ಆದಾಯ ವೃದ್ಧಿಗೆ ಹಾಸನ ಪಾಲಿಕೆ ಮಾಸ್ಟರ್ ಪ್ಲಾನ್

KannadaprabhaNewsNetwork |  
Published : Mar 28, 2026, 01:45 AM IST
27ಎಚ್ಎಸ್ಎನ್20 : ನಿತೇಶ್‌ ಪಾಟೀಲ್‌. | Kannada Prabha

ಸಾರಾಂಶ

ಹೊಸದಾಗಿ ಸೇರಿರುವ ೨೪ ಗ್ರಾಮ ಪಂಚಾಯಿತಿ ಪ್ರದೇಶಗಳಿಗೆ ಸೇವೆ ತಲುಪಿಸಲು ಮೂರು ವಲಯ ಕಚೇರಿಗಳನ್ನು ಸ್ಥಾಪಿಸುವ ಯೋಜನೆ ರೂಪಿಸಲಾಗಿದೆ. ಜನರು ದೂರ ಪ್ರಯಾಣಿಸದೆ ತಮ್ಮ ಪ್ರದೇಶದಲ್ಲೇ ಸೇವೆ ಪಡೆಯುವಂತಾಗುವುದು ಇದರ ಉದ್ದೇಶ. ನಗರದ ಸೌಂದರ್ಯ ಹೆಚ್ಚಿಸಲು ವೃತ್ತಗಳ ಅಭಿವೃದ್ಧಿ, ರಸ್ತೆ ಮತ್ತು ಚರಂಡಿ ಕಾಮಗಾರಿಗಳು, ಉದ್ಯಾನವನಗಳ ಸಂರಕ್ಷಣೆ ಸೇರಿದಂತೆ ವಿವಿಧ ಯೋಜನೆಗಳು ವೇಗ ಪಡೆದುಕೊಂಡಿವೆ. ಅನಧಿಕೃತ ಪ್ಲೆಕ್ಸ್ ಹಾಗೂ ಜಾಹೀರಾತುಗಳನ್ನು ತೆರವುಗೊಳಿಸುವ ಕಾರ್ಯ ಜೋರಾಗಿದೆ. ಆದಾಯ ತರುವ ಸಾಮರ್ಥ್ಯವಿಲ್ಲದ ಸ್ಥಳಗಳನ್ನು ಗುರುತಿಸಿ, ಅವುಗಳನ್ನು ಆದಾಯದ ಮೂಲಗಳಾಗಿ ಪರಿವರ್ತಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

ಕನ್ನಡಪ್ರಭ ವಾರ್ತೆ ಹಾಸನ

ನಗರಪಾಲಿಕೆಯ ಆರ್ಥಿಕ ಬಲವರ್ಧನೆಗೆ ದಿಟ್ಟ ಹೆಜ್ಜೆ ಇಟ್ಟಿರುವ ಹಾಸನ ಪಾಲಿಕೆ, ಆದಾಯವನ್ನು ಹೆಚ್ಚಿಸಿ ವೆಚ್ಚವನ್ನು ನಿಯಂತ್ರಿಸುವ ದ್ವಿಮುಖ ಕಾರ್ಯಯೋಜನೆಯನ್ನು ಜಾರಿಗೆ ತಂದಿದೆ ಎಂದು ಮೈಸೂರು ಪ್ರಾದೇಶಿಕ ಆಯುಕ್ತ ಹಾಗೂ ಆಡಳಿತಾಧಿಕಾರಿ ನಿತೇಶ್ ಪಾಟೀಲ್ ತಿಳಿಸಿದ್ದಾರೆ.

