ಕನ್ನಡಪ್ರಭ ವಾರ್ತೆ ಶಿಕಾರಿಪುರ
ಗುರುವಾರ ಪಟ್ಟಣದ ಕುಮದ್ವತಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಭಾಷಾ ವೇದಿಕೆ ಹಾಗೂ ತಾಲೂಕು ಶರಣ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಲಿಂ.ಹಂಚಿನಮನೆ ಪಾರ್ವತಮ್ಮ ಮತ್ತು ಲಿಂ.ಗುರುಸಿದ್ಧಪ್ಪ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಶರಣ ಸಾಹಿತ್ಯದಲ್ಲಿ ವೈಚಾರಿಕತೆ ಎಂಬ ವಿಷಯದ ಕುರಿತು ಮಾತನಾಡಿ, ಶರಣರು ಜಾತಿ, ವರ್ಣ, ಲಿಂಗ ಮತ್ತು ವರ್ಗ ಭೇದಗಳನ್ನು ಬಲವಾಗಿ ವಿರೋಧಿಸಿ ಸರ್ವರಿಗೂ ಸಮಬಾಳು ಮತ್ತು ಸಮಪಾಲು ತತ್ವವನ್ನು ಪ್ರತಿಪಾದಿಸಿದ್ದಾರೆ ಎಂದರು.
12ನೇ ಶತಮಾನದಲ್ಲಿ ಶರಣ ಚಳವಳಿ ಉಚ್ಚ್ರಾಯ ಸ್ಥಿತಿಯಲ್ಲಿದ್ದು, ಚಳವಳಿ ಮೂಲಕ ಜಾತಿ ಮತ ಬೇಧ ತಾರತಮ್ಯವಿಲ್ಲದೆ ಹಲವು ಶ್ರೇಷ್ಠ ವಚನಕಾರರು ಸಮಾಜದಲ್ಲಿನ ಓರೆಕೋರೆಗಳನ್ನು ವಚನದ ಮೂಲಕ ತಿದ್ದಿ ಹೊಸ ಮಾನವೀಯ ದೃಷ್ಟಿಕೋನವನ್ನು ಜಗತ್ತಿಗೆ ನೀಡಿದ್ದಾರೆ ಎಂದ ಅವರು, ಶಿವಶರಣರು ಆರಂಭಿಸಿದ ಚಳವಳಿ ಮನುಷ್ಯನ ಬದುಕು, ವಿಕಾಸಕ್ಕೆ ಮೂಲ ಜೀವ ದ್ರವ್ಯವಾಗಿದ್ದು, ಪ್ರಸ್ತುತ ಕಾಲಘಟ್ಟದಲ್ಲಿ ಸದೃಡ ಸಮಾಜ ನಿರ್ಮಾಣಕ್ಕೆ ವಚನಗಳಲ್ಲಿ ಅಡಗಿರುವ ಮಾನವೀಯ ಸಂದೇಶ ಅತ್ಯಂತ ಪ್ರಸ್ತುತವಾಗಿದೆ ಎಂದರು.ಕಾರ್ಯಕ್ರಮವನ್ನು ಉದ್ಘಾಟಿಸಿದ ಪ್ರಾಚಾರ್ಯ ಡಾ.ರವೀಂದ್ರ ಕೆ.ಸಿ ಮಾತನಾಡಿ, ವಚನಗಳು ಬೆಲೆ ಕಟ್ಟಲಾಗದ ಮುತ್ತುರತ್ನಗಳಿದ್ದಂತೆ. ಅರಿವೇ ಗುರುವೆಂಬ ಅರಿವಿನ ಜ್ಞಾನ ಜ್ಯೋತಿಯನ್ನು ಬೆಳಗಿಸಿದ ಹೆಗ್ಗಳಿಕೆ ಶರಣರಿಗೆ ಸಲ್ಲುತ್ತದೆ. ವಿದ್ಯಾರ್ಥಿಗಳು ಶರಣರ ಬದುಕು ಬರಹಗಳನ್ನು ಅರ್ಥೈಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಾ.ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಕೆ ಶಶಿಧರ ಸ್ವಾಮಿ ಮಾತನಾಡಿ, ಪ್ರಸ್ತುತ ದಿನಮಾನಗಳಲ್ಲಿ ವ್ಯಕ್ತಿಯ ಅಂತರಂಗ ಮತ್ತು ಬಹಿರಂಗ ಬೇರೆ ಬೇರೆಯಾಗಿರುವ ಕಾರಣದಿಂದಲೇ ವ್ಯಕ್ತಿ ಮತ್ತು ಸಮಾಜ ಸಾಕಷ್ಟು ಸಂಕಷ್ಟಗಳನ್ನು ಅನುಭವಿಸುತ್ತಿದೆ. ಅಂತರಂಗ ಮತ್ತು ಬಹಿರಂಗವನ್ನು ಒಂದಾಗಿಸುವುದೇ ವಚನ ಸಾಹಿತ್ಯದ ಮೂಲ ಉದ್ದೇಶ ಎಂದರು.
ದ್ವಿತೀಯ ಬಿಸಿಎ ವಿದ್ಯಾರ್ಥಿನಿ ಕು.ಚೈತ್ರಾ, ಕು.ಅಮೃತಾ ಪ್ರಾರ್ಥಿಸಿ, ಕು.ದಿವ್ಯಾ ಸ್ವಾಗತಿಸಿ, ಕು.ಅನುಷಾ, ಕು.ಅಪೂರ್ವ ನಿರೂಪಿಸಿ, ಕು.ಚಂದನ ವಂದಿಸಿದರು..