ಬ್ಯಾಡಗಿ: ಗುರುವಿನ ಸಾಮರ್ಥ್ಯದಲ್ಲಿ ಸಂಪೂರ್ಣ ನಂಬಿಕೆ ವಿಧೇಯತೆ ಮತ್ತು ಸಮರ್ಪಣಾ ಮನೋಭಾವನೆಗಳು ಶಿಷ್ಯಂದಿರು ಹೊಂದಿರಬೇಕಾಗುತ್ತದೆ. ಗುರುಶಿಷ್ಯರ ನಡುವೆ ಇಂತಹ ಸಂಬಂಧಗಳು ಬಹುದಿನಗಳ ಕಾಲ ಗಟ್ಟಿಯಾಗಿ ಉಳಿಯಲಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಜಿ. ಕೋಟಿ ಅಭಿಪ್ರಾಯ ವ್ಯಕ್ತಪಡಿಸಿದರು.
ಗುರು-ಶಿಷ್ಯರ ನಡುವೆ ಜ್ಞಾನ ವಿನಿಮಯ ಪ್ರಮುಖವಾಗಿದೆ ಹಾಗಂತ ಕೇವಲ ಶೈಕ್ಷಣಿಕ ಸಂಬಂಧ ಪರಿಗಣಿಸಲು ಸಾಧ್ಯವಿಲ್ಲ. ಗುರುವಿನ ಪಾತ್ರಕ್ಕೆ ಇನ್ನಷ್ಟು ಜವಾಬ್ದಾರಿಗಳನ್ನು ಹೆಚ್ಚಿಸಲಾಗಿದ್ದು ವಿದ್ಯಾರ್ಥಿಗಳು ಸೇರಿದಂತೆ ಸಮಾಜ ಸುಧಾರಣೆಯತ್ತ ಮುನ್ನಡೆಸುವ ಮಾರ್ಗದರ್ಶಿ ಸೂತ್ರಗಳನ್ನು ರೂಪಿಸುವ ಗುರುತರ ಜವಾಬ್ದಾರಿ ಗುರುಗಳ ಮೇಲಿದೆ ಎಂದರು.
ಗುರುಗಳ ಜ್ಞಾನ, ಮಾರ್ಗದರ್ಶನ ಶಿಷ್ಯರು ಅಳವಡಿಸಿಕೊಳ್ಳಬೇಕಾಗುತ್ತದೆ. ಶಿಷ್ಯಂದಿರು ಗುರುವಿನ ಮೇಲೆ ಸಂಪೂರ್ಣ ಭಕ್ತಿ ಗೌರವಾದರಗಳನ್ನು ಹೊಂದಿರಬೇಕು. ಅವರ ಸಲಹೆಗಳನ್ನು ಪಡೆದಂತಹ ತಾವುಗಳು ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ತಮ್ಮ ರೂಪಿಸಿಕೊಂಡಾಗ ಮಾತ್ರ ಗುರುಗಳ ಶ್ರಮಕ್ಕೆ ತಕ್ಕ ಫಲ ಸಿಗದಂತಾಗಲಿದೆಯಲ್ಲದೇ ಅವರ ಮನದಾಳದಲ್ಲಿನ ಆಸೆಗೆ ಸ್ಪಂದಿಸಿದಂತಾಗಲಿದೆ ಎಂದರು.ಲೌಕಿಕ ಜಗತ್ತಿನಲ್ಲಿ ಸಂಬಂಧಗಳಲ್ಲಿ ಗುರು-ಶಿಷ್ಯರ ಸಂಬಂಧವೂ ಕೂಡ ಹೌದು, ಗುರುವಿನ ಬೀಜಾಕ್ಷರಕ್ಕೆ ಬಹುದೊಡ್ಡ ಶಕ್ತಿಯಿದೆ. ಆದರೆ ಶಿಷ್ಯಂದಿರು ತಮ್ಮ ಜೀವನದಲ್ಲಿ ತಮ್ಮನ್ನು ತಾವು ಗುರುವಿಗೆ ಸಮರ್ಪಿಸಿಕೊಂಡ ಬಳಿಕವಷ್ಟೇ ಇದಕ್ಕೊಂದು ಅರ್ಥ ಬರಲಿದೆ ಎಂದರು. ಈ ಸಂದರ್ಭದಲ್ಲಿ ಸಂಬಂಧಿಸಿದ ಹಾಲಿ ಮಾಜಿ ಶಿಕ್ಷಕರು, ಹಳೆಯ ವಿದ್ಯಾರ್ಥಿಗಳು ಹಾಗೂ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.