ನಮ್ಮ ಜೀವನದಲ್ಲಿ ಬೀಳುವುದಕ್ಕೆ ಹೆಚ್ಚು ಸಮಯ ಬೇಕಿಲ್ಲ. ಆದರೆ ಏಳುವುದಕ್ಕೆ ಬಹುಕಾಲ ಬೇಕು. ಆತುರತೆ ಮತ್ತು ಆಸೆಯೇ ಬೀಳುವುದಕ್ಕೆ ಕಾರಣ.
ಶಾರದಾಂಬಾ ದೇವಸ್ಥಾನದ ವರ್ಧಂತಿ ಉತ್ಸವದಲ್ಲಿ ಸ್ವಾಮೀಜಿ ಆಶೀರ್ವಚನ
ಕನ್ನಡಪ್ರಭ ವಾರ್ತೆ ಯಲ್ಲಾಪುರನಮ್ಮ ಜೀವನದಲ್ಲಿ ಬೀಳುವುದಕ್ಕೆ ಹೆಚ್ಚು ಸಮಯ ಬೇಕಿಲ್ಲ. ಆದರೆ ಏಳುವುದಕ್ಕೆ ಬಹುಕಾಲ ಬೇಕು. ಆತುರತೆ ಮತ್ತು ಆಸೆಯೇ ಬೀಳುವುದಕ್ಕೆ ಕಾರಣ. ಇಂದು ಸಮಾಜದಲ್ಲಿ ಸಾಂಸ್ಕೃತಿಕ ಪತನ ಕಂಡುಬರುತ್ತಿದೆ. ಅಧರ್ಮಯುಕ್ತ ವಿವಾಹಗಳು, ಮಿತಸಂತಾನ ಇವುಗಳಿಂದಾಗಿ ಧಾರ್ಮಿಕ ಪತನವನ್ನೂ ಕಾಣುತ್ತಿದ್ದೇವೆ. ಇವನ್ನು ಸರಿಪಡಿಸಲು ಯೋಜನಾಬದ್ಧವಾದ ಅನೇಕ ಕಾಲ ಶ್ರಮಪಡಬೇಕಾಗುತ್ತದೆ ಎಂದು ಸೋಂದಾ ಸ್ವರ್ಣವಲ್ಲೀ ಸಂಸ್ಥಾನಾಧೀಶ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಗುರುಗಳು ನುಡಿದರು.ಗುರುವಾರ ಪಟ್ಟಣದ ನಾಯಕನಕೆರೆಯ ಶ್ರೀ ಶಾರದಾಂಬಾ ಮತ್ತು ಮಾರುತಿ ದೇವಸ್ಥಾನದ ವರ್ಧಂತಿ ಉತ್ಸವದ ಸಮಾರೋಪ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.ಕೊಲ್ಲಿ ರಾಷ್ಟ್ರಗಳಲ್ಲಿ ಯುದ್ದವಾಗುತ್ತಿದೆ. ಆ ದೇಶಗಳ ನಾಶ ಒಂದು ತಿಂಗಳಲ್ಲಿ ಆಗಿದೆ. ಅದನ್ನು ಸರಿಪಡಿಸಲು ಎಷ್ಟೋ ದಶಕಗಳೇ ಬೇಕು. ೨ನೇ ಮಹಾಯುದ್ಧದಲ್ಲಿ ಜಪಾನ್ ಸ್ಥಿತಿ ನೋಡಿದರೆ ಅರ್ಥವಾಗುತ್ತದೆ. ಅಪಘಾತ ತಕ್ಷಣ ಆಗುತ್ತದೆ. ಸರಿಪಡಿಸುವುದಕ್ಕೆ ಯೋಜನಾಬದ್ಧ ಪ್ರಯತ್ನ ಬೇಕು ಎಂದ ಶ್ರೀಗಳು, ಧರ್ಮದಿಂದಲೇ ಉನ್ನತಿಯ ಪ್ರಾಪ್ತಿಯಾಗಬೇಕು. ವೇದ ಭಗವಂತನಿಂದ ಬಂದದ್ದು, ಅದು ಅಪೌರುಷವಾದದ್ದು. ಬ್ರಾಹ್ಮಣನಾದವ ವೇದವನ್ನು ಅಧ್ಯಯನ, ತಪಸ್ಸಿನ ಮೂಲಕ ಸಾಧಿಸಬೇಕು. ಆಗ ಮಾತ್ರ ಗೌರವ ಪ್ರಾಪ್ತಿಯಗುತ್ತದೆ. ಪಾಠಶಾಲೆಗಳನ್ನು ನಡೆಸುವುದೇ ಈ ಎಲ್ಲ ಉದ್ದೇಶದಿಂದ. ಇಂದು ಎರಡು