ಜನಪ್ರತಿನಿಧಿಗಳ ಸ್ನೇಹಸಂಗಮಕ್ಕೆ ಸಾಕ್ಷಿಯಾದ ಹಾವೇರಿ

KannadaprabhaNewsNetwork |  
Published : Nov 29, 2026, 02:00 AM IST
ಹಾವೇರಿಯ ಸಾಯಿಪರಮೇಶ್ವರಿ ಗ್ರ್ಯಾಂಡ್‌ನಲ್ಲಿ ವಿಧಾನ ಪರಿಷತ್ ಸಭಾಪತಿ ಸಲೀಂ ಅಹ್ಮದ್ ಅವರು ಆಯೋಜಿಸಿದ್ದ ಸ್ನೇಹಕೂಟದಲ್ಲಿ ಪಾಲ್ಗೊಂಡಿರುವ ಗಣ್ಯರು. | Kannada Prabha

ಸಾರಾಂಶ

ಹಾವೇರಿಯ ಸಾಯಿಪರಮೇಶ್ವರಿ ಗ್ರ್ಯಾಂಡ್‌ನಲ್ಲಿ ವಿಧಾನ ಪರಿಷತ್ ಸಭಾಪತಿ ಸಲೀಂ ಅಹ್ಮದ್ ಅವರು ಆಯೋಜಿಸಿದ್ದ ಸ್ನೇಹಕೂಟದಲ್ಲಿ ಪಾಲ್ಗೊಂಡಿರುವ ಗಣ್ಯರು.

ಹಾವೇರಿ: ರಾಜಕೀಯದ ಜಂಜಾಟ, ಅಧಿಕಾರದ ಅಂತರ, ಪಕ್ಷಗಳ ಭಿನ್ನಾಭಿಪ್ರಾಯಗಳ ನಡುವೆಯೂ ಹಳೆಯ ಒಡನಾಟಕ್ಕೆ ಮತ್ತೆ ಜೀವ ತುಂಬಿದ ಅಪರೂಪದ ಸ್ನೇಹಸಂಗಮಕ್ಕೆ ಹಾವೇರಿ ಸಾಕ್ಷಿಯಾಯಿತು.

ಕರ್ನಾಟಕ ವಿಧಾನ ಪರಿಷತ್ತಿನ ಸಭಾಪತಿ ಸಲೀಂ ಅಹ್ಮದ್ ಅವರು ಜಿಲ್ಲೆಯ ಮಾಜಿ ಹಾಗೂ ಹಾಲಿ ಜನಪ್ರತಿನಿಧಿಗಳಿಗಾಗಿ ನಗರದ ಸಾಯಿ ಪರಮೇಶ್ವರಿ ಗ್ರ್ಯಾಂಡ್‌ನಲ್ಲಿ ಆಯೋಜಿಸಿದ್ದ ಸ್ನೇಹಕೂಟ ರಾಜಕೀಯ ಹಾಗೂ ಸಾರ್ವಜನಿಕ ಜೀವನದಲ್ಲಿ ತೊಡಗಿಸಿಕೊಂಡಿರುವ ಹಲವು ತಲೆಮಾರಿನ ನಾಯಕರ ಆತ್ಮೀಯ ಸಮಾಗಮಕ್ಕೆ ವೇದಿಕೆಯಾಯಿತು.

ಜಿಲ್ಲೆಯ ವಿವಿಧ ತಾಲೂಕುಗಳ ಮಾಜಿ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳು, ಮಾಜಿ ಶಾಸಕರು ಮತ್ತು ಹಾಲಿ ಶಾಸಕರನ್ನು ಆಹ್ವಾನಿಸಲಾಗಿತ್ತು. ಸಚಿವರು, ಶಾಸಕರು, ನಿಗಮ-ಮಂಡಳಿಗಳ ಅಧ್ಯಕ್ಷರು ಸೇರಿದಂತೆ ರಾಜಕೀಯ ಕ್ಷೇತ್ರದ ಹಲವು ಗಣ್ಯರು ಪಾಲ್ಗೊಂಡು ಸಂಭ್ರಮಕ್ಕೆ ಮೆರುಗು ತಂದರು.

