ಮಣ್ಣಿನ ಗುಣ ನಾಡಿಗೆ ಪರಿಚಯಿಸಿದ ಹೆಗ್ಗಳಿಕೆ ಹಾವೇರಿಗೆ ಸಲ್ಲುತ್ತದೆ

KannadaprabhaNewsNetwork | Published : Jan 8, 2024 1:45 AM

ಸಾರಾಂಶ

ಮರೆಯಲಾಗದ ೮೬ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಯಶಸ್ವಿಗೊಳಿಸುವ ಮೂಲಕ ಈ ಮಣ್ಣಿನ ಗುಣವನ್ನು ನಾಡಿಗೆ ಪರಿಚಯಿಸಿದ ಹೆಗ್ಗಳಿಕೆ ಹಾವೇರಿ ಜಿಲ್ಲೆಗೆ ಸಲ್ಲುತ್ತದೆ.

ಕನ್ನಡಪ್ರಭ ವಾರ್ತೆ ಹಾವೇರಿ

ಮರೆಯಲಾಗದ ೮೬ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಯಶಸ್ವಿಗೊಳಿಸುವ ಮೂಲಕ ಈ ಮಣ್ಣಿನ ಗುಣವನ್ನು ನಾಡಿಗೆ ಪರಿಚಯಿಸಿದ ಹೆಗ್ಗಳಿಕೆ ಹಾವೇರಿ ಜಿಲ್ಲೆಗೆ ಸಲ್ಲುತ್ತದೆ ಎಂದು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ಹೇಳಿದರು.

ನಗರದ ಗೆಳೆಯರ ಬಳಗದ ಪ್ರಾಥಮಿಕ ಶಾಲೆಯಲ್ಲಿ ಜರುಗಿದ ೮೬ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಪ್ರಥಮ ವರ್ಷದ ಸಂಭ್ರಮಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ತವರು ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷನಾಗಿ ನಾನು ಮತ್ತು ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜಿಲ್ಲೆಯನ್ನು ಪ್ರತಿನಿಧಿಸಿದ ಪರಿಣಾಮ ಶಿಸ್ತುಬದ್ಧ ಮತ್ತು ಸುವ್ಯವಸ್ಥೆ ಪರಿಣಾಮ ಸಮ್ಮೇಳನ ನಾಡಿನ ಗಮನ ಸೆಳೆಯಿತು. ಇಬ್ಬರೂ ಒಂದೇ ಜಿಲ್ಲೆಯವರು ಎಂಬುದು ದೈವ ಸಂಕಲ್ಪ. ಸಮ್ಮೇಳನ ಸಂದರ್ಭದಲ್ಲಿ ಸ್ಥಳೀಯರ ಪರಿಶ್ರಮ, ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಕಾರ್ಯನಿರ್ವಹಿಸಿದ ಪ್ರತಿಯೊಬ್ಬರೂ ಅಭಿನಂದನಾರ್ಹರು. ಆ ದಿನವನ್ನು ಮತ್ತಷ್ಟು ಸ್ಮರಣೀಯವಾಗಿಸಲು ಪ್ರತಿ ವರ್ಷ ಅದೇ ತಾರೀಖಿಗೆ ಜಿಲ್ಲೆಯಲ್ಲಿ ದತ್ತಿ ಉಪನ್ಯಾಸ ಆಯೋಜಿಸಲಾಗುವುದು ಎಂದರು.

ಡಾ. ನಾಗರಾಜ ದ್ಯಾಮನಕೊಪ್ಪ ಮಾತನಾಡಿ, ಸಾಮರಸ್ಯದ ಭಾವ- ಕನ್ನಡದ ಜೀವ ಧ್ಯೇಯ ವಾಕ್ಯದೊಂದಿಗೆ ನಾಡಿನಾದ್ಯಂತ ಹಾವೇರಿ ಜಿಲ್ಲೆಯ ಹಿರಿಮೆ ಹೆಚ್ಚಿಸಿದ ೮೬ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕೈಗೊಂಡ ಸಮಗ್ರ ಕನ್ನಡ ಭಾಷಾ ಅಭಿವೃದ್ಧಿ ವಿಧೇಯಕ ನಿರ್ಣಯ ಜಾರಿಯಾಗಿರುವುದು ಹೆಮ್ಮೆಯ ಸಂಗತಿ. ಸಿದ್ಧಾಪುರದ ಭುವನಗಿರಿಯಿಂದ ಶುರುವಾದ ಕನ್ನಡಮ್ಮನ ಯಾತ್ರೆ ಸಮ್ಮೇಳನ ಉದ್ಘಾಟನಾ ಸಂದರ್ಭದಲ್ಲಿ ಆಗಮಿಸಿ ಕನ್ನಡದ ದೀಕ್ಷೆ ನೀಡಿತು. ಅಚ್ಚುಕಟ್ಟು ಮತ್ತು ರಸಗ್ರಾಹಿಯಾಗಿರುವುದು ಸಮ್ಮೇಳನದ ವೈಶಿಷ್ಟ್ಯ ಎಂದರು.

ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಲಿಂಗಯ್ಯ ಬಿ. ಹಿರೇಮಠ ಮಾತನಾಡಿ, ಭಾವೈಕ್ಯ ನಾಡಿನ ನೆಲದ ಹಿರಿಮೆ ಸಾರ್ಥಕಗೊಳಿಸಿದ ೮೬ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಹಲವು ಒತ್ತಡಗಳನ್ನು ಮೀರಿ ಸಂಭ್ರಮಿಸಿತು. ಮುಖ್ಯಮಂತ್ರಿಗಳು ಘೋಷಿಸಿದ ₹೩ ಕೋಟಿ ಅನುದಾನ ಬಿಡುಗಡೆ ಮಾಡುವ ಮೂಲಕ ಸಮ್ಮೇಳನ ಸ್ಮರಣಾರ್ಥ ಸಾಹಿತ್ಯ ಭವನ ನಿರ್ಮಿಸಲು ಸಹಕರಿಸಬೇಕು ಎಂದರು.

ಸಾಹಿತ್ಯ ಪರಿಷತ್ತಿನ ತಾಲೂಕಾಧ್ಯಕ್ಷ ವೈ.ಬಿ. ಆಲದಕಟ್ಟಿ ಮಾತನಾಡಿ, ಸಾಹಿತ್ಯ ಪರಿಷತ್ತನ್ನು ಜನಸಾಮಾನ್ಯರ ಪರಿಷತ್ತನ್ನಾಗಿಸಿದ ನಾಡೋಜ ಡಾ. ಮಹೇಶ ಜೋಶಿ ಅವರ ದೂರದೃಷ್ಟಿಯ ಪರಿಣಾಮ ಅಕ್ಷರ ಜಾತ್ರೆ ಸಂಭ್ರಮಿಸಲು ಕಾರಣವಾಯಿತು ಎಂದರು.

ಇದಕ್ಕೂ ಮುನ್ನ ಮರೆತಾರು ಪುಟಗಳು ಮತ್ತು ಇತರ ಪುಟಗಳು ಹಾಗೂ ಪೈರು-ಫಸಲು ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು. ಪ್ರಕಾಶಕ ಗೂಳಪ್ಪ ಅರಳಿಕಟ್ಟಿ ಹಾಗೂ ಪುಸ್ತಕ ಪ್ರಕಟಣೆಗೆ ಸಹಕರಿಸಿದ ಉದ್ಯಮಿ ಪ್ರಕಾಶ ಶೆಟ್ಟಿ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಆರ್.ವಿ. ಚಿನ್ನಿಕಟ್ಟಿ, ಎಸ್.ಎನ್. ದೊಡ್ಡಗೌಡ್ರ, ಪವನ್ ದೇಸಾಯಿ, ಪ್ರೊ. ಮಾರುತಿ ಶಿಡ್ಲಾಪುರ, ಪ್ರೊ. ಎಸ್.ಪಿ. ಗೌಡರ, ಬಿ.ಎಂ. ಜಗಾಪುರ, ವೀರೇಶ ಜಂಬಗಿ, ಎಸ್.ಎನ್. ಮುಗಳಿ, ಜೀವರಾಜ ಛತ್ರದ, ರೇಣುಕಾ ಗುಡಿಮನಿ, ಡಾ. ಗೀತಾ ಸುತ್ತಕೋಟಿ, ಡಾ. ಸುಮಂಗಲಾ ಅತ್ತಿಗೇರಿ, ಶಕುಂತಲಾ ಕೋಣನವರ, ಶಕುಂತಲಾ ದಾಳೇರ ಉಪಸ್ಥಿತರಿದ್ದರು.

ನಾಗರಾಜ ನಡುವಿನಮಠ ನಿರೂಪಿಸಿದರು. ಸಿ.ಎನ್. ಪಾಟೀಲ ಸ್ವಾಗತಿಸಿದರು. ಮಾಲತೇಶ ಕರ್ಜಗಿ ವಂದಿಸಿದರು.

Share this article