ಸಾಮರಸ್ಯದ ಸಂದೇಶ ಸಾರಿದ ಹಾವೇರಿ ಜಿಲ್ಲೆ: ಶಾಸಕ ರುದ್ರಪ್ಪ ಲಮಾಣಿ

KannadaprabhaNewsNetwork |  
Published : Sep 01, 2025, 01:04 AM IST
ಹಾವೇರಿ ನಗರದ ಶಿವಶಕ್ತಿ ಪ್ಯಾಲೇಸ್‌ನಲ್ಲಿ ಜೈ ಮಾನವ ಸಮಾವೇಶವನ್ನು ಗಣ್ಯರು ಉದ್ಘಾಟಿಸಿದರು. | Kannada Prabha

ಸಾರಾಂಶ

ಭಾವೈಕ್ಯ ಬದುಕಿಗೆ ಹಾವೇರಿ ನೆಲ ಹೇಳಿ ಮಾಡಿಸಿದೆ. ಗುರುಗೋವಿಂದ ಭಟ್ಟರು ಮುಸ್ಲಿಮರೊಂದಿಗೆ ಹಾಗೂ ಖಾದರಲಿಂಗರು ಹಿಂದೂಗಳೊಂದಿಗಿದ್ದು ಸೌಹಾರ್ದ ಭಾವ ಮೂಡಿಸಿದರು.

