ಗಣೇಶ ವಿಸರ್ಜನೆ ವೇಳೆ ಕಂಡು ಕೇಳರಿಯದ ದುರಂತ - ಹಾಸನ ಹೊರವಲಯದಲ್ಲಿ ಅತ್ಯಂತ ಭೀಕರ ಅಪಘಾತ

Published : Sep 13, 2025, 05:06 AM IST
hassan truck crash

ಸಾರಾಂಶ

ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಕಂಡುಕೇಳರಿಯದ ದುರಂತವೊಂದು ಹಾಸನದಲ್ಲಿ ಸಂಭವಿಸಿದೆ. ತಾಲೂಕಿನ ಮೊಸಳೆ ಹೊಸಳ್ಳಿಯಲ್ಲಿ ಶುಕ್ರವಾರ ರಾತ್ರಿ ಗಣೇಶ ವಿಸರ್ಜನೆಗೆ ತೆರಳುತ್ತಿದ್ದ ಜನರ ಗುಂಪಿನ ಮೇಲೆ ಮಿನಿ ಕಂಟೇನರ್‌ ಲಾರಿಯೊಂದು ಹರಿದಿದ್ದು, ಸ್ಥಳದಲ್ಲೇ 8 ಮಂದಿ ಸಾವಿಗೀಡಾಗಿದ್ದಾರೆ

 ಹಾಸನ :  ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಕಂಡುಕೇಳರಿಯದ ದುರಂತವೊಂದು ಹಾಸನದಲ್ಲಿ ಸಂಭವಿಸಿದೆ. ತಾಲೂಕಿನ ಮೊಸಳೆ ಹೊಸಳ್ಳಿಯಲ್ಲಿ ಶುಕ್ರವಾರ ರಾತ್ರಿ ಗಣೇಶ ವಿಸರ್ಜನೆಗೆ ತೆರಳುತ್ತಿದ್ದ ಜನರ ಗುಂಪಿನ ಮೇಲೆ ಮಿನಿ ಕಂಟೇನರ್‌ ಲಾರಿಯೊಂದು ಹರಿದಿದ್ದು, ಸ್ಥಳದಲ್ಲೇ 8 ಮಂದಿ ಸಾವಿಗೀಡಾಗಿದ್ದಾರೆ. ಈ ಭೀಕರ ಅಪಘಾತದಲ್ಲಿ 20 ಜನರು ಗಾಯಗೊಂಡಿದ್ದು, ಅವರನ್ನು ಹಾಸನದ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಈ ಪೈಕಿ, 10 ಮಂದಿಯ ಸ್ಥಿತಿ ಗಂಭೀರವಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಏರುವ ಆತಂಕವಿದೆ.

ಮಿನಿ ಕಂಟೇನರ್‌ ಲಾರಿ ಮಹಾರಾಷ್ಟ್ರ ನೋಂದಣಿ ಸಂಖ್ಯೆ ಹೊಂದಿದ್ದು, ಚಾಲಕ ಭುವನೇಶ್‌ ಎಂಬಾತನನ್ನು ಬಂಧಿಸಲಾಗಿದೆ. ಮೃತರಲ್ಲಿ ಬಹುತೇಕ ಮಂದಿ ಯುವಕರು.

ಆಗಿದ್ದೇನು?:

