ಬೆಲೆ ಏರಿಕೆ, ನಿರುದ್ಯೋಗ, ರೈತರ ಸಮಸ್ಯೆಯಿಂದ ಹೈರಾಣಾಗಿರುವ ರಾಜ್ಯದ ಜನತೆಯ ಗಮನ ಬೇರೆಡೆ ಸೆಳೆಯುವ ಸಂಚಿನ ಭಾಗವಾಗಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಆಶಯಗಳಿಗೆ ವಿರುದ್ಧವಾಗಿರುವ ದ್ವೇಷ ಭಾಷಣ ವಿರೋಧಿ ಕಾಯ್ದೆ ಜಾರಿಗೊಳಿಸಲು ರಾಜ್ಯ ಸರ್ಕಾರ ಸಜ್ಜಾಗಿದೆ ಎಂದು ಶಾಸಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಿಸಿದರು.
ಶಿಕಾರಿಪುರ: ಬೆಲೆ ಏರಿಕೆ, ನಿರುದ್ಯೋಗ, ರೈತರ ಸಮಸ್ಯೆಯಿಂದ ಹೈರಾಣಾಗಿರುವ ರಾಜ್ಯದ ಜನತೆಯ ಗಮನ ಬೇರೆಡೆ ಸೆಳೆಯುವ ಸಂಚಿನ ಭಾಗವಾಗಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಆಶಯಗಳಿಗೆ ವಿರುದ್ಧವಾಗಿರುವ ದ್ವೇಷ ಭಾಷಣ ವಿರೋಧಿ ಕಾಯ್ದೆ ಜಾರಿಗೊಳಿಸಲು ರಾಜ್ಯ ಸರ್ಕಾರ ಸಜ್ಜಾಗಿದೆ ಎಂದು ಶಾಸಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಿಸಿದರು.
ಮಂಗಳವಾರ ಪಟ್ಟಣದ ತಾಲೂಕು ಕಚೇರಿ ಮುಂಭಾಗ ಶಿಕಾರಿಪುರ ಬಿಜೆಪಿ ಮಂಡಲದಿಂದ ದ್ವೇಷ ಭಾಷಣದ ವಿಧೇಯಕವನ್ನು ವಿರೋಧಿಸಿ ಜನತಂತ್ರದ ಮೌಲ್ಯಗಳ ರಕ್ಷಣೆಗೆ ಆಗ್ರಹಿಸಿ ನಡೆದ ಪ್ರತಿಭಟನಾ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. “ದ್ವೇಷ ಭಾಷಣ ವಿರೋಧಿ ಕಾಯ್ದೆ ಎಂಬ ನೆಪದಲ್ಲಿ ರಾಜ್ಯ ಸರ್ಕಾರ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಕತ್ತರಿ ಹಾಕಲು ಹೊರಟಿದ್ದು ಇದು ಪ್ರಜಾಪ್ರಭುತ್ವದ ಮೂಲ ತತ್ವಗಳಿಗೆ ವಿರುದ್ಧವಾಗಿದೆ. ಈ ಕಾಯ್ದೆಯನ್ನು ದುರುಪಯೋಗಪಡಿಸಿಕೊಂಡು ಸರ್ಕಾರ ತನ್ನ ವಿರೋಧಿಗಳ ಧ್ವನಿಯನ್ನು ಮುಚ್ಚಿಸುವ ಪ್ರಯತ್ನ ಮಾಡುತ್ತಿದೆ ಎಂದು ಆಪಾದಿಸಿದರು. ಸರ್ಕಾರ ಜನರ ಸಮಸ್ಯೆಗಳನ್ನು ಬಗೆಹರಿಸುವ ಬದಲು ದಮನಕಾರಿ ನೀತಿಗಳನ್ನು ಜಾರಿ ಮಾಡುತ್ತಿದೆ. ಬಿಜೆಪಿ ಈ ಕಾಯ್ದೆಯ ವಿರುದ್ಧ ರಾಜ್ಯವ್ಯಾಪಿ ಹೋರಾಟ ನಡೆಸಲಿದೆ ಎಂದು ಎಚ್ಚರಿಕೆ ನೀಡಿದ ಅವರು, ಈಗಾಗಲೇ ಬೆಲೆ ಏರಿಕೆ, ನಿರುದ್ಯೋಗ, ರೈತರ ಸಮಸ್ಯೆ, ಅಭಿವೃದ್ಧಿ ಹಿನ್ನಡೆ ಮತ್ತಿತರ ಹಲವಾರು ವಿಷಯಗಳಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ಇದರಿಂದ ಹೈರಾಣಾಗಿರುವ ರಾಜ್ಯದ ಜನತೆ ಗಮನವನ್ನು ಈ ವೈಫಲ್ಯಗಳಿಂದ ಬೇರೆಡೆ ತಿರುಗಿಸಲು ಇಂತಹ ಕಾಯ್ದೆಗಳನ್ನು ತರುವ ಪ್ರಯತ್ನ ನಡೆಸುತ್ತಿದೆ ಎಂದು ಕಿಡಿಕಾರಿದರು. ದ್ವೇಷ ಭಾಷಣಕ್ಕೆ ಈಗಾಗಲೇ ಕಾನೂನುಗಳಿವೆ. ಹೊಸ ಕಾಯ್ದೆಯ ಅವಶ್ಯಕತೆ ಏಕೆ ಎಂದು ಪ್ರಶ್ನಿಸಿದ ಅವರು ಇದು ಕೇವಲ ರಾಜಕೀಯ ದ್ವೇಷದಿಂದ ಪ್ರೇರಿತ ಕ್ರಮ ಎಂದು ದೂರಿದರು.ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ದ್ವೇಷ ಪ್ರತಿಭಂದಕ ವಿಧೇಯಕ ಜಾರಿಗೊಳಿಸುವ ಮೂಲಕ ರಾಜ್ಯ ಸರ್ಕಾರ ಪ್ರತಿಭಟನಾ ಸಭೆ, ಸಾಮಾಜಿಕ ಚಳುವಳಿಯನ್ನು ತಡೆಯುವ ದುರುದ್ದೇಶ ಹೊಂದಿದೆ. ವಿಧೇಯಕದಿಂದಾಗಿ ಸಾಮಾಜಿಕ ಕಾರ್ಯಕರ್ತರು, ಪರ್ತಕರ್ತರು, ಸಾಮಾಜಿಕ ಮಾಧ್ಯಮ ಬಳಸುವವರು ಹೆಚ್ಚಿನ ತೊಂದರೆಗೆ ಸಿಲುಕುವ ಸಾಧ್ಯತೆ ಹೆಚ್ಚಾಗಿದೆ. ಆದ್ದರಿಂದ ಈ ವಿಧೇಯಕವನ್ನು ಬಿಜೆಪಿ ತೀವ್ರವಾಗಿ ವಿರೋಧಿಸುತ್ತಿದೆ ಎಂದು ತಿಳಿಸಿದರು.ಆರಂಭದಲ್ಲಿ ಪ್ರಮುಖ ಬೀದಿಯಲ್ಲಿ ಮೆರವಣಿಗೆ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ, ವಿಧೇಯಕವನ್ನು ತಕ್ಷಣ ಹಿಂಪಡೆಯುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು. ಬಳಿಕ ತಹಸೀಲ್ದಾರ್ ಮೂಲಕ ರಾಜ್ಯಪಾಲರಿಗೆ ವಿಧೇಯಕವನ್ನು ವಾಪಾಸ್ ಪಡೆಯಲು ಆಗ್ರಹಿಸಿ ಮನವಿ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ರಾಜ್ಯ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಮಂಜುಳಾ, ತಾಲೂಕು ಬಿಜೆಪಿ ಅಧ್ಯಕ್ಷ ಹನುಮಂತಪ್ಪ ಸಂಕ್ಲಾಪುರ, ನಗರ ಬಿಜೆಪಿ ಅಧ್ಯಕ್ಷ ರಾಘವೇಂದ್ರ.ಎಸ್.ಬಿ, ಸಿದ್ದಲಿಂಗಪ್ಪ ನಿಂಬೆಗೊಂದಿ, ಮಹೇಶ್ ಹುಲ್ಮಾರ್, ಸುಧೀರ್ ಮಾರವಳ್ಳಿ, ಗಿರೀಶ್, ಪ್ರಶಾಂತ್, ಬೆಣ್ಣೆ ಪ್ರವೀಣ್, ನಿವೇದಿತಾ ರಾಜು, ವೀರನಗೌಡ, ಮಿಲಿಟರಿ ಬಸವರಾಜ್, ರವಿ ಶಾನುಭೋಗ್, ಪ್ರಶಾಂತ್ ಸಾಳಂಕೆ ಸಹಿತ ಬಿಜೆಪಿ ಮುಖಂಡರು, ಕಾರ್ಯಕರ್ತರು ಹಾಗೂ ವಿವಿಧ ಮೋರ್ಚಾಗಳ ಪದಾಧಿಕಾರಿಗಳು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.