ಕನ್ನಡಪ್ರಭ ವಾರ್ತೆ ಮಂಗಳೂರು
ನಾಡಿನ ಸಮಸ್ತ ಬಂಧು- ಬಾಂಧವರಿಗೆ ಈ ವರ್ಷದ ಕ್ರಿಸ್‌ಮಸ್ ದೇವರ ಪ್ರೀತಿ, ಭರವಸೆ ಹಾಗೂ ಶಾಂತಿ ತುಂಬಿದ ಕ್ರಿಸ್‌ಮಸ್ ಆಗಲಿ ಎಂದು ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ಡಾ.ಪೀಟರ್ ಪೌಲ್ ಸಲ್ದಾನಾ ಸಂದೇಶ ನೀಡಿದ್ದಾರೆ.ನಗರದ ಬಿಷಪ್ ಹೌಸ್‌ನಲ್ಲಿ ಸೋಮವಾರ ಕ್ರಿಸ್‌ಮಸ್ ಪೂರ್ವಭಾವಿಯಾಗಿ ಕೇಕ್ ಕತ್ತರಿಸಿ, ಹಬ್ಬದ ಸಂದೇಶ ನೀಡಿದರು.
ಪ್ರತಿ ವ್ಯಕ್ತಿಯಲ್ಲಿ ಹೊಸ ಭರವಸೆಯ ತಾಜಾತನ ತುಂಬಲು 2024ರ ಡಿಸೆಂಬರ್ 24ರಿಂದ ಕಥೋಲಿಕ್ ಧರ್ಮಸಭೆಯು ‘ಭರವಸೆಯ ಯಾತ್ರಿಕರು’ ಎಂಬ ಧ್ಯೇಯವಾಕ್ಯದೊಂದಿಗೆ ಕ್ರಿಸ್ತರ 2025ನೇ ವರುಷದ ಜ್ಯೂಬಿಲಿಯನ್ನು ಆಚರಿಸುತ್ತಿದೆ. ಈ ಪ್ರಯುಕ್ತ ಮಂಗಳೂರು ಧರ್ಮಕ್ಷೇತ್ರವು 2024ರ ಡಿ.29ರಿಂದ ಆರಂಭಿಸಿ ಇಡೀ ವರ್ಷ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಪ್ರತಿ ಹೃದಯದಲ್ಲಿ ಹೊಸ ಭರವಸೆಯನ್ನು ಇದು ಮೂಡಿಸಲಿದೆ. ನಾವೆಲ್ಲರೂ ಶಾಂತಿಗಾಗಿ ಪ್ರಾರ್ಥಿಸುವುದಕ್ಕಾಗಿ ಪುಣ್ಯಕ್ಷೇತ್ರಗಳನ್ನೂ ಸೂಚಿಸಿದ್ದೇವೆ. ಯೇಸು ಕ್ರಿಸ್ತರ ಶಿಲುಬೆಯ ಬ್ಯಾನರ್ ಅಡಿಯಲ್ಲಿ ಇದೆಲ್ಲವೂ ನಡೆಯಲಿವೆ ಎಂದರು.ಸಂಕಷ್ಟದಲ್ಲಿರುವ ಎಲ್ಲ ಬಂಧುಗಳಿಗೆ ಈ ಕ್ರಿಸ್‌ಮಸ್ ಸಮಯದಲ್ಲಿ ನಮ್ಮ ಪ್ರಾರ್ಥನೆ ಹಾಗೂ ಕಾಳಜಿ ತಲುಪಲಿ. ನಮ್ಮ ಕಾರ್ಯಗಳು ಶಾಂತಿಯ ರಾಷ್ಟ್ರವನ್ನೂ, ಮಾನವೀಯತೆಯ ಜಗತ್ತನ್ನೂ ಕಟ್ಟುವ ಸಂಕಲ್ಪವನ್ನು ಪ್ರತಿಬಿಂಬಿಸಲಿ. ನಾವು ಸಮಾಜವನ್ನು ಗುಣಪಡಿಸುವ ಔಷಧಿಯಾಗಿಯೂ, ದಿಟ್ಟ ಭರವಸೆಯಾಗಿಯೂ, ಏಕತೆಯನ್ನು ತರುವ ಪ್ರೀತಿಯಾಗಿಯೂ ಜೀವಿಸೋಣ. ಆಗ ಕ್ರಿಸ್‌ಮಸ್ ಆಚರಣೆಗೆ ಗೌರವ ಸಲ್ಲುತ್ತದೆ, ಅಂತೆಯೇ ದೇವರ ಆಶೀರ್ವಾದಕ್ಕೆ ನಾವು ಪಾತ್ರರಾಗುತ್ತೇವೆ ಎಂದು ಬಿಷಪ್ ಹೇಳಿದರು.
