ಸ್ನೇಹಿತರಿದ್ದರೆ ಸ್ವರ್ಗವೇ ಜೊತೆಗಿದ್ದಂತೆ: ಶ್ರೀ ಚನ್ನಬಸವ ಸ್ವಾಮೀಜಿ ಆಶೀರ್ವಚನ

KannadaprabhaNewsNetwork | Published : Feb 16, 2024 1:50 AM

ಸಾರಾಂಶ

ಯಾವ ಮನುಷ್ಯ ಎಷ್ಟೇ ದೊಡ್ಡ ಸ್ಥಾನಕ್ಕೆ ಹೋದರೂ ತಾನು ಓದಿದ ಶಾಲೆ, ಹುಟ್ಟಿದ ಗ್ರಾಮ, ಪಾಠ ಮಾಡಿದ ಗುರುಪರಂಪರೆಯನ್ನು ಮರೆಯದೆ ನೆನಪಿಸಿಕೊಂಡು ಗೌರವ ಸಲ್ಲಿಸುತ್ತಾನೆಯೋ ಅಂತಹವರಿಂದ ಸಮಾಜದಲ್ಲಿ ಉತ್ತಮ ಕಾರ್ಯಗಳನ್ನು ನಿರೀಕ್ಷಿಸಬಹುದು.

ಕನ್ನಡಪ್ರಭ ವಾರ್ತೆ ಕುದೂರು

ಯಾರು ಸ್ನೇಹವನ್ನು ತಲೆಯ ಮೇಲಿಟ್ಟು ಗೌರವಿಸುತ್ತಾರೋ, ಸ್ವರ್ಗ ಅವರ ಕಾಲಡಿಯಲ್ಲಿ ಇರುತ್ತದೆ. ಸ್ನೇಹ ಬಲು ಮಧುರವಾದದ್ದು ಎಂದು ಹರಳೂರು ಶ್ರೀ ಚನ್ನಬಸವ ಸ್ವಾಮೀಜಿ ತಿಳಿಸಿದರು.

ಕುದೂರು ಹೋಬಳಿ ಹುಲಿಕಲ್ಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಬಸವೇಶ್ವರ ಪ್ರೌಢಶಾಲೆಯಲ್ಲಿ 1993-94ನೇ ಸಾಲಿನಲ್ಲಿ ಓದಿದ್ದ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಸಮುದ್ರ ಎಷ್ಟೇ ವಿಶಾಲವಾಗಿದ್ದರೂ ಅದು ಅಲೆಗಳ ರೂಪದಲ್ಲಿ ತನ್ನ ದಡ ಮುಟ್ಟುತ್ತಿರುತ್ತದೆ. ಹಾಗೆಯೇ ಯಾವ ಮನುಷ್ಯ ಎಷ್ಟೇ ದೊಡ್ಡ ಸ್ಥಾನಕ್ಕೆ ಹೋದರೂ ತಾನು ಓದಿದ ಶಾಲೆ, ಹುಟ್ಟಿದ ಗ್ರಾಮ, ಪಾಠ ಮಾಡಿದ ಗುರುಪರಂಪರೆಯನ್ನು ಮರೆಯದೆ ನೆನಪಿಸಿಕೊಂಡು ಗೌರವ ಸಲ್ಲಿಸುತ್ತಾನೆಯೋ ಅಂತಹವರಿಂದ ಸಮಾಜದಲ್ಲಿ ಉತ್ತಮ ಕಾರ್ಯಗಳನ್ನು ನಿರೀಕ್ಷಿಸಬಹುದು ಎಂದು ಹೇಳಿದರು.

ಯುವ ಮುಖಂಡ ಎಚ್.ಎಂ.ಕೃಷ್ಣ ಮಾತನಾಡಿ, ಚದುರಿ ಹೋಗಿದ್ದ ಗೆಳೆಯರನ್ನೆಲ್ಲಾ ಒಂದೆಡೆ ಸೇರಿಸಿ, ನಾವು ಓದಿದ ಶಾಲೆಯಂಗಳದಲ್ಲೇ ಹಳೆಯ ನೆನಪುಗಳೊಂದಿಗೆ ನಮಗೆ ಪಾಠ ಮಾಡಿದ ಗುರುಗಳನ್ನು ಕರೆದು, ಕೃತಜ್ಞತೆ ಹೇಳುವ ಈ ಕಾರ್ಯಕ್ರಮ ನಮ್ಮ ಜೀವನದ ನೆನಪಿನ ಬುತ್ತಿಯಂತಾಗುತ್ತದೆ ಎಂದರು.

ಶಿಕ್ಷಕ ಅರವಿಂದ್ ಮಾತನಾಡಿ, ಈ ಸಮಾಜವೇ ನಮ್ಮನ್ನು ಕೈಬಿಟ್ಟು ದೂರ ನಿಲ್ಲಿಸುತ್ತದೆ. ಅಂತಹ ಕಷ್ಟ ಕಾಲದಲ್ಲಿ ನಮಗೆ ದೇವರಿಗಿಂತ ಮೊದಲು ನೆನಪಾಗುವವರು ಸ್ನೇಹಿತರು. ಯಾರಿಗೆ ಹೆಚ್ಚು ಜನ ಸ್ನೇಹಿತರಿರುತ್ತಾರೋ ಅವನು ಈ ಭೂಮಿಯ ಮೇಲಿನ ಅತಿದೊಡ್ಡ ಶ್ರೀಮಂತ ಎಂದು ಭಾವಿಸುತ್ತೇನೆ ಎಂದು ಹೇಳಿದರು.

ಹೆಬ್ಬೂರು ವಿಪ್ರ ಶಾಲೆಯ ಪ್ರಭುಪ್ರಸಾದ್ ಮಾತನಾಡಿ, ತಾವು ಪಾಠ ಮಾಡಿದ ಶಿಷ್ಯರು ಇಂದು ಸಮಾಜದ ವಿವಿಧ ಕ್ಷೇತ್ರಗಳಲ್ಲಿ ತಮ್ಮ ಬದುಕನ್ನು ಕಟ್ಟಿಕೊಂಡು ಒಳ್ಳೆಯ ಹೆಸರು ಸಂಪಾದಿಸಿದ್ದಾರೆ ಎಂಬ ವಿಷಯ ಗುರುಗಳಿಗೆ ಸ್ವರ್ಗ ಸಿಕ್ಕಷ್ಟು ಸಂತೋಷವಾಗುತ್ತದೆ. ಇಂತಹ ವಿದ್ಯಾರ್ಥಿಗಳಿಗೆ ಪಾಠ ಮಾಡಿದ ನಮ್ಮ ಜೀವನ ಸಾರ್ಥಕವಾಯಿತು ಎಂಬ ಭಾವ ಅವರಲ್ಲಿ ಮೂಡುತ್ತದೆ ಎಂದರು.

ಹುಲಿಕಲ್ಲು ಗ್ರಾಪಂ ಉಪಾಧ್ಯಕ್ಷೆ ಮಂಜುಳ ಕೃಷ್ಣ, ಬಮೂಲ್ ನಿರ್ದೇಶಕ ರಾಜಣ್ಣ, ಕುದೂರು ಗ್ರಾಪಂ ಕಾರ್ಯದರ್ಶಿ ವೆಂಕಟೇಶ್, ಹರೀಶ್, ಮುಕ್ತಾಂಬ ಸಿದ್ದಲಿಂಗ ಪ್ರಸಾದ್ ಹಾಜರಿದ್ದರು.

Share this article