ಕನ್ನಡಪ್ರಭ ವಾರ್ತೆ ಬೇಲೂರು
ಐತಿಹಾಸಿಕ ಹಿನ್ನೆಲೆಯುಳ್ಳ, ಅದರಲ್ಲೂ ಶಾಸಕರ ಮನೆ ಇರುವ ವೈಕುಂಠ ಬೀದಿಯಲ್ಲಿ ಒಂದು ಕೋಟಿಗೂ ಹೆಚ್ಚು ಅನುದಾನದಲ್ಲಿ ರಸ್ತೆ ಹಾಗೂ ಬಾಕ್ಸ್ ಚರಂಡಿ ಕಾಮಗಾರಿ ನಡೆಯುತ್ತಿದೆ. ಹಲವಾರು ವರ್ಷಗಳ ನಂತರ ಕಾಮಗಾರಿ ನಡೆಯುತ್ತಿರುವುದಕ್ಕೆ ಇಲ್ಲಿನ ನಿವಾಸಿಗಳು ಸಂತಸ ವ್ಯಕ್ತಪಡಿಸಿದ್ದರು. ಆದರೆ ಈಗ ನಡೆಯುತ್ತಿರುವ ಅವೈಜ್ಞಾನಿಕ ಕಾಮಗಾರಿಯನ್ನು ಕಂಡು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ತಲೆಗಿಂತ ಕೂದಲು ಜಾಸ್ತಿ ಎಂಬಂತೆ ರಸ್ತೆಗಿಂತ ಮೇಲ್ಮಟ್ಟದಲ್ಲಿ ಬಾಕ್ಸ್ ಚರಂಡಿ ನಿರ್ಮಾಣ ಮಾಡಿದ್ದಾರೆ. ಕೆಲವು ಕಡೆ ಮನೆಯ ಮೆಟ್ಟಲಿಗಿಂತ ಮೇಲೆ ಚರಂಡಿ ನಿರ್ಮಿಸಿದ್ದಾರೆ. ಒಂದೆಡೆ ಚರಂಡಿ ದಾಟುವುದು ಕಷ್ಟವಾದರೆ, ಮತ್ತೊಂದೆಡೆ ಮಳೆ ಬಂದರೆ ಸಂಪೂರ್ಣ ನೀರು ಮನೆಯೊಳಗೆ ನುಗ್ಗುವ ಆತಂಕವನ್ನು ನಿವಾಸಿಗಳು ವ್ಯಕ್ತಪಡಿಸುತ್ತಾರೆ.
ವೈಕುಂಠ ಬೀದಿಯಲ್ಲಿ ಬಾಕ್ಸ್ ಚರಂಡಿ ನಿರ್ಮಾಣ ಮಾಡುವ ಸಂದರ್ಭದಲ್ಲಿ ರಾಮರಾಯರ ಬೀದಿಗೆ ತೆರಳುವ ಮುಂಭಾಗದಲ್ಲಿ 3 ಅಡಿ ಎತ್ತರದಲ್ಲಿ ಬಾಕ್ಸ್ ಕೂರಿಸಲಾಗಿದೆ. ಈ ಬಗ್ಗೆ ಆತಂಕಗೊಂಡ ನಿವಾಸಿಗಳು ಗುತ್ತಿಗೆದಾರರನ್ನು ಪ್ರಶ್ನಿಸಿದರೆ ಬಾಕ್ಸ್ ಚರಂಡಿಯಿಂದ ರಸ್ತೆಗೆ ರ್ಯಾಂಪ್ ಅಳವಡಿಸಲಾಗುವುದು ಎನ್ನುತ್ತಾರೆ. ರಾಮರಾಯರ ಬೀದಿಗೆ ತಡೆಗೋಡೆಯಂತಿರುವ ಬಾಕ್ಸ್ ಚರಂಡಿ ಅವಶ್ಯಕತೆ ಇದೆಯೇ ಎಂದು ಪ್ರಶ್ನೆ ಮಾಡಿದರೆ ಅತಿ ಭಾರದ ವಾಹನಗಳು ರಾಮರಾಯರ ಬೀದಿಯಲ್ಲಿ ಓಡಾಡುವುದರಿಂದ ಗಟ್ಟುಮುಟ್ಟಾಗಿ ಬಾಕ್ಸ್ ನಿರ್ಮಿಸುವಂತೆ ಎಂಜಿನಿಯರ್ ಹೇಳಿದ್ದಾರೆ ಎಂದು ಗುತ್ತಿಗೆದಾರರು ಸಮಜಾಯಿಷಿ ನೀಡುತ್ತಾರೆ. ಈ ಬೀದಿಯಲ್ಲಿ ಆಟೋ ಹೋಗುವುದೇ ಕಷ್ಟ ಇನ್ನು ಭಾರೀ ವಾಹನಗಳು ಎಲ್ಲಿಂದ ಓಡಾಡುತ್ತವೆ ಎಂದು ನಾಗರಿಕರು ವ್ಯಂಗ್ಯವಾಡುತ್ತಿದ್ದಾರೆ.
