ಜ.10, 11ರಂದು ಹಿರೇಕೆರೂರಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ

KannadaprabhaNewsNetwork | Published : Jan 2, 2025 12:33 AM

ಸಾರಾಂಶ

ಹಾವೇರಿ ಜಿಲ್ಲಾ ೧೪ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಹಿರೇಕೆರೂರು ಪಟ್ಟಣದ ಪೊಲೀಸ್ ಮೈದಾನದಲ್ಲಿ ಜ. ೧೦ ಹಾಗೂ ೧೧ರಂದು ಎರಡು ದಿನಗಳ ಕಾಲ ಆಯೋಜಿಸಲಾಗಿದೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಲಿಂಗಯ್ಯ ಹಿರೇಮಠ ಹೇಳಿದರು. ಬುಧವಾರ ಅವರು ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿದರು.

ಹಾವೇರಿ: ಹಾವೇರಿ ಜಿಲ್ಲಾ ೧೪ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಹಿರೇಕೆರೂರು ಪಟ್ಟಣದ ಪೊಲೀಸ್ ಮೈದಾನದಲ್ಲಿ ಜ. ೧೦ ಹಾಗೂ ೧೧ರಂದು ಎರಡು ದಿನಗಳ ಕಾಲ ಆಯೋಜಿಸಲಾಗಿದೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಲಿಂಗಯ್ಯ ಹಿರೇಮಠ ಹೇಳಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಸಮ್ಮೇಳನದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಜ. ೧೦ರಂದು ಬೆಳಗ್ಗೆ ೮.೩೦ಕ್ಕೆ ಸಮ್ಮೇಳನಾಧ್ಯಕ್ಷರ ಮೆರವಣಿಗೆ, ಬೆಳಗ್ಗೆ ೧೦.೩೦ಕ್ಕೆ ಸರ್ವಜ್ಞ-ಶಾಂತಕವಿ ಪ್ರಧಾನ ವೇದಿಕೆಯಲ್ಲಿ ನಾಡೋಜ ಮಹೇಶ ಜೋಶಿ ಅವರಿಂದ ಸಮ್ಮೇಳನ ಉದ್ಘಾಟನೆ ನಡೆಯಲಿದೆ. ಜ. ೧೦ರಂದು ಬೆಳಗ್ಗೆ ೭.೩೦ಕ್ಕೆ ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ ರಾಷ್ಟ್ರ ಧ್ವಜಾರೋಹಣ ನೆರವೇರಿಸಲಿದ್ದು, ಕಸಾಪ ಜಿಲ್ಲಾಧ್ಯಕ್ಷರು ಪರಿಷತ್ ಧ್ವಜ, ತಾಲೂಕಾಧ್ಯಕ್ಷ ಎನ್. ಸುರೇಶಕುಮಾರ ನಾಡಧ್ವಜಾರೋಹಣ ನೆರವೇರಿಸಲಿದ್ದಾರೆ. ಬೆಳಗ್ಗೆ ೮.೩೦ಕ್ಕೆ ಬಿ.ಜಿ. ಶಂಕರರಾವ್ ವೃತ್ತದಿಂದ ಸಭಾಮಂಟಪ ವರೆಗೆ ಮೆರವಣಿಗೆ ನಡೆಸಲಾಗುತ್ತದೆ. ನಾಡದೇವಿಗೆ ಪೂಜೆ ಸಲ್ಲಿಸಿ, ಸಮ್ಮೇಳನಾಧ್ಯಕ್ಷರ ಮೆರವಣಿಗೆಗೆ ಚಾಲನೆ ನೀಡಲಾಗುವುದು ಎಂದರು.

ಸರ್ವಜ್ಞ-ಶಾಂತಕವಿ ಪ್ರಧಾನ ವೇದಿಕೆಯಲ್ಲಿ ಬೆಳಗ್ಗೆ ೧೦.೩೦ಕ್ಕೆ ಕೇಂದ್ರ ಕಸಾಪ ಅಧ್ಯಕ್ಷ, ನಾಡೋಜ ಮಹೇಶ ಜೋಶಿ ಉದ್ಘಾಟನೆ ನೆರವೇರಿಸಲಿದ್ದು, ಶಾಸಕ ಯು.ಬಿ. ಬಣಕಾರ ಅಧ್ಯಕ್ಷತೆ ವಹಿಸಲಿದ್ದಾರೆ. ಮಾಜಿ ಕೃಷಿ ಸಚಿವ ಬಿ.ಸಿ. ಪಾಟೀಲ ಸಮ್ಮೇಳನ ಸಭಾಂಗಣ ಉದ್ಘಾಟಿಸಲಿದ್ದಾರೆ. ಸಾಹಿತಿ ಸಂಕಮ್ಮ ಸಂಕಣ್ಣನವರ ಸಮ್ಮೇಳನಾಧ್ಯಕ್ಷರ ಸಂದೇಶ ನೀಡಲಿದ್ದಾರೆ.

ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಸಭಾಪತಿ ಬಸವರಾಜ ಹೊರಟ್ಟಿ, ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ ಉಪಸ್ಥಿತಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ನುಡಿಸಂಪದ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಿದ್ದಾರೆ. ಮಾಜಿ ಸಿಎಂ ಬಸವರಾಜ ಹೊರಟ್ಟಿ ಶತೃಂಜಯ ಪ್ರವಾಸ ಕಥನ, ದ್ವಂದ್ವ ಮತ್ತು ವಾರದ ಮಕ್ಕಳು ಎಂಬ ಕಿರು ಕಾದಂಬರಿಯನ್ನು ಶಾಸಕ ಬಸವರಾಜ ಶಿವಣ್ಣವರ ಹಾಗೂ ಮುಖ್ಯ ಸಚೇತಕ ಸಲೀಂ ಅಹ್ಮದ ಅವರು ಕರುಳಬಳ್ಳಿ ಕವನ ಸಂಕಲನ ಬಿಡುಗಡೆಗೊಳಿಸಲಿದ್ದಾರೆ ಎಂದರು.

ಸಮ್ಮೇಳನ ಉದ್ಘಾಟನೆ ಬಳಿಕ ಮಧ್ಯಾಹ್ನ ೧.೩೦ಕ್ಕೆ ಡಾ.ಎಸ್.ಪಿ. ಗೌಡರ್ ಅಧ್ಯಕ್ಷತೆಯಲ್ಲಿ ನಾಡು, ನುಡಿ, ನಾಡವರ್ ಶೀರ್ಷಿಕೆಯಡಿ ಮೊದಲನೇ ಗೋಷ್ಠಿ ನಡೆಯಲಿದೆ. ಡಾ. ಕಾಂತೇಶ ಅಂಬಿಗೇರ ಅವರಿಂದ ಕನ್ನಡ ಅಂದು-ಇಂದು-ಮುಂದು, ಡಾ.ವೈ.ಎಂ. ಯಾಕೊಳ್ಳಿ ಅವರಿಂದ ಕನ್ನಡ ಸಂಸ್ಕೃತಿಯ ಸ್ಥಿತ್ಯಂತರ, ಶಶಿಧರ ತೋಡ್ಕರ್ ಅವರಿಂದ ಭಾಷಾ ಮಾಧ್ಯಮವಾಗಿ ಕನ್ನಡ- ಸಾಧ್ಯತೆ ಸವಾಲುಗಳು ವಿಷಯದ ಕುರಿತು ವಿಷಯ ಮಂಡನೆ ನಡೆಯಲಿದೆ.

ಮಧ್ಯಾಹ್ನ ೩.೩೦ಕ್ಕೆ ಅಖಂಡ ಕರ್ನಾಟಕ ರೈತ ಸಂಘದ ಅಧ್ಯಕ್ಷ ಸಿದ್ದನಗೌಡ ಪಾಟೀಲ ಅಧ್ಯಕ್ಷತೆಯಲ್ಲಿ ಹೊನ್ನ ಬಿತ್ತೇವು ಜಗಕೆಲ್ಲ ಶೀರ್ಷಿಕೆಯಡಿ ಗೋಷ್ಠಿ ೨ ನಡೆಯಲಿದೆ. ರೈತ ಸಂಘ ಹಾಗೂ ಹಸಿರು ಸೇನೆಯ ರಾಮಣ್ಣ ಕೆಂಚಳ್ಳೇರ ಅವರಿಂದ ನೇಗಿಲಯೋಗಿಯ ತವಕ-ತಲ್ಲಣಗಳು, ಹನುಮಂತಪ್ಪ ದೀವಿಗಿಹಳ್ಳಿ ಅವರಿಂದ ಕರ್ನಾಟಕದಲ್ಲಿ ರೈತ ಚಳವಳಿಯ ಹೆಜ್ಜೆ ಗುರುತುಗಳು ವಿಷಯದ ಮಂಡನೆಯಾಗಲಿದೆ.

