ಇಂದಿರಾ ಕ್ಯಾಂಟಿನ್‌ನ ಆಹಾರದ ರುಚಿ ನೋಡಿದ್ದೀರಾ?: ನಗರಸಭೆ ಅಧಿಕಾರಿಗಳಿಗೆ ಡಿಸಿ ಪ್ರಶ್ನೆ

KannadaprabhaNewsNetwork |  
Published : Dec 17, 2023, 01:45 AM IST
ಚಿತ್ರದುರ್ಗ ಪೋಟೋ ಸುದ್ದಿ1111 | Kannada Prabha

ಸಾರಾಂಶ

ಚಿತ್ರದುರ್ಗ ನಗರದ ಪ್ರವಾಸಿ ಮಂದಿರ ಬಳಿ ಇರುವ ಇಂದಿರಾ ಕ್ಯಾಂಟೀನ್‍ಗೆ ಶನಿವಾರ ಬೆಳಗ್ಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿ ದಿವ್ಯಾಪ್ರಭು, ಸಾರ್ವಜನಿಕರಿಗೆ ಒದಗಿಸುವ ಆಹಾರದ ಗುಣಮಟ್ಟ, ಶುಚಿ-ರುಚಿ ಕಾಯ್ದುಕೊಳ್ಳುವಂತೆ ಕ್ಯಾಂಟೀನ್ ಸಿಬ್ಬಂದಿಗೆ ತಾಕೀತು ಮಾಡಿದರು.

ನಗರಸಭೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ದಿವ್ಯಪ್ರಭು ತರಾಟೆ । ಇಂದಿರಾ ಕ್ಯಾಂಟೀನ್‍ಗೆ ದಿಢೀರ್ ಭೇಟಿ, ಆಹಾರ ಪೂರೈಕೆ ಪರಿಶೀಲನೆ

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಯಾವತ್ತಾದರೂ ಇಂದಿರಾ ಕ್ಯಾಂಟೀನ್‌ಗೆ ಭೇಟಿ ನೀಡಿ ಆಹಾರದ ರುಚಿ ನೋಡಿದ್ದೀರಾ? ಅದು ಹೋಗಲಿ ಒಂದು ಕೆಜಿ ಅಕ್ಕಿಯಲ್ಲಿ ಎಷ್ಟು ಮಂದಿ ಊಟ ಮಾಡ್ತಾರೆ ಎಂಬುದ ಪರಿಶೀಲಿಸಿದ್ದಾರಾ ? ಐದು ನೂರು ಜನಕ್ಕೆ ಡೈಲಿ ಆಹಾರ ಕೊಡಬೇಕಾದರೆ ಎಷ್ಟು ಅಕ್ಕಿ ಹೋಗುತ್ತೆ ಎಂಬುದನ್ನು ಪರಿಶೀಲಿಸಿದ್ದೀರಾ...?

ಇದು ನಗರಸಭೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ದಿವ್ಯಾಪ್ರಭು ತರಾಟೆಗೆ ತೆಗೆದುಕೊಂಡ ಬಗೆ. ನಗರದ ಪ್ರವಾಸಿ ಮಂದಿರ ಬಳಿ ಇರುವ ಇಂದಿರಾ ಕ್ಯಾಂಟೀನ್‍ಗೆ ಶನಿವಾರ ಬೆಳಗ್ಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿ, ಸಾರ್ವಜನಿಕರಿಗೆ ಒದಗಿಸುವ ಆಹಾರದ ಗುಣಮಟ್ಟ, ಶುಚಿ-ರುಚಿ ಕಾಯ್ದುಕೊಳ್ಳುವಂತೆ ಕ್ಯಾಂಟೀನ್ ಸಿಬ್ಬಂದಿಗೆ ತಾಕೀತು ಮಾಡಿದರು.

