ಹಾವೇರಿ: ಮನೆ ಮನೆಗಳಲ್ಲಿ ಗ್ರಂಥಾಲಯಗಳು ಸ್ಥಾಪನೆಯಾಗಬೇಕು. ಮನೆಗೊಂದು ಗ್ರಂಥಾಲಯ ಹುಟ್ಟಿಕೊಂಡರೆ, ಮೊಬೈಲ್ ಗೀಳಿನಂತಹ ವ್ಯಸನಗಳು ಕಡಿಮೆಯಾಗಬಹುದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪನಿರ್ದೇಶಕ ವೀರಯ್ಯಸ್ವಾಮಿ ಹಿರೇಮಠ ಹೇಳಿದರು.ಇಲ್ಲಿಯ ರಾಜೇಂದ್ರ ನಗರದಲ್ಲಿರುವ ಕಾದಂಬರಿ ಪಿತಾಮಹ ಗಳಗನಾಥರ ಮನೆಯಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರ, ಮನೆಗೊಂದು ಗ್ರಂಥಾಲಯ ಯೋಜನೆಯ ಜಿಲ್ಲಾ ಜಾಗೃತ ಸಮಿತಿ ಹಾಗೂ ಗಳಗನಾಥ ಮತ್ತು ರಾಜಪುರೋಹಿತ ಪ್ರತಿಷ್ಠಾನಗಳ ಆಶ್ರಯದಲ್ಲಿ ನಡೆದ ಕನ್ನಡ ಪುಸ್ತಕ ಪ್ರಾಧಿಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಮನೆಗೊಂದು ಗ್ರಂಥಾಲಯ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಕೆಲವು ಅಂಕಿ ಸಂಖ್ಯೆಗಳನ್ನು ನೋಡಿದಾಗ ಕೇರಳದ 13 ಜಿಲ್ಲೆಗಳಲ್ಲಿ 7800 ಗ್ರಂಥಾಲಯಗಳಿವೆ. ಕರ್ನಾಟಕದಲ್ಲಿ 31 ಜಿಲ್ಲೆಗಳಿದ್ದರೂ 4730 ಗ್ರಂಥಾಲಯಗಳಿವೆ. ಈ ಸಂಖ್ಯೆ ಹೆಚ್ಚಾಗಬೇಕೆಂದು ಎಂದರು.ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಲಿಂಗಯ್ಯ ಬಿ. ಹಿರೇಮಠ ಮಾತನಾಡಿ, ಒಂದು ಕಾಲದಲ್ಲಿ ಹೆಗಲ ಮೇಲೆ ಪುಸ್ತಕಗಳ ಗಂಟು ಹೊತ್ತು ಮನೆ ಮನೆಗೆ ಪುಸ್ತಕ ಪ್ರೀತಿಯನ್ನು ಹುಟ್ಟು ಹಾಕಿದ ಅದೇ ಗಳಗನಾಥರ ಮನೆಯಲ್ಲಿ ಪುಸ್ತಕ ಪ್ರಾಧಿಕಾರದ ಮಹತ್ವದ ಯೋಜನೆ ಮನೆಗೊಂದು ಗ್ರಂಥಾಲಯ ಆರಂಭವಾದದ್ದು ಅತ್ಯಂತ ಸಮಂಜಸದ ಕೆಲಸ ಎಂದರು.