ವಿದ್ವಾಂಸರನ್ನು, ಒಬ್ಬ ಪ್ರತಿಭಾವಂತ ವಿದ್ಯಾರ್ಥಿಯನ್ನು ಸನ್ಮಾನಿಸಿದ್ದೇವೆ. ಮಾತೆಯರು ಶಾಂಕರ ಸ್ತೋತ್ರ ಸುಂದರವಾಗಿ ಪಠಿಸಿದ್ದಾರೆ. ಏಪ್ರಿಲ್ ೨೦ ರಂದು ಜೊಯಿಡಾ, ಅಂಕೋಲಾ, ಯಲ್ಲಾಪುರ ತಾಲೂಕಿನ ಎಲ್ಲ ಶಿಷ್ಯ ಮಾತೆಯರು ಶಾಂಕರ ಸ್ತೋತ್ರವನ್ನು ಶಾರದಾಂಬಾದ ಶಂಕರಾಚಾರ್ಯ ಗುರುಭವನದಲ್ಲಿ ಪಾರಾಯಣ ಮಾಡಬೇಕು. ಶಿರಸಿ, ಸಿದ್ದಾಪುರದವರು ಯೋಗಮಂದಿರದಲ್ಲಿ ಪಾರಾಯಣ ಮಾಡಬೇಕು. ಅದೇ ೨೧ ರಂದು ಶಂಕರ ಜಯಂತಿ. ಎಲ್ಲರೂ ಶ್ರೀಮಠಕ್ಕೆ ಬರಬೇಕು ಎಂದು ಶ್ರೀಗಳು ತಿಳಿಸಿದರು. ವಿಶ್ವದರ್ಶನ ಶಿಕ್ಷಣ ಸಮೂಹದ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ ಮಾತನಾಡಿದರು.ನಿವೃತ್ತ ಕುಲಪತಿ ಡಾ. ಪರಮೇಶ್ವರ ಶಾಸ್, ನಿವೃತ್ತ ಸಂಸ್ಕೃತ ಅಧ್ಯಾಪಕ ವಿ.ನಾರಾಯಣ ಭಟ್ಟ ಮೊಟ್ಟೆಪಾಲ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಈ ಸಂದರ್ಭ ಶಾರದಾಂಬಾ ಪಾಠಶಾಲೆಯ ಮಾಜಿ ವಿದ್ಯಾರ್ಥಿ, ಶ್ರೀಮಠದಲ್ಲಿ ಉನ್ನತ ವ್ಯಾಸಂಗ ಮಾಡುತ್ತಿರುವ, ರಾಜ್ಯಮಟ್ಟದಲ್ಲಿ ಅನೇಕ ಪ್ರಶಸ್ತಿ ಪಡೆದ ನಾಗರಾಜ ಭಟ್ಟ ಗಂಗೆಮನೆ ಇವರನ್ನೂ ಶ್ರೀಗಳು ಪುರಸ್ಕರಿಸಿದರು. ವೇದಿಕೆಯಲ್ಲಿ ಶಾರದಾಂಬಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಉಮೇಶ ಭಾಗ್ವತ, ನಗರಸೀಮಾ ಪರಿಷತ್ ಅಧ್ಯಕ್ಷ ಸುಬ್ರಹ್ಮಣ್ಯ ಹೆಗಡೆ, ನಗರ ಮಾತೃಮಂಡಳಿ ಅಧ್ಯಕ್ಷೆ ಆಶಾ ಬಗನಗದ್ದೆ ಉಪಸ್ಥಿತರಿದ್ದರು. ಪಾಠಶಾಲಾ ವಿದ್ಯಾರ್ಥಿಗಳಿಂದ ವೇದಘೋಷ. ಅಧ್ಯಾಪಕ ಡಾ. ನರಸಿಂಹ ಭಟ್ಟ ನಿರ್ವಹಿಸಿದರು. ಶಾರದಾಂಬಾ ದೇವಸ್ಥಾನದ ಅಧ್ಯಕ್ಷ ಎನ್.ಕೆ. ಭಟ್ಟ ಅಗ್ಗಾಶಿಕುಂಬ್ರಿ ಸ್ವಾಗತಿಸಿದರು. ಶ್ರೀಪಾದ ಭಟ್ಟ ಮತ್ತು ನರಸಿಂಹ ಭಟ್ಟ ಸನ್ಮಾನಪತ್ರ ವಾಚಿಸಿ, ವಂದಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.