ಹಾಸನ-ಮೈಸೂರು ರಸ್ತೆಯಲ್ಲಿರುವ ಮೊಸಳೆ ಹೊಸಳ್ಳಿ ಈ ಭಾಗದ ಪ್ರಮುಖ ವಾಣಿಜ್ಯ ಕೇಂದ್ರವಾಗಿದ್ದು, ಇಲ್ಲಿ ವಿಜೃಂಭಣೆಯಿಂದ ಗಣೇಶನನ್ನು ಪ್ರತಿಷ್ಠಾಪಿಸಲಾಗಿತ್ತು. ಶುಕ್ರವಾರ ಸಂಜೆ ಗಣೇಶ ವಿಸರ್ಜನಾ ಮೆರವಣಿಗೆ ಅದ್ಧೂರಿಯಾಗಿ ನಡೆಯುತ್ತಿತ್ತು. ಮೆರವಣಿಗೆ ಊರೊಳಗೆ ಸಾಗಿ, ರಾತ್ರಿ 8.30ರ ಸುಮಾರಿಗೆ ಹಾಸನ-ಮೈಸೂರು ಮುಖ್ಯರಸ್ತೆಗೆ ಆಗಮಿಸಿತ್ತು. ಈ ವೇಳೆ, ಹಾಸನದ ಕಡೆಯಿಂದ ವೇಗವಾಗಿ ಬಂದ ಕಂಟೇನರ್‌ ಲಾರಿ, ರಸ್ತೆ ಬದಿ ನಿಂತಿದ್ದ ಬೈಕ್‌ಗೆ ಡಿಕ್ಕಿ ಹೊಡೆದು, ಬಳಿಕ ರಸ್ತೆಯ ಎಡಬದಿಯಿಂದ ಡಿವೈಡರ್‌ ಹಾರಿ, ಬಲಭಾಗಕ್ಕೆ ನುಗ್ಗಿದೆ. ಅದೇ ಜಾಗದಲ್ಲಿ ಡಿಜೆ ಮುಂದೆ ಯುವಕರು ನೃತ್ಯ ಮಾಡುತ್ತಿದ್ದರು. ಏನಾಗುತ್ತಿದೆ ಎನ್ನುವುದು ಅರಿವಿಗೆ ಬರುವಷ್ಟರಲ್ಲಿ ಯಮನಂತೆ ನುಗ್ಗಿದ ಲಾರಿಯಡಿ ಸಿಲುಕಿ ಸ್ಥಳದಲ್ಲೇ ಎಂಟು ಯುವಕರು ಸಾವನ್ನಪ್ಪಿದ್ದಾರೆ.

ವೇಗವಾಗಿ ಬಂದ ಲಾರಿ:

ನಾಲ್ಕು ಪಥದ ಈ ರಸ್ತೆಯಲ್ಲಿ ಡಿವೈಡರ್‌ ಇದ್ದು, ಒಂದು ಭಾಗದಲ್ಲಿ ಮೆರವಣಿಗೆಗೆ ಅವಕಾಶ ಮಾಡಿಕೊಟ್ಟು, ಇನ್ನೊಂದು ರಸ್ತೆಯಲ್ಲಿ ಎರಡೂ ಬದಿಯ ವಾಹನಗಳ ಓಡಾಟಕ್ಕೆ ಪೊಲೀಸರು ಅನುವು ಮಾಡಿಕೊಟ್ಟಿದ್ದರು. ಸುಮಾರು 400 ಮೀಟರ್‌ ದೂರದಿಂದಲೇ ಮೆರವಣಿಗೆ ಕಾಣುವಷ್ಟು ರಸ್ತೆ ನೇರವಾಗಿದೆ. ಆದಾಗ್ಯೂ ಕಂಟೇನರ್‌ ಲಾರಿಯ ಚಾಲಕ, ಲಾರಿಯನ್ನೂ ಸ್ವಲ್ಪವೂ ನಿಯಂತ್ರಿಸದೆ ಬಂದ ವೇಗದಲ್ಲೇ ನುಗ್ಗಿಸಿದ್ದಾನೆ.

ಮಹಾರಾಷ್ಟ್ರ ನೋಂದಣಿ ಲಾರಿ:

ಯಮನಂತೆ ಮೆರವಣಿಗೆ ಮೇಲೆ ನುಗ್ಗಿದ ಲಾರಿ ಮಹಾರಾಷ್ಟ್ರ ನೋಂದಣಿ (ಎಂಎಚ್‌ 23, ಎಯು 3605) ಹೊಂದಿದೆ. ಈ ಮಿನಿ ಕಂಟೇನಲ್‌ ಲಾರಿ, ಎವಿಜಿ ಲಾಜಿಸ್ಟಿಕ್ಸ್‌ಗೆ ಸೇರಿದ್ದಾಗಿದೆ. ಹವಾನಿಯಂತ್ರಿತ ಕಂಟೇನರ್‌ ಆಗಿರುವುದರಿಂದ ಬಾಕ್ಸ್‌ನಲ್ಲಿ ಆಹಾರ ಪದಾರ್ಥಗಳು ಇರುವ ಸಾಧ್ಯತೆ ಇದೆ ಎನ್ನಲಾಗಿದೆ. ಲಾರಿ ಚಾಲಕನನ್ನು ಬಂಧಿಸಲಾಗಿದ್ದು, ತನಿಖೆ ಮುಂದುವರಿದಿದೆ. 