ಹಾವೇರಿ: ರಾಜಕೀಯ ಕಾರಣಗಳಿಗೆ ಜನರ ಮನಸ್ಸು ಒಡೆಯುತ್ತಿರುವ ಸಮಕಾಲೀನ ಸಂದರ್ಭದಲ್ಲಿ ತ್ರಿಪದಿ ಕವಿ ಸರ್ವಜ್ಞ, ದಾಸಶ್ರೇಷ್ಠ ಕನಕದಾಸರು ಹಾಗೂ ಸಂತ ಶಿಶುವಿನಹಾಳ ಶರೀಫರಂಥ ದಾರ್ಶನಿಕರ ಮೂಲಕ ಇಡೀ ಜಗತ್ತಿಗೆ ಸಾಮರಸ್ಯದ ಸಂದೇಶ ಸಾರಿದ ಶ್ರೇಯಸ್ಸು ಹಾವೇರಿ ಜಿಲ್ಲೆಗೆ ಸಲ್ಲುತ್ತದೆ ಎಂದು ಶಾಸಕ ರುದ್ರಪ್ಪ ಲಮಾಣಿ ತಿಳಿಸಿದರು.ನಗರದ ಶಿವಶಕ್ತಿ ಪ್ಯಾಲೇಸ್‌ನಲ್ಲಿ ಜರುಗಿದ ಜೈ ಮಾನವ ಸಮಾವೇಶ ಹಾಗೂ ಜೈ ಮಾನವ ಕಲ್ಯಾಣ ಸಂಘ ಲೋಕಾರ್ಪಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಭಾವೈಕ್ಯ ಬದುಕಿಗೆ ಹಾವೇರಿ ನೆಲ ಹೇಳಿ ಮಾಡಿಸಿದೆ. ಗುರುಗೋವಿಂದ ಭಟ್ಟರು ಮುಸ್ಲಿಮರೊಂದಿಗೆ ಹಾಗೂ ಖಾದರಲಿಂಗರು ಹಿಂದೂಗಳೊಂದಿಗಿದ್ದು ಸೌಹಾರ್ದ ಭಾವ ಮೂಡಿಸಿದರು. ರಾಜಕಾರಣಕ್ಕೆ ಜಾತಿ, ಧರ್ಮಗಳ ಮಧ್ಯೆ ಕಂದಕ ಉಂಟಾಗುತ್ತಿದೆ. ಸರ್ವಧರ್ಮೀಯರೂ ಸಹಬಾಳ್ವೆಯಿಂದ ಬದುಕಬಹುದು ಎಂಬುದನ್ನು ಭಾರತ ತೋರಿಸಿಕೊಟ್ಟಿದೆ. ಈ ಹಿನ್ನೆಲೆ ನಮ್ಮ ನೆಲದ ಘನತೆಗೆ ಚ್ಯುತಿ ಬಾರದಂತೆ ನಡೆದುಕೊಳ್ಳುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ. ಭಾವೈಕ್ಯ ಕದಡುವ ಸಂದಿಗ್ಧ ಪರಿಸ್ಥಿತಿಯಲ್ಲಿ ಜೈ ಮಾನವ ಕಲ್ಯಾಣ ಸಂಘ ಸ್ಥಾಪಿಸಿರುವುದು ಸಮಯೋಚಿತ ಎಂದರು.ಸಮಾವೇಶ ಉದ್ಘಾಟಿಸಿದ ಸಾಹಿತಿ ಸತೀಶ ಕುಲಕರ್ಣಿ ಮಾತನಾಡಿ, ಮಾನವೀಯತೆ ಮರೆತು ವಾದ- ಪ್ರತಿವಾದ ಸೃಷ್ಟಿಯಾಗುತ್ತಿದೆ. ಸಾಮರಸ್ಯ ಕದಡುತ್ತಿರುವ ಈ ದಿನಗಳಲ್ಲಿ ಮಾನವೀಯತೆ ಪರವಾಗಿ ನಿಲ್ಲಬೇಕಿದೆ. ಜೈ ಮಾನವ ಸಮಾವೇಶ ಆಯೋಜನೆ ಅಭಿನಂದನೀಯ ಎಂದರು.ಅಗಡಿ ಅಕ್ಕಿಮಠದ ಗುರುಲಿಂಗ ಸ್ವಾಮೀಜಿ ಮಾತನಾಡಿ, ಭಾರತ ಭಾವೈಕ್ಯ ದೇಶ. ಎಲ್ಲ ಧರ್ಮಗಳನ್ನು ಒಳಗೊಂಡು ವಸುದೇವ ಕುಟುಂಬಕಂ ಸಂದೇಶ ನೀಡಿದೆ. ಈ ಹಿನ್ನೆಲೆ ಹಾವೇರಿ ನೆಲದಿಂದ ನಾವೆಲ್ಲರೂ ಭಾರತೀಯರು ಎಂಬುದನ್ನು ಜೈ ಮಾನವ ಕಲ್ಯಾಣ ಸಂಘ ಪ್ರಸ್ತುತಪಡಿಸಲಿದೆ ಎಂದರು.ಮೇಕ್ ಫೌಂಡೇಶನ್‌ನ ವ್ಯವಸ್ಥಾಪಕ ನಿರ್ದೇಶಕ ಮೌಲಾನ್ ಮುಸ್ತಫಾ ರಝಾ ನಈಮಿ ಮಾತನಾಡಿ, ಮಾನವ ಕಲ್ಯಾಣಕ್ಕಾಗಿ ಮೇಕ್ ಫೌಂಡೇಶನ್ ಸ್ಥಾಪಿಸಲಾಗಿದೆ. ಅಕ್ಕಿಮಠದ ಶ್ರೀಗಳ ಜತೆಗೆ ಕಳೆದ 11 ವರ್ಷದಲ್ಲಿ ಅಕ್ಷರ ದಾಸೋಹ ಮಾಡಲಾಗಿದೆ. 30 ಶಿಕ್ಷಣ ಸಂಸ್ಥೆಗಳು ಹಾಗೂ ಏಳು ವಿಶೇಷ ಕ್ಯಾಂಪಸ್‌ಗಳಿವೆ. ಪ್ರೀತಿಗೆ ಬೆಲೆ ಸಿಗುವ ಜಾಗದಲ್ಲಿ ಸೇವೆ ಮಾಡಿದಾಗ ತೃಪ್ತಿ ಸಿಗುತ್ತದೆ ಎಂಬುದನ್ನು ಅರಿತಿದ್ದೇವೆ ಎಂದರು.ಮಾಜಿ ಶಾಸಕ ನೆಹರು ಓಲೇಕಾರ ಮಾತನಾಡಿದರು. ಸವಣೂರಿನ ದೊಡ್ಡಹುಣಸೆ ಕಲ್ಮಠದ ಚನ್ನಬಸವ ಸ್ವಾಮೀಜಿ ಹಾಗೂ ಚಂದ್ರಶೇಖರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.ಇದೇ ಸಂದರ್ಭದಲ್ಲಿ ಸೌದಿ ಅರೇಬಿಯಾದ ಅನಿವಾಸಿ ಭಾರತೀಯ ಝಕರಿಯಾ ಮುಝೈನ್ ಅಲ್ ಜುಬೈಲ್ ಅವರಿಗೆ ಜೈ ಮಾನವ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಹಾವೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಎಫ್.ಎನ್. ಗಾಜಿಗೌಡ್ರ, ಸಾಹಿತಿ ಸಿ.ಎಸ್. ಮರಳಿಹಳ್ಳಿ ಹಾಗೂ ಜೈ ಮಾನವ ಕಲ್ಯಾಣ ಸಂಘದ ನೂತನ ಪದಾಧಿಕಾರಿಗಳು ಉಪಸ್ಥಿತರಿದ್ದರು. ಅಬ್ದುಲ್ ಕರೀಂ ಮೊಹಸಿನ್ ಕಾರ್ಯಕ್ರಮ ನಿರ್ವಹಿಸಿದರು.

PREV

Recommended Stories

ತಿಮರೋಡಿ ವಿರುದ್ಧದ ಕೇಸ್‌ಗೆ ಹೈಕೋರ್ಟ್‌ ತಡೆ
ಒತ್ತಡ ಹೇರಿ ಶಾಸಕರಿಂದ ರಸ್ತೆ ಅಗಲೀಕರಣ