ಹಾವೇರಿ ಜಿಲ್ಲಾ ಹಾಲು ಉತ್ಪಾಕರ ಸಹಕಾರಿ ಸಂಘಗಳ ಒಕ್ಕೂಟ ಕಾಂಗ್ರೆಸ್‌ ತೆಕ್ಕೆಗೆ

KannadaprabhaNewsNetwork | Published : Mar 3, 2025 1:45 AM

ಸಾರಾಂಶ

ತೀವ್ರ ಕುತೂಹಲ ಕೆರಳಿಸಿದ್ದ ಹಾವೇರಿ ಕ್ಷೇತ್ರದಿಂದ ಬಿಜೆಪಿ ಬೆಂಬಲಿತರಾಗಿ ಕಣಕ್ಕಿಳಿದಿದ್ದ ಹಾಲಿ ಅಧ್ಯಕ್ಷ ಬಸವರಾಜ ಅರಬಗೊಂಡ 22 ಮತಗಳನ್ನು ಪಡೆದರೆ, ಕಾಂಗ್ರೆಸ್‌ ಬೆಂಬಲಿತ ಬಸವೇಶಗೌಡ ರವೀಂದ್ರಗೌಡ ಪಾಟೀಲ 29 ಮತಗಳನ್ನು ಪಡೆಯುವ ಮೂಲಕ ಭರ್ಜರಿ ಜಯಭೇರಿ ಬಾರಿಸಿದರು.

ಹಾವೇರಿ: ತೀವ್ರ ಕುತೂಹಲ ಮೂಡಿಸಿದ್ದ ಹಾವೇರಿ ಜಿಲ್ಲಾ ಹಾಲು ಉತ್ಪಾಕರ ಸಹಕಾರಿ ಸಂಘಗಳ ಒಕ್ಕೂಟದ (ಹಾವೆಮುಲ್‌) ಆಡಳಿತ ಮಂಡಳಿಯ 8 ನಿರ್ದೇಶಕ ಸ್ಥಾನಗಳಿಗೆ ಭಾನುವಾರ ಚುನಾವಣೆ ನಡೆಯಿತು. ಇದರಲ್ಲಿ 6 ಜನ ಕಾಂಗ್ರೆಸ್‌ ಬೆಂಬಲಿತರು ಹಾಗೂ ಇಬ್ಬರು ಬಿಜೆಪಿ ಬೆಂಬಲಿತರು ಆಯ್ಕೆಯಾದರು.

ಧಾರವಾಡ ಒಕ್ಕೂಟದಿಂದ ಪ್ರತ್ಯೇಕಗೊಂಡ ಹಾವೆಮುಲ್‌ಗೆ ಇದೇ ಮೊದಲ ಬಾರಿಗೆ ಭಾನುವಾರ ಚುನಾವಣೆ ನಡೆಸಲಾಯಿತು. ಬೆಳಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ನಗರದ ಮೈಲಾರ ಮಹದೇವಪ್ಪ ವೃತ್ತದ ಬಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ. 2ರಲ್ಲಿ ಮತದಾನ ನಡೆಯಿತು. 4 ಗಂಟೆಗೆ ಮತ ಎಣಿಕೆ ಪ್ರಕ್ರಿಯೆ ನಡೆಸಲಾಯಿತು. 8 ಕ್ಷೇತ್ರಗಳಿಗೆ 20 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಎರಡು ಬಾರಿ ಧಾರವಾಡ ಒಕ್ಕೂಟದ ಅಧ್ಯಕ್ಷರಾಗಿದ್ದ ಹಾಗೂ ಹಾವೆಮುಲ್‌ ಹಾಲಿ ಅಧ್ಯಕ್ಷರಾಗಿದ್ದ ಬಸವರಾಜ ಅರಬಗೊಂಡ ಅವರು ಮತ್ತೊಮ್ಮೆ ಅಧ್ಯಕ್ಷಗಿರಿ ಮೇಲೆ ಕಣ್ಣಿಟ್ಟು ಸ್ಪರ್ಧಿಸಿ ವಿರೋಚಿತ ಸೋಲು ಅನುಭವಿಸಿದರು.

8 ನಿರ್ದೇಶಕರ ಆಯ್ಕೆ: ತೀವ್ರ ಕುತೂಹಲ ಕೆರಳಿಸಿದ್ದ ಹಾವೇರಿ ಕ್ಷೇತ್ರದಿಂದ ಬಿಜೆಪಿ ಬೆಂಬಲಿತರಾಗಿ ಕಣಕ್ಕಿಳಿದಿದ್ದ ಹಾಲಿ ಅಧ್ಯಕ್ಷ ಬಸವರಾಜ ಅರಬಗೊಂಡ 22 ಮತಗಳನ್ನು ಪಡೆದರೆ, ಕಾಂಗ್ರೆಸ್‌ ಬೆಂಬಲಿತ ಬಸವೇಶಗೌಡ ರವೀಂದ್ರಗೌಡ ಪಾಟೀಲ 29 ಮತಗಳನ್ನು ಪಡೆಯುವ ಮೂಲಕ ಭರ್ಜರಿ ಜಯಭೇರಿ ಬಾರಿಸಿದರು.

