ಸವಣೂರು:15ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರ ಭವ್ಯ ಮೆರವಣಿಗೆ ಶನಿವಾರ ಬೆಳಗ್ಗೆ ಪಟ್ಟಣದ ಭರಮಲಿಂಗೇಶ್ವರ ವೃತ್ತದಿಂದ ಪ್ರಾರಂಭಗೊಂಡು ಪ್ರಮುಖ ಬೀದಿಯಲ್ಲಿ ಅದ್ಧೂರಿಯಾಗಿ ಸಾಗಿತು.ತಾಯಿ ಭುನೇಶ್ವರಿ ದೇವಿ ಸೇರಿದಂತೆ ವಿವಿಧ ಮಹಾನ ವ್ಯಕ್ತಿಗಳ ರೂಪಕಗಳು ಮೆರವಣಿಗೆಗೆ ವಿಶೇಷ ಕಳೆ ನೀಡಿತ್ತು. ಗೊಂಬೆ ವೇಷಧಾರಿಗಳು ಹಾಗೂ ನಂದಿಕೋಲು ಕುಣಿತ ವೈಭವ ಹೆಚ್ಚಿಸಿತ್ತು. ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ಬೈಕ್ ರ‍್ಯಾಲಿ ನಡೆಸಿ ಸಂಭ್ರಮಿಸಿದರೆ, ತಹಸೀಲ್ದಾರ್, ಪುರಸಭೆ ಮುಖ್ಯಾಧಿಕಾರಿ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು, ಕಸಾಪ ಪದಾಧಿಕಾರಿಗಳು ಕುಣಿದು ಸಂಭ್ರಮಿಸಿದರು.ಝಾಂಜ್ ಮೇಳ, ಸಮಾಳ (ವೀರಗಾಸೆ) ವಾದ್ಯಮೇಳ ಸೇರಿದಂತೆ ವಿವಿಧ ಜನಪದ ಕಲಾ ತಂಡಗಳು ಜೊತೆಗೆ ಮಹಿಳೆಯರು, ಯುವಕರು, ಕನ್ನಡ ಮನಸ್ಸುಗಳು ಕನ್ನಡ ಧ್ವಜವನ್ನು ಹಿಡಿದು ಮೆರವಣಿಗೆಯಲ್ಲಿ ಸಾಗಿದರು. ಅಲಂಕೃತವಾದ ರಥದ ವರ್ಣದ ಸಾರೋಟಿನಲ್ಲಿ ತಾಯಿ ಭುವನೇಶ್ವರಿಯ ಭಾವಚಿತ್ರದೊಂದಿಗೆ, ಸಮ್ಮೇಳನದ ಸರ್ವಾಧ್ಯಕ್ಷರಾದ ಡಾ. ಹಜರತಸಾಹೇಬ ಇಮಾಮಸಾಹೇಬ ತಿಮ್ಮಾಪೂರ ದಂಪತಿ ಮೆರವಣಿಗೆ ಪಟ್ಟಣದ ಶ್ರೀ ಭರಮಲಿಂಗೇಶ್ವರ ವೃತ್ತದಿಂದ ಹೊರಟು ಪಟ್ಟಣದ ಮಾರ್ಕೆಟ್ ರಸ್ತೆ, ಸಿಂಪಿಗಲ್ಲಿ, ಗಣೇಶ ದೇವಸ್ಥಾನ, ಸರಕಾರಿ ಆಸ್ಪತ್ರೆ ರಸ್ತೆ ಮೂಲಕ ಶ್ರೀ ಚನ್ನಬಸವೇಶ್ವರ ಕಲ್ಯಾಣ ಮಂಟಪ ಆವರಣದ ವಿ.ಕ.ಗೋಕಾಕ ವೇದಿಕೆಗೆ ಸಂಪನ್ನಗೊಂಡಿತು.