ಹೋಳಿ ಹಬ್ಬವನ್ನು ಶಾಂತಿಯುತ ಆಚರಿಸಿ

KannadaprabhaNewsNetwork |  
Published : Mar 21, 2024, 01:04 AM IST
ಸಭೆಯಲ್ಲಿ ಪಿಎಸ್‌ಐ ಶಿವಾನಂದ ಬನ್ನಿಕೊಪ್ಪ ಮಾತನಾಡಿದರು. | Kannada Prabha

ಸಾರಾಂಶ

ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ರಾಜಕೀಯ ವಿಷಯಗಳನ್ನು ಅಥವಾ ಇನ್ನೊಂದು ಧರ್ಮದ ವ್ಯಕ್ತಿಗಳಿಗೆ ನೋವುಂಟು ಮಾಡುವಂತಹ,ಭಾವನೆಗಳಿಗೆ ಧಕ್ಕೆ ತರುವಂತಹ ಸಂಗತಿಗಳನ್ನು ಯಾವುದೇ ಕಾರಣಕ್ಕೂ ಹಂಚಿಕೊಳ್ಳಬಾರದು

ನರೇಗಲ್ಲ: ಮಾ.೨೬ರಂದು ನರೇಗಲ್ಲ ಮತ್ತು ಸುತ್ತಲಿನ ಗ್ರಾಮಗಳಲ್ಲಿ ಆಚರಿಸಲಾಗುತ್ತಿರುವ ಹೋಳಿ ಹಬ್ಬವನ್ನು ಶಾಂತಿಯುತವಾಗಿ ಆಚರಿಸಬೇಕು. ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡಬಾರದು. ಒಂದು ವೇಳೆ ಅಂತಹ ಘಟನೆ ಕಂಡು ಬಂದರೆ ಮುಲಾಜಿಲ್ಲದೆ ಶಿಸ್ತಿನ ಕ್ರಮ ಜರುಗಿಸಲಾಗುವುದು ಎಂದು ಪಿಎಸ್‌ಐ ಶಿವಾನಂದ ಬನ್ನಿಕೊಪ್ಪ ಹೇಳಿದರು.

ಅವರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಮಂಗಳವಾರ ಸಂಜೆ ಹೋಳಿ ಹಬ್ಬದ ಆಚರಣೆ ಕುರಿತು ನಡೆದ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಈಗ ಲೋಕಸಭಾ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದು. ಆದ್ದರಿಂದ ಈ ಸಂದರ್ಭದಲ್ಲಿ ಯಾವುದೇ ರಾಜಕೀಯ ನಾಯಕರನ್ನು ಕರೆಯಿಸಿ ರಾಜಕೀಯ ಭಾಷಣ ಮಾಡಿಸಬಾರದು. ಅವರಿಂದ ಯಾವುದೇ ರೀತಿಯ ಧನ ಸಂಗ್ರಹ ಮಾಡಬಾರದು. ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ರಾಜಕೀಯ ವಿಷಯಗಳನ್ನು ಅಥವಾ ಇನ್ನೊಂದು ಧರ್ಮದ ವ್ಯಕ್ತಿಗಳಿಗೆ ನೋವುಂಟು ಮಾಡುವಂತಹ,ಭಾವನೆಗಳಿಗೆ ಧಕ್ಕೆ ತರುವಂತಹ ಸಂಗತಿಗಳನ್ನು ಯಾವುದೇ ಕಾರಣಕ್ಕೂ ಹಂಚಿಕೊಳ್ಳಬಾರದು ಎಂದರು.

ಹೋಳಿ ಆಡುವಾಗ ಕಡ್ಡಾಯವಾಗಿ ಎಲ್ಲರೂ ಪುಡಿ ಬಣ್ಣ ಮಾತ್ರ ಬಳಸಬೇಕು. ಇತರೆ ರಾಸಾಯನಿಕ ಬಣ್ಣ ದೇಹಕ್ಕೆ ಹಾನಿ ಮಾಡುವಂತಹ ವಾರನಿಸ್‌, ಆಯಿಲ್ ಪೇಂಟ್ ಮುಂತಾದವುಗಳನ್ನು ಬಳಕೆ ಮಾಡಿದರೆ ಅವರ ಮೇಲೆ ಸೂಕ್ತ ಕ್ರಮ ಜರುಗಿಸಲಾಗುವುದು ಎಂದರು.

