ಮುಂದಿನ ವರ್ಷ ವ್ಯವಸ್ಥಿತವಾಗಿ ಹಾಸನಾಂಬೆ ಜಾತ್ರೆ

KannadaprabhaNewsNetwork | Published : Nov 1, 2024 12:07 AM

ಸಾರಾಂಶ

ಮುಂದಿನ ವರ್ಷದಲ್ಲಿ ಹಾಸನಾಂಬ ಜಾತ್ರೆಯನ್ನು ಇನ್ನೂ ವ್ಯವಸ್ಥಿತವಾಗಿ ಅಚ್ಚುಕಟ್ಟಾಗಿ ಮಾಡಲು ಸರ್ಕಾರ ಕ್ರಮಕೈಗೊಳ್ಳಲಿದೆ ಎಂದು ಕರ್ನಾಟಕ ರಾಜ್ಯ ಗೃಹ ಸಚಿವರಾದ ಡಾ.ಜಿ. ಪರಮೇಶ್ವರ್ ಹೇಳಿದರು. ಜನರು ಆತ್ಮವಿಶ್ವಾಸ, ನಂಬಿಕೆಯಿಂದ ಹಿಂದೂ ಸಂಪ್ರದಾಯದಂತೆ ಭಕ್ತಿ ಇಟ್ಟುಕೊಂಡಿದ್ದಾರೆ. ರಾಜ್ಯ ಅಲ್ಲದೆ ಪಕ್ಕದ ರಾಜ್ಯದಿಂದಲೂ ಸಹಸ್ರಾರು ಭಕ್ತರು ಆಗಮಿಸಿ ಹಾಸನಾಂಬ ದರ್ಶನ ಪಡೆಯುತ್ತಿದ್ದಾರೆ ಎಂದರು. ವಿಶೇಷವಾಗಿ ಮಹಿಳೆಯರು ಮಕ್ಕಳೊಂದಿಗೆ ಸಾಲಿನಲ್ಲಿ ನಿಂತು ದರ್ಶನ ಪಡೆಯುವುದು ನೋಡಿಕೊಂಡು ಬಂದೆ. ಈ ಬಾರಿ ಮೂರು ಪಟ್ಟು ಜನ ಬಂದಿದ್ದಾರೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ ಎಂದರು.

ಕನ್ನಡಪ್ರಭ ವಾರ್ತೆ ಹಾಸನ

ಮುಂದಿನ ವರ್ಷದಲ್ಲಿ ಹಾಸನಾಂಬ ಜಾತ್ರೆಯನ್ನು ಇನ್ನೂ ವ್ಯವಸ್ಥಿತವಾಗಿ ಅಚ್ಚುಕಟ್ಟಾಗಿ ಮಾಡಲು ಸರ್ಕಾರ ಕ್ರಮಕೈಗೊಳ್ಳಲಿದೆ ಎಂದು ಕರ್ನಾಟಕ ರಾಜ್ಯ ಗೃಹ ಸಚಿವರಾದ ಡಾ.ಜಿ. ಪರಮೇಶ್ವರ್ ಹೇಳಿದರು.

