ಕುಷ್ಟಗಿ: ಕಾಡಾ ನಿಗಮದ ಅಧ್ಯಕ್ಷ ಹಸನಸಾಬ್ ದೋಟಿಹಾಳ ಕುಷ್ಟಗಿ ತಾಲೂಕಿನಲ್ಲಿರುವ ಶಾದಿ ಮಹಲ್‌ಗಳಿಗೆ ಅನುದಾನ ತರುವ ವಿಚಾರವಾಗಿ ಸಣ್ಣತನದ ರಾಜಕಾರಣ ಮಾಡಬಾರದು, ಇದು ಅವರ ಘನತೆ, ವ್ಯಕ್ತಿತ್ವಕ್ಕೆ ಶೋಭೆ ಅಲ್ಲ ಎಂದು ಶಾಸಕ ದೊಡ್ಡನಗೌಡ ಪಾಟೀಲ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ಥಳೀಯ ಇಸ್ಲಾಂ ಸಮುದಾಯದವರ ಒತ್ತಾಯದ ಮೇರೆಗೆ ನಾನು ಸಚಿವ ಜಮೀರ್ ಅಹ್ಮದ ಅವರನ್ನು ಭೇಟಿ ಮಾಡಿ ಕುಷ್ಟಗಿ ಹಾಗೂ ದೋಟಿಹಾಳ ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ಶಾದಿ ಮಹಲ್‌ಗಳಿಗೆ ಅನುದಾನ ಮಂಜೂರು ಮಾಡುವಂತೆ ಮನವಿ ಸಲ್ಲಿಸಲಾಗಿತ್ತು. ಈ ಹಿನ್ನೆಲೆ ಕುಷ್ಟಗಿ ಹಾಗೂ ದೋಟಿಹಾಳ ಗ್ರಾಮದ ಶಾದಿ ಮಹಲ್‌ಗೆ ತಲಾ ₹25 ಲಕ್ಷ ಮಂಜೂರು ಮಾಡಿ ಆದೇಶ ಮಾಡಿದ್ದಾರೆ. ಆದರೆ ಮಾಜಿ ಶಾಸಕ ಹಸನಸಾಬ್ ದೋಟಿಹಾಳ ಈ ಎರಡು ಕೆಲಸ ನಾನು ಮಾಡಿಸಿದ್ದೇನೆ ಎಂದು ಹೇಳಿ ಆದೇಶ ಪ್ರತಿಯನ್ನು ತಿದ್ದುಪಡಿ ಮಾಡಿಸಿಕೊಂಡು ಬಂದು ಇಲ್ಲಿನ ಜನರಲ್ಲಿ ಗೊಂದಲ ಉಂಟು ಮಾಡುತ್ತಿರುವುದು ಸರಿಯಲ್ಲ ಎಂದರು.ಬಿಜೆಪಿ ಮಂಡಲ ಅಧ್ಯಕ್ಷ ಮಹಾಂತೇಶ ಬಾದಾಮಿ ಮಾತನಾಡಿ, ನಮ್ಮ ಪಕ್ಷದ ಬೆಂಬಲಿಗರು ಅನುದಾನವನ್ನು ಶಾಸಕ ದೊಡ್ಡನಗೌಡ ಪಾಟೀಲ ಹಾಕಿಸಿಕೊಂಡು ಬಂದಿದ್ದಾರೆ ಎಂದು ಹೇಳಿದರೆ ಅವರಿಗೆ ಬೆದರಿಕೆ ಹಾಕಿಸಿರುವುದು ಖಂಡನೀಯ. ಇಂತಹ ಚಿಲ್ಲರೆ ರಾಜಕಾರಣ ಮಾಡಬಾರದು, ತಾವು ರಾಜ್ಯಮಟ್ಟದ ರಾಜಕಾರಣಿ, ಸ್ಥಳೀಯ ಬೆಂಬಲಿಗರ ಮೇಲೆ ಬೆದರಿಕೆ ಹಾಕಿಸುವುದು, ದೌರ್ಜನ್ಯ ಮಾಡಿಸುವದನ್ನು ಕೈ ಬಿಡಬೇಕು ಎಂದರು.
ಲಾಡಸಾಬ್ ಕೊಳ್ಳಿ ಮಾತನಾಡಿ, ಕುಷ್ಟಗಿ ತಾಲೂಕಿನ ಶಾದಿಮಹಲ್‌ಗಳಿಗೆ ಅನುದಾನ ನೀಡುವಂತೆ ಶಾಸಕ ದೊಡ್ಡನಗೌಡ ಪಾಟೀಲ ಅವರಿಗೆ ಸುಮಾರು ಒಂದು ವರ್ಷಗಳ ಕಾಲ ಒತ್ತಡ ಹಾಕುತ್ತಾ ಬಂದಿದ್ದು, ಅದು ಈಗ ನೆರವೇರಿದೆ. ಆದರೆ ಕಾಡಾ ನಿಗಮ ಅಧ್ಯಕ್ಷ ಹಸನಸಾಬ್ ದೋಟಿಹಾಳ ಅವರು ಸತ್ಯ ಹೇಳಲು ಮುಂದಾದರೆ ಮಕ್ಕಳು ಹಾಗೂ ಬೆಂಬಲಿಗರಿಂದ ಬೆದರಿಕೆ ಹಾಕಿಸುವ ಕಾರ್ಯ ಮಾಡುತ್ತಿದ್ದಾರೆ. ಸುಮಾರು 25 ವರ್ಷಗಳಿಂದ ದೋಟಿಹಾಳ ಗ್ರಾಮದಲ್ಲಿ ಶಾದಿ ಮಹಲ್ ನಿರ್ಮಾಣದ ಕೆಲಸ ನಡೆದಿದೆ. ಹಲವು ಅನುದಾನ ಬಂದಿದೆ, ಈ ಕುರಿತು ಯಾವ ಲೆಕ್ಕ ಕೊಟ್ಟಿಲ್ಲ ಕೂಡಲೇ ಲೆಕ್ಕ ಕೊಡಬೇಕು ಎಂದು ಒತ್ತಾಯಿಸಿದರು.ಈ ಸಂದರ್ಭದಲ್ಲಿ ಅಶೋಕ ಬಳೂಟಗಿ, ಬಸವರಾಜ ಹಳ್ಳೂರು, ನಬಿಸಾಬ ಇಲಕಲ್, ಅಮಿನುದ್ದೀನ್ ಮುಲ್ಲಾ ಸೇರಿದಂತೆ ಅನೇಕರು ಇದ್ದರು.