ಕನ್ನಡಪ್ರಭ ವಾರ್ತೆ ನಾಯಕನಹಟ್ಟಿ
ಭದ್ರಾ ಮೇಲ್ದಂಡೆ ಯೋಜನೆ ಈ ಭಾಗದ ಜನರ ಏಳಿಗೆಯ ಕನಸಿನ ಕೂಸಾಗಿ ಉಳಿದಿದೆ. ಕನಸನ್ನು ನನಸಾಗಿಸಲು ಹೋರಾಟ ಒಂದೇ ಮಾರ್ಗ. ಹಾಗಾಗಿ, ಫೆ.13ರ ನಾಯಕನಹಟ್ಟಿ ಬಂದ್ ಗೆ ಪಟ್ಟಣದ ಗ್ರಾಮಸ್ಥರು ಸಂಘ ಸಂಸ್ಥೆಗಳು ಮತ್ತು ಹೋಬಳಿಯ ವಿವಿಧ ಹಳ್ಳಿಗಳ ಮುಖಂಡರು, ರೈತರು ಬೆಂಬಲ ನೀಡಬೇಕು ಎಂದು ಹಟ್ಟಿ ಮಲ್ಲಪ್ಪ ನಾಯಕ ಸಂಘದ ಅಧ್ಯಕ್ಷ ಪಟೇಲ್ ಜಿ.ಎಂ ತಿಪ್ಪೇಸ್ವಾಮಿ (ಎತ್ನಟ್ಟಿ ಗೌಡ್ರು) ಮನವಿ ಮಾಡಿದರು.ಪಟ್ಟಣದ ಹಟ್ಟಿ ಮಲ್ಲಪ್ಪ ನಾಯಕ ಕಚೇರಿಯಲ್ಲಿ ಬಂದ್ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ಸರ್ವ ಸಮುದಾಯದವರ ಮತ್ತು ಸಂಘ ಸಂಸ್ಥೆಗಳ ಹಾಗೂ ಹೋಬಳಿ ವಿವಿಧ ಹಳ್ಳಿಗಳ ಮುಖಂಡರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ವಿಳಂಬ ಆಗುತ್ತಿರುವುದು ತುಂಬಾ ವಿಪರ್ಯಾಸ. ಹೋಬಳಿಯಲ್ಲಿ ಸಾಕಷ್ಟು ಕೆರೆಗಳಿವೆ. ಆ ಕೆರೆಗಳಿಗೆ ನೀರು ಹರಿಸುವಂತಹ ಕೆಲಸವನ್ನು ಮಾಡಬೇಕಾಗಿದೆ. ಜಿಲ್ಲೆ ಬಯಲು ಸೀಮೆ ಪ್ರದೇಶವಾಗಿದ್ದು, ಕೆರೆಗಳಿಗೆ ನೀರು ತಂದರೆ ಮಾತ್ರ ರೈತಾಪಿ ವರ್ಗ ಬದುಕುಳಿಯಲು ಸಾಧ್ಯ. ಒಂದು ಕಾಲದಲ್ಲಿ ದಟ್ಟ ಬುಡಕಟ್ಟು-ಪಶುಪಾಲಕರಾಗಿ ಬದುಕಿದ್ದ ಹೋಬಳಿ ಬಹುತೇಕ ಕುಟುಂಬಗಳು ವಲಸಿಗರಾಗಿ ಇಂದು ಅನೇಕ ನಗರಗಳ ಬೀದಿಗಳಲ್ಲಿ ಬದುಕು ಕಟ್ಟಿಕೊಳ್ಳುವಂತಾಗಿದೆ. ನೀರಿನ ಅಭಾವ ಮತ್ತು ಪಾತಾಳ ಸೇರಿದ ಅಂತರ್ಜಲ ಕಾರಣವಾಗಿದೆ. ಕೆರೆಗಳನ್ನು ತುಂಬಿಸುವುದರಿಂದ ಪಶುಪಾಲಕ ಸಮುದಾಯಗಳು ಮತ್ತೆ ಚಿಗುರೊಡೆಯುತ್ತವೆ ಎಂದರು.
