ಕುಷ್ಟಗಿ: ರಾಜ್ಯ ಕಾಂಗ್ರೆಸ್ ಸರ್ಕಾರ ದ್ವೇಷ ಭಾಷಣದ ವಿಧೇಯಕ ಮಸೂದೆ ಜಾರಿಗೊಳಿಸುವ ಮೂಲಕ ರಾಜ್ಯದಲ್ಲಿ ಮತ್ತೊಮ್ಮೆ ಕರಾಳ ದಿನ ಸೃಷ್ಟಿ ಮಾಡಲು ಮುಂದಾಗುತ್ತಿದೆ ಎಂದು ಶಾಸಕ ದೊಡ್ದನಗೌಡ ಪಾಟೀಲ ಹೇಳಿದರು.
1975ರಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿ ಕರಾಳ ದಿನ ತಂದಿಟ್ಟಿದ್ದರು. ಈಗ ಕಾಂಗ್ರೆಸ್ ಸರ್ಕಾರವು ಈ ಮಸೂದೆ ಜಾರಿಗೊಳಿಸುವ ಮೂಲಕ ಮತ್ತೊಮ್ಮೆ ತುರ್ತು ಪರಿಸ್ಥಿತಿ ಹೇರಲು ಮುಂದಾಗಿದೆ. ವಾಕ್ ಸ್ವಾತಂತ್ರ್ಯದ ಜತೆಗೆ ಮಾಧ್ಯಮದವರಿಗಿರುವ ಸ್ವಾತಂತ್ರ್ಯ ಮತ್ತು ಹಕ್ಕನ್ನು ಕಸಿದುಕೊಳ್ಳಲು ದೊಡ್ಡ ಹುನ್ನಾರ ನಡೆಸಿದೆ. ಈ ಕುರಿತು ರಾಜ್ಯಾದ್ಯಂತ ಹೋರಾಟದ ಮೂಲಕ ಮಸೂದೆ ಜಾರಿಗೆ ತರದಂತೆ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಗುತ್ತಿದೆ ಎಂದರು.
ಇತ್ತೀಚಿಗೆ ಬೆಳಗಾವಿಯಲ್ಲಿ ನಡೆದ ಅಧಿವೇಶನದಲ್ಲಿ ಸಚಿವರೊಬ್ಬರು ಗೃಹಲಕ್ಷ್ಮೀ ಯೋಜನೆಯ ಹಣ ಐದು ಸಾವಿರ ಕೋಟಿ ಜನರಿಗೆ ಹಾಕಲಾಗಿದೆ ಎಂದು ಸುಳ್ಳು ಹೇಳುವ ಮೂಲಕ ಕೊಳ್ಳೆ ಒಡೆಯಲು ಮುಂದಾಗಿದ್ದಾರೆ. ಇದನ್ನು ವಿರೋಧಿಸಿದ್ದಕ್ಕೆ ಕಾಂಗ್ರೆಸ್ ಸರ್ಕಾರ ಏಕಾಏಕಿಯಾಗಿ ಬಿಲ್ ಪಾಸ್ ಮಾಡಲು ಹೊರಟಿದ್ದು, ಸರಿಯಾದ ಕ್ರಮವಲ್ಲ ಎಂದರು.ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಕೆ.ಮಹೇಶ ಮಾತನಾಡಿ, ರಾಜ್ಯ ಸರ್ಕಾರದ ವೈಫಲ್ಯಗಳ ವಿರುದ್ಧ ಹೋರಾಟ ಮಾಡಬಾರದು ಪ್ರತಿಪಕ್ಷ ಹತ್ತಿಕ್ಕುವ ಸಲುವಾಗಿ ಮುಂದಿನ ದಿನಗಳಲ್ಲಿ ತುರ್ತು ಪರಿಸ್ಥಿತಿ ಜಾರಿಗೆ ತರಲು ಮುನ್ನುಡಿ ಬರೆಯುತ್ತಿದ್ದು ಖಂಡನೀಯ ಎಂದರು.
ಬಿಜೆಪಿ ಮಂಡಲದ ಅಧ್ಯಕ್ಷ ಮಹಾಂತೇಶ ಬಾದಾಮಿ ಮಾತನಾಡಿ, ದ್ವೇಷ ಭಾಷಣದ ವಿಧೇಯಕ ಜಾರಿಯಿಂದ ನಾಗರಿಕರ ಮೂಲ ಹಕ್ಕು ಕಸಿದುಕೊಳ್ಳುತ್ತದೆ. ಡಾ. ಬಿ.ಆರ್.ಅಂಬೇಡ್ಕರ್ ಸಂವಿಧಾನದಡಿ ನೀಡಿದ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಾಂಗ್ರೆಸ್ ಸರಕಾರ ಕಿತ್ತುಕೊಳ್ಳುತ್ತಿದೆ ಎಂದರು.ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಉಮೇಶ ಯಾಧವ ಮಾತನಾಡಿ, ಈ ಕಾಯಿದೆ ಸರ್ಕಾರದ ವಿರುದ್ಧ ಮಾತನಾಡುವವರ ಬಾಯಿ ಮುಚ್ಚಿಸುವ ಸಾಧನವಾಗಿದೆ. ಪ್ರಜಾಪ್ರಭುತ್ವದ ಮೂಲತತ್ವಕ್ಕೆ ಹಾನಿ ಮಾತ್ರವಲ್ಲ, ಪ್ರಜಾಪ್ರಭುತ್ವದ ಕತ್ತು ಹಿಸುಕುವ ಯತ್ನವಾಗಿದೆ ಇದರಿಂದ ಪ್ರತಿಭಟನೆಗಳು ಸಭೆಗಳು ಸಾಮಾಜಿಕ ಚಳವಳಿಗಳನ್ನು ತಡೆಯುವ ಉದ್ದೇಶವಾಗಿದೆ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ ಪ್ರತಿಬಂಧಕ ವಿಧೇಯಕವು ಭಾರತದ ಸಂವಿಧಾನಕ್ಕೆ ವಿರೋಧವಿದೆ ಎಂದರು.
ಈ ಸಂದರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷ ಎಚ್.ಆರ್.ನಾಯಕ, ಶಶಿಧರ ಶೆಟ್ಟರ, ಪ್ರಭುಶಂಕರಗೌಡ ಪಾಟೀಲ, ದೊಡ್ಡಬಸವ ಸುಂಕದ, ಅಶೋಕ ಬಳೂಟಗಿ, ಶೈಲಜಾ ಬಾಗಲಿ, ಮಾರುತಿ ತರಲಕಟ್ಟಿ, ಲಕ್ಷ್ಮಣ ಕಟ್ಟಿಹೊಲ, ವಿಷ್ಣು ಅಂಗಡಿ, ಬಸವರಾಜ ಗುಡದೂರು, ಶುಖಮುನಿ ಕೊರಡಕೇರಿ, ಶರಣು ವಡ್ಡಿಗೇರಿ, ದೊಡ್ಡಪ್ಪ ಗೋನಾಳ, ಗ್ಯಾನಪ್ಪ, ಪ್ರಕಾಶ ತಾಳಕೇರಿ ಸೇರಿದಂತೆ ನೂರಾರು ಕಾರ್ಯಕರ್ತರು ಇದ್ದರು.