ಹಾವೇರಿ ಕ್ಷೇತ್ರ, ಗೆಲುವಿನ ಯಾಲಕ್ಕಿ ಹಾರ ಯಾರಿಗೆ?

KannadaprabhaNewsNetwork | Published : Jun 4, 2024 12:32 AM

ಸಾರಾಂಶ

ಲೋಕಸಭಾ ಚುನಾವಣೆಯ ಅಂತಿಮ ಹಂತವಾದ ಮತ ಎಣಿಕೆ ಪ್ರಕ್ರಿಯೆ ಹಾಗೂ ಎಲ್ಲರೂ ಕುತೂಹಲದಿಂದ ಎದುರು ನೋಡುತ್ತಿರುವ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿದೆ. ಯಾರಿಗೆ ಗೆಲುವಿನ ಯಾಲಕ್ಕಿ ಹಾರ ಎಂಬ ಕುತೂಹಲಕ್ಕೆ ಮಂಗಳವಾರ ತೆರೆ ಬೀಳಲಿದೆ.

ನಾರಾಯಣ ಹೆಗಡೆಕನ್ನಡಪ್ರಭ ವಾರ್ತೆ ಹಾವೇರಿ

ಲೋಕಸಭಾ ಚುನಾವಣೆಯ ಅಂತಿಮ ಹಂತವಾದ ಮತ ಎಣಿಕೆ ಪ್ರಕ್ರಿಯೆ ಹಾಗೂ ಎಲ್ಲರೂ ಕುತೂಹಲದಿಂದ ಎದುರು ನೋಡುತ್ತಿರುವ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿದೆ. ಮತಯಂತ್ರದಲ್ಲಿ ಭದ್ರವಾಗಿದ್ದ ಅಭ್ಯರ್ಥಿಗಳ ಭವಿಷ್ಯ ಬಯಲಾಗಲಿದ್ದು, ಬಿಜೆಪಿಯ ಬಸವರಾಜ ಬೊಮ್ಮಾಯಿ ಹಾಗೂ ಕಾಂಗ್ರೆಸ್‌ನ ಆನಂದಸ್ವಾಮಿ ಗಡ್ಡದೇವರಮಠ ನಡುವಿನ ಸಮಬಲದ ಹೋರಾಟದಲ್ಲಿ ಯಾರಿಗೆ ಗೆಲುವಿನ ಯಾಲಕ್ಕಿ ಹಾರ ಎಂಬ ಕುತೂಹಲಕ್ಕೆ ಮಂಗಳವಾರ ತೆರೆ ಬೀಳಲಿದೆ.ಕಳೆದ ಮೇ 7ರಂದು ಮತದಾನ ನಡೆದು ಇವಿಎಂನಲ್ಲಿ ಜನಾಭಿಪ್ರಾಯ ಭದ್ರವಾಗಿತ್ತು. ಈಗ ಮತದಾರರ ನಿರ್ಧಾರ ತಿಳಿಯುವ ಕಾಲ ಸನ್ನಿಹಿತವಾಗಿದೆ. ಆದ್ದರಿಂದ ಅಭ್ಯರ್ಥಿಗಳು ಮತ್ತು ಪಕ್ಷಗಳ ಕಾರ್ಯಕರ್ತರಲ್ಲಿ ತಳಮಳ ಶುರುವಾಗಿದ್ದು, ಎಲ್ಲರ ಚಿತ್ತ ಈಗ ಫಲಿತಾಂಶದತ್ತ ನೆಟ್ಟಿದೆ. ಎಲ್ಲಿ ನೋಡಿದರೂ ಲೋಕಸಭೆ ಚುನಾವಣಾ ಫಲಿತಾಂಶದ್ದೇ ಚರ್ಚೆ ನಡೆದಿದೆ. ಎದೆ ಬಡಿತ ಜೋರು: ಮಂಗಳವಾರ ಬೆಳಗ್ಗೆ ೮ ಗಂಟೆಯಿಂದ ತಾಲೂಕಿನ ದೇವಗಿರಿ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಮತ ಎಣಿಕೆ ಕಾರ್ಯ ಆರಂಭವಾಗಲಿದೆ. ಇದುವರೆಗೆ ಸೋಲು ಗೆಲವಿನ ಲೆಕ್ಕಾಚಾರದಲ್ಲಿ ಮುಳುಗಿದ್ದ ಅಭ್ಯಥಿ೯ಗಳು ಹಾಗೂ ಅವರ ಬೆಂಬಲಿಗರಲ್ಲಿ ಈಗ ಎದೆ ಬಡಿತ ಜೋರಾಗಿದೆ. ಮಂಗಳವಾರ ಮಧ್ಯಾಹ್ನದ ವೇಳೆಗೆ ಸ್ಪಷ್ಟ ಫಲಿತಾಂಶ ದೊರಕಲಿದ್ದು, ಕ್ಷೇತ್ರದ ಸಂಸದರು ಯಾರಾಗಲಿದ್ದಾರೆ ಎಂಬುದು ಗೊತ್ತಾಗಲಿದೆ. ಮೊದಲ ಬಾರಿಗೆ ಸಂಸತ್‌ ಪ್ರವೇಶಿಸುವ ಅವಕಾಶವನ್ನು ಮಾಜಿ ಮುಖ್ಯಮಂತ್ರಿ, ಬಿಜೆಪಿಯ ಬಸವರಾಜ ಬೊಮ್ಮಾಯಿ ಪಡೆಯುತ್ತಾರೋ ಅಥವಾ ಕಾಂಗ್ರೆಸ್‌ನ ಗಡ್ಡದೇವರಮಠಗೆ ಅದೃಷ್ಟ ಒಲಿಯುತ್ತಾ ಎಂಬ ಕ್ಷೇತ್ರದ ಜನರ ಪ್ರಶ್ನೆಗೆ ಉತ್ತರ ಸಿಗಲಿದೆ. ಸಮಬಲದ ಹೋರಾಟ: ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಸಮಬಲದ ಹೋರಾಟ ನಡೆದಿದ್ದು, ಯಾರೇ ಗೆದ್ದರೂ ಕಡಿಮೆ ಅಂತರದಲ್ಲಿ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಮೇ 7ರಂದು ನಡೆದ ಚುನಾವಣೆಯಲ್ಲಿ ದಾಖಲೆಯ ಶೇ.77.60ರಷ್ಟು ಮತದಾನವಾಗಿತ್ತು. ಹೆಚ್ಚಿನ ಪ್ರಮಾಣದಲ್ಲಿ ಮತದಾನವಾಗಿರುವುದು ಯಾರಿಗೆ ಲಾಭ, ಯಾರಿಗೆ ನಷ್ಟ ಎಂಬ ಲೆಕ್ಕಾಚಾರಕ್ಕೆಲ್ಲ ಉತ್ತರ ದೊರೆಯುವ ಕಾಲ ಸನ್ನಿಹಿತವಾಗಿದೆ. ಹಿಂದಿನ ಮೂರು ಚುನಾವಣೆಗಳಲ್ಲಿ ಬಂದ ಫಲಿತಾಂಶದಂತೆಯೇ ಈ ಸಲವೂ ಬರಲಿದೆ ಎಂಬ ನಿರೀಕ್ಷೆಯಲ್ಲಿ ಬಿಜೆಪಿ ಕಾರ್ಯಕರ್ತರಿದ್ದಾರೆ. ಆದರೆ, ಕಾಂಗ್ರೆಸ್‌ನಿಂದ ಮೊದಲ ಬಾರಿಗೆ ಲೋಕಸಭಾ ಕ್ಷೇತ್ರಕ್ಕೆ ಗಡ್ಡದೇವರಮಠ ಸ್ಪರ್ಧಿಸಿದ್ದರೂ ಬಿಜೆಪಿಗೆ ನೇರ ಸ್ಪರ್ಧೆ ನೀಡಿದ್ದಾರೆ.

ಚುನಾವಣೋತ್ತರ ಸಮೀಕ್ಷೆಗಳಲ್ಲಿ ಬಿಜೆಪಿಗೆ ಗೆಲ್ಲುವ ಅವಕಾಶ ಹೆಚ್ಚಿದೆ ಎಂದು ಹೇಳಲಾಗುತ್ತಿದೆ. ಆದರೂ ಕಾಂಗ್ರೆಸ್ ಕೂಡ ಪ್ರಬಲ ಪೈಪೋಟಿ ನೀಡಿರುವುದರಿಂದ ಯಾರು ಗೆದ್ದರೂ ಕಡಿಮೆ ಮತಗಳ ಅಂತರದಿಂದ ಎನ್ನುವುದು ನಿಶ್ಚಿತ.

