ಹಾಸನ: ಒಂದೇ ದಿನ ಹೃದಯಾಘಾತಕ್ಕೆ ಐವರು ಬಲಿ

KannadaprabhaNewsNetwork |  
Published : Jul 01, 2025, 01:48 AM ISTUpdated : Jul 01, 2025, 06:58 AM IST
Hassan Heart Attack

ಸಾರಾಂಶ

ಜಿಲ್ಲೆಯಲ್ಲಿ ಹೃದಯಾಘಾತ ಮರಣ ಮೃದಂಗ ಮುಂದುವರೆದಿದೆ. ಸೋಮವಾರ ಒಂದೇ ದಿನ ಹಾಸನ ಜಿಲ್ಲೆಯ ವಿವಿಧ ತಾಲೂಕಿನಲ್ಲಿ ಐವರು ಹೃದಯಾಘಾತಕ್ಕೆ ಬಲಿಯಾಗಿದ್ದಾರೆ.

 ಹಾಸನ :  ಜಿಲ್ಲೆಯಲ್ಲಿ ಹೃದಯಾಘಾತ ಮರಣ ಮೃದಂಗ ಮುಂದುವರೆದಿದೆ. ಸೋಮವಾರ ಒಂದೇ ದಿನ ಹಾಸನ ಜಿಲ್ಲೆಯ ವಿವಿಧ ತಾಲೂಕಿನಲ್ಲಿ ಐವರು ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಇದರೊಂದಿಗೆ ಕಳೆದ 40 ದಿನಗಳ ಅವಧಿಯಲ್ಲಿ ಜಿಲ್ಲೆಯಲ್ಲಿ 23 ಜನರು ಹೃದಯಾಘಾತಕ್ಕೆ ಬಲಿಯಾದಂತೆ ಆಗಿದೆ. ಮೃತರ ಪೈಕಿ ಬಹುತೇಕರು 50ರ ವಯೋಮಾನಕ್ಕಿಂತ ಕೆಳಗಿನ ವಯೋಮಾನದವರಾಗಿದ್ದಾರೆ. ಯುವಕರು, ಮಧ್ಯವಯಸ್ಕರೇ ಈ ಸರಣಿ ಹೃದಯಾಘಾತದ ಘಟನೆಗಳಿಗೆ ತುತ್ತಾಗುತ್ತಿರುವುದು ಜಿಲ್ಲೆಯ ಜನರಲ್ಲಿ ಆತಂಕ ಮೂಡಿಸಿದೆ.

ಮಲಗಿದ್ದಲ್ಲೇ ಡಿ.ಗ್ರೂಪ್ ನೌಕರ ಸಾವು:

ಚನ್ನರಾಯಪಟ್ಟಣ ತಾಲೂಕಿನ ನಾಡಕಚೇರಿಯ ಡಿ.ಗ್ರೂಪ್ ನೌಕರ ಕುಮಾರ್ (57) ಅವರು ಶನಿವಾರ ರಾತ್ರಿ ಮನೆಯಲ್ಲಿ ಮಲಗಿದ್ದಾಗ ತೀವ್ರ ಎದೆನೋವು ಕಾಣಿಸಿಕೊಂಡಿದೆ. ತಕ್ಷಣ ಅವರನ್ನು ಚನ್ನರಾಯಪಟ್ಟಣ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮಾರ್ಗ ಮಧ್ಯೆಯೇ ಮೃತಪಟ್ಟಿದ್ದಾರೆ. ಕುಮಾರ್ ಅವರು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ.

ಟೀ ಕುಡಿಯುವಾಗ ಪ್ರೊಫೆಸರ್‌ ಸಾವು:

ಚನ್ನರಾಯಪಟ್ಟಣದ ನಿವಾಸಿ ಮುತ್ತಯ್ಯ (58) ಎಂಬುವರು ಹೊಳೆನರಸೀಪುರದ ತಾಲೂಕಿನ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಇಂಗ್ಲಿಷ್‌ ಪ್ರೊಫೆಸರ್‌ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಸೋಮವಾರ ಕಾಲೇಜಿಗೆ ತೆರಳುತ್ತಿದ್ದಾಗ ಹಾಸನ-ಮೈಸೂರು ಬೈಪಾಸ್ ರಸ್ತೆಯಲ್ಲಿರುವ ಕ್ಯಾಂಟಿನ್‌ನಲ್ಲಿ ಟೀ ಕುಡಿಯುವಾಗ ಕುಸಿದು ಬಿದ್ದಿದ್ದಾರೆ. ಕೂಡಲೇ ಸ್ಥಳದಲ್ಲಿದ್ದವರು ಅವರನ್ನು ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲೆ ಅಸುನೀಗಿದ್ದಾರೆ.

ಬೇಲೂರಿನಲ್ಲಿ ಗೃಹಿಣಿ ಬಲಿ:

ಬೇಲೂರು ತಾಲೂಕಿನ ಜೆಪಿ ನಗರದ ನಿವಾಸಿ ಲೇಪಾಕ್ಷಿ (50) ಹಿಟ್ಟಿನ ಗಿರಣಿ ನಡೆಸುತ್ತಿದ್ದರು. ಸೋಮವಾರ ಮನೆಯಲ್ಲಿದ್ದಾಗ ಸುಸ್ತು ಎಂದಿದ್ದಾರೆ. ತಕ್ಷಣ ಅವರನ್ನು ಕುಟುಂಬಸ್ಥರು ಬೇಲೂರಿನ ತಾಲೂಕು ಆಸ್ಪತ್ರೆಗೆ ಒಯ್ಯುವಾಗ ಮಾರ್ಗಮಧ್ಯೆ ಸಾವನ್ನಪ್ಪಿದ್ದಾರೆ.

ಆಟೋ ಓಡಿಸುವಾಗಲೇ ಚಾಲಕ ಬಲಿ:

ಹಾಸನ ಜಿಲ್ಲೆಯ ರಂಗೋಲಿಹಳ್ಳದ ನಿವಾಸಿ ಸತ್ಯನಾರಾಯಣ್‌ ಎಂಬುವರು ಆಟೋ ಚಾಲನೆ ಮಾಡಿಕೊಂಡು ಹಾಸನಾಂಬ ದೇಗುಲದ ಹಿಂಭಾಗ ಹೊಸಲೈನ್‌ ರಸ್ತೆಯಲ್ಲಿ ತೆರಳುತ್ತಿದ್ದಾಗ ಹೃದಯಾಘಾತದಿಂದ ಅಸುನೀಗಿದ್ದಾರೆ.

ಹಳೇಬೀಡಿನಲ್ಲಿ 66 ವರ್ಷದ ವ್ಯಕ್ತಿ ಸಾವು:

ಬೇಲೂರು ತಾಲೂಕಿನ ಹಳೇಬೀಡಿನ ಪಟೇಲ್‌ ಈಶ್ವರಪ್ಪ(66) ಎಂಬುವರು ಶುಕ್ರವಾರ ಜಮೀನಿಗೆ ತೆರಳಿ ಮನೆಗೆ ವಾಪಸ್‌ ಮನೆಗೆ ಬಂದಾಗ ದಿಢೀರ್‌ ಕುಸಿದು ಬಿದ್ದಿದ್ದಾರೆ. ತಕ್ಷಣ ಇವರನ್ನು ಆಸ್ಪತ್ರೆಗೆ ದಾಖಲಿಸುವಾಗ ಮಾರ್ಗಮಧ್ಯದಲ್ಲೇ ಸಾವನ್ನಪ್ಪಿದ್ದಾರೆ.

