ಕಾರವಾರದಲ್ಲಿ ₹100 ಕೋಟಿ ವೆಚ್ಚದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ

KannadaprabhaNewsNetwork |  
Published : Mar 07, 2026, 12:45 AM IST
ಮೆಡಿಕಲ್ ಕಾಲೇಜಿನ ನೂತನ ಆಸ್ಪತ್ರೆ ಕಟ್ಟಡ. | Kannada Prabha

ಸಾರಾಂಶ

ಅಂತೂ ಇಂತೂ ಜಿಲ್ಲೆಯ ಜನತೆಯ ಬಹುಕಾಲದ ಕನಸಾದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದಂತೆ ಘೋಷಣೆ ಮಾಡಿದ್ದಾರೆ.

ರಾಜ್ಯ ಬಜೆಟ್‌ನಲ್ಲಿ ಬೇರಾವುದೇ ಮಹತ್ವದ ಕೊಡುಗೆ ಇಲ್ಲ

ಕನ್ನಡಪ್ರಭ ವಾರ್ತೆ ಕಾರವಾರ

ಅಂತೂ ಇಂತೂ ಜಿಲ್ಲೆಯ ಜನತೆಯ ಬಹುಕಾಲದ ಕನಸಾದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದಂತೆ ಘೋಷಣೆ ಮಾಡಿದ್ದಾರೆ. ₹100 ಕೋಟಿ ವೆಚ್ಚದಲ್ಲಿ ಆಸ್ಪತ್ರೆ ತಲೆ ಎತ್ತಲಿದೆ. ಇದನ್ನು ಹೊರತು ಪಡಿಸಿದರೆ ಈ ಬಜೆಟ್‌ನಲ್ಲಿ ಉತ್ತರ ಕನ್ನಡ ಜಿಲ್ಲೆಗೆ ಯಾವುದೆ ಗಮನಾರ್ಹ ಕೊಡುಗೆ ಇಲ್ಲವಾಗಿದೆ.ಈಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರವಾರದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟಡ ಉದ್ಘಾಟನೆಗೆ ಆಗಮಿಸಿದಾಗ ಬಜೆಟ್‌ನಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನೀಡುವುದಾಗಿ ಭರವಸೆ ನೀಡಿದ್ದರು. ಅದೀಗ ಬಜೆಟ್ ನಲ್ಲಿ ಘೋಷಿಸಲಾಗಿದೆ.

ಹಾಗೆ ನೋಡಿದರೆ ಸಾರ್ವಜನಿಕರ ಒತ್ತಡಕ್ಕೆ ಮಣಿದು 2022ರಲ್ಲಿ ಬಿಜೆಪಿ ಸರ್ಕಾರ ಕುಮಟಾದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಕಾರವಾರದ ಆಸ್ಪತ್ರೆಯಲ್ಲಿ ಸೂಪರ್ ಸ್ಪೆಷಾಲಿಟಿ ಸೌಲಭ್ಯ ಘೋಷಣೆ ಮಾಡಿತ್ತು. ನಂತರ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಆ ಬಜೆಟ್ ಘೋಷಣೆ ನನೆಗುದಿಗೆಗೆ ಬಿತ್ತು. ಅದಾಗಿ ಮೂರು ವರ್ಷಗಳ ನಂತರ ಈಗ ಮತ್ತೆ ಘೋಷಣೆಯಾಗುವುದರೊಂದಿಗೆ ಜಿಲ್ಲೆಯ ಜನತೆಯ ಬಹುಕಾಲದ ಬೇಡಿಕೆಗೆ ಸರ್ಕಾರ ಅಧಿಕೃತವಾಗಿ ಮಣೆ ಹಾಕಿದಂತಾಗಿದೆ.ಆದರೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಘೋಷಣೆ, ಕಟ್ಟಡ ನಿರ್ಮಾಣ, ಯಂತ್ರೋಪಕರಣಗಳು ಬಂದರೆ ಸಾಲದು. ತಜ್ಞ ವೈದ್ಯರು ಆಗಮಿಸಿ ಹೃದಯ ಚಿಕಿತ್ಸೆ, ನರರೋಗದ ಚಿಕಿತ್ಸೆ ಮತ್ತಿತರ ಸೂಪರ್ ಸ್ಪೆಷಾಲಿಟಿ ಸೌಲಭ್ಯ ಕಾರವಾರದಲ್ಲೇ ರೋಗಿಗಳಿಗೆ ಲಭ್ಯವಾಗುವಂತಾಗಬೇಕು. ಹಾಗಾದಲ್ಲಿ ಮಾತ್ರ ಜಿಲ್ಲೆಯ ಜನತೆಯ ಕನಸು ನನಸಾಗಲಿದೆ.

ಜಿಲ್ಲೆಯಲ್ಲಿ ಸುಸಜ್ಜಿತ ಮೀನು ಮಾರುಕಟ್ಟೆ ಸ್ಥಾಪಿಸುವುದಾಗಿ ಘೋಷಣೆ, ಶಿರಸಿಯ ಸೊರೆಗುಪ್ಪ ಹಾಗೂ ಸಿದ್ದಾಪುರದ ಶಿರಳಗಿಯಲ್ಲಿ ಬಾಂದಾರ ನಿರ್ಮಾಣ, ಹಳಿಯಾಳದ ಕೆರೆ ತುಂಬಿಸುವ ಯೋಜನೆ, ತದಡಿಯಲ್ಲಿ ಪರಿಸರ ಸ್ನೇಹಿ ವಸತಿ ವ್ಯವಸ್ಥೆ, ಮೂಲ ಸೌಕರ್ಯಗಳನ್ನು ಖಾಸಗಿ ಸಹಭಾಗಿತ್ವದಲ್ಲಿ ಒದಗಿಸುವುದನ್ನು ಹೊರತು ಪಡಿಸಿದರೆ ಜಿಲ್ಲೆಗೆ ಯಾವುದೇ ವಿಶೇಷ ಯೋಜನೆಗಳಿಲ್ಲ.ಯುವ ಜನತೆಗೆ ಉದ್ಯೋಗ ನೀಡುವ ಪರಿಸರ ಪೂರಕ ಕೈಗಾರಿಕೆ ಸ್ಥಾಪನೆ, ಉನ್ನತ ಶಿಕ್ಷಣ ಯೋಜನೆ ಹೀಗೆ ಯಾವುದೇ ಪ್ರಮುಖ ಯೋಜನೆಗಳೂ ಈ ಬಜೆಟ್‌ನಲ್ಲಿ ಇಲ್ಲವಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಯುಪಿಎಸ್‌ಸಿ ಪರೀಕ್ಷೆಯಲ್ಲಿ ಬಳ್ಳಾರಿಯ ಅನಿರುದ್ಧ ಕಟ್ಟಿಮನಿಗೆ 786ನೇ ರ‍್ಯಾಂಕ್‌
ಅವೈಜ್ಞಾನಿಕವಾಗಿ ಸೇರಿಸಿರುವ ಅರಣ್ಯ ಪ್ರದೇಶ ರದ್ದುಗೊಳಿಸಿ ಪುನಃ ಸರ್ವೆಗೆ ರೈತ ಸಂಘ ವಿನಂತಿ