ಕನ್ನಡಪ್ರಭ ವಾರ್ತೆ ಹಾಸನ ಹಾಸನ ಜಿಲ್ಲೆ ಮಲೆನಾಡು, ಅರೆ ಮಲೆನಾಡು, ಬಯಲುಸೀಮೆ ...ಹೀಗೆ ಬಹುಬಗೆಯ ಭೌಗೋಳಿಕತೆಯನ್ನು ಒಳಗೊಂಡಿದೆ. ಮಲೆನಾಡಿನಲ್ಲಿ ಭಾರೀ ಮಳೆ, ಅರೆ ಮಲೆನಾಡಿನಲ್ಲಿ ಸಾಧಾರಣ ಮಳೆ, ಬಯಲುಸೀಮೆಯಲ್ಲಿ ಮಳೆಯೇ ಇಲ್ಲ ಎನ್ನುವ ಪರಿಸ್ಥಿತಿಗಳು ಈ ಬಾರಿ ಬದಲಾಗಿದೆ. ಏಕೆಂದರೆ ಎಡೆಬಿಡದೆ ಸುರಿಯುತ್ತಿರುವ ಪುನರ್ವಸು ಮಳೆ ಅರೆ ಮಲೆನಾಡು ತಾಲೂಕುಗಳಾದ ಹಾಸನ, ಬೇಲೂರು, ಆಲೂರು ಹಾಗೂ ಅರಕಲಗೂಡು ತಾಲೂಕಿನ ಜನರಿಗೆ ಮಲೆನಾಡಿನ ಅನುಭವ ಕೊಡುತ್ತಿದೆ. ಈ ಹಿಂದಿನ ಯಾವ ಆಷಾಢದಲ್ಲೂ ಹಾಸನ ನಗರದಲ್ಲಿ ಈ ರೀತಿಯ ಸೋನೆ ಮಳೆ ಸುರಿದಿರಲಿಲ್ಲ. ಕಳೆದ ವರ್ಷವಂತೂ ಇದೀಗ ಬರುತ್ತಿರುವ ಮಳೆಯ ಅರ್ಧ ಭಾಗವೂ ಬರಲಿಲ್ಲ. ಆದರೆ ಈ ಬಾರಿ ಮಳೆಯ ಜತೆಗೆ ಸಂಪೂರ್ಣ ಮೋಡ ಮುಸುಕಿದ ವಾತಾವರಣ. ಆದರೆ ಚಳಿ ಇಲ್ಲ. ಇಂತಹ ವಾತಾವರಣ ಸಕಲೇಶಪುರ, ಚಿಕ್ಕಮಗಳೂರು, ಮಡಿಕೇರಿಗಳಲ್ಲಿ ಕಾಣಸಿಗುತ್ತಿತ್ತು. ಅದನ್ನು ನೋಡಲೆಂದೇ ಇಲ್ಲಿನ ಜನರು ಅಲ್ಲಿಗೆ ಹೋಗುತ್ತಿದ್ದರು. ಆದರೆ, ಮಲೆನಾಡ ಅನುಭವವನ್ನು ಈ ಬಾರಿ ಇಲ್ಲಿಯೇ ಅನುಭವಿಸುವಂತಾಗಿದೆ. ಹಿಂದೆಲ್ಲಾ ಸೋನೆ ಮಳೆ ಎಂದರೆ ಒಂದಷ್ಟು ಸಮಯ ಬಂದು ಇನ್ನೊಂದಷ್ಟು ಸಮಯ ನಿಲ್ಲುತ್ತಿತ್ತು. ಇಲ್ಲವೇ ರಾತ್ರಿ ವೇಳೆ ಸುರಿಯುತ್ತಿತ್ತು. ಆದರೆ, ಈ ಬಾರಿ ಹಾಗಲ್ಲ. ಹೆಚ್ಚೆಂದರೆ ಹತ್ತು ನಿಮಿಷ ನಿಲ್ಲಬಹುದು. ಆದರೆ, ಆ ಹತ್ತು ನಿಮಿಷದಲ್ಲಿ ಎಷ್ಟು ಸುರಿಯುತ್ತಿತ್ತೋ ಅಷ್ಟೂ ಮಳೆ ಆ ನಂತರದಲ್ಲಿ ಸುರಿಯುತ್ತಿದೆ. ಒಂದೇ ಸಮನೆ ಸುರಿಯುವ ಮಳೆಯನ್ನು ಕಂಡ ಜನರು ಇದೇನು ಮಲೆನಾಡಿನಲ್ಲಿ ಸುರಿಯುವಂತೆ ಸುರಿಯುತ್ತಿದೆಲ್ಲಾ ಎಂದು ತಲೆ ಕೆರೆದುಕೊಳ್ಳುವಂತಾಗಿದೆ. ಪ್ರತಿನಿತ್ಯ ಕೆಲಸ ಕಾರ್ಯಗಳಿಗಾಗಿ ಕಚೇರಿಗೆ ಹೋಗುವವರು ಹಾಗೂ ಶಾಲಾ ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳಿಗೂ ಬಿಡುವು ನೀಡದೆ ಮಳೆ ಸುರಿಯುತ್ತಿರುವುದರಿಂದ ಕಳೆದ ಮೂರು ದಿನಗಳಿಂದ ಹಾಸನ, ಆಲೂರು, ಸಕಲೇಶಪುರ, ಬೇಲೂರು ತಾಲೂಕಿನ ಶಾಲೆಗಳಿಗೆ ರಜೆಯನ್ನೇ ನೀಡಲಾಗಿದೆ. ಆದರೆ, ಕಚೇರಿಗಳಿಗೆ ಹೋಗುವವರು ಅನಿವಾರ್ಯವಾಗಿ ಮಳೆಯಲ್ಲೇ ಮೈ ಮುದುಡಿಕೊಂಡು ಓಡಾಡುವಂತಾಗಿದೆ. ಆದರೆ, ಶಾಲೆಗಳಿಗೆ ರಜೆ ನೀಡಿರುವ ಕಾರಣ ಮಕ್ಕಳು ಮಾತ್ರ ಮನೆಯಲ್ಲಿ ಬೆಚ್ಚಗೆ ರಜೆಯ ಮಜೆ ಅನುಭವಿಸುತ್ತಿದ್ದಾರೆ. ಮಳೆ ಇರುವುದರಿಂದ ಮಕ್ಕಳು ಶಾಲೆಗೆ ಹೋಗದೆ ಜತೆಗಾರರೊಂದಿಗೆ ಆಟವಾಡಲು ಹೊರಗೆ ಹೋಗಲೂ ಆಗದೆ ಮನೆಯಲ್ಲೇ ಇರುವುದರಿಂದ ಸಂತೋಷಗೊಂಡಿರುವ ಅಮ್ಮಂದಿರು ಮಕ್ಕಳಿಗೆ ಚಳಿಗೆ ಬಿಸಿ ಬಿಸಿ ಕುರುಕಲು ತಿಂಡಿಗಳನ್ನು ಮಾಡಿಕೊಡುವಲ್ಲಿ ನೆಮ್ಮದಿ ಕಾಣುತ್ತಿದ್ದಾರೆ. ಹಾಗೆಯೇ ಈ ಕೌಟುಂಬಿಕ ಸುಖಕ್ಕೆ ದಾರಿ ಮಾಡಿಕೊಟ್ಟ ಸೋನೆ ಮಳೆಗೊಂದು ಥ್ಯಾಂಕ್ಸನ್ನೂ ಹೇಳುತ್ತಿದ್ದಾರೆ.
ಅರೆಮಲೆನಾಡು ತಾಲೂಕುಗಳಲ್ಲಿ ಪ್ರಮುಖ ಬೆಳೆ ಮುಸುಕಿನ ಜೋಳ ಹಾಗೂ ಆಲೂಗಡ್ಡೆ. ಆದರೆ, ಈ ವರ್ಷದ ಅತಿಯಾದ ಸೋನೆ ಮಳೆಗೆ ಜೋಳ ಬೆಳವಣಿಗೆ ಬಂದಿಲ್ಲ. ಅರ್ಧದಷ್ಟು ಬೆಳೆದಿದ್ದ ಆಲೂಗಡ್ಡೆಯೂ ಮಳೆ ಹೆಚ್ಚಾಗಿ ಕಳೆಗುಂದಿದೆ. ಮುಸುಕಿನ ಜೋಳಕ್ಕೆ ಮೊದಲ ಹಂತದಲ್ಲಿ ಹಾಕಬೇಕಿದ್ದ ಗೊಬ್ಬರ ಹಾಕಲಾಗದೆ ರೈತರು ಗೊಬ್ಬರ ತಂದು ಮನೆಯಲ್ಲಿಟ್ಟುಕೊಂಡು ಮಳೆ ಬಿಡುವು ನೀಡುವುದೆಂದು ಕಾಯುತ್ತಿದ್ದಾರೆ. *ಬಾಕ್ಸ್‌ನ್ಯೂಸ್: ಟಿವಿ ಮುಂದೆ ಕುಳಿತ ರೈತರು ನಗರದ ಜನರ ಕಥೆ ಇದಾದರೆ, ಸದಾ ಹೊಲ ಮನೆ, ದನ ಕರು ಎಂದು ಬೆಳಗ್ಗೆ ಎದ್ದು ಹೊಲ ತೋಟಗಳತ್ತ ಹೋದರೆ ಮತ್ತೆ ಸಂಜೆಯೇ ಮನೆಗೆ ಬರುತ್ತಿದ್ದ ರೈತರು ಕೂಡ ಎಡೆಬಿಡದ ಮಳೆಯಿಂದಾಗಿ ಏನೂ ಮಾಡಲಾಗದೆ ಟೈಮ್‌ಪಾಸ್‌ಗಾಗಿ ಟಿವಿ ಮುಂದೆ ಕೂರುವಂತಾಗಿದೆ. ಮೈ ಮುರಿದು ದುಡಿಯುವ ರೈತರಿಗೆ ದಿನದ 24 ಗಂಟೆಯೂ ಸಾಲುವುದಿಲ್ಲ. ಆದರೆ, ಇಂತಹ ರೈತರು ಕೂಡ ಮನೆಯಲ್ಲಿ ಟಿವಿ ಮುಂದೆಯೋ, ಚಳಿ ಕಾಯಿಸಲಿಕ್ಕಾಗಿ ಒಲೆ ಮುಂದೆಯೋ...ಇಲ್ಲವೇ ನಾಲ್ಕೈದು ಜನ ಮನೆಯ ಜಗುಲಿಯ ಮೇಲೆ ಕುಳಿತು ಹರಟೆ ಹೊಡೆಯಲು ಈ ಮಳೆ ಕಾಲಾವಕಾಶ ಮಾಡಿಕೊಟ್ಟಿದೆ.