಡ್‌ನಿಂದ ಬರಬೇಕಿದ್ದ ₹4 ಸಾವಿರ ಕೋಟಿ ಪುನರ್‌ ಧನ ಹಣ ನೀಡಿಲ್ಲ. ಶಿಮುಲ್‌ನಲ್ಲಿಯೂ ಸಮಸ್ಯೆ ಇದೆ. ಶಿಮುಲ್‌ನಲ್ಲಿ ನಿತ್ಯ 7 ಲಕ್ಷ ಲೀ. ಹಾಲು ಉತ್ಪಾದನೆಯಾಗುತ್ತಿದೆ. ಆದರೆ, ನಿರೀಕ್ಷಿತ ಮಟ್ಟದಲ್ಲಿ ಹಾಲು ಮಾರಾಟ ಆಗುತ್ತಿಲ್ಲ. ಸರ್ಕಾರಿ ಹಾಸ್ಟೆಲ್‌ಗಳಿಗೆ ಶಿಮುಲ್‌ ಹಾಲು ವಿತರಿಸಲು ಕ್ರಮ ಕೈಗೊಳ್ಳಬೇಕು. ಶಿಮುಲ್ ಅನ್ನು ವಿಭಜಿಸಿ ದಾವಣಗೆರೆ, ಚಿತ್ರದುರ್ಗಕ್ಕೆ ಪ್ರತ್ಯೇಕ ಹಾಲು ಒಕ್ಕೂಟ ರಚಿಸಬೇಕೆಂದು ಮನವಿ ಮಾಡಿದರು.

ಸ್ವಸಹಾಯ ಸಂಘಗಳ ಗುಂಪುಗಳಿಗೆ ನೀಡಿದ ಸಾಲದ ಮೇಲಿನ ಬಡ್ಡಿ ₹75 ಕೋಟಿ ಬಾಕಿ ಇದೆ. ಕೇಂದ್ರದಿಂದ ಹಣ ಬಾರದೇ, ಕೇವಲ ರಾಜ್ಯ ಸರ್ಕಾರದ ಕಾರ್ಯಕ್ರಮವೇ ಆಗಿ ಉಳಿಯಬಾರದು ಎಂದು ಅಭಿಪ್ರಾಯಪಟ್ಟರು.

ಎಪಿಎಂಸಿ, ಮುಜರಾಯಿ ಇಲಾಖೆಯ ಹಣವನ್ನು ಸಹಕಾರಿ ಬ್ಯಾಂಕ್‌ಗಳಲ್ಲಿ ಇಡುವಂತೆ ಆದೇಶ ಮಾಡಬೇಕು. ಎಪಿಎಂಸಿ ಸಹಕಾರಿ ವಲಯದ ಒಂದು ಭಾಗ ಎಂಬುದನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು. ರಾಷ್ಟ್ರೀಯ ಬ್ಯಾಂಕ್‌ ಗಳಿಗಿಂತ ಸಹಕಾರಿ ಬ್ಯಾಂಕ್‌ ಶೇ. 1/2 ರಷ್ಟು ಹೆಚ್ಚು ಬಡ್ಡಿ ಸಹ ನೀಡುತ್ತದೆ ಎಂದರು.

- - -

ಬಾಕ್ಸ್-2 ನಬಾರ್ಡ್‌ನಿಂದ ₹50 ಸಾವಿರ ಕೋಟಿ ಬಾಕಿ ಬಡ್ಡಿ ಹಣ ಬಿಡುಗಡೆ: ರಾಜಣ್ಣ

ಶಿವಮೊಗ್ಗ: ಬಡ್ಡಿ ವಿನಾಯಿತಿಯನ್ನು ತುಂಬಿಕೊಡುವ ಸಂಬಂಧ ನಬಾರ್ಡ್ ಕಳೆದ ವಾರ ದೇಶ ಮಟ್ಟದಲ್ಲಿ ₹50 ಸಾವಿರ ಕೋಟಿಗಳ ಮೊದಲ ಕಂತನ್ನು ಬಿಡುಗಡೆ ಮಾಡಿದೆ. ಇದರಿಂದ ಸಹಕಾರಿ ವಲಯ ಆರ್ಥಿಕವಾಗಿ ಚೇತರಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಸಹಕಾರ ಸಚಿವ ರಾಜಣ್ಣ ಹೇಳಿದರು.

ಎರಡ್ಮೂರು ದಿನಗಳಲ್ಲಿ ಎಲ್ಲ ಬ್ಯಾಂಕುಗಳಿಗೂ ಈ ಹಣ ತಲುಪುವ ಸಾಧ್ಯತೆ ಇದೆ. ಮುಜರಾಯಿ ಇಲಾಖೆ ಮತ್ತು ಎಪಿಎಂಸಿ ಯ ಹಣದಲ್ಲಿ ಶೇ.50ರಷ್ಟು ಹಣವನ್ನು ಡಿಸಿಸಿ ಬ್ಯಾಂಕ್ ಗಳಲ್ಲಿ ತೊಡಗಿಸಿಕೊಳ್ಳುವ ಆದೇಶ ಇದೆ. ಈ ಬಗ್ಗೆ ಇನ್ನಷ್ಟು ಅಧ್ಯಯನ ನಡೆಸಲು ಕೇರಳಕ್ಕೆ ಅಧಿಕಾರಿಗಳ ತಂಡ ಕಳುಹಿಸಿದ್ದು, ಶೀಘ್ರದಲ್ಲಿ ಈ ತಂಡ ವರದಿ ನೀಡಲಿದೆ. ಈ ವರದಿ ಆಧರಿಸಿ ಡಿಸಿಸಿ ಬ್ಯಾಂಕ್‌ ಆರ್ಥಿಕ ಸದೃಢತೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷರ ಪ್ರಾಸ್ತಾವಿಕ ಮಾತುಗಳಲ್ಲಿನ ಬೇಡಿಕೆಗೆ ಸಚಿವರು ಉತ್ತರಿಸಿ ಮಾತನಾಡಿದರು.

- - - -ಫೋಟೋ:

ಶಿವಮೊಗ್ಗದಲ್ಲಿ ನಡೆದ 70ನೇ ಅಖಿಲ ಭಾರತ ಸಹಕಾರಿ ಸಪ್ತಾಹ ರಾಜ್ಯಮಟ್ಟದ ಕಾರ್ಯಕ್ರಮವನ್ನು ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಉದ್ಘಾಟಿಸಿದರು.

Share this article