ಹಾಸನ ಜೈಲಿನಲ್ಲಿ ಸಾಮರ್ಥ್ಯಕ್ಕಿಂತ ಹೆಚ್ಚು ಕೈದಿಗಳು: ಜಿಲ್ಲಾ ಕಾರಾಗೃಹಕ್ಕೆ ಡಿಜಿಪಿ ಅಲೋಕ್‌ ಕುಮಾರ್‌ ಭೇಟಿ

KannadaprabhaNewsNetwork |  
Published : Sep 25, 2026, 01:45 AM IST
24ಎಚ್ಎಸ್ಎನ್20  | Kannada Prabha

ಸಾರಾಂಶ

ಕೈದಿಗಳು ಜೈಲು ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿ ಶಿಸ್ತು ಕಾಪಾಡಬೇಕು. ಕೈದಿಗಳ ಸ್ವಚ್ಛತೆ, ಕೂದಲು ಕತ್ತರಿಸುವುದು, ಆಹಾರದ ಗುಣಮಟ್ಟ ಸೇರಿದಂತೆ ಮೂಲಭೂತ ಸೌಲಭ್ಯಗಳ ಬಗ್ಗೆ ಅಧಿಕಾರಿಗಳು ನಿರಂತರ ನಿಗಾ ವಹಿಸಬೇಕು. ಜೈಲಿನ ಆಹಾರವನ್ನು ಪರಿಶೀಲಿಸಿದ್ದು, ಗುಣಮಟ್ಟ ಸಮರ್ಪಕವಾಗಿದೆ ಎಂದು ಹೇಳಿದರು.

ಕನ್ನಡಪ್ರಭವಾರ್ತೆ, ಹಾಸನ

ಹಾಸನ ಜಿಲ್ಲಾ ಕಾರಾಗೃಹದಲ್ಲಿ ನಿಗದಿತ ಸಾಮರ್ಥ್ಯಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಕೈದಿಗಳನ್ನು ಇರಿಸಲಾಗಿದ್ದು, ಮೂಲಸೌಕರ್ಯದ ಮೇಲಿನ ಒತ್ತಡ ಹೆಚ್ಚಾಗಿದೆ. 250 ಕೈದಿಗಳನ್ನು ಇರಿಸುವ ಸಾಮರ್ಥ್ಯವಿರುವ ಜೈಲಿನಲ್ಲಿ ಪ್ರಸ್ತುತ 334 ಕೈದಿಗಳಿದ್ದಾರೆ. ಈ ಹಿನ್ನೆಲೆಯಲ್ಲಿ ಹೊಸ ಕಾರಾಗೃಹ ನಿರ್ಮಿಸುವಂತೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ಆಡಳಿತ ಹಾಗೂ ಕಾರಾಗೃಹ ವಿಭಾಗದ ಡಿಜಿಪಿ ಅಲೋಕ್‌ ಕುಮಾರ್ ತಿಳಿಸಿದರು.

ನಗರದ ಜಿಲ್ಲಾ ಕಾರಾಗೃಹಕ್ಕೆ ಗುರುವಾರ ಭೇಟಿ ನೀಡಿ ಜೈಲಿನ ವಿವಿಧ ವಿಭಾಗಗಳನ್ನು ಪರಿಶೀಲಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಹಾಸನ ಕಾರಾಗೃಹಕ್ಕೆ ಇದೇ ಮೊದಲ ಬಾರಿಗೆ ಭೇಟಿ ನೀಡಿ ಜೈಲಿನ ನೈಜ ಪರಿಸ್ಥಿತಿಯನ್ನು ಪರಿಶೀಲಿಸಿದ್ದೇನೆ. ಕೈದಿಗಳ ಸಂಖ್ಯೆಗೆ ಹೋಲಿಸಿದರೆ ಸ್ಥಳಾವಕಾಶ ಕಡಿಮೆ ಇರುವುದು ಗಮನಕ್ಕೆ ಬಂದಿದೆ. ೨೫೦ ಮಂದಿಗೆ ಮಾತ್ರ ಅವಕಾಶವಿರುವ ಜಾಗದಲ್ಲಿ ೩೩೪ ಕೈದಿಗಳಿರುವುದರಿಂದ ಹೆಚ್ಚುವರಿ ಒತ್ತಡ ಉಂಟಾಗಿದೆ. ಭವಿಷ್ಯದ ಅಗತ್ಯವನ್ನು ಗಮನದಲ್ಲಿಟ್ಟುಕೊಂಡು ಹೊಸ ಜೈಲು ನಿರ್ಮಾಣಕ್ಕೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ಮಾಹಿತಿ ನೀಡಿದರು.ಕೈದಿಗಳು ಜೈಲು ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿ ಶಿಸ್ತು ಕಾಪಾಡಬೇಕು. ಕೈದಿಗಳ ಸ್ವಚ್ಛತೆ, ಕೂದಲು ಕತ್ತರಿಸುವುದು, ಆಹಾರದ ಗುಣಮಟ್ಟ ಸೇರಿದಂತೆ ಮೂಲಭೂತ ಸೌಲಭ್ಯಗಳ ಬಗ್ಗೆ ಅಧಿಕಾರಿಗಳು ನಿರಂತರ ನಿಗಾ ವಹಿಸಬೇಕು. ಜೈಲಿನ ಆಹಾರವನ್ನು ಪರಿಶೀಲಿಸಿದ್ದು, ಗುಣಮಟ್ಟ ಸಮರ್ಪಕವಾಗಿದೆ ಎಂದು ಹೇಳಿದರು.

