ಹಾವೇರಿ: ವಿಶ್ವವಿದ್ಯಾಲಯ ಉಳಿಸಿ, ಬೆಳೆಸುವ ಮೂಲಕ ರಾಜ್ಯದಲ್ಲಿಯೇ ಮಾದರಿ ರೀತಿಯಲ್ಲಿ ಅಭಿವೃದ್ಧಿಪಡಿಸುವುದು ನಮ್ಮ ಸಂಕಲ್ಪವಾಗಿದೆ. ಹಾವೇರಿ ವಿಶ್ವವಿದ್ಯಾಲಯ ಬಂದ್ ಆಗಲ್ಲ, ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಆತಂಕಪಡುವ ಅಗತ್ಯವಿಲ್ಲ ಎಂದು ಕರ್ನಾಟಕ ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ, ಶಾಸಕ ಬಸವರಾಜ ಶಿವಣ್ಣನವರ ಹೇಳಿದರು.
ಹಾವೇರಿ ವಿವಿ ಉಳಿವಿಗೆ ಕುಲಪತಿಗಳು ಶ್ರಮಿಸುತ್ತಿದ್ದಾರೆ, ಹಾಗಾಗಿ ಜಿಲ್ಲೆಯ ಉಸ್ತುವಾರಿ ಸಚಿವರು ಸೇರಿದಂತೆ ಎಲ್ಲ ಶಾಸಕರು ವಿಶ್ವವಿದ್ಯಾಲಯ ಉಳಿಸಿ ಬೆಳೆಸಲು ಸದಾ ನಿಮ್ಮೊಂದಿಗೆ ಕೈಜೋಡಿಸುತ್ತೇವೆ. ಹಾವೇರಿ ವಿಶ್ವವಿದ್ಯಾಲಯಕ್ಕೆ ವರ್ಷಕ್ಕೆ ಬೇಕಾಗುವ ಅನುದಾನ ಮಂಜೂರಾತಿಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಹಾವೇರಿ ವಿಶ್ವವಿದ್ಯಾಲಯ, ತೋಟಗಾರಿಕೆ ಅಭಿಯಾಂತ್ರಿಕ ಮತ್ತು ಆಹಾರ ತಂತ್ರಜ್ಞಾನ ಮಹಾವಿದ್ಯಾಲಯ, ಎಂಜನೀಯರಿಂಗ್ ಕಾಲೇಜ್ ಹಾಗೂ ಕೃಷಿ ವಿಜ್ಞಾನ ಕೇಂದ್ರ ನನ್ನ ಮತಕ್ಷೇತ್ರ ವ್ಯಾಪ್ತಿಗೆ ಬಂದಿರುವುದು ಸೌಭಾಗ್ಯ.ಈ ಶಿಕ್ಷಣ ಕೇಂದ್ರಗಳ ಬೆಳವಣಿಗೆಗೆ ನಿರಂತರ ಶ್ರಮಿಸಲಾಗುವುದು ಎಂದರು.
ದೇಶದ ಯಾವುದೇ ಭಾಗದಲ್ಲಿ ಇಲ್ಲದ ತೋಟಗಾರಿಕೆ ಅಭಿಯಾಂತ್ರಿಕ ಮತ್ತು ಆಹಾರ ತಂತ್ರಜ್ಞಾನ ಮಹಾವಿದ್ಯಾಲಯ ನಮ್ಮ ಜಿಲ್ಲೆಯಲ್ಲಿದೆ. ಕಳೆದ ಮೂರು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದೆ. ರಸ್ತೆ, ಚರಂಡಿ ಸೇರಿದಂತೆ ಮೂಲಭೂತ ಸೌಕರ್ಯ ಕಾಮಗಾರಿ ಪ್ರಗತಿಯಲ್ಲಿದೆ. ಮುಖ್ಯಮಂತ್ರಿಗಳು ಹಾಗೂ ತೋಟಗಾರಿಕೆ ಸಚಿವರಿಂದ ಶೀಘ್ರದಲ್ಲೆ ಉದ್ಘಾಟನೆ ಮಾಡಿಸಲಾಗುವುದು ಎಂದರು.ಕೊಡಗು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಅಶೋಕ ಆಲೂರ ಮಾತನಾಡಿ, ಪಜಾ.,ಪಪಂ, ಬುಡಕಟ್ಟು ಜನಾಂಗ, ಆರ್ಥಿಕವಾಗಿ ಹಿಂದುಳಿದ ಹಾಗೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ವಿಶ್ವವಿದ್ಯಾಲಯಕ್ಕೆ ಬರುತ್ತಾರೆ. ಅವರಿಗೆ ಹೊರೆಯಾಗದಂತೆ ಶಿಕ್ಷಣ ನೀಡಲಾಗುತ್ತಿದೆ. ವಿದ್ಯಾರ್ಥಿ ಜೀವನದಿಂದಲೇ ಸವಾಲು ಎದುರಿಸುವ ಗುಣ ಬೆಳೆಸಿಕೊಳ್ಳಬೇಕು. ಸಾಧಿಸುವ ಛಲ ಇರಬೇಕು. ನಿಮ್ಮ ಹಳೆಯ ಸಾಧನೆ ಯಶಸ್ಸಿನ ಮೆಟ್ಟಿಲುಗಳಾಗಬೇಕು ಎಂದು ಕರೆ ನೀಡಿದರು.
ಹಾವೇರಿ ವಿವಿಯಲ್ಲಿ ಕೌಶಲ್ಯಾಭಿವೃದ್ಧಿ ಕೇಂದ್ರ ಸ್ಥಾಪಿಸಿ ವಿದ್ಯಾರ್ಥಿಗಳಿಗೆ ಕೌಶಲ್ಯ ತರಬೇತಿ ನೀಡುತ್ತಿರುವುದು ಸಂತಸದ ಸಂಗತಿಯಾಗಿದೆ.ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಂಡು ಉತ್ತಮ ನಾಗರಿಕರಾಗಿ ಬಾಳಬೇಕು ಎಂದರು.
ನಾವೀನ್ಯತೆ ಸಲಹೆಗಾರ ರಾಜಶೇಖರ ಹಿರೇಮಠ, ಅಂತಾರಾಷ್ಟ್ರೀಯ ಶೈಕ್ಷಣಿಕ ಸಲಹೆಗಾರ ಡಾ. ಶಿವಾನಂದ ಉತ್ಲಾಸರ ಹಾಗೂ ಕುಲಸಚಿವ ಪ್ರೊ.ರೇಣುಕಾ ಮೇಟಿ ಇತರರು ಇದ್ದರು. ಕುಲಸಚಿವ ಪ್ರೊ.ಎಸ್.ಬಿ. ಬಾಗಲಕೋಟಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.