ಸಚಿವ ರುದ್ರಪ್ಪ ಲಮಾಣಿ, ಶಾಸಕ, ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಸವರಾಜ ಶಿವಣ್ಣನವರ, ಶಾಸಕ ಹಾಗೂ ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ ಶ್ರೀನಿವಾಸ ಮಾನೆ, ಶಾಸಕರಾದ ಯು.ಬಿ. ಬಣಕಾರ, ಯಾಸಿರ್ ಪಠಾಣ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ರಾಜ್ಯ ಉಪಾಧ್ಯಕ್ಷ ಎಸ್.ಆರ್. ಪಾಟೀಲ, ಹೆಸ್ಕಾಂ ಅಧ್ಯಕ್ಷ ಅಜಂಪೀರ್ ಖಾದ್ರಿ, ಸಂಜೀವಕುಮಾರ ನೀರಲಗಿ, ಡಿ. ಬಸವರಾಜ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.

ಜಿಲ್ಲೆಯ ರಾಜಕೀಯ ಮತ್ತು ಸ್ಥಳೀಯ ಆಡಳಿತ ವ್ಯವಸ್ಥೆಯಲ್ಲಿ ವಿವಿಧ ಹಂತಗಳಲ್ಲಿ ಸೇವೆ ಸಲ್ಲಿಸಿದ ಹಿರಿಯರು ಹಾಗೂ ಹಾಲಿ ಜನಪ್ರತಿನಿಧಿಗಳು ಬಹಳ ದಿನಗಳ ಬಳಿಕ ಒಂದೆಡೆ ಸೇರಿ ಹಳೆಯ ನೆನಪುಗಳನ್ನು ಮೆಲುಕು ಹಾಕಿದರು. ಪರಸ್ಪರ ಕುಶಲೋಪರಿ ವಿಚಾರಿಸುತ್ತಾ, ಹಾಸ್ಯ-ಲವಲವಿಕೆಯ ಮಾತುಕತೆಯಲ್ಲಿ ತೊಡಗಿಸಿಕೊಂಡರು. ರಾಜಕೀಯ ಸ್ಥಾನಮಾನ, ಅಧಿಕಾರದ ಅಂತರಗಳನ್ನು ಮರೆತು ಆತ್ಮೀಯವಾಗಿ ಬೆರೆತಿದ್ದು ವಿಶೇಷವಾಗಿತ್ತು.

ಒಟ್ಟಾರೆ, ರಾಜಕೀಯ ವೇದಿಕೆಗಳ ಆಚೆಗೆ ವೈಯಕ್ತಿಕ ಬಾಂಧವ್ಯ ಮತ್ತು ಪರಸ್ಪರ ಒಡನಾಟಕ್ಕೂ ಅವಕಾಶ ಕಲ್ಪಿಸಿದ ಈ ಸ್ನೇಹಕೂಟ ಜಿಲ್ಲೆಯ ರಾಜಕೀಯ ವಲಯದಲ್ಲಿ ಗಮನ ಸೆಳೆಯಿತು. ಹಿರಿಯರು ಮತ್ತು ಹೊಸ ತಲೆಮಾರಿನ ಜನಪ್ರತಿನಿಧಿಗಳ ನಡುವಿನ ಬಾಂಧವ್ಯಕ್ಕೆ ಬೆಸುಗೆ ಹಾಕಿದ ಆತ್ಮೀಯ ಸಮಾಗಮವಾಗಿ ಮೂಡಿಬಂತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಿಂದುಗಳೆಲ್ಲ ಒಗ್ಗೂಡಲಿ: ಶಂಕರ ಭಟ್ಟ
ಮಹಾಲಸಾ ಸಿದ್ಧಿವಿನಾಯಕ ದೇಗುಲದಲ್ಲಿ ಒಂದೇ ರಾತ್ರಿಯಲ್ಲಿ 25 ಸಾವಿರ ತೆಂಗಿನಕಾಯಿ ಒಡೆದ್ರು!