ಕನ್ನಡಪ್ರಭವಾರ್ತೆ, ಹಾಸನ
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಶ್ರೀ ಹಾಸನಾಂಬ ದೇವಿ ಹಾಗೂ ಶ್ರೀ ಸಿದ್ದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಕುರಿತು ಸಿದ್ಧತೆ ಹಾಗೂ ಪೂರ್ವಭಾವಿ ಸಭೆ ನಡೆಸಿ ಮಾತನಾಡಿದ ಅವರು, ಹಾಸನಾಂಬ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲು ಸಿದ್ಧತೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಬ್ಯಾರಿಕೇಡ್ ಹಾಕುವಾಗ ಭಕ್ತಾದಿಗಳ ಸುರಕ್ಷತೆ ಬಗ್ಗೆ ಹೆಚ್ಚಿನ ಗಮನಹರಿಸಬೇಕು. ಕಳೆದ ಬಾರಿ ಭಕ್ತಾದಿಗಳು ಸರತಿ ಸಾಲಿನಲ್ಲಿ ಸಾಗುವ ಸಂದರ್ಭದಲ್ಲಿ ಕಾಲಿಗೆ ಕಬ್ಬಿಣದ ರಾಡ್ ತಗುಲಿ ಪೆಟ್ಟು ಆಗಿತ್ತು. ಈ ಬಾರಿ ಅದು ಮರುಕಳಿಸದಂತೆ ಎಚ್ಚರಿಕೆ ವಹಿಸಿ ಬ್ಯಾರಿಕೇಡ್ ಅಳವಡಿಕೆ ಕಾರ್ಯವನ್ನು ವ್ಯವಸ್ಥಿತವಾಗಿ ಮಾಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.ಜನದಟ್ಟಣೆ ನಿರ್ವಹಣೆಗೆ ಹಾಗೂ ಸಂದರ್ಭಕ್ಕೆ ತಕ್ಕಂತೆ ತಕ್ಷಣ ನಿರ್ಧಾರ ತೆಗೆದುಕೊಳ್ಳಲು ಅಧಿಕಾರಿಗಳು ಗಮನಹರಿಸಬೇಕು. ಅಧಿಕಾರಿಗಳು ತಮ್ಮ ಜವಾಬ್ದಾರಿಯನ್ನು ಅತ್ಯಂತ ಜಾಗರೂಕತೆಯಿಂದ ನಿರ್ವಹಿಸುವ ಮೂಲಕ ಸುಸೂತ್ರವಾಗಿ ಜಾತ್ರಾ ಮಹೋತ್ಸವವನ್ನು ಯಶಸ್ವಿಗೊಳಿಸಬೇಕು ಎಂದು ತಿಳಿಸಿದರು. ಜಾತ್ರೆ ವೇಳೆ ಅಧಿಕಾರಿಗಳು ಹಾಗೂ ಸಿಬ್ಬಂದಿ ರಜೆ ತೆಗೆದುಕೊಳ್ಳಬಾರದು ಎಂದು ತಿಳಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮ, ಸಿರಿಧಾನ್ಯ ಮತ್ತು ಸಾವಯವ ಮೇಳ, ಶ್ವಾನ ಪ್ರದರ್ಶನ, ಹಾಸನಾಂಬ ಹಾಸ್ಯ ಹೊನಲು, ಕ್ರೀಡಾಕೂಟ, ಆಹಾರ ಮೇಳ, ಮರಳು ಕಲಾಕೃತಿ, ಹಾಸನ ಚಿತ್ರಸಂತೆ, ಟೂರ್ ಪ್ಯಾಕೇಜ್ ಮತ್ತಿತರ ಕಾರ್ಯಕ್ರಮಗಳನ್ನು ಆಯೋಜಿಸಲು ಸಿದ್ಧತೆ ಮಾಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.ಆರೋಗ್ಯ ಸಮಸ್ಯೆಗಳು ಕಂಡು ಬಂದಲ್ಲಿ ತಕ್ಷಣ ತಪಾಸಣೆ ಮಾಡಿ ಅವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಲು ವ್ಯವಸ್ಥೆ ಮಾಡಿಕೊಳ್ಳಬೇಕು. ವಿಕಲಚೇತನರು ಹಾಗೂ ೮೦ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ವ್ಹೀಲ್ ಚೇರ್ ವ್ಯವಸ್ಥೆ ಕಲ್ಪಿಸಬೇಕು. ದಾನಿಗಳು ನೀಡುವ ಅಕ್ಕಿ, ಬೆಳೆ, ಬೆಲ್ಲ ಸಂಗ್ರಹಿಸಲು ಟಿಕೇಟ್ ಕೌಂಟರ್ ಬಳಿ ಒಂದು ಕೌಂಟರ್, ಮಡ್ಲಕ್ಕಿ ಸ್ವೀಕರಿಸಲು ದೇವಾಲಯದ ಆವರಣದಲ್ಲಿ ಒಂದು ಪ್ರತ್ಯೇಕ ಕೌಂಟರ್ ಮಾಡುವಂತೆ ತಿಳಿಸಿದರು.