ಶಾಂತಿಯುತ, ಅರ್ಥಪೂರ್ಣವಾಗಿ ಯುಗಾದಿ, ರಂಜಾನ್ ಆಚರಿಸಿ: ಸತ್ಯನಾರಾಯಣರಾವ್

KannadaprabhaNewsNetwork | Published : Apr 7, 2024 1:51 AM

ಸಾರಾಂಶ

ಹಬ್ಬದ ಆಚರಣೆಗೆ ಮೂಲಭೂತ ಸೌಲಭ್ಯ ನೀಡಲಾಗುವುದು. ಹಬ್ಬದ ದಿನದಂದು ಹಬ್ಬಗಳನ್ನು ಶಾಂತಿಯುತ ಮತ್ತು ಅರ್ಥಪೂರ್ಣವಾಗಿ ಆಚರಿಸಬೇಕು. ಜೊತೆಗೆ ಪೊಲೀಸ್ ಇಲಾಖೆಯೊಂದಿಗೆ ಸಹಕಾರದಿಂದ ಇರಬೇಕೆಂದು ಜಿಲ್ಲಾ ಪೊಲೀಸ್ ಉಪ ಅಧೀಕ್ಷಕ ಎಂ.ಜಿ ಸತ್ಯನಾರಾಯಣರಾವ್ ತಿಳಿಸಿದರು.

ಕನ್ನಡಪ್ರಭ ವಾರ್ತೆ ರಾಯಚೂರು

ಹಿಂದೂ ಹಾಗೂ ಮುಸ್ಲಿಂ ಧರ್ಮದ ಪವಿತ್ರ ಹಬ್ಬಗಳಾದ ಚಂದ್ರಮಾನ ಯುಗಾದಿ ಹಾಗೂ ರಂಜಾನ್ ಹಬ್ಬಗಳನ್ನು ಶಾಂತಿಯುತವಾಗಿ, ಹಾಗೂ ತಮ್ಮ ತಮ್ಮ ಧರ್ಮಗಳ ಸಂಪ್ರದಾಯದಂತೆ ಅರ್ಥಪೂರ್ಣವಾಗಿ ಆಚರಣೆ ಮಾಡಬೇಕು ಮತ್ತು ಹಬ್ಬದ ಆಚರಣೆಗೆ ಬೇಕಾದ ಮೂಲಭೂತ ಸೌಲಭ್ಯಗಳನ್ನು ನೀಡಲಾಗುವುದು ಎಂದು ಜಿಲ್ಲಾ ಪೊಲೀಸ್ ಉಪ ಅಧೀಕ್ಷಕ ಎಂ.ಜಿ ಸತ್ಯನಾರಾಯಣ ರಾವ್ ಹೇಳಿದರು.

ಸ್ಥಳೀಯ ಸದಾರ ಬಜಾರ್ ಪೊಲೀಸ್ ಠಾಣೆಯಲ್ಲಿ ಶನಿವಾರ ಉಭಯ ಹಬ್ಬಗಳ ಪ್ರಯುಕ್ತ ಹಮ್ಮಿಕೊಂಡಿದ್ದ ಶಾಂತಿ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ರಂಜಾನ್ ಮತ್ತು ಯುಗಾದಿ ಹಬ್ಬವು ಆಯಾ ಧರ್ಮಗಳ ಪವಿತ್ರ ಹಬ್ಬಗಳಲ್ಲೊಂದಾಗಿದೆ. ಆಯಾ ಧರ್ಮದವರು ಹಬ್ಬದ ದಿನದಂದು ಹಬ್ಬಗಳನ್ನು ಶಾಂತಿಯುತ ಮತ್ತು ಅರ್ಥಪೂರ್ಣವಾಗಿ ಆಚರಿಸಬೇಕು. ಜೊತೆಗೆ ಪೊಲೀಸ್ ಇಲಾಖೆಯೊಂದಿಗೆ ಸಹಕಾರದಿಂದ ಇರಬೇಕೆಂದು ತಿಳಿಸಿದರು.

ಇಲಾಖೆಯಿಂದ ಸಾರ್ವಜನಿಕರಿಗೆ ಹಬ್ಬದ ದಿನದಂದು ಯಾವುದೇ ರೀತಿಯ ತೊಂದರೆಗಳಾಗದಂತೆ ನೋಡಿಕೊಳ್ಳಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು, ಯಾವುದೇ ರೀತಿಯ ಅಹಿತಕರ ಘಟನೆಗಳು ಜರುಗದಂತೆ ಸೂಕ್ತ ಕ್ರಮ ಕೈಗೊಳ್ಳಲಾಗಿದೆ ಎಂದರು.

ಬೇಸಿಗೆ ತಾಪಮಾನ ಹೆಚ್ಚಾಗಿರುವ ಕಾರಣ ಇಲಾಖೆಯಿಂದ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುವುದು. ಒಟ್ಟಾರೆಯಾಗಿ ಎಲ್ಲರೂ ಒಂದು ಎಂಬ ಭಾವನೆಯಿಂದ ಹಬ್ಬವನ್ನು ಆಚರಣೆ ಮಾಡುವಂತೆ ತಿಳಿಸಿದರು.

ಈ ಸಂದರ್ಭದಲ್ಲಿ ವಕ್ಫ್ ಮಂಡಳಿ ಅಧ್ಯಕ್ಷ ಮಹ್ಮದ್ ಮೌಲಾನಾ ಫರೀದ್ ಖಾನ್, ಠಾಣೆ ಅಧಿಕಾರಿ ಉಮೇಶ ಕಾಂಬ್ಳೆ, ಮಹೀಳಾ ಪೊಲೀಸ್ ಠಾಣೆ ಅಧಿಕಾರಿ ಸಂತೋಷ ಹಳ್ಳೂರು, ಜೆಸ್ಕಾಂ ಇಲಾಖೆಯ ಸಹಾಯಕ ಎಂಜಿನಿಯರ್ ಸೂಗುರಯ್ಯ ಸ್ವಾಮಿ, ಅಗ್ನಿಶಾಮಕ ದಳದ ಅಧಿಕಾರಿ ಖಾಸಿಂ ಸಾಬ್, ನೇತಾಜಿ ಪೊಲೀಸ್ ಠಾಣೆಯ ಪಿಎಸ್ಐ ಚಂದ್ರಪ್ಪ, ಮಾರ್ಕೆಟ್ ಯಾರ್ಡ್ ಪೊಲೀಸ್ ಠಾಣೆಯ ಪಿಎಸ್ಐ ಅಮಿತಾ ರಾಮ, ಪಶ್ಚಿಮ ಪೊಲೀಸ್ ಠಾಣೆಯ ಪಿಎಸ್ಐ ಶಾಂತಮೂರ್ತಿ, ಸಾಂಚಾರಿ ಪೊಲೀಸ್ ಠಾಣೆಯ ಅಧಿಕಾರಿ ವೆಂಕಟೇಶ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಸಮಾಜದ ಮುಖಂಡರು ಉಪಸ್ಥಿತರಿದ್ದರು.

Share this article