ಇತ್ತೀಚಿನ ದಿನಗಳಲ್ಲಿ ಕತ್ತಲೆಯ ಮೋಡಗಳು ನಮ್ಮ ಮೇಲಿವೆ. ಹೆಚ್ಚು ಹೆಚ್ಚು ಜನರು ಯುದ್ಧ, ಆತಂಕ, ಸ್ಥಳಾಂತರ ಹಾಗೂ ಅತೀವ ದುಃಖದಿಂದ ತತ್ತರಿಸುತ್ತಿದ್ದಾರೆ. ದೇವರು ನಮ್ಮೊಡನೆ ಇದ್ದಾರಾದರೆ, ಈ ಮರಣದ ಸಂಸ್ಕೃತಿಯು ಯಾಕಾಗಿ ಪ್ರಬಲವಾಗುತ್ತಿದೆ? ಮಾನವರಲ್ಲಿ ಏಕೆ ಇಷ್ಟೊಂದು ಸಂಘರ್ಷ ಮತ್ತು ವಿಭಜನೆ ಉಂಟಾಗುತ್ತಿದೆ ಹಾಗೂ ದಿನ ಹೋದಂತೆ ಪರಿಸ್ಥಿತಿ ಹದೆಗೆಡುತ್ತಿದೆ? ದೇವರು ನಮ್ಮ ಸಂಘರ್ಷಗಳಿಗೆ ಕಾರಣರಲ್ಲ ಎಂಬ ಭರವಸೆಯನ್ನು ಯೇಸು ನೀಡುತ್ತಾರೆ. ಕೆಲವರ ಮುಕ್ತ ಆಯ್ಕೆಯಿಂದಾಗಿ ಹಲವರು ಸಂಕಷ್ಟಕ್ಕೊಳಗಾಗುತ್ತಾರೆ. ಆದರೆ ತಕ್ಕಮಟ್ಟಿಗೆ ನಾವೆಲ್ಲರೂ ಈ ಪರಿಸ್ಥಿತಿಗೆ ಹೊಣೆಗಾರರಾಗಿದ್ದೇವೆ ಎಂಬುದನ್ನು ಮರೆಯಬಾರದು. ಯೇಸುವಿನ ಒಳ್ಳೆಯತನದ ಬೆಳಕಿನ ಮುಂದೆ ನಮ್ಮನ್ನು ನಾವೇ ಸಾದರಪಡಿಸಿದರೆ ಸುಲಭವಾಗಿ ನಮ್ಮ ದೋಷಗಳ ಅರಿವಾಗಬಹುದು ಎಂದು ಬಿಷಪ್ ಸಲಹೆ ನೀಡಿದರು.ಆದುದರಿಂದ, ಈ ಕ್ರಿಸ್‌ಮಸ್ ಸಮಯದಲ್ಲಿ ನಾವು ಮಾನವತೆಯನ್ನು ಎತ್ತಿ ಹಿಡಿಯೋಣ. ಗೋದಲಿಯಲ್ಲಿ ಮಲಗಿರುವ ಮಗು ಯೇಸು ಕ್ರಿಸ್ತರಲ್ಲಿ ಮಾತ್ರ ನಾವು ದೇವರನ್ನು ಕಂಡರೆ ಸಾಲದು, ದೇವರ ಸ್ವರೂಪದಲ್ಲಿ ಸೃಷ್ಟಿಯಾದ ಪ್ರತಿ ಮನುಷ್ಯನಲ್ಲಿಯೂ ದೇವರನ್ನು ಕಾಣುವುದು ಅಗತ್ಯ ಎಂದು ಸಂದೇಶ ನೀಡಿದರು.
ಬಿಜೈ ಚರ್ಚ್ ಧರ್ಮಗುರು, ಧರ್ಮಪ್ರಾಂತ್ಯದ ಪಿಆರ್‌ಒ ಫಾ.ಜೆ.ಬಿ. ಸಲ್ದಾನಾ, ಪ್ರಮುಖರಾದ ಮ್ಯಾಕ್ಸಿಂ ನೊರೋನ್ಹಾ, ರಾಯ್ ಕೆಸ್ತಲಿನೊ, ರೂಪೇಶ್ ಮಾಡ್ತ, ಎಲಿಯಾಸ್ ಫರ್ನಾಂಡಿಸ್ ಇದ್ದರು.