೨೦೨೬-೨೭ನೇ ಸಾಲಿನ ಬಜೆಟ್ ಮಂಡನೆಯ ನಂತರ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಸರ್ಕಾರದಿಂದ ಘೋಷಿತವಾಗಿರುವ ಸುಮಾರು ೨೦೦ ಕೋಟಿ ರು. ಅನುದಾನವನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಜೊತೆಗೆ, ಹೊಸದಾಗಿ ನಗರಪಾಲಿಕೆ ವ್ಯಾಪ್ತಿಗೆ ಸೇರಿಸಿರುವ ೨೪ ಗ್ರಾಮ ಪಂಚಾಯಿತಿಗಳ ಸಮಗ್ರ ಅಭಿವೃದ್ಧಿಗೆ ವಿಶೇಷ ಕ್ರಿಯಾಯೋಜನೆ ರೂಪಿಸಲಾಗಿದೆ ಎಂದರು. ನಗರಪಾಲಿಕೆಯ ಆದಾಯವನ್ನು ವ್ಯವಸ್ಥಿತವಾಗಿ ಹೆಚ್ಚಿಸಲು ಇ-ಆಫೀಸ್ ವ್ಯವಸ್ಥೆ, ಆನ್‌ಲೈನ್ ತೆರಿಗೆ ಪಾವತಿ, ಸ್ವಯಂಸೇವಾ ಜನಸ್ಪಂದನಾ ಕಾರ್ಯಕ್ರಮಗಳಿಗೆ ಒತ್ತು ನೀಡಲಾಗಿದೆ. ಪ್ರತೀ ಮಂಗಳವಾರ ನಡೆಯುವ ಜನಸ್ಪಂದನಾ ಸಭೆಗಳು ನಾಗರಿಕರಿಗೆ ನೇರವಾಗಿ ಆಡಳಿತದೊಂದಿಗೆ ಸಂಪರ್ಕ ಸಾಧಿಸುವ ವೇದಿಕೆಯಾಗಿವೆ. ಇದೇ ವೇಳೆ ಕಟ್ಟಡ ನಿರ್ಮಾಣದಲ್ಲಿ ಸಣ್ಣ ಪ್ರಮಾಣದ ವ್ಯತ್ಯಾಸ (೧೫% ವರೆಗೆ) ಇದ್ದರೂ ಕಂಪ್ಲೀಷನ್ ಸರ್ಟಿಫಿಕೆಟ್ ನೀಡುವ ವ್ಯವಸ್ಥೆ ಜಾರಿಗೆ ತಂದು, ನಿಯಮಬದ್ಧತೆಯೊಂದಿಗೆ ಆದಾಯ ಹೆಚ್ಚಿಸುವ ಹೊಸ ಮಾರ್ಗ ಕಂಡುಹಿಡಿಯಲಾಗಿದೆ. ನಗರಪಾಲಿಕೆಯ ವ್ಯಾಪ್ತಿ ವಿಸ್ತಾರಗೊಂಡ ಹಿನ್ನೆಲೆ, ಹೊಸದಾಗಿ ಸೇರಿರುವ ೨೪ ಗ್ರಾಮ ಪಂಚಾಯಿತಿ ಪ್ರದೇಶಗಳಿಗೆ ಸೇವೆ ತಲುಪಿಸಲು ಮೂರು ವಲಯ ಕಚೇರಿಗಳನ್ನು ಸ್ಥಾಪಿಸುವ ಯೋಜನೆ ರೂಪಿಸಲಾಗಿದೆ. ಜನರು ದೂರ ಪ್ರಯಾಣಿಸದೆ ತಮ್ಮ ಪ್ರದೇಶದಲ್ಲೇ ಸೇವೆ ಪಡೆಯುವಂತಾಗುವುದು ಇದರ ಉದ್ದೇಶ. ನಗರದ ಸೌಂದರ್ಯ ಹೆಚ್ಚಿಸಲು ವೃತ್ತಗಳ ಅಭಿವೃದ್ಧಿ, ರಸ್ತೆ ಮತ್ತು ಚರಂಡಿ ಕಾಮಗಾರಿಗಳು, ಉದ್ಯಾನವನಗಳ ಸಂರಕ್ಷಣೆ ಸೇರಿದಂತೆ ವಿವಿಧ ಯೋಜನೆಗಳು ವೇಗ ಪಡೆದುಕೊಂಡಿವೆ. ಅನಧಿಕೃತ ಪ್ಲೆಕ್ಸ್ ಹಾಗೂ ಜಾಹೀರಾತುಗಳನ್ನು ತೆರವುಗೊಳಿಸುವ ಕಾರ್ಯ ಜೋರಾಗಿದೆ. ಆದಾಯ ತರುವ ಸಾಮರ್ಥ್ಯವಿಲ್ಲದ ಸ್ಥಳಗಳನ್ನು ಗುರುತಿಸಿ, ಅವುಗಳನ್ನು ಆದಾಯದ ಮೂಲಗಳಾಗಿ ಪರಿವರ್ತಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು. ಪಾಲಿಕೆಯ ಆರ್ಥಿಕ ಸ್ಥಿತಿಗೆ ಬಲ ತುಂಬಲು ೫೦ ಬಸ್ ಶೆಲ್ಟರ್‌ಗಳು ಹಾಗೂ ಸುಮಾರು ೨೦೦ ಎಲ್-ಶೇಪ್ ಜಾಹೀರಾತು ಫಲಕಗಳನ್ನು ನಿರ್ಮಿಸಲು ಟೆಂಡರ್‌ ಪ್ರಕ್ರಿಯೆ ಆರಂಭಿಸಲಾಗಿದೆ. ಸಾರಿಗೆ ಇಲಾಖೆಯ ಸಹಕಾರದೊಂದಿಗೆ ಈ ಯೋಜನೆ ಜಾರಿಗೆ ಬರಲಿದ್ದು, ನಿರಂತರ ಆದಾಯ ಹರಿವಿಗೆ ಇದು ಸಹಕಾರಿ ಆಗಲಿದೆ. ನಗರದಲ್ಲಿ ಶೌಚಾಲಯಗಳ ಕೊರತೆಯನ್ನು ನಿವಾರಿಸಲು ೧೫ ಕೋಟಿ ರು. ವೆಚ್ಚದಲ್ಲಿ ಹೊಸ ಶೌಚಾಲಯ ನಿರ್ಮಾಣ ಮತ್ತು ೧೦ ಲಕ್ಷ ರು. ವೆಚ್ಚದಲ್ಲಿ ದುರಸ್ತಿ ಕಾರ್ಯ ಕೈಗೊಳ್ಳಲಾಗುತ್ತಿದೆ. ನಿರ್ವಹಣೆಯನ್ನು ಸಂಘ-ಸಂಸ್ಥೆಗಳಿಗೆ ಟೆಂಡರ್‌ ಮೂಲಕ ನೀಡುವ ಮೂಲಕ ಉತ್ತಮ ನಿರ್ವಹಣೆ ಖಚಿತಪಡಿಸಲು ಯೋಜಿಸಲಾಗಿದೆ. ರಸ್ತೆಗಳ ಗುಂಡಿ ಮುಚ್ಚುವ ಕಾರ್ಯಗಳಿಗೆ ೫೦ ಲಕ್ಷ ರು.ವರೆಗೆ ಅಧಿಕಾರ ನೀಡಲಾಗಿದ್ದು, ತ್ವರಿತ ಕಾಮಗಾರಿಗಳಿಗೆ ಇದು ಸಹಕಾರಿ ಆಗಿದೆ. ಪೇ ಪಾರ್ಕಿಂಗ್ ವ್ಯವಸ್ಥೆ ಜಾರಿಗೆ ತರಲು ಪೊಲೀಸ್ ಇಲಾಖೆಯೊಂದಿಗೆ ಚರ್ಚೆ ನಡೆಸಲಾಗುತ್ತಿದೆ. ಸಿಸಿಟಿವಿ ಕ್ಯಾಮೆರಾ ವ್ಯವಸ್ಥೆ ಹಾಗೂ ಸಂಚಾರ ನಿಯಂತ್ರಣ ಸುಧಾರಣೆಗೂ ಪಾಲಿಕೆ ಸಕ್ರಿಯವಾಗಿದೆ. ನಗರದಲ್ಲಿನ ಕಟ್ಟಡ ನಿಯಮ ಉಲ್ಲಂಘನೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ. ಹೆಚ್ಚುವರಿ ನಿರ್ಮಾಣಗಳಿಗೆ ದಂಡ ವಿಧಿಸುವುದರ ಜೊತೆಗೆ, ಆಸ್ಪತ್ರೆಗಳ ಪರಿಶೀಲನೆ ನಡೆಸಿ ನಿಯಮ ಉಲ್ಲಂಘನೆ ಕಂಡುಬಂದಲ್ಲಿ ನೋಟಿಸ್ ನೀಡಲಾಗುತ್ತಿದೆ. ಸಂಬಂಧಿತ ಕಾಯ್ದೆಗಳ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ. ನಗರಪಾಲಿಕೆಯ ವ್ಯಾಪ್ತಿ ಹೆಚ್ಚಾದಂತೆ ಸಿಬ್ಬಂದಿ ಕೊರತೆ ಹೆಚ್ಚಾಗಿದೆ. ವಿಶೇಷವಾಗಿ ಎಂಜಿನಿಯರ್‌ಗಳ ಕೊರತೆಯಿಂದ ಕಾಮಗಾರಿಗಳ ಮೇಲೆ ಒತ್ತಡ ಹೆಚ್ಚಿದ್ದು, ಅಗತ್ಯ ಸಿಬ್ಬಂದಿ ನೇಮಕಾತಿಗೆ ಸರ್ಕಾರದ ಗಮನ ಸೆಳೆಯಲಾಗಿದೆ. ಇ-ಸೇವೆಗಳ ಮೂಲಕ ಸಾರ್ವಜನಿಕರ ಸಮಸ್ಯೆಗಳನ್ನು ವೇಗವಾಗಿ ಪರಿಹರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಆಡಳಿತದಲ್ಲಿ ಪಾರದರ್ಶಕತೆ ತರಲು ಹಾಗೂ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಸಿಬ್ಬಂದಿಗೆ ಸ್ಪಷ್ಟ ಮಾರ್ಗದರ್ಶನ ನೀಡಲಾಗಿದೆ ಎಂದು ನಿತೇಶ್ ಪಾಟೀಲ್ ತಿಳಿಸಿದರು.

ಇನ್ನೂ ಕಳೆದ ತಿಂಗಳು ವಿವಾದಕ್ಕೆ ಎಡೆ ಮಾಡಿದ್ದ ಸಿಸಿ ಕ್ಯಾಮರಾ ಅಳವಡಿಕೆ ಮಾಡಿದ ಬಗ್ಗೆ ಸ್ಪಷ್ಟ ಮಾಹಿತಿ ಪಡೆದು ಮುಂದಿನ ಕ್ರಮಕೈಗೊಳ್ಳುವುದಾಗಿ ಮಾಧ್ಯಮದವರ ಹೇಳಿಕೆಯೊಂದಕ್ಕೆ ಉತ್ತರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಲ್.ಜಿ.ಹಾವನೂರ್ ಆದರ್ಶ ಪಾಲಿಸಲು ನ್ಯಾ.ಊರ್ಮಿಳಾ ವಿ.ಕರೆ
ಶ್ರೀಕ್ಷೇತ್ರ ಧರ್ಮಸ್ಥಳದಿಂದ ನಿರ್ಮಿಸಿದ ಮನೆ ನಿರ್ಗತಿಕ ದಂಪತಿಗೆ ವಿತರಣೆ