ಹವ್ಯಕ ಭಾಷಾ ಅಕಾಡೆಮಿ ಘೋಷಣೆ: ಹವ್ಯಕ ಮಹಾಸಭೆ ಅಭಿನಂದನೆ

KannadaprabhaNewsNetwork |  
Published : Mar 07, 2026, 12:45 AM IST
ಹವ್ಯಕ ಮಹಾಸಭೆ | Kannada Prabha

ಸಾರಾಂಶ

ಹವಿಗನ್ನಡದ ಸಂರಕ್ಷಣೆ ಹಾಗೂ ಸಂವರ್ಧನೆಗಾಗಿ ಭಾಷಾ ಅಕಾಡೆಮಿಯನ್ನು ಘೋಷಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕರ್ನಾಟಕ ಸರ್ಕಾರದ ನಿಲುವನ್ನು ಹವ್ಯಕ ಮಹಾಸಭೆ ಸ್ವಾಗತಿಸಿದೆ.

ಕನ್ನಡಪ್ರಭ ವಾರ್ತೆ ಗೋಕರ್ಣ/ಬೆಂಗಳೂರು

ಹವಿಗನ್ನಡದ ಸಂರಕ್ಷಣೆ ಹಾಗೂ ಸಂವರ್ಧನೆಗಾಗಿ ಭಾಷಾ ಅಕಾಡೆಮಿಯನ್ನು ಘೋಷಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕರ್ನಾಟಕ ಸರ್ಕಾರದ ನಿಲುವನ್ನು ಹವ್ಯಕ ಮಹಾಸಭೆ ಸ್ವಾಗತಿಸಿದೆ. ಐತಿಹಾಸಿಕ ತೃತೀಯ ವಿಶ್ವ ಹವ್ಯಕ ಸಮ್ಮೇಳನದಲ್ಲಿ ಕೈಗೊಂಡ ನಿರ್ಣಯದಂತೆ ಹಳೆಗನ್ನಡಕ್ಕೆ ಸಮೀಪವಾದ, ವಿಶಿಷ್ಟ ಲಕ್ಷಣಗಳನ್ನು ಒಳಗೊಂಡ, ಭಾಷಾ ಶ್ರೀಮಂತಿಕೆಯಿಂದ ಕೂಡಿದ ಹವ್ಯಕ ಭಾಷೆಯ ಸಂರಕ್ಷಣೆ ಹಾಗೂ ಸಂವರ್ಧನೆಗಾಗಿ ಹವ್ಯಕ ಭಾಷಾ ಅಕಾಡೆಮಿಯನ್ನು ಸ್ಥಾಪಿಸುವಂತೆ ಅಖಿಲ ಹವ್ಯಕ ಮಹಾಸಭೆ ಮಾಡಿದ ಮನವಿಯನ್ನು ಪರಿಗಣಿಸಿ ಮುಖ್ಯಮಂತ್ರಿಯವರು ಹವ್ಯಕ ಭಾಷಾ ಅಕಾಡೆಮಿಯನ್ನು ಬಜೆಟ್‌ನಲ್ಲಿ ಘೋಷಿಸಿರುವುದು ಸಂತಸ ತಂದಿದೆ ಎಂದು ಮಹಾಸಭೆಯ ಪ್ರಕಟಣೆ ತಿಳಿಸಿದೆ. ಹವಿಗನ್ನಡ, ಹವ್ಯಕ ಕನ್ನಡ, ಹೈವಗನ್ನಡ, ಹೈಗಭಾಷೆ ಎಂಬ ಹೆಸರುಗಳಿಂದ ಗುರುತಿಸಲ್ಪಡುವ ಹವ್ಯಕ ಭಾಷೆಯು ಕನ್ನಡದ ಸಾಮಾಜಿಕ ಉಪಭಾಷೆಯಾಗಿದ್ದು, ಭಾಷಾ ವೈವಿಧ್ಯ ಹಾಗೂ ಭಾಷಾ ಶ್ರೀಮಂತಿಕೆ ಕಾರಣದಿಂದಾಗಿ ಭಾಷಾ ಜಗತ್ತಿನಲ್ಲಿ ತನ್ನದೇ ಆದ ವಿಶಿಷ್ಟ ಸ್ಥಾನ ಹೊಂದಿದೆ. ಪ್ರಾಂತ್ಯವಾರು ಭಾಷಾ ವೈವಿಧ್ಯ ಹವಿಗನ್ನಡದ ಶ್ರೀಮಂತಿಕೆಯ ಪ್ರತೀಕವಾಗಿದ್ದು, ಉತ್ತರ ಕನ್ನಡ, ದಕ್ಷಿಣ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಉಡುಪಿ, ಕೊಡಗು, ಕಾಸರಗೋಡು ಮುಂತಾದ ಪ್ರದೇಶಗಳಲ್ಲಿ ವಾಸವಾಗಿರುವ 6 ಲಕ್ಷಕ್ಕೂ ಅಧಿಕ ಹವ್ಯಕರ ಮನೆ ಮಾತಾಗಿದೆ.