ನಾಡದೇವಿ ಪೂಜೆಯನ್ನು ಅಡವಿಸ್ವಾಮಿಮಠದ ಕುಮಾರ ಮಹಾಸ್ವಾಮಿಗಳು ನೆರವೇರಿಸಿದರು. ಶಿಗ್ಗಾಂವಿ-ಸವಣೂರ ಶಾಸಕ ಯಾಸೀರಅಹ್ಮದಖಾನ ಪಠಾಣ ಕನ್ನಡ ಧ್ವಜ ತೋರುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು. ಕಸಾಪ ಜಿಲ್ಲಾ ಅಧ್ಯಕ್ಷ ಲಿಂಗಯ್ಯ ಹಿರೇಮಠ, ಜಿಲ್ಲಾ ಕಾರ್ಯದರ್ಶಿ ಪ್ರಭು ಅರಗೋಳ, ತಾಲೂಕು ಅಧ್ಯಕ್ಷ ಚಂದ್ರುಗೌಡ ಪಾಟೀಲ, ಕರವೇ ಅಧ್ಯಕ್ಷ ರಮೇಶ ಅರಗೋಳ, ಗಣ್ಯರಾದ ಗಂಗಾಧರ ಬಾಣದ, ಸುಭಾಸ ಮಜ್ಜಗಿ, ಎಂ.ಜೆ.ಮುಲ್ಲಾ, ಲಕ್ಷ್ಮಣ ಕನವಳ್ಳಿ, ಅಲ್ಲಾವುದ್ದೀನ ಮನಿಯಾರ, ಧರಿಯಪ್ಪಗೌಡ ಪಾಟೀಲ, ಸಮ್ಮೇಳದನ ಸ್ವಾಗತ ಸಮಿತಿಯ ಪದಾಧಿಕಾರಿಗಳು, ಗಣ್ಯ ವರ್ತಕರು, ಮುಖಂಡರು ಹಾಗೂ ತಾಲೂಕಿನ ವಿವಿಧ ವಿಭಾಗಗಳಿಂದ ಆಗಮಿಸಿದ್ದ ಸಾಹಿತ್ಯಾಕ್ತರು, ವಿವಿಧ ಕನ್ನಡ ಪರ ಸಂಘಟನೆಗಳ ಪದಾಧಿಕಾರಿಗಳು, ಕಸಾಪ ಸದಸ್ಯರು ಸಂಭ್ರಮದ ನಡುವೆ ಸಾಗಿ ಬಂದ ಸಮ್ಮೇಳನಾಧ್ಯಕ್ಷರ ಮೆರವಣಿಗೆ ಪಟ್ಟಣದಾದ್ಯಂತ ಕನ್ನಡದ ಕಂಪನ್ನು ಹೆಚ್ಚಿಸಿತು.ಇದಕ್ಕೂ ಮೊದಲು ಜರುಗಿದ ಹಾವೇರಿ ಜಿಲ್ಲಾ 15ನೇ ಕನ್ನಡ ಸಾಹಿತ್ಯ ಸಮ್ಮೇಳನದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ರಾಷ್ಟ್ರ ಧ್ವಜಾರೋಹಣವನ್ನು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ, ಪರಿಷತ್ತು ಧ್ವಜಾರೋಹಣವನ್ನು ಕಸಾಪ ಜಿಲ್ಲಾ ಅಧ್ಯಕ್ಷ ಲಿಂಗಯ್ಯ ಹಿರೇಮಠ, ನಾಡ ಧ್ವಜಾರೋಹಣವನ್ನು ಕಸಾಪ ತಾಲೂಕು ಅಧ್ಯಕ್ಷ ಚಂದ್ರಗೌಡ ಪಾಟೀಲ ನೆರವೇರಿಸಿದರು.ಈ ಸಂದರ್ಭದಲ್ಲಿ ಉಪ ವಿಭಾಗಾಧಿಕಾರಿ ಶುಭಂ ಶುಕ್ಲಾ, ತಹಸೀಲ್ದಾರ್ ರವಿಕುಮಾರ ಕೊರವರ, ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ಬಿ.ಎಸ್. ಶಿಡೇನೂರ, ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಫ್. ಬಾರ್ಕಿ, ಪುರಸಭೆ ಮುಖ್ಯಾಧಿಕಾರಿ ನೀಲಪ್ಪ ಹಾದಿಮನಿ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು, ಕಸಾಪ ಪದಾಧಿಕಾರಿಗಳು, ಗಣ್ಯರು ಉಪಸ್ಥಿತರಿದ್ದರು.