ಗಳಗನಾಥರ ಮೊಮ್ಮಗ ವೆಂಕಟೇಶ ಗಳಗನಾಥ ಮಾತನಾಡಿ, ಪುಸ್ತಕ ಸಂಸ್ಕೃತಿ ಬೆಳೆಯಬೇಕೆಂಬುದೇ ನಮ್ಮ ಅಜ್ಜನವರ ಕನಸಾಗಿತ್ತು. ಆ ಕನಸಿಗೆ ಪುಸ್ತಕ ಪ್ರಾಧಿಕಾರ ಹೊಸ ರೂಪ ಕೊಟ್ಟು ಜೀವ ತುಂಬಿದೆ ಎಂದರು.ಈ ಸಂದರ್ಭದಲ್ಲಿ ಮನೆಗೊಂದು ಗ್ರಂಥಾಲಯ ಜಿಲ್ಲಾ ಜಾಗೃತ ಸಮಿತಿ ಸದಸ್ಯರು 50 ಪುಸ್ತಕಗಳನ್ನು ಗಳಗನಾಥರ ಗ್ರಂಥಾಲಯಕ್ಕೆ ನೀಡಿದರು. ಇದಕ್ಕೆ ಪ್ರತಿಯಾಗಿ ಗಳಗನಾಥರ ಕುಟುಂಬದವರು 200 ಪುಸ್ತಕಗಳನ್ನು ಜಾಗೃತ ಸಮಿತಿಗೆ ನೀಡಿ ಮನೆಗೊಂದು ಗ್ರಂಥಾಲಯದ ಆಂದೋಲನಕ್ಕೆ ಪ್ರೋತ್ಸಾಹ ನೀಡಿದರು.ಜಾಗೃತಿ ಸಮಿತಿ ಸದಸ್ಯ ಎಸ್.ಆರ್. ಹಿರೇಮಠ ಮನೆಗೊಂದು ಗ್ರಂಥಾಲಯ ಯೋಜನೆಯ ವಿವರಗಳನ್ನು ಸಭೆಗೆ ನೀಡಿ, ತಿಂಗಳಿಗೆ ತಾಲೂಕಿನಲ್ಲಿ ಎರಡು ಗ್ರಂಥಾಲಯಗಳನ್ನು ಸ್ಥಾಪಿಸಲಾಗುವುದು ಎಂದರು.ಮುಂಡಗೋಡ ಸಿದ್ಧಿ ಜನಾಂಗದ ಬಗ್ಗೆ ಮಹಾಪ್ರಬಂಧ ಮಂಡಿಸಿ ಡಾಕ್ಟರೇಟ್ ಪಡೆದ ಹಾವೇರಿಯ ಗಿರೀಶ ಹಿರೇಮಠರನ್ನು ಸನ್ಮಾನಿಸಲಾಯಿತು. ಸಮಾರಂಭದಲ್ಲಿ ಹಾನಗಲ್ಲ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ವಿ. ಚಿನ್ನಿಕಟ್ಟಿ, ಅಗಡಿಯ ನಿಜಲಿಂಗಪ್ಪ ಬಸೆಗಣ್ಣಿ, ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ವೈ.ಬಿ. ಆಲದಕಟ್ಟಿ, ಪೃಥ್ವಿರಾಜ ಬೆಟಗೇರಿ, ಪರಿಮಳಾ ಜೈನ್, ಅಶ್ವಿನಿ ಗಳಗನಾಥ, ಜಿಲ್ಲಾ ಜಾಗೃತಿ ಸಮಿತಿಯ ಸದಸ್ಯರಾದ ಡಾ. ಲಕ್ಷ್ಮೀಕಾಂತ ಮಿರಜಕರ, ಸೋಮಣ್ಣ ಡಂಬರಮತ್ತೂರ, ಪ್ರೊ. ಸಿದ್ದೇಶ್ವರ ಹುಣಸಿಕಟ್ಟೀಮಠ ಇತರರಿದ್ದರು. ವಿದ್ಯಾ ವಾರತಿ ಪ್ರಾರ್ಥಿಸಿದರು. ಸಾಹಿತಿ ಹನುಮಂತಗೌಡ ಗೊಲ್ಲರ ಸ್ವಾಗತಿಸಿದರು. ಪ್ರಾ. ಸೋಮನಾಥ ಡಿ ನಡೆಸಿದರು. ಅನಿತಾ ಮಂಜುನಾಥ ವಂದಿಸಿದರು.