ಮಂಜುನಾಥ ಕೆ.ಎಂ.
ಕಳೆದ ಮೂರು ವರ್ಷಗಳಿಂದಲೂ ರಾಜ್ಯ ಬಜೆಟ್‌ನಲ್ಲಿ ಉಭಯ ಜಿಲ್ಲೆಗಳಿಗೆ ಅನ್ಯಾಯವಾಗುತ್ತಿದೆ ಎಂಬ ದೂರುಗಳು ಕೇಳುತ್ತಲೇ ಬಂದಿದ್ದವು. ಆದರೆ, ಈ ಬಾರಿಯ ಬಜೆಟ್‌ನಲ್ಲೂ ಸಹ ಎರಡು ಜಿಲ್ಲೆಗಳ ಬಗೆಗಿನ ಸರ್ಕಾರದ ತಾತ್ಸಾರ ಮುಂದುವರಿದಿದೆ.
ಎರಡು ಜಿಲ್ಲೆಗಳ ಶಾಸಕರ ನಿಷ್ಕಾಳಜಿಯ ಫಲದಿಂದಾಗಿಯೇ ಅನೇಕ ಪ್ರಮುಖ ಯೋಜನೆಗಳಿಗೆ ಪ್ರಾಮುಖ್ಯತೆ ಪಡೆದುಕೊಂಡಿಲ್ಲ ಎಂಬ ಆರೋಪಗಳು ಸಾರ್ವಜನಿಕ ವಲಯದಿಂದ ಕೇಳಿ ಬಂದಿದ್ದು ಎಂದಿನಂತೆ ರಾಜ್ಯಸರ್ಕಾರದ ಬಜೆಟ್ ಎರಡು ಜಿಲ್ಲೆಗಳ ಪಾಲಿಗೆ ಸಿಹಿಗಿಂತ ಕಹಿಯನ್ನೇ ಹೆಚ್ಚು ನೀಡಿದೆ.ಜೀನ್ಸ್ ಅಪೆರಲ್ ಪಾರ್ಕ್?
ಜಿಲ್ಲೆಯ ಅಭಿವೃದ್ಧಿಗೆ ಪೂರಕವಾಗಿರುವ ಬಹು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ವಿಮಾನ ನಿಲ್ದಾಣ ಕಾಮಗಾರಿಗೆ ಮರುಜೀವ ನೀಡುವ ಪ್ರಯತ್ನ ಬಜೆಟ್‌ನಲ್ಲಿ ಆಗಲಿಲ್ಲ. ಚುನಾವಣೆ ಮುನ್ನ ಬಳ್ಳಾರಿಗೆ ಆಗಮಿಸಿದ್ದ ಕಾಂಗ್ರೆಸ್ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ಅವರ ಭರವಸೆಗೆ ರಾಜ್ಯ ಸರ್ಕಾರ ಈವರೆಗೆ ಸ್ಪಂದಿಸುವ ಕೆಲಸ ಮಾಡಿಲ್ಲ ಎಂದು ಇಲ್ಲಿನ ಜೀನ್ಸ್ ಉದ್ಯಮಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಬಳ್ಳಾರಿ ಕೋಟೆ ರೋಪ್ ವೇ:ಇನ್ನು ಸರ್ಕಾರಿ ಎಂಜಿನಿಯರಿಂಗ್ ಕಾಲೇಜು, ಒಣ ಮೆಣಸಿನಕಾಯಿ ಮಾರುಕಟ್ಟೆ ಸ್ಥಾಪನೆ, ಕಂಪ್ಲಿ-ಗಂಗಾವತಿ ನಡುವಿನ ಸೇತುವೆ ನಿರ್ಮಾಣ, ಅಖಂಡ ಬಳ್ಳಾರಿ ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿ, ಮಿಂಚೇರಿ ಗುಡ್ಡ ಅಭಿವೃದ್ಧಿ, ಬಳ್ಳಾರಿ ಕೋಟೆ ರೋಪ್ ವೇ ಅಳವಡಿಕೆ, ತೋಟಗಾರಿಕೆ ಕಾಲೇಜು ಸ್ಥಾಪನೆ, ಸರ್ಕಾರಿ ಕಾನೂನು ಕಾಲೇಜು ಸ್ಥಾಪನೆ, ನಿರಂತರ ಕುಡಿವ ನೀರು ಯೋಜನೆ, ಜಿಲ್ಲೆಯಲ್ಲಿ ನನೆಗುದಿಗೆ ಬಿದ್ದಿರುವ ನೀರಾವರಿ ಯೋಜನೆಗಳು, ಸಣ್ಣ ಮತ್ತು ಅತಿಸಣ್ಣ ಕೈಗಾರಿಕೆಗಳ ಅಭಿವೃದ್ಧಿ ಸೇರಿದಂತೆ ಅನೇಕ ಪ್ರಮುಖ ಬೇಡಿಕೆಗಳತ್ತ ಗಮನ ನೀಡಲಾಗಿಲ್ಲ. ರಾಜ್ಯದಲ್ಲಿಯೇ ಅತಿ ಹೆಚ್ಚು ತೆರಿಗೆ ಕಟ್ಟುವ ಅಖಂಡ ಬಳ್ಳಾರಿ ಜಿಲ್ಲೆಯ ಕಡೆ ರಾಜ್ಯ ಸರ್ಕಾರ ಅತ್ಯಂತ ನಿಷ್ಕಾಳಜಿ ತೋರಿಸಿದೆ ಎಂಬ ಬೇಸರ ಹಾಗೂ ಆಕ್ರೋಶ ಜನಸಾಮಾನ್ಯರಲ್ಲಿದೆ.
ಬಳ್ಳಾರಿಗೆ ಸಿಕ್ಕಿದ್ದೆಷ್ಟು?* ಜಿಲ್ಲೆಯ ಸಿರುಗುಪ್ಪದಲ್ಲಿ ಪ್ರಜಾಸೌಧ ನಿರ್ಮಿಸುವ ಭರವಸೆ.
* 6ರಿಂದ 12ನೇ ತರಗತಿವರೆಗೆ ವಿದ್ಯಾಭ್ಯಾಸ ಮಾಡುವ ಕಟ್ಟಡ ಮತ್ತು ಇತರೆ ಕಾರ್ಮಿಕರ ಮಕ್ಕಳಿಗಾಗಿ 2026-27ನೇ ಸಾಲಿನಲ್ಲಿ 62ಶ್ರಮಿಕ ಶಾಲೆಗಳು ಆರಂಭ ಮಾಡುವ ಬಗ್ಗೆ ಘೋಷಿಸಿದ್ದು, ಇದರಲ್ಲಿ ಹಂತ-1ರಲ್ಲಿ ಸಿರುಗುಪ್ಪ, ಹಂತ-2ರಲ್ಲಿ ಬಳ್ಳಾರಿ, ಸಂಡೂರು ಒಳಗೊಂಡಿದೆ.* ಎಂಎಸ್‌ಎಂಇ ಪ್ರೋತ್ಸಾಹಿಸಲು ಕೆಎಸ್‌ಎಸ್‌ಐಡಿಸಿ ಮೂಲಕ ಜಿಲ್ಲೆಯ ಕಂಪ್ಲಿಯಲ್ಲಿ ಒಂದು ವಸಾಹತುಗಳನ್ನು ಪ್ರಾರಂಭಿಸುವ ಭರವಸೆ.
*ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಅರಿವು ಮೂಡಿಸುವ ಉದ್ದೇಶದೊಂದಿಗೆ ಪ್ರಸ್ತುತ ಸಾಲಿನಲ್ಲಿ 6 ಹೊಸ ತಾರಾಲಯ ಸ್ಥಾಪನೆಗೆ ನಿರ್ಧರಿಸಿದ್ದು, ಇದರಲ್ಲಿ ಬಳ್ಳಾರಿ ಸಹ ಒಂದಾಗಿದ್ದು, ₹4 ಕೋಟಿ ಅನುದಾನ ಮೀಸಲಿರಿಸಲಾಗಿದೆ.ವಿಜಯನಗರ ಜಿಲ್ಲೆಗೆ ಸಿಕ್ಕಿದ್ದೇನು ?* ತುಂಗಭದ್ರಾ ಅಣೆಕಟ್ಟಿನ ಶಿಥಿಲಗೊಂಡಿರುವ 33 ಗೇಟುಗಳನ್ನು ಬದಲಾಯಿಸಿ ಹೊಸ ಗೇಟುಗಳ ಅಳವಡಿಕೆಗೆ ನಿರ್ಧಾರ.* ಚಿಕ್ಕಜೋಗಿಹಳ್ಳಿಗೆ ಶ್ರಮಿಕ ಶಾಲೆ ನಿರ್ಮಾಣ* ಕೂಡ್ಲಿಗಿ ಕೆರೆ ಅಭಿವೃದ್ಧಿಗೆ ಒತ್ತು* ಬಳ್ಳಾರಿ-ವಿಜಯನಗರ ಜಿಲ್ಲೆಯಲ್ಲಿ ಹೊಸ ತಾರಾಲಯಗಳ ನಿರ್ಮಾಣ* ಹೊಸಪೇಟೆಯ ಜಿಲ್ಲಾ ಕ್ರೀಡಾಂಗಣ ಮೇಲ್ದರ್ಜೆಗೇರಿಸಲು ಕ್ರಮ* ಪ್ರವಾಸ ಮಾರ್ಗದರ್ಶಕರಿಗೆ ಆಯ್ದ ವಿಶ್ವವಿದ್ಯಾಲಯಗಳಲ್ಲಿ ಕೌಶಲ್ಯ ತರಬೇತಿ ನೀಡಲು ಡಿಪ್ಲೋಮಾ ಕೋರ್ಸ್ ಪ್ರಾರಂಭ
* ವಿಜಯನಗರ ಜಿಲ್ಲೆ, ಕೂಡ್ಲಿಗಿ ತಾಲ್ಲೂಕಿನ ಚಿಕ್ಕಜೋಗಿಹಳ್ಳಿಯಲ್ಲಿ ಚೆಕ್ ಡ್ಯಾಂ ಕಂ ಬ್ರಿಡ್ಜ್ ನಿರ್ಮಾಣ.