ಮೈಸೂರಿನ ಕಾಂಗ್ರೆಸ್ ಜನಾಂದೋಲನಕ್ಕೆ ಜಿಲ್ಲೆಯಿಂದ ಅಪಾರ ಕಾಂಗ್ರೆಸ್‌ ಕಾರ್ಯಕರ್ತರು

KannadaprabhaNewsNetwork | Published : Aug 9, 2024 12:30 AM

ಸಾರಾಂಶ

ಮುಡಾ ಪ್ರಕರಣ ಖಂಡಿಸಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷದವರು ನಡೆಸುತ್ತಿರುವ ಪಾದಯಾತ್ರೆಗೆ ನಮ್ಮ ವಿರೋಧವಿದೆ ಹಾಗೂ ಆಗಸ್ಟ್ ೯ರಂದು ಮೈಸೂರಿನಲ್ಲಿ ಇದಕ್ಕೆ ಪರ್ಯಾಯವಾಗಿ ನಡೆಸುತ್ತಿರುವ ಕಾಂಗ್ರೆಸ್ ಪಕ್ಷದ ಜನಾಂದೋಲನ ಕಾರ್ಯಕ್ರಮಕ್ಕೆ ಹಾಸನ ಜಿಲ್ಲೆಯಿಂದಲೂ ೫ ರಿಂದ ೧೦ ಸಾವಿರ ಜನರು ಭಾಗವಹಿಸುವುದಾಗಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಡಿ. ತಾರಾ ಚಂದನ್ ತಿಳಿಸಿದರು.