ಕನ್ನಡ ಭಾಷೆಯ ಇತಿಹಾಸ ಅರ್ಥಮಾಡಿಕೊಳ್ಳಲು ಹವಿಗನ್ನಡದ ಅಧ್ಯಯನ ಬಹಳ ಮುಖ್ಯವಾಗಿದೆ. ಇದುವರೆಗೆ ಲಭ್ಯವಿರುವ ಅತ್ಯಂತ ಹಳೆಯ ಕನ್ನಡ ಸಾಹಿತ್ಯ ಮತ್ತು ಶಾಸನಗಳಲ್ಲಿಯೂ ಕಂಡು ಬರುವ ಕೆಲವು ಆದಿ-ದ್ರಾವಿಡ ಲಕ್ಷಣಗಳನ್ನು ಹವಿಗನ್ನಡವು ಇಂದಿಗೂ ಉಳಿಸಿಕೊಂಡಿದೆ. ಆದ್ದರಿಂದ ಹವಿಗನ್ನಡದ ಅಮೂಲಾಗ್ರ ಅಧ್ಯಯನ ಹಾಗೂ ಸಂರಕ್ಷಣೆಗಾಗಿ ಹವ್ಯಕ ಭಾಷಾ ಅಕಾಡೆಮಿಯ ಸ್ಥಾಪನೆ ಅತ್ಯಗತ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಹವ್ಯಕ ಭಾಷಾ ಅಕಾಡೆಮಿ ಸ್ಥಾಪಿಸುವ ನಿರ್ಧಾರ ಅಭಿನಂದನಾರ್ಹ ಎಂದು ಮಹಾಸಭೆ ಅಧ್ಯಕ್ಷ ಡಾ.ಗಿರಿಧರ ಕಜೆ ಹೇಳಿಕೆಯಲ್ಲಿ ತಿಳಿಸಿದ್ದಾರೆ.ಹವ್ಯಕ ಭಾಷಾ ಅಕಾಡೆಮಿ ಘೋಷಣೆ ಸ್ವಾಗತಿಸಿದ ರಾಮಚಂದ್ರಾಪುರ ಮಠ:

ಹವಿಗನ್ನಡದ ಸಂವರ್ಧನೆಗಾಗಿ ‘ಹವ್ಯಕ ಭಾಷಾ ಅಕಾಡೆಮಿ’ ಸ್ಥಾಪಿಸುವ ಸರ್ಕಾರದ ನಿರ್ಧಾರವನ್ನು ರಾಮಚಂದ್ರಾಪುರ ಮಠ ಸ್ವಾಗತಿಸಿದೆ. ಇದಕ್ಕಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೆ ಕೃತಜ್ಞತೆ ಸಲ್ಲಿಸಿದೆ. ಮಾತೃಭಾಷೆಯ ಉಳಿವು ಹಾಗೂ ಜಾಗೃತಿಗಾಗಿ ಕಳೆದ ವರ್ಷದ ತಮ್ಮ ಚಾತುರ್ಮಾಸ್ಯವನ್ನು ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ‘ಸ್ವಾಭಾಷಾ ಚಾತುರ್ಮಾಸ್ಯ’ವಾಗಿ ಆಚರಿಸಿದ್ದರು. ಭಾಷೆಯ ಕುರಿತಾಗಿ ನಾಡಿನಾದ್ಯಂತ ಜಾಗೃತಿ ಮೂಡಿಸಿದ್ದರು. ಇದೀಗ ಕನ್ನಡದ ಉಪಭಾಷೆ ಹವಿಗನ್ನಡದ ಸಂರಕ್ಷಣೆಗೆ ಸರ್ಕಾರವೇ ಮುಂದಾಗಿರುವುದು ಅಭಿನಂದನೀಯ ಎಂದು ಮಠ ಹೇಳಿದೆ. ಸರ್ಕಾರದ ಈ ನಿರ್ಧಾರ ಹವ್ಯಕ ಭಾಷೆಯ ಉಳಿವು, ಬೆಳವಣಿಗೆ ಹಾಗೂ ಅದರ ಅಧ್ಯಯನ ಮತ್ತು ಸಂಶೋಧನೆಗೆ ಹೊಸ ಉತ್ತೇಜನ ನೀಡಲಿದೆ. ಅಲ್ಲದೆ, ಅಕಾಡೆಮಿಯ ಮೂಲಕ ಭಾಷೆಯ ಪ್ರಚಾರ ಹಾಗೂ ಯುವಪೀಳಿಗೆಗೆ ಅದರ ಮಹತ್ವ ಪರಿಚಯಿಸುವ ಕಾರ್ಯಗಳು ಇನ್ನಷ್ಟು ವೇಗ ಪಡೆಯಲಿವೆ ಎಂದು ಅದು ಆಶಿಸಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಯುಪಿಎಸ್‌ಸಿ ಪರೀಕ್ಷೆಯಲ್ಲಿ ಬಳ್ಳಾರಿಯ ಅನಿರುದ್ಧ ಕಟ್ಟಿಮನಿಗೆ 786ನೇ ರ‍್ಯಾಂಕ್‌
ಅವೈಜ್ಞಾನಿಕವಾಗಿ ಸೇರಿಸಿರುವ ಅರಣ್ಯ ಪ್ರದೇಶ ರದ್ದುಗೊಳಿಸಿ ಪುನಃ ಸರ್ವೆಗೆ ರೈತ ಸಂಘ ವಿನಂತಿ