ಕೆ.ಎಂ.ಮಂಜುನಾಥ
ಬಳ್ಳಾರಿ: ಬಳ್ಳಾರಿ ಲೋಕಸಭಾ ಅಖಾಡದಲ್ಲಿ ಇಬ್ಬರು ಕಾಂಗ್ರೆಸ್ ನಾಯಕರು ಹ್ಯಾಟ್ರಿಕ್ ವಿಜಯಿಗಳಾಗಿ ಗಮನ ಸೆಳೆದಿದ್ದಾರೆ.1952ರ ಮೊದಲ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಟೇಕೂರು ಸುಬ್ರಮಣ್ಯಂ ಹಾಗೂ ಕೈ ಪಕ್ಷದಲ್ಲಿ ತಮ್ಮದೇ ಆದ ವರ್ಚಸ್ಸು ಹೊಂದಿದ್ದ ಬಸವರಾಜೇಶ್ವರಿ ಸತತ ಮೂರು ಬಾರಿ ಗೆಲುವು ಪಡೆದು ಮತದಾರರ ಮನ ಗೆದ್ದ ನಾಯಕರೆನಿಸಿದ್ದಾರೆ.
1957 ಮತ್ತು 1962ರ ಚುನಾವಣೆಯಲ್ಲೂ ಟೇಕೂರು ಸುಬ್ರಮಣ್ಯಂ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಜಯ ದಾಖಲಿಸುತ್ತಾರೆ. 1957ರಲ್ಲೂ ವೈ.ಮಹಾಬಲೇಶ್ವರಪ್ಪ ಅವರೇ ಟೇಕೂರು ವಿರುದ್ಧ ಸ್ಪರ್ಧಿಸಿದರೆ, 1962ರಲ್ಲಿ ಸ್ವತಂತ್ರ ಪಕ್ಷದ ಅಭ್ಯರ್ಥಿ ಜೆ.ಮಹ್ಮದ್ ಇಮಾಮ್ ಅವರು ಟೇಕೂರು ವಿರುದ್ಧ ಸೋಲನುಭವಿಸುತ್ತಾರೆ. ಮೂರು ಬಾರಿ ಸತತ ಗೆಲುವಿನ ಬಳಿಕ ಟೇಕೂರು ಸುಬ್ರಮಣ್ಯಂ ಚುನಾವಣೆ ರಾಜಕೀಯದಿಂದ ದೂರ ಸರಿಯುತ್ತಾರೆ.
ವರ್ಚಸ್ಸಿನ ನಾಯಕಿಗೆ ಸತತ ಗೆಲುವು: ಕಾಂಗ್ರೆಸ್ ಪಕ್ಷದಲ್ಲಿ ವರ್ಚಸ್ಸಿನ ನಾಯಕಿ ಎನಿಸಿಕೊಂಡಿದ್ದ ಬಸವರಾಜೇಶ್ವರಿಗೆ ಲೋಕಸಭಾ ಚುನಾವಣೆಯಲ್ಲಿ ಹ್ಯಾಟಿಕ್ ಗೆಲುವಿನ ಅವಕಾಶ ದಕ್ಕುತ್ತದೆ. 1984ರಲ್ಲಿ ಮೊದಲ ಬಾರಿಗೆ ಚುನಾವಣಾ ಅಖಾಡಕ್ಕಿಳಿದ ಬಸವರಾಜೇಶ್ವರಿ ಜನತಾಪಾರ್ಟಿ ಅಭ್ಯರ್ಥಿ ಎಂ.ಪಿ.ಪ್ರಕಾಶ್ ವಿರುದ್ಧ 72,286 ಮತಗಳ ಅಂತರದ ಗೆಲುವು ಪಡೆಯುತ್ತಾರೆ. 1989ರಲ್ಲಿ ಜರುಗಿದ ಚುನಾವಣೆಯಲ್ಲಿ ಕಾಂಗ್ರೆಸ್‌ನ ಬಸವರಾಜೇಶ್ವರಿ ವಿರುದ್ಧ ಜನತಾದಳದ ಎನ್.ತಿಪ್ಪಣ್ಣ ಸ್ಪರ್ಧಿಸಿ ಸೋಲೊಪ್ಪಿಕೊಳ್ಳುತ್ತಾರೆ.