ಮೂರು ಬಾರಿ ಅರಳಿದ್ದ ಕಮಲ: ಕ್ಷೇತ್ರ ಮರುವಿಂಗಡಣೆ ಬಳಿಕ ಹಾವೇರಿ ಲೋಕಸಭಾ ಕ್ಷೇತ್ರಕ್ಕೆ ಇದು ನಾಲ್ಕನೇ ಚುನಾವಣೆಯಾಗಿದ್ದು, ಈ ಹಿಂದಿನ ಮೂರು ಚುನಾವಣೆಗಳಲ್ಲಿ ಬಿಜೆಪಿಯ ಶಿವಕುಮಾರ ಉದಾಸಿ ಗೆಲುವು ಸಾಧಿಸಿದ್ದರು. ೨೦೦೯ ಮತ್ತು ೨೦೧೪ರ ಚುನಾವಣೆಗಳಲ್ಲಿ ಶಿವಕುಮಾರ ಉದಾಸಿ ಅವರಿಗೆ ಕಾಂಗ್ರೆಸ್‌ನಿಂದ ಸಲೀಂ ಅಹ್ಮದ್ ಎದುರಾಳಿಯಾಗಿದ್ದರು. ಎರಡೂ ಬಾರಿ ಶಿವಕುಮಾರ ಉದಾಸಿ ೮೭ ಸಾವಿರ ಮತಗಳ ಅಂತರದಿಂದ ಗೆದ್ದಿದ್ದರು. 2019ರಲ್ಲಿ ಕಾಂಗ್ರೆಸ್‌ನ ಡಿ.ಆರ್‌.ಪಾಟೀಲ ವಿರುದ್ಧ 1.40 ಲಕ್ಷ ಮತಗಳ ಅಂತರದಿಂದ ಉದಾಸಿ ಜಯಭೇರಿ ಬಾರಿಸಿದ್ದರು. ಈ ಬಾರಿ ಎರಡೂ ಪಕ್ಷಗಳ ಅಭ್ಯರ್ಥಿಗಳು ಬದಲಾಗಿರುವುದು ಫಲಿತಾಂಶದಲ್ಲಿ ಏನಾದರೂ ಬದಲಾಗುತ್ತಾ ಎಂಬುದನ್ನು ಕಾದುನೋಡಬೇಕಿದೆ. ಮೋದಿ ಅಲೆ, ಕೇಂದ್ರ ಸರ್ಕಾರದ ಸಾಧನೆ, ಎರಡು ಅವಧಿಯಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳು ಕೈಹಿಡಿಯುತ್ತವೆ ಎಂಬ ವಿಶ್ವಾಸದಲ್ಲಿ ಬಿಜೆಪಿ ಕಾರ್ಯಕರ್ತರಿದ್ದಾರೆ. ಜನ ಗ್ಯಾರಂಟಿ ಕೈಹಿಡಿಯಲಿದ್ದಾರೆ ಎಂದು ಕಾಂಗ್ರೆಸ್ಸಿಗರು ಹೇಳುತ್ತಿದ್ದಾರೆ. ಒಟ್ಟಿನಲ್ಲಿ ಇವೆಲ್ಲ ವಾದಗಳಿಗೆ ಕೊನೆ ಹೇಳುವ ಗಳಿಗೆ ಬಂದಿದ್ದು, ಕಣದಲ್ಲಿರುವ ೧೦ ಅಭ್ಯರ್ಥಿಗಳ ಜನ ಬೆಂಬಲ ಗೊತ್ತಾಗಲಿದೆ.ಒಳಗೊಳಗೇ ತಳಮಳ: ಮತದಾನದ ನಂತರ ಗೆಲ್ಲುವವರು ತಾವೇ ಎಂದು ತೀವ್ರ ಉತ್ಸಾಹದಿಂದ ಹೇಳುತ್ತಿದ್ದ ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಈಗ ತಳಮಳ ಶುರುವಾಗಿದೆ. ತಮ್ಮ ಲೆಕ್ಕಾಚಾರ ಎಲ್ಲಾದರೂ ತಪ್ಪಿ ಫಲಿತಾಂಶದಲ್ಲಿ ವ್ಯತ್ಯಾಸವಾದರೆ ಎಂಬ ಅನುಮಾನ ಎರಡೂ ಪಕ್ಷಗಳ ಕಾರ್ಯಕರ್ತರಲ್ಲಿದೆ. ಇವೆಲ್ಲ ಅನುಮಾನ, ಆತಂಕಗಳು ಮಂಗಳವಾರ ಮಧ್ಯಾಹ್ನದ ಹೊತ್ತಿಗೆ ನಿವಾರಣೆಯಾಗಲಿದೆ. ಯಾರಿಗೆ ಶುಭ ಮಂಗಳವಾರವಾಗುತ್ತದೆ ಎಂಬುದನ್ನು ಕಾದುನೋಡಬೇಕಿದೆ.

Share this article