ಸಂಜೆ ೫ಕ್ಕೆ ಪ್ರೊ. ಲಿಂಗರಾಜ ಕಮ್ಮಾರ ಅಧ್ಯಕ್ಷತೆಯಲ್ಲಿ ವೈವಿಧ್ಯ ಶೀರ್ಷಿಕೆಯಡಿ ೩ನೇ ಗೋಷ್ಠಿ ನಡೆಯಲಿದೆ. ಮಕ್ಕಳ ಮನೋವಿಕಾಸ ಮೌಲ್ಯಶಿಕ್ಷಣ ಕುರಿತು ಲಿಂಗರಾಜ ಸೊಟ್ಟಪ್ಪನವರ, ಯುವ ಜನಾಂಗ ಭರವಸೆಯ ಬೆಳಕು ಕುರಿತು ಶೇಖರ ಭಜಂತ್ರಿ, ಮರೆತು ಹೋದ ಹಳ್ಳೂರ ಕುರಿತು ಎಚ್‌.ಜಿ. ಕೃಷ್ಣಪ್ಪ ಹಾಗೂ ಜಿಲ್ಲೆಯಲ್ಲಿ ಗಾಂಧಿ ಹೆಜ್ಜೆಗಳ ಕುರಿತು ಪ್ರಮೋದ ನಲವಾಗಿಲ ಅವರಿಂದ ವಿಷಯ ಮಂಡನೆ ನಡೆಯಲಿದೆ. ಸಂಜೆ ೭ರ ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ಸಮ್ಮೇಳನದ ಎರಡನೇ ದಿನವಾದ ಜ. ೧೧ರಂದು ಬೆಳಗ್ಗೆ ೯.೩೦ಕ್ಕೆ ಡಾ. ಜಯಪ್ಪ ಹೊನ್ನಾಳಿ ಅಧ್ಯಕ್ಷತೆಯಲ್ಲಿ ಕವಿಗಳ ಕಲರವ ನಾಲ್ಕನೇ ಗೋಷ್ಠಿ ನಡೆಯಲಿದೆ. ಬೆಳಗ್ಗೆ ೧೧.೩೦ಕ್ಕೆ ಕೆ.ಆರ್. ಸಂಧ್ಯಾರೆಡ್ಡಿ ಅಧ್ಯಕ್ಷತೆಯಲ್ಲಿ ಮಾನಿನಿ ಮನದಾಳ ಶೀರ್ಷಿಕೆಯಡಿ ೫ನೇ ಗೋಷ್ಠಿ ಜರುಗಲಿದೆ. ಮಹಿಳೆಯ ಸಮಕಾಲೀನ ಸವಾಲುಗಳ ಕುರಿತು ವಿಜಯಲಕ್ಷ್ಮಿ ತಿರ್ಲಾಪುರ, ಇನ್ನೂ ಹುಟ್ಟದೇ ಇರಲಿ ನಾರಿಯರೆನ್ನವೋಲ್ ಕುರಿತು ನಾಗರಾಜ ದ್ಯಾಮನಕೊಪ್ಪ ಹಾಗೂ ನಾ ಬರೀ ಭ್ರೂಣವಲ್ಲ ಕುರಿತು ಪುಷ್ಪಾವತಿ ಶಲವಡಿಮಠರಿಂದ ವಿಷಯ ಮಂಡನೆ ನಡೆಯಲಿದೆ.

ಮಧ್ಯಾಹ್ನ ೧.೩೦ಕ್ಕೆ ಡಾ.ಎಸ್.ಬಿ. ಚನ್ನಪ್ಪಗೌಡ್ರ ಅಧ್ಯಕ್ಷತೆಯಲ್ಲಿ ನಾಡು ನುಡಿಗೆ ಜಿಲ್ಲೆಯ ಕೊಡುಗೆ ಶೀರ್ಷಿಕೆಯಡಿ ಆರನೇ ಗೋಷ್ಠಿ ನಡೆಯಲಿದೆ. ಭಾವೈಕ್ಯತೆಯ ಹರಿಕಾರರು: ಕನಕ-ಶರೀಫ-ಸರ್ವಜ್ಞ ಕುರಿತು ಡಾ. ಜಗನ್ನಾಥ ಗೇನಣ್ಣನವರ, ಕನ್ನಡ ಕಟ್ಟಿದವರು: ಶಾಂತಕವಿ-ಗಳಗನಾಥರು-ಮಹಾದೇವ ಬಣಕಾರ ಹಾಗೂ ಹೊಸನಾಡ ಕಟ್ಟಿದವರು: ಪಾಟೀಲ ಪುಟ್ಟಪ್ಪ-ಚಂದ್ರಶೇಖರ ಕಂಬಾರ-ವಿ.ಕೃ. ಗೋಕಾಕ ಕುರಿತು ಮಲ್ಲಪ್ಪ ಕರೆಣ್ಣನವರ ವಿಷಯ ಮಂಡನೆ ಮಾಡಲಿದ್ದಾರೆ.