ಭದ್ರ ಮೇಲ್ದಂಡೆ ಯೋಜನೆಗೆ 5300 ಕೋಟಿ ರು ಮೀಸಲಿರಿಸಿತ್ತು. ಬಜೆಟ್ ವೇಳೆ ಈ ಕೊಡುಗೆಯನ್ನು ನಿರ್ಮಲ ಸೀತಾರಾಮನ್ ಮಂಡಿಸಿದ್ದರು. ಚಿತ್ರದುರ್ಗ ಜಿಲ್ಲೆಯ ರೈತರು ಹರ್ಷ ವ್ಯಕ್ತಪಡಿಸಿದ್ದರು. ಆದರೆ ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡಲಿಲ್ಲ. ಅದು ಹುಸಿಯಾಗಿದೆ.ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಾಯಕನಹಟ್ಟಿ ಹೋಬಳಿಗೆ ಭದ್ರಾ ಮೇಲ್ದಂಡೆ ನೀರು ತರುವಲ್ಲಿ ಮಲತಾಯಿ ಧೋರಣೆ ಅನುಸರಿಸುತ್ತಿವೆ. ಕೂಡಲೇ ಕಾಮಗಾರಿ ಪೂರ್ಣಗೊಳಿಸುವಂತಹ ಕೆಲಸ ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಫೆ. 13 ರ ನಾಯಕನಹಟ್ಟಿ ಬಂದ್ ಗೆ ಕರೆ ನೀಡಲಾಗಿದೆ ಎಂದರು.
ಪಟ್ಟಣ ಪಂಚಾಯಿತಿ ಸದಸ್ಯ ಸೈಯದ್ ಅನ್ವರ್, ತಿಪ್ಪೇಸ್ವಾಮಿ, ಪೆದ್ದನ ಓಬಯ್ಯ (ದಾಸ್), ಮುಖಂಡ ಪ್ರಭುಸ್ವಾಮಿ, ಮಲ್ಲೂರಹಳ್ಳಿ ಗ್ರಾಪಂ ಸದಸ್ಯ ಬಿ.ಕಾಟಯ್ಯ, ನಲಗೇತನಹಟ್ಟಿ ನಲ್ಲನ ದೊಡ್ಡ ಬೋರಯ್ಯ, ನಾಯಕನಹಟ್ಟಿ ನೀರಾವರಿ ಮತ್ತು ಹೋರಾಟ ಸಮಿತಿ ಕಾರ್ಯಧ್ಯಕ್ಷ ಎಸ್.ಟಿ ಬೋರಸ್ವಾಮಿ, ಉಪಾಧ್ಯಕ್ಷ ಆರ್. ಬಸವರಾಜ್, ಗೌಡಗೆರೆ ಮಂಜುನಾಥ್, ಕಾರ್ಯದರ್ಶಿ ಜೋಗಿಹಟ್ಟಿ ಎಚ್.ಬಿ.ತಿಪ್ಪೇಸ್ವಾಮಿ, ಟಿ.ಬಸಪ್ಪನಾಯಕ, ಏಜೆಂಟರ್ ಪಾಲಯ್ಯ, ರಾಷ್ಟ್ರೀಯ ಕಿಸಾನ್ ಸಂಘ ಹೋಬಳಿ ಘಟಕ ಅಧ್ಯಕ್ಷ ಜಾಗನೂರಹಟ್ಟಿ ಬಿ.ಟಿ ಪ್ರಕಾಶ್, ಕರ್ನಾಟಕ ರಕ್ಷಣಾ ವೇದಿಕೆ ಹೋಬಳಿ ಘಟಕ ಅಧ್ಯಕ್ಷ ಪಿ.ಮುತ್ತಯ್ಯ ಜಾಗನೂರಹಟ್ಟಿ, ಚೌಡಪ್ಪ, ಗೌರವ ಅಧ್ಯಕ್ಷ ವಿಶ್ವನಾಥ, ಕಾಟಯ್ಯ, ಜೋಗಿಹಟ್ಟಿ ಮಂಜುನಾಥ, ಶಿವಮೂರ್ತಿ, ಲೋಕೇಶ್, ರಾಜೇಶ್, ಚಂದ್ರಣ್ಣ, ಜಯಣ್ಣ, ಕೇಶವಮೂರ್ತಿ, ದೀಪಕ್, ಆಟೋ ಚಾಲಕ ಸಂಘದ ಅಧ್ಯಕ್ಷ ಓಬಳೇಶ್, ತಿಪ್ಪೇಸ್ವಾಮಿ, ಮಂಜುನಾಥ, ಡಿ.ಎಸ್.ಎಸ್. ಸಂಘದ ಮುಖಂಡ ತಿಪ್ಪೇಸ್ವಾಮಿ ಇದ್ದರು.