5 ಲಕ್ಷ ರು. ಪರಿಹಾರ

ಸುದ್ದಿ ತಿಳಿದು ಅತೀವ ದುಃಖವಾಯಿತು. ಮೃತರ ಆತ್ಮಕ್ಕೆ ಶಾಂತಿ ಸಿಗಲಿ. ಗಾಯಾಳುಗಳು ಆದಷ್ಟು ಶೀಘ್ರ ಗುಣಮುಖರಾಗಲಿ. ಮೃತರ ಕುಟುಂಬಗಳಿಗೆ ಸರ್ಕಾರದ ವತಿಯಿಂದ ತಲಾ 5 ಲಕ್ಷ ರು. ಪರಿಹಾರ ನೀಡಲಾಗುವುದು. ಘಟನೆಯಲ್ಲಿ ಗಾಯಗೊಂಡವರ ಚಿಕಿತ್ಸೆಯ ವೆಚ್ಚವನ್ನು ಸರ್ಕಾರವೇ ಭರಿಸಲಿದೆ.

- ಸಿದ್ದರಾಮಯ್ಯ, ಮುಖ್ಯಮಂತ್ರಿ

--

ಅಲ್ಲಿ ಆಗಿದ್ದೇನು?

ಹಾಸನ- ಮೈಸೂರು ರಸ್ತೆಯ ಮೊಸಳೆ ಹೊಸಳ್ಳಿ ಆ ಭಾಗದ ಪ್ರಮುಖ ವಾಣಿಜ್ಯ ಕೇಂದ್ರ. ಅದ್ಧೂರಿ ಗಣೇಶೋತ್ಸವ ಆಯೋಜಿಸಲಾಗಿತ್ತು

- ಶುಕ್ರವಾರ ಸಂಜೆ ಗಣಪತಿ ವಿಸರ್ಜನಾ ಮೆರವಣಿಗೆ ನಡೆಯುತ್ತಿತ್ತು. ಊರಿನೊಳಗೆ ಸಂಚರಿಸಿ ರಾತ್ರಿ 8.30ಕ್ಕೆ ಮುಖ್ಯರಸ್ತೆಗೆ ಬಂದಿತ್ತು

- 4 ಪಥದ ರಸ್ತೆಯಲ್ಲಿ ಡಿವೈಡರ್‌ ಇದ್ದು, ಒಂದು ಬದಿಯಲ್ಲಿ ಮೆರವಣಿಗೆ ಸಾಗುತ್ತಿತ್ತು. ಮತ್ತೊಂದು ಬದಿಯಲ್ಲಿ ದ್ವಿಮುಖ ವಾಹನ ಸಂಚಾರ ಇತ್ತು

- 400 ಮೀ. ದೂರದಿಂದಲೇ ಮೆರವಣಿಗೆ ಕಾಣಿಸುವಷ್ಟು ರಸ್ತೆ ನೇರವಾಗಿತ್ತು. ಹಾಸನ ಕಡೆಯಿಂದ ಬಂದ ಕಂಟೇನರ್‌ ಬೈಕ್‌ಗೆ ಡಿಕ್ಕಿ ಹೊಡೆಯಿತು

- ಬಳಿಕ ಡಿವೈಡರ್‌ನಿಂದ ಹಾರಿ ಗಣಪತಿ ವಿಸರ್ಜನೆ ಮೆರವಣಿಗೆ ವೇಳೆ ನೃತ್ಯ ಮಾಡುತ್ತಿದ್ದವರ ಮೇಲೆ ಹರಿಯಿತು. ಜನರನ್ನು ಬಲಿ ಪಡೆಯಿತು

PREV
Read more Articles on

Recommended Stories

ಡಿ.27ರಂದು ಜಿಲ್ಲಾ ಮಟ್ಟದ ದ್ವಿತೀಯ ಬ್ರಾಹ್ಮಣ ಸಮ್ಮೇಳನ: ಬ್ರಾಹ್ಮಣ ಸಭಾ ಅಧ್ಯಕ್ಷ ಮಂಜುನಾಥ್
ವಕೀಲರ ಪ್ರತಿಭಟನೆಗೆ ಡೀಸಿ ಲತಾ ಕುಮಾರಿ ಬೇಸರ