ಮಧ್ಯಾಹ್ನ ೩.೩೦ಕ್ಕೆ ಪುಟ್ಟಪ್ಪ ಮರಿಯಮ್ಮನವರ ಅಧ್ಯಕ್ಷತೆಯಲ್ಲಿ ದಮನಿತರ ಧ್ವನಿ ಶೀರ್ಷಿಕೆಯಡಿ ೭ನೇ ಗೋಷ್ಠಿ ನಡೆಯಲಿದೆ. ದಲಿತ ಚಳವಳಿಗಳ ಕುರಿತು ಪಿ. ನಾಗೇಂದ್ರ, ದಲಿತ ಸಾಹಿತ್ಯ ಕುರಿತು ಡಾ. ಅರ್ಜುನ ಗೊಳಸಂಗಿ, ತಳ ಸಮುದಾಯದ ತಲ್ಲಣಗಳು ಕುರಿತು ಮಹಾದೇವ ಕರಿಯಣ್ಣವರರಿಂದ ವಿಷಯ ಮಂಡನೆ ನಡೆಯಲಿದೆ. ಸಂಜೆ ೪.೩೦ಕ್ಕೆ ನಡೆಯುವ ಎಂಟನೇ ಗೋಷ್ಠಿಯಲ್ಲಿ ಡಾ. ಚಾಮರಾಜ ಕಮ್ಮಾರ ಅವರಿಂದ ಹಿರೇಕೆರೂರು, ರಟ್ಟಿಹಳ್ಳಿ ತಾಲೂಕಿನ ವೈಶಿಷ್ಟ್ಯಗಳ ಕುರಿತು ವಿಶೇಷ ಉಪನ್ಯಾಸ ನಡೆಯಲಿದೆ.

ಸಂಜೆ ೫.೩೦ಕ್ಕೆ ಬಹಿರಂಗ ಅವೇಶನ ನಡೆಯಲಿದ್ದು, ನಿರ್ಣಯಗಳ ಮಂಡನೆಯಾಗಲಿದೆ. ಸಂಜೆ ೬ಕ್ಕೆ ಸನ್ಮಾನ ಸಮಾರಂಭ ನಡೆಯಲಿದೆ. ಸಂಜೆ ಸಮಾರೋಪ ಸಮಾರಂಭ ನಡೆಯಲಿದ್ದು, ರಟ್ಟಿಹಳ್ಳಿಯ ಶಿವಲಿಂಗ ಶಿವಾಚಾರ್ಯರು ಸಾನ್ನಿಧ್ಯ ವಹಿಸಲಿದ್ದಾರೆ. ಜಾನಪದ ವಿದ್ವಾಂಸ ಡಾ. ಶಂಭು ಬಳಿಗಾರ ಸಮಾರೋಪ ನುಡಿಗಳನ್ನಾಡಲಿದ್ದಾರೆ. ಆನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ಎನ್. ಸುರೇಶಕುಮಾರ, ಪಿ.ಎಸ್. ಸಾಲಿ, ವೈ.ಬಿ. ಆಲದಕಟ್ಟಿ, ಎಸ್.ಎನ್. ದೊಡ್ಡಗೌಡ್ರ, ಎನ್.ಬಿ. ಕಾಳೆ, ಈರಣ್ಣ ಬೆಳವಡಿ, ಗೂಳಪ್ಪ ಅರಳಿಕಟ್ಟಿ, ಪೃಥ್ವಿರಾಜ ಬೇಟಗೇರಿ, ಶಂಕರ ಸುತಾರ, ಜೆ.ಬಿ. ಮರಿಗೌಡ್ರ, ಬಿ.ಡಿ. ಜಿಗರಿ, ಡಿ.ಬಿ. ನಿಂಗನಗೌಡ್ರ ಇದ್ದರು.

Share this article