ಆಹಾರದ ಗುಣಮಟ್ಟ, ಶುಚಿ-ರುಚಿ ಕೊರತೆ, ದಾಖಲೆಗಳ ಅಸಮರ್ಪಕ ನಿರ್ವಹಣೆ ಬಗ್ಗೆ ಸಾರ್ವಜನಿಕರಿಂದ ದೂರುಗಳು ಕೇಳಿ ಬರುತ್ತಿವೆ. ಕ್ಯಾಂಟೀನ್‍ನಲ್ಲಿ ಉಪಾಹಾರ ಹಾಗೂ ಊಟದ ತಯಾರಿಕೆ ಉತ್ತಮವಾಗಿಲ್ಲ, ಉಪಾಹಾರ ರುಚಿಕಟ್ಟಾಗಲು ಅಗತ್ಯವಿರುವ ಸಾಮಗ್ರಿಗಳ ಸಮರ್ಪಕ ಬಳಕೆಯಾಗುತ್ತಿಲ್ಲ, ಹೀಗಾಗಿ ಸಾರ್ವಜನಿಕರು ಇಂದಿರಾ ಕ್ಯಾಂಟೀನ್‍ಗೆ ಹೆಚ್ಚು ಬರುತ್ತಿಲ್ಲ. ಕ್ಯಾಂಟೀನ್‍ಗೆ ಎಷ್ಟು ಆಹಾರ ಧಾನ್ಯ ಹಾಗೂ ಅಡುಗೆ ಸಾಮಗ್ರಿ ಸ್ವೀಕರಿಸಲಾಗಿದೆ, ಎಷ್ಟು ಪ್ರಮಾಣದಲ್ಲಿ ಎಷ್ಟು ಜನರಿಗೆ ಊಟೋಪಹಾರ ವಿತರಿಸಲಾಗಿದೆ ಎಂಬುದರ ಬಗ್ಗೆ ಸಮರ್ಪಕವಾಗಿ ದಾಖಲೆಗಳನ್ನು ನಿರ್ವಹಿಸಿಲ್ಲ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.ಆಹಾರದ ಗುಣಮಟ್ಟ ಪರಿಶೀಲನೆಗೆ ಸಂಬಂಧಪಟ್ಟ ಅಧಿಕಾರಿ ಪ್ರತಿ ನಿತ್ಯ ಭೇಟಿ ಮಾಡಬೇಕು. ಸಂಬಂಧಪಟ್ಟ ನಗರ ಸ್ಥಳೀಯ ಸಂಸ್ಥೆಯ ಪೌರಾಯುಕ್ತರು, ಮುಖ್ಯಾಧಿಕಾರಿಗಳು ವಾರಕ್ಕೊಮ್ಮೆ ಕ್ಯಾಂಟೀನ್‍ಗೆ ಭೇಟಿ ನೀಡಿ, ಅಲ್ಲಿಯೇ ಉಪಾಹಾರ ಮತ್ತು ಊಟ ಸೇವಿಸಿ ಪರಿಶೀಲಿಸಬೇಕು. ಅಡುಗೆ ಸಾಮಗ್ರಿಗಳ ದಾಸ್ತಾನು, ಬಳಕೆ, ಊಟೋಪಹಾರ ವಿತರಣೆ ಪ್ರಮಾಣ ಕುರಿತಂತೆ ನಿತ್ಯ ರಿಜಿಸ್ಟರ್‌ನಲ್ಲಿ ಮಾಹಿತಿ ದಾಖಲಾಗಬೇಕು. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಪರಿಶೀಲನೆ ನಡೆಸಬೇಕು. ನಗರ ಸ್ಥಳೀಯ ಸಂಸ್ಥೆಗಳಲ್ಲಿನ ಆರೋಗ್ಯ ನಿರೀಕ್ಷಕರು ಸ್ವಚ್ಛತೆ ಹಾಗೂ ಶುಚಿತ್ವ ನಿರ್ವಹಣೆಗೆ ಸಂಬಂಧಿಸಿದ ಅಧಿಕಾರಿಗಳು ನಿತ್ಯ ಕ್ಯಾಂಟೀನ್‍ನಲ್ಲಿನ ಸ್ವಚ್ಛತೆ ಬಗ್ಗೆ ಪರಿಶೀಲಿಸಬೇಕು ಎಂದು ಜಿಲ್ಲಾಧಿಕಾರಿಗಳು ತಾಕೀತು ಮಾಡಿದರು.

ಬರುವ ದಿನಗಳಲ್ಲಿ ಜಿಲ್ಲೆಯಲ್ಲಿನ ಇಂದಿರಾ ಕ್ಯಾಂಟೀನ್‍ಗಳಿಗೆ ಆಕಸ್ಮಿಕ ಭೇಟಿ ನೀಡಿ ಪರಿಶೀಲನೆ ನಡೆಸಲಾಗುವುದು. ಲೋಪದೋಷಗಳು ಕಂಡುಬಂದಲ್ಲಿ ಸಂಬಂಧಪಟ್ಟ ಸಿಬ್ಬಂದಿ, ಅಧಿಕಾರಿಗಳನ್ನು ಹೊಣೆಗಾರರನ್ನಾಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದರು.

ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಹೇಂದ್ರ ಕುಮಾರ್, ನಗರಸಭೆ ಪೌರಾಯುಕ್ತೆ ರೇಣುಕಾ, ಪರಿಸರ ಅಭಿಯಂತರ ಜಾಫರ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ----------------------

ಕಡಿಮೆ ದರದಲ್ಲಿ ಬಡವರಿಗೆ ಉತ್ತಮ ಗುಣಮಟ್ಟದ ಹಾಗೂ ರುಚಿಯಾದ ಊಟೋಪಹಾರ ಒದಗಿಸಬೇಕು ಎಂಬ ಸದುದ್ದೇಶದಿಂದ ಸರ್ಕಾರ ವಿವಿಧೆಡೆ ಇಂದಿರಾ ಕ್ಯಾಂಟೀನ್ ಗಳನ್ನು ಪ್ರಾರಂಭಿಸಿದೆ. ಆದರೆ ಸಿಬ್ಬಂದಿ ಹಾಗೂ ಸಂಬಂಧಿಸಿದ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಕ್ಯಾಂಟೀನ್ ನಿರ್ವಹಣೆ ಸರಿಯಾಗಿ ಆಗುತ್ತಿಲ್ಲ.

- ದಿವ್ಯಾಪ್ರಭು ಜಿಲ್ಲಾಧಿಕಾರಿ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಕ್ರಮ ಡ್ರಗ್ಸ್‌ ವಾಸನೆ ತಡೆಗೆ ನಾಯಿಗಳ ಮಲಮೂತ್ರ!
ಐತಿಹಾಸಿಕ ಕರಗ ಶಕ್ತ್ಯೋತ್ಸವಕ್ಕೆ ಭರದ ಸಿದ್ಧತೆ