ಸುತ್ತೂರು ಶ್ರೀಗಳ ಶೈಕ್ಷ ಣಿಕ ಸೇವೆ ಕುರಿತು ವಿಶೇಷ ಉಪನ್ಯಾಸ
ಸುತ್ತೂರು ಮಠವು ಶಿಕ್ಷಣ, ಕೃಷಿ, ಸಾಮಾಜಿಕ ಕಲ್ಯಾಣ ಮತ್ತು ಮಹಿಳಾ ಸಬಲೀಕರಣದಂತಹ ಕ್ಷೇತ್ರಗಳಲ್ಲಿ ಅಪಾರ ಕೊಡುಗೆ ನೀಡಿದ್ದು, ಕರ್ನಾಟಕದಲ್ಲಿ ಶೈಕ್ಷಣಿಕ ಕ್ರಾಂತಿ ತರುವಲ್ಲಿ ಮಹತ್ವದ ಪಾತ್ರ ವಹಿಸಿದೆ ಎಂದು ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಸಹ ಪ್ರಾಧ್ಯಾಪಕ ಡಾ. ಸಿ. ಕೊಟ್ರೇಶ್ ಹೇಳಿದರು.
ಇಲ್ಲಿನ ವೀರಶೈವ ವಿದ್ಯಾವರ್ಧಕ ಸಂಘದ ಹಾನಗಲ್ ಕುಮಾರೇಶ್ವರ ಪಾಲಿಟೆಕ್ನಿಕ್ ಕಾಲೇಜಿನ ಸಭಾಂಗಣದಲ್ಲಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಹಾಗೂ ಜಿಲ್ಲಾ ಕದಳಿ ಮಹಿಳಾ ವೇದಿಕೆ ಹಮ್ಮಿಕೊಂಡಿದ್ದ ಡಾ. ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳ ಸ್ಮರಣೆ, ಸಂಸ್ಥಾಪಕರ ದಿನಾಚರಣೆ ಹಾಗೂ ಸೇವಾದೀಕ್ಷೆ ಸಮಾರಂಭದಲ್ಲಿ ಸುತ್ತೂರು ಶ್ರೀಗಳ ಶೈಕ್ಷ ಣಿಕ ಸೇವೆ ಕುರಿತು ವಿಶೇಷ ಉಪನ್ಯಾಸ ನೀಡಿದರು.ಚೋಳರ ಕಾಲಘಟ್ಟದಲ್ಲಿ ಶಿವರಾತ್ರೀಶ್ವರರ ಸುತ್ತೂರು ಮಠ ಸ್ಥಾಪನೆ ಆಗುತ್ತದೆ. ಚೋಳ ಮತ್ತು ಗಂಗರ ನಡುವೆ ನಡೆದ ಯುದ್ಧವನ್ನು ನಿಲ್ಲಿಸಲು ಸಹ ಈ ಮಠ ಕಾರಣವಾಗುತ್ತದೆ.
ಯಾರೂ ಸಹ ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ನಾಡಿನ ಅನೇಕ ಮಠಮಾನ್ಯಗಳು ಅನ್ನ, ಆಶ್ರಯ ಹಾಗೂ ಅಕ್ಷರ ದಾಸೋಹದ ಮೂಲಕ ನಾಡಿನಲ್ಲಿ ಶೈಕ್ಷಣಿಕ ಕ್ರಾಂತಿಯನ್ನೇ ಶುರುಗೊಳಿಸಿದವು. ಮಠ ಮಾನ್ಯಗಳ ಜನಮುಖಿ ಕಾಳಜಿಯಿಂದಾಗಿಯೇ ಇಂದಿಗೂ ಲಕ್ಷಾಂತರ ವಿದ್ಯಾರ್ಥಿಗಳು ವೀರಶೈವ ಮಠ ಮಾನ್ಯಗಳಿಗೆ ಉಚಿತವಾಗಿ ಶಿಕ್ಷಣ ಪಡೆಯುವಂತಾಗಿದೆ. ಮೈಸೂರಿನ ಸುತ್ತೂರುಮಠವು ಸಹ ಅಕ್ಷರ ದಾಸೋಹ ಕಾಯಕದಲ್ಲಿ ಮೊದಲ ಪಂಕ್ತಿಯಲ್ಲಿದೆ. ಎಲ್ಲ ಸಮುದಾಯಗಳು ಶೈಕ್ಷಣಿಕ ಮುನ್ನಲೆಗೆ ಬರಬೇಕು ಎಂಬ ಮಠದ ಶ್ರೀಗಳ ಕಾಳಜಿ ಹಾಗೂ ದೂರದೃಷ್ಟಿಯ ಫಲವಾಗಿ ಸುತ್ತೂರುಮಠ ಜನಸಮುದಾಯಗಳ ಮಠ ಎಂಬ ಕೀರ್ತಿಗೆ ಪಾತ್ರವಾಗಿದೆ ಎಂದು ಸ್ಮರಿಸಿದರು.
ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಪಲ್ಲೇದ ಪ್ರಭುಲಿಂಗ ಸಮಾರಂಭಕ್ಕೆ ಚಾಲನೆ ನೀಡಿದರು. ಇದೇ ವೇಳೆ ಸಾವಯವ ಕೃಷಿಕ ಬಿ.ಎಂ. ವೀರಪ್ಪಯ್ಯ, ನೃತ್ಯ ಕಲಾವಿದ ಜಿಲಾನ್ ಭಾಷಾ, ರಂಗ ಕಲಾವಿದೆ ಜಯಶ್ರೀ ಪಾಟೀಲ್, ಸಮಾಜ ಸೇವಕ ಚಂದ್ರಶೇಖರಗೌಡ ಮಸೀದಿಪುರ, ಪತ್ರಕರ್ತ ಎನ್.ವೀರಭದ್ರಗೌಡ, ಚಿತ್ರ ಕಲಾವಿದ ಮಂಜುನಾಥ ಗೋವಿಂದವಾಡ ಅವರನ್ನು ಸನ್ಮಾನಿಸಲಾಯಿತು.
ಕಾಲೇಜಿನ ಪ್ರಾಂಶುಪಾಲ ಶ್ರೀಶೈಲಗೌಡ ಕಾರ್ಯಕ್ರಮ ನಿರ್ವಹಿಸಿದರು. ಹಿರಿಯ ಕನ್ನಡಪರ ಮುಖಂಡ ಸಂಗನಕಲ್ಲು ಹಿಮಂತರಾಜ್, ಕಾಲೇಜಿನ ಆಡಳಿತ ಮಂಡಳಿಯ ಸದಸ್ಯ ಬಾಣಾಪುರ ಜಡೇಸಿದ್ದನಗೌಡ, ಕರ್ನಾಟಕ ಯುವಕ ಸಂಘದ ಮಾಜಿ ಅಧ್ಯಕ್ಷ ವಿಭೂತಿ ಎರ್ರಿಸ್ವಾಮಿ ಇದ್ದರು. ಕೊನೆಯಲ್ಲಿ ಶರಣ ಸಾಹಿತ್ಯ ಪರಿಷತ್ ನೂತನ ಕಾರ್ಯಕಾರಿ ಮಂಡಳಿಗೆ ಚಾಲನೆ ನೀಡಲಾಯಿತು.