ಕನ್ನಡಪ್ರಭವಾರ್ತೆ, ಬೇಲೂರು
ಪಟ್ಟಣದ ಪುರಸಭೆ ಆವರಣದಲ್ಲಿ ನಡೆದ ಪೌರಕಾರ್ಮಿಕರ ದಿನಾಚರಣೆಯಲ್ಲಿ ಮಾತನಾಡಿ ಪೌರಕಾರ್ಮಿಕರಿಗೆ ಅಗತ್ಯವಿರುವ ಸೌಲಭ್ಯಗಳ ಕುರಿತು ಪಟ್ಟಿ ಸಿದ್ಧಪಡಿಸಿ ನೀಡಿದರೆ, ಪುರಸಭೆಯ ಅಧಿಕಾರಿಗಳು ಹಾಗೂ ಸದಸ್ಯರೊಂದಿಗೆ ಚರ್ಚಿಸಿ ಆದ್ಯತೆಯ ಮೇರೆಗೆ ಕ್ರಮ ಕೈಗೊಳ್ಳಲಾಗುವುದು. ತುರ್ತು ಹಾಗೂ ಅಗತ್ಯ ವಿಷಯಗಳಿದ್ದರೆ ಅಧಿಕಾರಿಗಳು ಮತ್ತು ಸದಸ್ಯರೊಂದಿಗೆ ಚರ್ಚಿಸಿ, ನಿಯಮಾನುಸಾರ ತಕ್ಷಣವೇ ಕ್ರಮ ಕೈಗೊಳ್ಳುವ ಸಾಧ್ಯತೆಗಳ ಬಗ್ಗೆ ಪರಿಶೀಲಿಸಲಾಗುವುದು ಎಂದರು.
ಪೌರಕಾರ್ಮಿಕರಲ್ಲಿ ಹಲವರು ಒಂದೇ ಮನೆಯಲ್ಲಿ ನಾಲ್ಕೈದು ಕುಟುಂಬಗಳು ವಾಸಿಸುವಂತಹ ಕಷ್ಟಕರ ಪರಿಸ್ಥಿತಿ ಎದುರಿಸುತ್ತಿದ್ದಾರೆ. ವಸತಿ ಸಮಸ್ಯೆ ಅವರ ಬದುಕಿನ ಪ್ರಮುಖ ಸಮಸ್ಯೆಯಾಗಿದ್ದು, ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಅಗತ್ಯವಿದೆ ಎಂದರು.ಪುರಸಭಾ ಸದಸ್ಯ ಬಿ. ಗಿರೀಶ್ ಮಾತನಾಡಿ ಪೌರಕಾರ್ಮಿಕರಿಗೆ ಕೇವಲ ದಿನಾಚರಣೆಯಂದು ಸನ್ಮಾನ ಮಾಡಿ ಗೌರವಿಸುವುದಷ್ಟೇ ಅಲ್ಲದೆ, ಅವರ ಜೀವನಮಟ್ಟ ಸುಧಾರಿಸುವಂತಹ ಶಾಶ್ವತ ಕಾರ್ಯಕ್ರಮಗಳನ್ನು ರೂಪಿಸಬೇಕು. ಕಾಯಂ ಪೌರಕಾರ್ಮಿಕರ ಜೊತೆಗೆ ಗುತ್ತಿಗೆ ನೌಕರರು, ಆಟೋ ಟಿಪ್ಪರ್ ಸಿಬ್ಬಂದಿ ಸೇರಿದಂತೆ ಸ್ವಚ್ಛತಾ ಕಾರ್ಯದಲ್ಲಿ ತೊಡಗಿರುವ ಇತರ ಸಿಬ್ಬಂದಿಯ ಸಮಸ್ಯೆಗಳನ್ನೂ ಪರಿಗಣಿಸಬೇಕು. ಪೌರಕಾರ್ಮಿಕರಿಗೆ ಟೇಲರಿಂಗ್ ಯಂತ್ರ, ಟ್ಯಾಬ್, ವೈಯಕ್ತಿಕ ಶೌಚಾಲಯ, ವಿಮೆ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಕಲ್ಪಿಸುವ ಕ್ರಿಯಾ ಯೋಜನೆ ರೂಪಿಸಿ ಸಾಧ್ಯವಾದಷ್ಟು ಬೇಗ ಅನುಷ್ಠಾನಗೊಳಿಸಬೇಕು. ಎಸ್‌ಸಿಪಿ-ಟಿಎಸ್‌ಪಿ ಯೋಜನೆಯಡಿ ಲಭ್ಯವಾಗುವ ಅನುದಾನವನ್ನು ಪೌರಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುವ ಪ್ರದೇಶಗಳ ಮೂಲಸೌಕರ್ಯ ಅಭಿವೃದ್ಧಿಗೂ ಬಳಸಬೇಕು ಎಂದು ಒತ್ತಾಯಿಸಿದರು.ಪುರಸಭೆ ಸದಸ್ಯ ಜಮಾಲುದ್ದೀನ್ ಮಾತನಾಡಿ, ವೈದ್ಯರು ಜನರ ಆರೋಗ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುವಂತೆ, ಪೌರಕಾರ್ಮಿಕರು ಸ್ವಚ್ಛತೆಯ ಮೂಲಕ ಹಲವು ಕಾಯಿಲೆಗಳು ಹರಡುವುದನ್ನು ತಡೆಯುವ ಕೆಲಸ ಮಾಡುತ್ತಿದ್ದಾರೆ. ಬೆಳಗಿನ ಜಾವವೇ ಎದ್ದು ಕುಟುಂಬದ ಕೆಲಸ ಬಿಟ್ಟು ನಗರದ ಸ್ವಚ್ಛತೆಗಾಗಿ ದುಡಿಯುವ ಅವರ ಸೇವೆಯನ್ನು ಪ್ರತಿಯೊಬ್ಬ ನಾಗರಿಕರೂ ಗೌರವಿಸಬೇಕು ಎಂದು ಹೇಳಿದರು.
ಪೌರಕಾರ್ಮಿಕರ ಮಕ್ಕಳಿಗೆ ಉಚಿತ ಶಿಕ್ಷಣ ದೊರೆಯುವಂತೆ ಮಾಡುವ ನಿಟ್ಟಿನಲ್ಲಿ ಪುರಸಭೆ ಮಟ್ಟದಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸದಸ್ಯ ಜಗದೀಶ್ ಹೇಳಿದರು. ಪುರಸಭಾ ಮುಖ್ಯ ಅಧಿಕಾರಿ ಬಸವರಾಜ್ ಹೆಗ್ಗಾವಿ ಕಟ್ಟಪ್ಪ, ಮಾಜಿ ಪುರಸಭಾ ಅಧ್ಯಕ್ಷೆ ಉಷಾ ಸತೀಶ್, ಪುರಸಭಾ ಸದಸ್ಯರಾದ . ಗಿರೀಶ್, ಜಗದೀಶ್, ಪ್ರಭಾಕರ್, ಸುಧಾರಾಣಿ, ಆರೋಗ್ಯ ಅಧಿಕಾರಿ ಜ್ಯೋತಿ, ಪೌರಕಾರ್ಮಿಕರು ಹಾಜರಿದ್ದರು.