ಶಿಗ್ಗಾಂವಿ ಕ್ಷೇತ್ರದಿಂದ ಬಿಜೆಪಿ ಬೆಂಬಲಿತ ತಿಪ್ಪಣ್ಣ ಸಾತಣ್ಣನವರ 18 ಮತಗಳನ್ನು ಪಡೆದು ಗೆಲುವು ಸಾಧಿಸಿದರು. ಅವರಿಗೆ ಪ್ರತಿಸ್ಪರ್ಧಿಗಳಾಗಿದ್ದ ದೇವೇಂದ್ರಪ್ಪ ಜಾಧವ 13 ಮತ ಪಡೆದರೆ, ಪಾಲಾಕ್ಷಪ್ಪ ಹಾವಣಗಿ 7 ಮತಗಳನ್ನು ಪಡೆದರು.

ಹಾನಗಲ್ಲ ಕ್ಷೇತ್ರದಿಂದ ಕಾಂಗ್ರೆಸ್‌ ಬೆಂಬಲಿತ ಚಂದ್ರಪ್ಪ ಜಾಲಗಾರ 32 ಪಡೆದು ಗೆಲುವು ದಾಖಲಿಸಿದರು. ವಡಕಪ್ಪ ದೊಡ್ಡಮನಿ 3 ಹಾಗೂ ಶಿವಲಿಂಗಪ್ಪ ತಲ್ಲೂರ 22 ಮತಗಳನ್ನು ಪಡೆಯುವ ಮೂಲಕ ಪರಾಭವಗೊಂಡರು.

ಸವಣೂರು ಕ್ಷೇತ್ರದಿಂದ ಬಿಜೆಪಿ ಬೆಂಬಲಿತ ಶಶಿಧರ ಯಲಿಗಾರ ಅವರು 20 ಮತಗಳನ್ನು ಪಡೆದು ಗೆದ್ದರೆ, ಅವರ ಪ್ರತಿಸ್ಪರ್ಧಿ ಬಸವರೆಡ್ಡಿ ರಡ್ಡೇರ 16 ಮತ ಪಡೆದು ಪರಾಭವಗೊಂಡರು.

ರಟ್ಟೀಹಳ್ಳಿ ಕ್ಷೇತ್ರದಿಂದ ಕಾಂಗ್ರೆಸ್ ಬೆಂಬಲಿತ ಅಶೋಕ ಕರೆಗೌಡ ಪಾಟೀಲ 22 ಮತಗಳನ್ನು ಪಡೆದು ಜಯಭೇರಿ ಬಾರಿಸಿದರೆ, ಅವರ ಪ್ರತಿಸ್ಪರ್ಧಿಗಳಾದ ಮೃತ್ಯುಂಜಯ ಮಾರವಳ್ಳಿ 6 ಮತ ಹಾಗೂ ಹನುಮಂತಗೌಡ ಭರಮಣ್ಣನವರ 17 ಮತಗಳನ್ನು ಪಡೆದರು.

ಬ್ಯಾಡಗಿ ಕ್ಷೇತ್ರದಿಂದ ಬಂಡಾಯ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಪ್ರಕಾಶ ಬನ್ನಿಹಟ್ಟಿ ಅವರು 19 ಮತ ಪಡೆದು ಜಯಭೇರಿ ಬಾರಿಸಿದರೆ, ಕಾಂಗ್ರೆಸ್‌ ಅಧಿಕೃತ ಅಭ್ಯರ್ಥಿ ಕುಮಾರ ವಿರುಪಾಕ್ಷಪ್ಪ ಚೂರಿ ಕೇವಲ 11 ಮತಗಳನ್ನು ಪಡೆಯುವಲ್ಲಿ ಯಶಸ್ವಿಯಾದರು. ಚನ್ನಬಸಪ್ಪ ಬ್ಯಾಡಗಿ 8 ಮತಗಳನ್ನು ಪಡೆದರು.