ಅವರು ಗುರುವಾರ ಕುಟುಂಬ ಸಮೇತರಾಗಿ ಆಗಮಿಸಿ ಹಾಸನಾಂಬ ದೇವಿ ದರ್ಶನ ಪಡೆದ ನಂತರ ಮಾತನಾಡಿದ ಅವರು, ಐತಿಹಾಸಿಕ ಹಾಸನಾಂಬ ದೇವಿ ದರ್ಶನ ಭಾಗ್ಯ ನನಗೆ ಶ್ರೀಮತಿಗೆ ದೊರಕಿರುವುದು ಪುಣ್ಯ ಎಂದು ಭಾವಿಸುತ್ತೇನೆ. ೪-೫ ವರ್ಷದ ಹಿಂದೆ ಬಂದು ದೇವಿಯ ದರ್ಶನ ಪಡೆದಿದ್ದೆ ಎಂದರು. ನಿಗೂಢವಾದ ವಿಚಾರದಲ್ಲಿ ನಾವೆಲ್ಲರೂ ತಾಯಿಯನ್ನ ಭಕ್ತಿಯಿಂದ ಪೂಜೆ ಮಾಡುತ್ತೇವೆ. ಮೂರು ವರ್ಷದ ಹಿಂದೆ ಇದ್ದ ಭಕ್ತರ ಸಂಖ್ಯೆ ಇಂದು ಮೂರು ಪಟ್ಟು ಹೆಚ್ಚಿದೆ. ಪ್ರತಿ ದಿನ ಲಕ್ಷಾಂತರ ಮಂದಿ ದೇವಿ ದರ್ಶನ ಪಡೆಯುತ್ತಿದ್ದಾರೆ. ಜನರು ಆತ್ಮವಿಶ್ವಾಸ, ನಂಬಿಕೆಯಿಂದ ಹಿಂದೂ ಸಂಪ್ರದಾಯದಂತೆ ಭಕ್ತಿ ಇಟ್ಟುಕೊಂಡಿದ್ದಾರೆ. ರಾಜ್ಯ ಅಲ್ಲದೆ ಪಕ್ಕದ ರಾಜ್ಯದಿಂದಲೂ ಸಹಸ್ರಾರು ಭಕ್ತರು ಆಗಮಿಸಿ ಹಾಸನಾಂಬ ದರ್ಶನ ಪಡೆಯುತ್ತಿದ್ದಾರೆ ಎಂದರು. ವಿಶೇಷವಾಗಿ ಮಹಿಳೆಯರು ಮಕ್ಕಳೊಂದಿಗೆ ಸಾಲಿನಲ್ಲಿ ನಿಂತು ದರ್ಶನ ಪಡೆಯುವುದು ನೋಡಿಕೊಂಡು ಬಂದೆ. ಈ ಬಾರಿ ಮೂರು ಪಟ್ಟು ಜನ ಬಂದಿದ್ದಾರೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ ಎಂದರು.

ಜಾತ್ರಾ ಮಹೋತ್ಸವವನ್ನು ಅಚ್ಚುಕಟ್ಟಾಗಿ ಆಯೋಜನೆ ಮಾಡಿರುವುದಕ್ಕೆ ಜಿಲ್ಲಾಡಳಿತಕ್ಕೆ ಅಭಿನಂದನೆ ಸಲ್ಲಿಸಿದರು. ಸಣ್ಣಪುಟ್ಟ ಘಟನೆ ನಡೆಯೋದು ಸಹಜ, ನಿಭಾಯಿಸಬೇಕಾಗುತ್ತದೆ ಎಂದ ಅವರು, ಮೂರು ದಿನಗಳು ದರ್ಶನಕ್ಕೆ ಬಾಕಿ ಇದ್ದು, ಸೂಕ್ತ ಬಂದೂ ಬಸ್ತ್ ಮಾಡಲು ಐಜಿ ಅವರಿಗೆ ಸೂಚನೆ ಕೊಟ್ಟಿದ್ದೇವೆ. ಬಂದು ಹೋಗುವ ಭಕ್ತರಿಗೆ ನಿರಾಸೆ ಆಗದಂತೆ ಅಗತ್ಯ ಸೌಲಭ್ಯ ಒದಗಿಸಲು ಅಧಿಕಾರಿಗಳು ಎಚ್ಚರಿಕೆವಹಿಸಿ ಜನರಿಗೆ ತೊಂದರೆ ಆಗದಂತೆ ಸೂಕ್ತ ಸೌಲಭ್ಯ ಒದಗಿಸುವಂತೆ ನಿರ್ದೇಶನ ನೀಡಿರುವುದಾಗಿ ಹೇಳಿದರು. ಮುಂದಿನ ದಿನಗಳಲ್ಲಿ ಹಾಸನಾಂಬ ಜಾತ್ರೆಯನ್ನು ಇನ್ನೂ ವ್ಯವಸ್ಥಿತವಾಗಿ ಅಚ್ಚಕಟ್ಟಾಗಿ ಮಾಡಲು ಸರ್ಕಾರ ಕ್ರಮಕೈಗೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ನಾಡಿನ ಜನ ಸಮುದಾಯಕ್ಕೆ ಶಾಂತಿ ನೀಡುವಂತೆ ದೇವಿಯಲ್ಲಿ ಪ್ರಾರ್ಥನೆ ಮಾಡಿದ್ದೇನೆ ಎಂದು ಹೇಳಿದರು. ಇದೇ ವೇಳೆ ಲೋಕಸಭಾ ಸದಸ್ಯರಾದ ಶ್ರೇಯಸ್ ಪಟೇಲ್, ಐಜಿ ಬೋರಲಿಂಗಯ್ಯ, ಜಿಲ್ಲಾಧಿಕಾರಿ ಸತ್ಯಭಾಮ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜೀತ ಮತ್ತಿತರರು ಹಾಜರಿದ್ದರು.

Share this article