ಕನ್ನಡಪ್ರಭ ವಾರ್ತೆ ಹಾಸನ

ಮುಡಾ ಪ್ರಕರಣ ಖಂಡಿಸಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷದವರು ನಡೆಸುತ್ತಿರುವ ಪಾದಯಾತ್ರೆಗೆ ನಮ್ಮ ವಿರೋಧವಿದೆ ಹಾಗೂ ಆಗಸ್ಟ್ ೯ರಂದು ಮೈಸೂರಿನಲ್ಲಿ ಇದಕ್ಕೆ ಪರ್ಯಾಯವಾಗಿ ನಡೆಸುತ್ತಿರುವ ಕಾಂಗ್ರೆಸ್ ಪಕ್ಷದ ಜನಾಂದೋಲನ ಕಾರ್ಯಕ್ರಮಕ್ಕೆ ಹಾಸನ ಜಿಲ್ಲೆಯಿಂದಲೂ ೫ ರಿಂದ ೧೦ ಸಾವಿರ ಜನರು ಭಾಗವಹಿಸುವುದಾಗಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಡಿ. ತಾರಾ ಚಂದನ್ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಮಾತನಾಡಿ, ಯಾವುದೇ ರೀತಿಯಲ್ಲಿ ಸಂಬಂಧವಿಲ್ಲದೆ ಇರುವಂತಹ ಮುಡಾ ಪ್ರಕರಣದಲ್ಲಿ ಜನಪ್ರಿಯ ಮುಖ್ಯಮಂತ್ರಿಗಳನ್ನು ಸಿಲುಕಿಸಿ ಅವರ ಸ್ಥಾನಮಾನಕ್ಕೆ ಧಕ್ಕೆ, ತೇಜೋವಧೆ ಮಾಡುತ್ತಿರುವಂತಹ ಮಿತ್ರ ಪಕ್ಷಗಳ ನಡೆ ಸರಿಯಿಲ್ಲ. ಅವರ ಪಾದಯಾತ್ರೆ ಅರ್ಥಹೀನವಾಗಿರುತ್ತದೆ. ಅಬ್ರಹಾಂ ಎಂಬ ವ್ಯಕ್ತಿಯ ದೂರು ಸತ್ಯಕ್ಕೆ ದೂರವಾದುದಾಗಿದ್ದು, ಈ ದೂರಿನ ಅನ್ವಯ ರಾಜ್ಯಪಾಲರು ಜನಪ್ರಿಯ ಮುಖ್ಯಮಂತ್ರಿಗಳಾದಂತಹ ಸಿದ್ದರಾಮಯ್ಯರವರಿಗೆ ವಿಚಾರಣೆಗಾಗಿ ಶೋಕಾಸ್ ನೋಟೀಸು ಕೊಟ್ಟಿರುವುದು ಸರಿಯಲ್ಲ. ಇದೇ ಅಬ್ರಹಾಂಗೆ ಸುಪ್ರೀಂ ಕೋರ್ಟು ಈ ಹಿಂದೆ ಒಂದು ಪ್ರಕರಣದಲ್ಲಿ ೨೫ ಲಕ್ಷ ರು. ದಂಡವನ್ನು ಹಾಕಿರುತ್ತದೆ. ಹೀಗಿದ್ದಲ್ಲಿ ಈತನ ಒಂದು ದೂರನ್ನು ಬಿಜೆಪಿಯವರು ಅಸ್ತ್ರವಾಗಿ ಬಳಸಿಕೊಂಡು ತಮ್ಮ ದುರುದ್ದೇಶದಿಂದ ರಾಜ್ಯಪಾಲರ ಸ್ಥಾನಮಾನಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿರುವುದರ ವಿರುದ್ಧ ನಮ್ಮ ಜನಾಂದೋಲನ ಪ್ರತಿಭಟನೆ ಇರುತ್ತದೆ. ಈಗಾಗಲೇ ಈ ಹಿಂದೆ ಬಹಳಷ್ಟು ಪ್ರಕರಣಗಳು ಲೋಕಾಯುಕ್ತದಲ್ಲಿ ವಿಚಾರಣೆಗೆ ಪೆಂಡಿಂಗ್ ಇದ್ದರೂ ಸಹ ಅವುಗಳನ್ನು ವಿಚಾರಣೆಗೆ ಒಳಪಡಿಸದೆ ಸಿದ್ದರಾಮಯ್ಯರವರನ್ನೇ ಗುರಿಯಾಗಿಟ್ಟುಕೊಂಡು ಪಾದಯಾತ್ರೆ ಮಾಡುತ್ತಿರುವುದು ಹಾಸ್ಯಾಸ್ಪದವಾಗಿದೆ ಎಂದರು. ಭ್ರಷ್ಟ ಜನಾರ್ಧನ ರೆಡ್ಡಿ, ಶಶಿಕಲಾ ಜೊಲ್ಲೆ, ಮುರುಗೇಶ್ ನಿರಾಣಿ ವಿರುದ್ಧ ಲೋಕಾಯುಕ್ತದಲ್ಲಿ ದೂರು ನೀಡಿ ವರ್ಷಗಳೇ ಕಳೆದಿದ್ದರೂ ಸಹ ರಾಜ್ಯಪಾಲರು ಅವರಿಗೆ ಇದುವರೆಗೆ ಶೋಕಾಸ್ ನೋಟೀಸ್‌ ಕೊಟ್ಟಿಲ್ಲ ಏಕೆ, ಇಲಾಖೆ ವಿಚಾರಣೆಗೆ ಒಳಪಡಿಸಿಲ್ಲ ಏಕೆ, ಅವರಿಗೆಲ್ಲಾ ವಿಚಾರಣೆಗೆ ಒಳಪಡಿಸಿಲ್ಲ ಏಕೆ, ಇದು ಗಂಭೀರ ಆರೋಪ ಅಲ್ಲವೇ, ಈಗ ಸಿದ್ದರಾಮಯ್ಯ ಅವರ ವಿರುದ್ಧ ಈ ಅಬ್ರಹಾಂ ಎಂಬ ತಲೆಮಾಸಿದ ವ್ಯಕ್ತಿ ಮುಡಾ ಸಂಬಂಧಪಟ್ಟಂತೆ ದೂರು ಕೊಟ್ಟ ಒಂದು ಗಂಟೆಯೊಳಗೆ ನೋಟೀಸು ಕೊಟ್ಟಿರುತ್ತಾರೆಂದರೆ ಇದು ಪ್ರಜಾಪ್ರಭುತ್ವಕ್ಕೆ ಮಾಡಿದ ಅಪಚಾರವಾಗಿದೆ. ಇದು ಸುವ್ಯವಸ್ಥಿತವಾಗಿ ಜನಸಾಮಾನ್ಯರಿಗಾಗಿ ಇರುವ ಜನಪ್ರಿಯ ಕಾಂಗ್ರೆಸ್ ಸರ್ಕಾರವನ್ನು ಉರುಳಿಸಲು ಬಿಜೆಪಿ ಹಾಗೂ ಅವರ ಮಿತ್ರ ಪಕ್ಷ ಜೆಡಿಎಸ್ ರವರ ಕುತಂತ್ರವಾಗಿದೆಯಲ್ಲವೇ, ಇದಕ್ಕೆ ರಾಜ್ಯಪಾಲರು ಸ್ಪಂದಿಸುತ್ತಿರುವುದು ಎಷ್ಟರ ಮಟ್ಟಿಗೆ ಸರಿ, ಈ ತಕ್ಷಣವೇ ನೋಟೀಸನ್ನು ಹಿಂಪಡೆಯಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದರು.

ನಾಳೆ ಮೈಸೂರಿನಲ್ಲಿ ಭ್ರಷ್ಟ ಬಿಜೆಪಿ ಮತ್ತು ಜೆಡಿಎಸ್ ಯಾತ್ರೆಯ ವಿರುದ್ಧವಾಗಿ ಬೃಹತ್ ಜನಾಂದೋಲನ ಕಾರ್ಯಕ್ರಮವನ್ನು ಕಾಂಗ್ರೆಸ್ ಪಕ್ಷವು ಹಮ್ಮಿಕೊಂಡಿರುತ್ತದೆ. ಈ ಜನಾಂದೋಲನಾ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಎಲ್ಲರೂ ಭಾಗವಹಿಸಬೇಕಾಗಿ ಮನವಿ ಮಾಡಿದರು. ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಉಪಾಧ್ಯಕ್ಷೆ ರಹಿಮಾ, ಬ್ಲಾಕ್ ಅಧ್ಯಕ್ಷೆ ವಸಂತ ಕುಮಾರಿ, ಜಿಲ್ಲಾ ಸೋಶಿಯಲ್ ಮೀಡಿಯದ ಜಮೀಲಾ ಇತರರು ಉಪಸ್ಥಿತರಿದ್ದರು.

Share this article