ಯಲಬುರ್ಗಾ: ಮುಖ್ಯಮಂತ್ರಿ ಸಿದ್ದರಾಮಯ್ಯ ೧೭ನೇ ದಾಖಲೆಯ ಬಜೆಟ್ ಮಂಡಿಸುವ ಮೂಲಕ ನಾಡಿನ ಸಮಗ್ರ ಅಭಿವೃದ್ಧಿಗೆ ಮುನ್ನುಡಿ ಬರೆದಿದ್ದಾರೆ. ಎಲ್ಲ ವರ್ಗದ ಸರ್ವತೋಮುಖ ಬೆಳವಣಿಗೆಗೆ ಬಜೆಟ್ ಸಾಕ್ಷಿಯಾಗಲಿದೆ ಎಂದು ಸಿಎಂ ಆರ್ಥಿಕ ಸಲಹೆಗಾರ, ಶಾಸಕ ಬಸವರಾಜ ರಾಯರೆಡ್ಡಿ ತಿಳಿಸಿದ್ದಾರೆ.
ದೇಶದ ಇತಿಹಾಸದಲ್ಲಿ ಇಷ್ಟೊಂದು ಅಭಿವೃದ್ಧಿಪರ ಇರುವ ಬಜೆಟ್ ಯಾವ ರಾಜ್ಯದಲ್ಲಿ ಕೂಡ ಮಂಡನೆಯಾಗಿಲ್ಲ, ಕರ್ನಾಟಕದಲ್ಲಿ ಮಾತ್ರ ನಮ್ಮ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮಂಡಿಸುವ ಮೂಲಕ ಬಡವರ ಬದುಕಿಗೆ ಗ್ಯಾರಂಟಿ ಯೋಜನೆ ಕೊಟ್ಟು ಸರ್ವಾಂಗಣ ಪ್ರಗತಿಗಾಗಿ ಶ್ರಮಿಸಿದ್ದಾರೆ ಎಂದರು.
ನನ್ನ ಕ್ಷೇತ್ರಕ್ಕೆ ಆದ್ಯತೆ: ಈ ಬಾರಿ ಬಜೆಟ್‌ನಲ್ಲಿ ಕ್ಷೇತ್ರದ ಯಲಬುರ್ಗಾ ಮತ್ತು ಕುಕನೂರು ತಾಲೂಕಿನ ಬನ್ನಿಕೊಪ್ಪ ಸೇರಿದಂತೆ ೨೩ ಗ್ರಾಮಗಳಿಗೆ ಕುಡಿಯುವ ನೀರು ಒದಗಿಸಲು ₹೧೨೫ ಕೋಟಿ ವೆಚ್ಚದಲ್ಲಿ ಯೋಜನೆಗೆ ಅನುದಾನ, ಅವಳಿ ತಾಲೂಕಿನ ಕೆರೆಗಳ ಆಧುನೀಕರಣ, ಬ್ಯಾರೇಜ್ ನಿರ್ಮಾಣ, ಪಿಕ್-ಅಫ್ ವಿಯರ್ ಮತ್ತು ಚೆಕ್ ಡ್ಯಾಂಗಳ ನಿರ್ಮಾಣ ಸೇರಿದಂತೆ ವಿವಿಧ ಕಾಮಗಾರಿ ₹೨೫ ಕೋಟಿ ವೆಚ್ಚದಲ್ಲಿ ನಿರ್ಮಾಣ ಭಾಗ್ಯ, ಯಲಬುರ್ಗಾ ತಾಲೂಕಿನ ಬೇವೂರು ಗ್ರಾಮದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸ್ಥಾಪನೆ ಅನುಮೋದನೆ, ಕುಕನೂರು ಪಟ್ಟಣದ ನೂತನ ತಾಲೂಕು ಕ್ರೀಡಾಂಗಣ ನಿರ್ಮಾಣಕ್ಕೆ ಅನುಮೋದನೆಯ ಬಜೆಟ್ ಘೋಷಣೆ ಸಿಎಂ ಮಾಡಿದ್ದಾರೆ.ಬಜೆಟ್ ಸಿದ್ಧತೆಗೆ ನನಗೆ ಸಿಎಂ ಸಿದ್ದರಾಮಯ್ಯನವರು ಅವಕಾಶ ನೀಡಿದ್ದು, ಆರ್ಥಿಕ ಸಲಹೆಗಾರನಾಗಿ ನಾನು ಉತ್ತಮ ಬಜೆಟ್ ಮಂಡನೆಗೆ ವಿಶೇಷ ಸಲಹೆ ಸೂಚನೆ, ದೊಡ್ಡ ಮಟ್ಟದ ಎಲ್ಲ ವಲಯದ ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ಈ ಬಜೆಟ್ ನಾಡಿನ ರೈತರು, ಬಡವರ ಸೇರಿದಂತೆ ಎಲ್ಲ ಜನರು ಅಭಿವೃದ್ಧಿಗೆ ಸಂಕೇತವಾಗಿದೆ. ಬಜೆಟ್ ಬಗ್ಗೆ ಸರಿಯಾದ ಮಾಹಿತಿ ತಿಳಿಯದೆ ವಿರೋಧ ಪಕ್ಷದವರು ಟೀಕಿಸುತ್ತಿರುವುದು ಆರೋಗ್ಯಕರ ಬೆಳವಣಿಗೆ ಅಲ್ಲ, ಪಂಚಗ್ಯಾರಂಟಿ ಜತೆಗೆ ನಾಡಿನ ಪ್ರಗತಿಗೆ ಒತ್ತು ಕೊಟ್ಟಿದ್ದಾರೆ ಎಂದು ತಿಳಿಸಿದರು.