ಶಾಸಕರ ಕಣ್ಣೆದುರೆ ಅವೈಜ್ಞಾನಿಕ ಕಾಮಗಾರಿ :
ಅವೈಜ್ಞಾನಿಕ ಕಾಮಗಾರಿಯನ್ನು ಗುತ್ತಿಗೆದಾರನ ಜೊತೆ ಎಂಜಿನಿಯರ್ ಶಾಮಿಲ್ ಆಗಿ ಮಾಡುತ್ತಿದ್ದಾರೆ. ಅವೈಜ್ಞಾನಿಕ ಅಸಮರ್ಪಕ ಕಾಮಗಾರಿಯನ್ನು ಕಂಡ ಪುರಸಭೆ ಮುಖ್ಯಾಧಿಕಾರಿಗಳು ಕಣ್ಣುಮುಚ್ಚಿ ಕುಳಿತಿದ್ದಾರೆ. ಶಾಸಕರು ಪ್ರತಿ ಭಾಷಣದಲ್ಲಿ ವೈಕುಂಠ ಬೀದಿಯಷ್ಟು ಉತ್ತಮ ಕಾಮಗಾರಿ ಎಲ್ಲೂ ನಡೆಯುತ್ತಿಲ್ಲ. ನಾನೇ ಮುಂದೆ ನಿಂತು ಕೆಲಸ ಮಾಡಿಸುತ್ತೇನೆ ಎಂದು ಹೇಳುತ್ತಾರೆ. ರಸ್ತೆ ಕಾಮಗಾರಿ ಮಾಡುವ ಸಂದರ್ಭದ ಎತ್ತರಕ್ಕೆ ಬಾಕ್ಸ್ ಚರಂಡಿ ನಿರ್ಮಾಣ ಮಾಡಲಾಗಿದೆ. ಇದರಿಂದ ನಿವಾಸಿಗಳು ತಮ್ಮ ದಿನನಿತ್ಯದ ದವಸ ಧಾನ್ಯ, ಆಸ್ಪತ್ರೆ, ಮಕ್ಕಳನ್ನು ಶಾಲೆಗೆ ಕಳಿಸಲು ಹಾಗೂ ಇತರೆ ಕೆಲಸಗಳಿಗೆ ಸರ್ಕಸ್ ಮಾಡಿ ಓಡಾಡುವ ಪರಿಸ್ಥಿತಿ ಉಂಟಾಗಿದ್ದು ಕೂಡಲೇ ಶಾಸಕರು ಹಾಗೂ ಎಂಜಿನಿಯರ್ ಸ್ಥಳಕ್ಕೆ ಬಂದು ಪರಿಶೀಲನೆ ಮಾಡಿ ಅಗತ್ಯ ಕ್ರಮ ಕೈಗೊಂಡು ತಮ್ಮನ್ನು ಕಷ್ಟದಿಂದ ಪಾರು ಮಾಡಬೇಕು ಎಂಬುದಾಗಿ ನಿವಾಸಿಗಳು ಮನವಿ ಮಾಡಿದ್ದಾರೆ.