ಹಾಸನ ಜಿಲ್ಲೆಯಲ್ಲಿ ಕಳೆದ ಒಂದೂವರೆ ತಿಂಗಳಿನಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದವರ ಸಂಖ್ಯೆ 19ಕ್ಕೆ ಏರಿಕೆಯಾಗಿದೆ. ಆದರೆ, ಇದರಲ್ಲಿ ಮೂಲತಃ ಹಾಸನ ಜಿಲ್ಲೆಯವರಾಗಿದ್ದು, ಬೇರೆ ಊರುಗಳಲ್ಲಿ ನೆಲೆಸಿದ್ದವರ ಸಾವನ್ನು ಕೂಡ ಹಾಸನ ಜಿಲ್ಲೆಗೆ ತಳುಕು ಹಾಕಲಾಗುತ್ತಿದೆ. ಬೇರೆ ಬೇರೆ ಕಾರಣಕ್ಕೂ ಸಾವು ಸಂಭವಿಸಿದೆ. ಆದರೆ 8 ಜನ ಮಾತ್ರ ಹೃದಯಾಘಾತದಿಂದಲೇ ಸಾವನ್ನಪ್ಪಿದ್ದಾರೆ.

-ಡಾ.ಅನಿಲ್‌, ಡಿಎಚ್‌ಒ

ಹಾಸನ ಹೃದಯಾಘಾತ ಕಾರಣ ತಿಳಿಯಲು ತಜ್ಞರ ಸಮಿತಿ ರಚನೆ

ಬೆಂಗಳೂರು : ಹಾಸನ ಜಿಲ್ಲೆಯಲ್ಲಿ ಹೃದಯಾಘಾತ ಮತ್ತು ಹೃದಯ ಸ್ತಂಭನಕ್ಕೊಳಗಾಗುತ್ತಿರುವ ಪ್ರಕರಣಗಳ ಹೆಚ್ಚಳಕ್ಕೆ ಸಂಬಂಧಿಸಿ ಅಧ್ಯಯನ ನಡೆಸಿ ನಿಖರ ಕಾರಣ ತಿಳಿಸುವಂತೆ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ನಿರ್ದೇಶಕ ಡಾ.ರವೀಂದ್ರ ನಾಥ್‌ ನೇತೃತ್ವದ ತಜ್ಞರ ಸಮಿತಿಗೆ ಆರೋಗ್ಯ ಇಲಾಖೆ ಆದೇಶಿಸಿದೆ.

ಕಳೆದೊಂದು ತಿಂಗಳಲ್ಲಿ ಹಾಸನ ಜಿಲ್ಲೆಯೊಂದರಲ್ಲೇ 21 ಮಂದಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಹೀಗೇ ಏಕಾಏಕಿ ಹೃದಯಾಘಾತ ಮತ್ತು ಹೃದಯ ಸ್ತಂಭನ ಪ್ರಕರಣಗಳ ಹೆಚ್ಚಳಕ್ಕೆ ಕಾರಣ ಅರಿಯಲು ಮುಂದಾಗಿರುವ ಆರೋಗ್ಯ ಇಲಾಖೆ, ಅದರ ಹೊಣೆಯನ್ನು ಫೆಬ್ರವರಿಯಲ್ಲಿ ರಚಿಸಲಾಗಿದ್ದ ಹೃದಯಾತಕ್ಕೆ ಸಂಬಂಧಿಸಿದ ಡಾ.ರವೀಂದ್ರ ನಾಥ್‌ ಅವರ ನೇತೃತ್ವದ ತಜ್ಞರ ಸಮಿತಿಗೆ ನೀಡಲಾಗಿದೆ.ಈ ಕುರಿತು ಪ್ರತಿಕ್ರಿಯಿಸಿರುವ ಡಾ.ರವೀಂದ್ರನಾಥ್‌, ಹಾಸನ ಜಿಲ್ಲೆ ವ್ಯಾಪ್ತಿಯ ಪ್ರಕರಣಗಳಲ್ಲಿ ಮೃತರ ಮರಣೋತ್ತರ ಪರೀಕ್ಷೆ ನಡೆಸದ ಕಾರಣ ನಿಖರ ಕಾರಣ ತಿಳಿದಿಲ್ಲ. ಹೀಗಾಗಿ ಮೃತರ ಕುಟುಂಬದವರಿಂದ ಮೃತರ ಆರೋಗ್ಯ ಸ್ಥಿತಿ, ದಿನಚರಿ, ಜೀವನ ಶೈಲಿ, ಆಹಾರ ಕ್ರಮ, ವಂಶವಾಹಿ ಕಾರಣ ಸೇರಿ ಸಮಗ್ರ ಮಾಹಿತಿ ಸಂಗ್ರಹಿಸಬೇಕಿದೆ. ಅದಕ್ಕಾಗಿ ಮಂಗಳವಾರ ಸಮಿತಿಯ ಸಭೆ ನಡೆಸಲಿದ್ದು, ಮುಂದಿನ ಕ್ರಮಗಳ ಕುರಿತು ಚರ್ಚಿಸಲಾಗುತ್ತಿದೆ ಎಂದಿದ್ದಾರೆ.