ಈ ಚುನಾವಣೆಯಲ್ಲಿ ಬಸವರಾಜೇಶ್ವರಿ 76,085 ಮತಗಳ ಅಂತರದ ಗೆಲುವು ದಾಖಲಿಸುತ್ತಾರೆ. 1991ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ಬಸವರಾಜೇಶ್ವರಿ ವಿರುದ್ಧ ಜನತಾದಳ ಪಕ್ಷದ ಅಭ್ಯರ್ಥಿ ವೈ.ನೆಟ್ಟಕಲ್ಲಪ್ಪ ಸ್ಪರ್ಧಿಸಿ, 65,981 ಮತಗಳ ಅಂತರದ ಸೋಲನುಭವಿಸುತ್ತಾರೆ. ಮೂರು ಬಾರಿ ಗೆಲುವು ಪಡೆದು ಸಂಸತ್ ಸದಸ್ಯೆಯಾಗಿ ಸೇವೆ ಸಲ್ಲಿಸಿದ ಬಸವರಾಜೇಶ್ವರಿ ಬಳಿಕ ಚುನಾವಣೆಯಿಂದ ದೂರ ಸರಿಯುತ್ತಾರೆ.
ಬಸವರಾಜೇಶ್ವರಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಸಂಸದೆಯಾದ ಮೊದಲ ಮಹಿಳೆ ಎಂಬ ಕೀರ್ತಿಗೆ ಪಾತ್ರರಾಗುತ್ತಾರೆ. ಬಸವರಾಜೇಶ್ವರಿ ನಂತರದಲ್ಲಿ ಕಾಂಗ್ರೆಸ್ ಪಕ್ಷ ಮಹಿಳೆಯರಿಗೆ ಆದ್ಯತೆ ಸಿಗುವುದಿಲ್ಲ. ಟೇಕೂರು ಸುಬ್ರಮಣ್ಯಂ ಹಾಗೂ ಬಸವರಾಜೇಶ್ವರಿ ಸತತ ಮೂರು ಬಾರಿ ಗೆದ್ದು ಹ್ಯಾಟ್ರಿಕ್ ಗೆಲುವಿನ ಸರದಾರರು ಎನಿಸಿಕೊಂಡರೆ, ಖ್ಯಾತ ಆರ್ಥಿಕ ತಜ್ಞ ವಿಕೆಆರ್‌ವಿ ರಾವ್, ಕೆ.ಸಿ.ಕೊಂಡಯ್ಯ ನಿರಂತರ ಎರಡು ಬಾರಿ ಸಂಸತ್ ಸದಸ್ಯರಾಗಿ ಆಯ್ಕೆಗೊಂಡು ಗಮನ ಸೆಳೆಯುತ್ತಾರೆ. ಐದೂವರೆ ದಶಕದ ಅವಧಿಯಲ್ಲಿ 19 ಚುನಾವಣೆ ಕಂಡಿರುವ ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆಲುವು ಪಡೆದಿದ್ದಾರೆ.ನಾಲ್ಕು ಬಾರಿ ಸ್ಪರ್ಧಿಸಿಯೂ ಒಮ್ಮೆಯೂ ಗೆಲುವು ಪಡೆಯದ ಹಿರಿಯ ವಕೀಲ ಎನ್.ತಿಪ್ಪಣ್ಣ ಸೋತರೂ ಛಲಬಿಡದೇ ಕಾಂಗ್ರೆಸ್ ವಿರುದ್ಧ ಅಖಾಡದಲ್ಲಿದ್ದರು. 1996ರ ಚುನಾವಣೆಯಲ್ಲಿ ಜನತಾದಳ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಎನ್.ತಿಪ್ಪಣ್ಣ ಕಾಂಗ್ರೆಸ್‌ನ ಕೆ.ಸಿ.ಕೊಂಡಯ್ಯ ವಿರುದ್ಧ ಬರೀ 4519 ಮತಗಳ ಅಂತರದಲ್ಲಿ ಸೋಲನುಭವಿಸುತ್ತಾರೆ.