ಜೈಲಿನೊಳಗೆ ಹೊರಗಿನಿಂದ ವಸ್ತುಗಳನ್ನು ಎಸೆಯುವ ಸಮಸ್ಯೆ ಸೇರಿದಂತೆ ಕೆಲವು ಭದ್ರತಾ ಸವಾಲುಗಳು ಎದುರಾಗಿದ್ದವು. ಕೆಲವು ಗ್ಯಾಂಗ್‌ಗಳಿಗೆ ಸೇರಿದವರು ಹಾಗೂ ಮಂಜೇಶ್ ಕೊಲೆ ಪ್ರಕರಣದ ಆರೋಪಿಗಳ ಪೈಕಿ ಹತ್ತು ಮಂದಿ ಹಾಸನ ಜೈಲಿನಲ್ಲಿದ್ದಾರೆ. ಜೈಲಿನಲ್ಲಿ ಗಲಾಟೆ ನಡೆಸಿದ ಹಿನ್ನೆಲೆಯಲ್ಲಿ ಅವರನ್ನು ಮೈಸೂರು ಕಾರಾಗೃಹಕ್ಕೆ ಸ್ಥಳಾಂತರಿಸುವ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅಲೋಕ್‌ಕುಮಾರ್ ತಿಳಿಸಿದರು.

ಕೆಲವು ಕೈದಿಗಳು ಉದ್ದೇಶಪೂರ್ವಕವಾಗಿ ಗಲಾಟೆ ಅಥವಾ ಸಮಸ್ಯೆ ಸೃಷ್ಟಿಸುವ ಘಟನೆಗಳು ನಡೆಯುತ್ತವೆ. ಇಂತಹ ವಿಚಾರಗಳ ಕುರಿತು ಪೊಲೀಸರು ಹಾಗೂ ಜೈಲು ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಗುರುವಾರದ ಪರಿಶೀಲನೆ ವೇಳೆ ಯಾವುದೇ ಅಕ್ರಮ ವಸ್ತುಗಳು ಪತ್ತೆಯಾಗಿಲ್ಲ ಎಂದು ಹೇಳಿದರು.

ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿಯೂ ಮೊಬೈಲ್ ಬಳಕೆ ಗಣನೀಯವಾಗಿ ಕಡಿಮೆಯಾಗಿದೆ. ಹಿಂದಿನ ಸಂಗ್ರಹದಲ್ಲಿದ್ದ ಮೊಬೈಲ್‌ಗಳನ್ನು ಕೆಲವರು ಬಳಸುತ್ತಿದ್ದರು. ಕೈದಿಗಳು ಕುಟುಂಬಸ್ಥರು ಹಾಗೂ ಸಂಬಂಧಿಕರೊಂದಿಗೆ ಮಾತನಾಡಲು ಜೈಲಿನಲ್ಲೇ ಅಧಿಕೃತ ಫೋನ್‌ ವ್ಯವಸ್ಥೆ ಇದೆ. ಆದರೆ ಅದನ್ನು ಅಕ್ರಮ ಚಟುವಟಿಕೆಗಳಿಗೆ ಬಳಸಲು ಅವಕಾಶ ನೀಡುವುದಿಲ್ಲ. ರಾಜ್ಯದ ಕಾರಾಗೃಹಗಳಲ್ಲಿ ೪೮ ಜೈಲು ಕರೆ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ ಎಂದು ತಿಳಿಸಿದರು.

ಪರಿಶೀಲನೆ ವೇಳೆ ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶುಭನ್ವಿತಾ, ಜೈಲು ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

----

ಕಾರಾಗೃಹಗಳಲ್ಲಿನ ಮೊಬೈಲ್ ಫೋನ್‌ಗಳ ಅಕ್ರಮ ಬಳಕೆ ತಡೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ. ೨೦೨೬ರಲ್ಲಿ ಹಾಸನ ಜೈಲಿನೊಳಗೆ ಹೊಸದಾಗಿ ಮೊಬೈಲ್ ಫೋನ್‌ಗಳು ಬಂದಿರುವುದು ಪತ್ತೆಯಾಗಿಲ್ಲ. ಈ ಹಿಂದೆ ಜೈಲಿನೊಳಗೆ ಪತ್ತೆಯಾದ ಮೊಬೈಲ್‌ಗಳನ್ನು ಜಪ್ತಿ ಮಾಡಲಾಗಿದೆ. ರಾಜ್ಯದ ಹಲವು ಜೈಲುಗಳಲ್ಲಿ ಮೊಬೈಲ್‌ಗಳನ್ನು ಜಪ್ತಿ ಮಾಡಲಾಗಿದ್ದು, ಸಂಪೂರ್ಣವಾಗಿ ಮೊಬೈಲ್ ಮುಕ್ತಗೊಳಿಸಲಾಗಿದೆ ಎಂದು ಹೇಳಲು ಸಾಧ್ಯವಿಲ್ಲ. ಆದರೆ ನಿಯಂತ್ರಣಕ್ಕೆ ಕ್ರಮ ಮುಂದುವರಿದಿದೆ.- ಅಲೋಕ್‌ ಕುಮಾರ್, ಆಡಳಿತ ಹಾಗೂ ಕಾರಾಗೃಹ ವಿಭಾಗದ ಡಿಜಿಪಿ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೋರ್‌ವೆಲ್ ಕೊರೆಯಲು ವೈಜ್ಞಾನಿಕ ಯೋಜನೆ ಅಗತ್ಯ: ಸಿಇಒ
ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿಯಿಂದ ಅಣಕು ಶವಯಾತ್ರೆ