ಬ್ಯಾಡಗಿ: ಸಂತ್ರಸ್ತರೊಬ್ಬರಿಗೆ ಭೂಸ್ವಾಧೀನದ ಪರಿಹಾರ ನೀಡಲು ಕಳೆದ 55 ವರ್ಷಗಳಿಂದ ವಿಫಲವಾದ ಹಿನ್ನೆಲೆ ಸರ್ಕಾರಕ್ಕೆ ಸಂಬಂಧಿಸಿದ ಚರಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಇಲ್ಲಿನ ಹಿರಿಯ ದಿವಾಣಿ ನ್ಯಾಯಾಲಯ ಆದೇಶಿಸಿದ್ದು, ಜಿಲ್ಲಾಧಿಕಾರಿಗಳ ವಾಹನವನ್ನೇ ಬುಧವಾರ ಜಪ್ತಿ ಮಾಡಲಾಗಿದೆ.
1970ರಲ್ಲಿ ಕೆರೆ ನಿರ್ಮಾಣದ ಉದ್ದೇಶದಿಂದ ತಾಲೂಕಿನ ಕೆರೂಡಿ ಗ್ರಾಮದ ರುದ್ರಪ್ಪ ಬಸಪ್ಪ ಗುತ್ತಲ ಎಂಬವರಿಗೆ ಸೇರಿದ ಮಾಸಣಗಿ ಗ್ರಾಮದ ರಿ.ಸ.ನಂ. 156/2ರಲ್ಲಿ 29 ಗುಂಟೆ ಜಮೀನನ್ನು ಭೂಸ್ವಾಧೀನ ಮಾಡಿಕೊಂಡಿದ್ದ ಆಗಿನ ಜಿಲ್ಲಾಧಿಕಾರಿಗಳು ಕೆರೆ ನಿರ್ಮಿಸಲು ಸಣ್ಣ ನೀರಾವರಿ ಇಲಾಖೆಗೆ ಹಸ್ತಾಂತರಿಸಿದ್ದರು.
ಭೂಸ್ವಾಧಿನಕ್ಕೆ ಸಂಬಂಧಿಸಿದಂತೆ ಪ್ರತಿ ಎಕರೆಗೆ ₹1.30 ಲಕ್ಷ ಪರಿಹಾರ ನೀಡಬೇಕಾಗಿದ್ದ ಆಗಿನ ಸರ್ಕಾರ ಪರಿಹಾರ ನೀಡುವಲ್ಲಿ ವಿಫಲವಾಗಿತ್ತು. ಇದನ್ನು ಪ್ರಶ್ನಿಸಿ ಸಂತ್ರಸ್ತೆ ಶಿವಕ್ಕ ಗುತ್ತಲ (ರುದ್ರಪ್ಪ ಅವರ ಪತ್ನಿ) ಅವರು ಹಿರಿಯ ದಿವಾಣಿ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ಸಂತ್ರಸ್ತೆಗೆ ಪರಿಹಾರ ಮೊತ್ತ ನೀಡುವ ವರೆಗೂ ಬಡ್ಡಿ ಸಂದಾಯ ಮಾಡುವಂತೆ ಆದೇಶಿಸಿತ್ತು.
55 ವರ್ಷ ಬಾರದ ಪರಿಹಾರ: ಭೂಸ್ವಾಧೀನದ ಪರಿಹಾರ (22-10-1970) 55 ವರ್ಷ ಸಂದರೂ ಸರ್ಕಾರ ಮಾತ್ರ ನೀಡಿರಲಿಲ್ಲ. ಆದರೆ ಕುಟುಂಬಕ್ಕೆ ಅಲ್ಲಿಂದ ಇಲ್ಲಿಯವರೆಗೂ ಬಡ್ಡಿಸಹಿತ ಬರಬೇಕಾಗಿದ್ದ ಒಟ್ಟು ಪರಿಹಾರದ ಮೊತ್ತ ₹45.80 ಲಕ್ಷವನ್ನೂ ನೀಡಿರಲಿಲ್ಲ. ಹೀಗಾಗಿ ಸರ್ಕಾರಕ್ಕೆ ಸಂಬಂಧಿಸಿದ ಚರಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಆದೇಶಿಸಿತ್ತು. ಹೀಗಾಗಿ ಜಿಲ್ಲಾಧಿಕಾರಿಗಳ ವಾಹನವನ್ನೇ ಜಪ್ತಿ ಮಾಡಲಾಗಿದೆ.
ಎಚ್ಚೆತ್ತುಕೊಳ್ಳದ ಸರ್ಕಾರ: ಜಿಲ್ಲಾಧಿಕಾರಿಗಳು ತಿಂಗಳಲ್ಲಿ ಹಣ ತುಂಬುವುದಾಗಿ ನ್ಯಾಯಾಲಯಕ್ಕೆ ಕಳೆದ ವರ್ಷ ನ. 23ರಂದು ಲಿಖಿತ ಪತ್ರ ನೀಡಿದ್ದರು. ಅದಾಗ್ಯೂ ವಯೋವೃದ್ಧೆ ಸಂತ್ರಸ್ತೆಗೆ ಹಣ ಸಂದಾಯವಾಗಿಲ್ಲ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಫೆ. 11ರಂದು ಉಪ ವಿಭಾಗಾಧಿಕಾರಿಗಳ ವಾಹನವನ್ನು ಈಗಾಗಲೇ ಕೋರ್ಟ್ ಜಪ್ತಿ ಮಾಡಿದೆ. ಹೀಗಿದ್ದರೂ ಎಚ್ಚೆತ್ತುಕೊಳ್ಳದ ಸರ್ಕಾರ ಪರಿಹಾರದ ನೀಡುವಲ್ಲಿ ವಿಫಲವಾಗಿದ್ದು, ಕಾನೂನನ್ನು ಗೌರವಿಸುವಂತೆ ಮನವಿ ಮಾಡಿದ್ದಾರೆ ಎಂದು ಸಂತ್ರಸ್ತೆ ಪರ ನ್ಯಾಯವಾದಿ ಎಸ್.ಬಿ. ಕುಂಚೂರ ತಿಳಿಸಿದರು.