ಕೋವಿಡ್‌ ಅಡ್ಡಪರಿಣಾಮ ಪರಿಶೀಲನೆ:ಕೋವಿಡ್‌ ಸೋಂಕು ಮತ್ತು ಲಸಿಕೆಯಿಂದ ಹೃದಯಾಘಾತ ಹೆಚ್ಚಳವಾಗುತ್ತಿದೆಯೇ ಎಂಬುದನ್ನುವಿಶ್ಲೇಷಿಸಲು ಆರೋಗ್ಯ ಇಲಾಖೆ ಫೆಬ್ರವರಿಯಲ್ಲಿ ಡಾ.ರವೀಂದ್ರ ನಾಥ್‌ ನೇತೃತ್ವದಲ್ಲಿ ತಜ್ಞರ ಸಮಿತಿ ರಚಿಸಿತ್ತು. ಆ ಸಮಿತಿ ಈಗಾಗಲೇ ಜಯದೇವ ಆಸ್ಪತ್ರೆಯ 250 ಹೃದ್ರೋಗಿಗಳನ್ನು ಪರಿಶೀಲನೆಗೊಳಿಸಿ, ವಿಶ್ಲೇಷಣೆ ಮಾಡುತ್ತಿದೆ. ಆ ವಿಶ್ಲೇಷಣೆಯಲ್ಲಿ ಕಂಡುಬರುವ ಅಂಶಗಳನ್ನಾಧರಿಸಿ ಸಮಿತಿ ವರದಿ ಸಿದ್ಧಪಡಿಸಿ ಸರ್ಕಾರಕ್ಕೆ ಶೀಘ್ರ ಸಲ್ಲಿಕೆ ಮಾಡಲಿದೆ.

ಹಾಸನ ಜಿಲ್ಲೆ ವ್ಯಾಪ್ತಿಯಲ್ಲಿ ಹೃದಯಾಘಾತದಿಂದ ಸಾವಿಗೀಡಾಗಿರುವ 21 ಮಂದಿ ಪೈಕಿ ಇಬ್ಬರು ಮಾತ್ರ ಆಸ್ಪತ್ರೆಗೆ ಕರೆತಂದ ನಂತರ ಮೃತಪಟ್ಟಿದ್ದಾರೆ. ಉಳಿದಂತೆ 19 ಮಂದಿ ಆಸ್ಪತ್ರೆಗೆ ಕರೆತರುವುದಕ್ಕೂ ಮುನ್ನವೇ ಮೃತಪಟ್ಟಿದ್ದಾರೆ. ಆ ನಿಟ್ಟಿನಲ್ಲಿ ಪರಿಶೀಲಿಸಿ ವರದಿ ನೀಡುವಂತೆ ಡಾ. ರವೀಂದ್ರನಾಥ್ ನೇತೃತ್ವದ ಸಮಿತಿಗೆ ಸೂಚಿಸಲಾಗಿದೆ.

-ಹರ್ಷ ಗುಪ್ತ, ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