ಮಾ.೨೫ರಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಪ್ರಾರಂಭವಾಗುತ್ತಿದ್ದು, ಆ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಡಿಜೆ ಹಚ್ಚಿ ಕುಣಿಯುವಂತಿಲ್ಲ, ರಾಜಕೀಯ ಪಕ್ಷಗಳ ಯಾವುದೇ ಚಿನ್ಹೆ ಪ್ರದರ್ಶಿಸುವಂತಿಲ್ಲ. ಇವುಗಳನ್ನು ಏನಾದರೂ ಉಲ್ಲಂಘಿಸಿದರೆ ಅಂಥವರು ಖಂಡಿತವಾಗಿಯೂ ಕಠಿಣ ಶಿಕ್ಷೆಗೆ ಒಳ ಪಡುತ್ತಾರೆ. ಹೋಳಿ ಹಬ್ಬದ ಸಂದರ್ಭದಲ್ಲಿ ಆಯಾ ಓಣಿಯ, ಆಯಾ ಗ್ರಾಮಗಳ ಹಿರಿಯರ ಪಾತ್ರ ದೊಡ್ಡದಾಗಿದ್ದು ಶಾಂತಿ ಸುವ್ಯವಸ್ಥೆ ಕಾಪಾಡಲು ಅವರೆಲ್ಲರ ಸಹಕಾರ ಇಲಾಖೆಗೆ ಅಗತ್ಯವಾಗಿ ಬೇಕು ಎಂದರು.

ನಿವೃತ್ತ ಶಿಕ್ಷಕ ಎಂ.ಎಸ್.ದಢೇಸೂರಮಠ, ಮುಖಂಡ ಶಶಿಧರ ಸಂಕನಗೌಡ್ರ, ಅಬ್ಬಿಗೇರಿಯ ಹನುಮಂತಪ್ಪ ದ್ವಾಸಲ, ನಿವೃತ್ತ ಮುಖ್ಯ ಶಿಕ್ಷಕ ಅರುಣ ಕುಲಕರ್ಣಿ, ಪಪಂ ಸದಸ್ಯ ಕುಮಾರಸ್ವಾಮಿ ಕೋರಧಾನ್ಯಮಠ ಇನ್ನೂ ಮುಂತಾದವರು ಮಾತನಾಡಿ, ಪಟ್ಟಣದಲ್ಲಿ ಮತ್ತು ಸಂಬಂಧಿತ ಗ್ರಾಮಗಳಲ್ಲಿ ಹೋಳಿ ಹಬ್ಬವನ್ನು ಶಾಂತಿಯುತವಾಗಿ ಆಚರಿಸಲು ಇಲಾಖೆಯೊಂದಿಗೆ ಸಹಕರಿಸುವುದಾಗಿ ಹೇಳಿದರು.

ಸಭೆಯಲ್ಲಿ ಎಎಸ್‌ಐ ಕೆ.ಆರ್. ಬೇಲೇರಿ, ಜಿ.ಬಿ. ಕೊತಬಾಳ, ಜಿ.ಕೆ. ದಿಂಡೂರ, ಚಂದ್ರು ರಾಠೋಡ, ಎಂ.ಕೆ. ಗುಂಡಗೋಪುರಮಠ, ಎಸ್.ಎಸ್. ಹುನಗುಂದ, ವೀರಣ್ಣ ಮಾವಿನಕಾಯಿ, ಈರಪ್ಪ ಜೋಗಿ, ಮುತ್ತಪ್ಪ ನುಲ್ಕಿ, ಕೆ.ಬಿ. ರೋಣದ, ಹಸನಸಾಬ ಕೊಪ್ಪದ, ರಮೇಶ ಕಲ್ಕೂರ, ರಾಜೇಸಾಬ್‌ ನಶೇಖಾನ, ಹುಲಗಪ್ಪ ಬಂಡಿವಡ್ಡರ, ಕೃಷ್ಣಪ್ಪ ಜುಟ್ಲ, ಅಲ್ಪಾಫ್ ಬಾಬಣ್ಣವರ, ಮಂಜುನಾಥ ಕಮಲಾಪುರ, ದೊಡ್ಡನಗೌಡ ಕೊತಬಾಳ, ಇಮ್ರಾನ್ ಮಕಾನದಾರ ಇನ್ನೂ ಅನೇಕ ಗಣ್ಯರು ಉಪಸ್ಥಿತರಿದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