ರಾಣಿಬೆನ್ನೂರು ಕ್ಷೇತ್ರದಿಂದ ಕಾಂಗ್ರೆಸ್‌ ಬೆಂಬಲಿತ ಮಂಜನಗೌಡ ಪಾಟೀಲ 34 ಮತಗಳನ್ನು ಪಡೆದು ಗೆಲುವು ಸಾಧಿಸಿದರೆ, ಅವರ ಪ್ರತಿಸ್ಪರ್ಧಿಸಿದ್ದಲಿಂಗಪ್ಪ ಮರಿನಾಗಮ್ಮನವರ 25 ಮತಗಳನ್ನು ಪಡೆದು ಪರಾಭವಗೊಂಡರು.

ಹಿರೇಕೆರೂರು ಕ್ಷೇತ್ರದಿಂದ ಕಾಂಗ್ರೆಸ್‌ ಬೆಂಬಲಿತ ಉಜ್ಜನಗೌಡ ಮಾವಿನತೋಪ 33 ಮತಗಳನ್ನು ಪಡೆದು ಗೆಲುವು ಪಡೆದರೆ, ಶಿವಯೋಗೆಪ್ಪ ಕೆರೂಡಿ 18 ಮತಗಳನ್ನು ಪಡೆದರು.

ಕಾಂಗ್ರೆಸ್‌ ಕಾರ್ಯಕರ್ತರ ಸಂಭ್ರಮ: ತೀವ್ರ ಜಿದ್ದಾಜಿದ್ದಿಯಿಂದ ಕೂಡಿದ್ದ ಚುನಾವಣೆಯಲ್ಲಿ ಕಾಂಗ್ರೆಸ್‌ ಬೆಂಬಲಿಯರು ಹೆಚ್ಚಿನ ಸಂಖ್ಯೆಯಲ್ಲಿ ಗೆಲುವು ಸಾಧಿಸುತ್ತಿದ್ದಂತೆ ಪಕ್ಷದ ಕಾರ್ಯಕರ್ತರು ಎಣಿಕೆ ಕೇಂದ್ರದ ಹೊರಗೆ ಪಟಾಕಿ ಸಿಡಿಸಿ, ಗುಲಾಲ್‌ ಎರಚಿ ಸಂಭ್ರಮಿಸಿದರು. ಅಭ್ಯರ್ಥಿ ಗೆಲುವು ಸಾಧಿಸುತ್ತಿದ್ದಂತೆ ಅವರನ್ನು ಎತ್ತಿ ಮೆರವಣಿಗೆ ಮಾಡಿ ವಿಜಯೋತ್ಸವ ಆಚರಿಸಿದರು. ಈ ವೇಳೆ ಡಿಸಿಸಿ ನಿರ್ದೇಶಕ ಕೊಟ್ರೇಶಪ್ಪ ಬಸೇಗಣ್ಣಿ, ಎಸ್‌.ಆರ್‌. ಪಾಟೀಲ, ಪ್ರಭುಗೌಡ ಬಿಷ್ಟನಗೌಡ್ರ ಸೇರಿದಂತೆ ಕಾಂಗ್ರೆಸ್‌ನ ಹಲವು ಮುಖಂಡರು, ಕಾರ್ಯಕರ್ತರು ಇದ್ದರು.

ಹಾವೆಮುಲ್‌ಗೆ ಹೊಸ ನೀರು

ಹಾವೇರಿ ಹಾಲು ಒಕ್ಕೂಟದ ನಿರ್ದೇಶಕ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಹೊಸ ಮುಖಗಳು ಗೆಲುವು ಸಾಧಿಸುವ ಮೂಲಕ ಹಾವೆಮುಲ್‌ ಆಡಳಿತ ಮಂಡಳಿಗೆ ಹೊಸ ನೀರು ಬಂದಂತಾಗಿದೆ. ಇದುವರೆಗೆ ನಿರ್ದೇಶಕರಾಗಿ ಮತ್ತೆ ಸ್ಪರ್ಧಿಸಿದ್ದ ಬಸವರಾಜ ಅರಬಗೊಂಡ, ಹನುಮಂತಗೌಡ ಭರಮಣ್ಣನವರ ಇವರಿಬ್ಬರೂ ಪರಾಭವಗೊಂಡಿರುವುದು ಈ ಸಲದ ಬೆಳವಣಿಗೆಯಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಹಲವು ವರ್ಷಗಳಿಂದ ಹಾಲು ಒಕ್ಕೂಟ ಒಬ್ಬರದೇ ಹಿಡಿತದಲ್ಲಿ ಇರುವುದರಿಂದ ಬೇಸತ್ತು ಈ ಸಲ ಮತದಾರರು ಅವರನ್ನು ತಿರಸ್ಕರಿಸಿರುವುದಕ್ಕೆ ಫಲಿತಾಂಶವೇ ಸಾಕ್ಷಿಯಾಗಿದೆ.

Share this article